ಮೊಬೈಲ್ ಟಾರ್ಚ್ ಬೆಳಕಲ್ಲಿ ಬಸ್ ಚಾಲನೆ ಪ್ರಕರಣ: ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಅಶೋಕ್ ವಾಗ್ದಾಳಿ
ಧಾರವಾಡದ ಕುಂದಗೋಳದಲ್ಲಿ ಬಸ್ ಹೆಡ್‌ಲೈಟ್ ಕೈಕೊಟ್ಟಿದ್ದರಿಂದ ಮೊಬೈಲ್ ಟಾರ್ಚ್ ಬೆಳಕಿನಲ್ಲಿ 15 ಕಿ.ಮೀ ಬಸ್ ಚಲಾಯಿಸಿದ ಘಟನೆ ಖಂಡಿಸಿ, ಪ್ರಯಾಣಿಕರ ಜೀವದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.ನಿನ್ನೆ ರಾತ್ರಿ 8 ಗಂಟೆಗೆ ಹುಬ್ಬಳ್ಳಿಯಿಂದ ಅತ್ತಿಗೇರಿಗೆ ಹೊರಟಿದ್ದ ಬಸ್‌ನ ಹೆಡ್‌ಲೈಟ್ ತಾಂತ್ರಿಕ ದೋಷದಿಂದ ಕುಂದಗೋಳ ತಾಲೂಕಿನ ಸಂಶಿ ಬಳಿ ಬಂದ್ ಆಗಿತ್ತು. ಪ್ರಯಾಣಿಕರನ್ನು ಅರ್ಧಕ್ಕೆ ಇಳಿಸಲು ಸಾಧ್ಯವಾಗದ ಕಾರಣ, ಪ್ರಯಾಣಿಕರ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಚಾಲಕ ಅತ್ತಿಗೇರಿವರೆಗೆ ಬಸ್ ಚಲಾಯಿಸಿದ್ದರು.

ಬೆಂಗಳೂರು/ಧಾರವಾಡ, ಸೆಪ್ಟೆಂಬರ್ 06: ಬಸ್‌ನ ಹೆಡ್‌ಲೈಟ್ ಕೆಟ್ಟ ಪರಿಣಾಂ ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಪ್ರಯಾಣಿಕರ ಮೊಬೈಲ್ ಟಾರ್ಚ್ ಬೆಳಕಿನ ಸಹಾಯದಿಂದ ಚಾಲಕ ಸುಮಾರು 15 ಕಿ.ಮೀ. ದೂರ ಬಸ್ ಚಲಾಯಿಸಿರುವ ಘಟನೆ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಎಕ್ಸ್ ಪೋಸ್ಟ್ ಮಾಡಿರುವ ಅವರು, ಕಲಬುರಗಿಯಿಂದ ಚಿಂಚೋಳಿಗೆ ಪ್ರಯಾಣಿಸುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ (KKRTC) ಬಸ್‌ನ ಹೆಡ್‌ಲೈಟ್ ಕೆಟ್ಟುಹೋಗಿ, ಮೊಬೈಲ್ ಫೋನ್ ಟಾರ್ಚ್ ಬೆಳಕಿನಲ್ಲಿ ಚಾಲಕ ಬಸ್ ಚಲಾಯಿಸುವ ಪರಿಸ್ಥಿತಿ ಬಂದೊದಗಿತ್ತು. ಈ ಘಟನೆ ಮಾಸುವ ಮುನ್ನವೇ ಧಾರವಾಡ ಜಿಲ್ಲೆಯ ಕುಂದಗೋಳದಲ್ಲೂ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ (NWKRTC) ಬಸ್‌ನ ಹೆಡ್‌ಲೈಟ್ ಕೈಕೊಟ್ಟು, ಕತ್ತಲಿನಲ್ಲಿ ಮೊಬೈಲ್ ಟಾರ್ಚ್ ಆಸರೆಯಲ್ಲೇ ಚಾಲಕ ಪ್ರಯಾಣಿಕರನ್ನು ತಲುಪಿಸಬೇಕಾಯಿತು. ಪ್ರಯಾಣಿಕರ ಜೀವವನ್ನು ಪಣಕ್ಕಿಟ್ಟು ಬಸ್ಸುಗಳನ್ನು ರಸ್ತೆಗೆ ಇಳಿಸುತ್ತಿರುವ ಈ ನಾಲಾಯಕ್ ಕಾಂಗ್ರೆಸ್ ಸರ್ಕಾರಕ್ಕೆ ಜನಸಾಮಾನ್ಯರ ಭದ್ರತೆಯ ಬಗ್ಗೆ ಕನಿಷ್ಠ ಕಾಳಜಿಯಾದರೂ ಇದೆಯೇ? ಎಂದವರು ಪ್ರಶ್ನಿಸಿದ್ದಾರೆ.
‘ಜನಸಾಮಾನ್ಯರ ಜೀವಕ್ಕೆ ಬೆಲೆಯೇ ಇಲ್ಲವೇ?’
ಧಾರವಾಡ ಜಿಲ್ಲಾ ಉಸ್ತುವಾರ ಸಚಿವರಾಗಿರುವ ಸಂತೋಷ್ ಲಾಡ್ ಅವರೇ, ನಿಮ್ಮ ಉಸ್ತುವಾರಿ ಜಿಲ್ಲೆಯಲ್ಲಿ ಸಾರಿಗೆ ವ್ಯವಸ್ಥೆ ಇಷ್ಟು ದಯನೀಯವಾಗಿದೆ. ಮೈಕು ಸಿಕ್ಕರೆ ಸಾಕು ದೇಶ-ವಿದೇಶದ ಉಸಾಬರಿ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುವ ನಿಮಗೆ ಜನಸಾಮಾನ್ಯರಿಗೆ ಕನಿಷ್ಠ ಮೂಲಭೂತ ಸೌಕರ್ಯ ಒದಗಿಸಲು ಏಕೆ ಸಾಧ್ಯವಾಗುತ್ತಿಲ್ಲ? ಸಾರಿಗೆ ಸಚಿವ ಭೈರತಿ ಸುರೇಶ್ ಅವರೇ, ಬಸ್ಸುಗಳ ಸೂಕ್ತ ನಿರ್ವಹಣೆ ಇಲ್ಲದೆ ಚಾಲಕರು ಮತ್ತು ಸಾರ್ವಜನಿಕರು ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವಂತಾಗಿದೆ. ನಿಮ್ಮ ದಿವಾಳಿ ಆಡಳಿತಕ್ಕೆ ಜನರು ಪ್ರಾಣಾಪಾಯಕ್ಕೆ ಸಿಲುಕಬೇಕೆ? ಸಿಎಂ ಡಿಕೆ ಶಿವಕುಮಾರ್ ಅವರೇ, ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ನೀಡಿದ ಮಾತ್ರಕ್ಕೆ ಜನಸಾಮಾನ್ಯರ ಜೀವಕ್ಕೆ ಬೆಲೆಯೇ ಇಲ್ಲವೇ? ಉಚಿತ ಪ್ರಯಾಣ ನೀಡುತ್ತಿದ್ದೇವೆ ಎಂಬ ನೆಪದಲ್ಲಿ ಕನಿಷ್ಠ ರಕ್ಷಣೆ ಇಲ್ಲದ ಬಸ್ಸುಗಳನ್ನು ನೀಡಿ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದೀರಾ? ಎಂದು ಅಶೋಕ್ ಪ್ರಶ್ನಿಸಿದ್ದಾರೆ. ಕೂಡಲೇ ಹಾಳಾಗಿರುವ ಎಲ್ಲಾ ಸಾರಿಗೆ ಬಸ್ಸುಗಳನ್ನು ತಪಾಸಣೆಗೊಳಪಡಿಸಿ, ದುರಸ್ತಿಪಡಿಸಬೇಕು. ಇಲ್ಲವಾದಲ್ಲಿ ಈ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳು ಹಾಗೂ ಸಚಿವರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದವರು ಖಡಕ್ ಎಚ್ಚರಿಕೆಯನ್ನೂ ನೀಡಿದ್ದಾರೆ.
ಇದನ್ನೂ ಓದಿ: ಮಾರ್ಗಮಧ್ಯೆ ಕೈಕೊಟ್ಟ ಹೆಡ್‌ಲೈಟ್: ಪ್ರಯಾಣಿಕರ ಮೊಬೈಲ್ ಟಾರ್ಚ್ ಬೆಳಕಲ್ಲೇ 15 ಕಿ.ಮೀ ಬಸ್ ಓಡಿಸಿದ ಚಾಲಕ
ನಿನ್ನೆ ರಾತ್ರಿ 8 ಗಂಟೆಗೆ ಹುಬ್ಬಳ್ಳಿಯಿಂದ ಅತ್ತಿಗೇರಿಗೆ ಹೊರಟಿದ್ದ ಬಸ್‌ನ ಹೆಡ್‌ಲೈಟ್ ತಾಂತ್ರಿಕ ದೋಷದಿಂದ ಕುಂದಗೋಳ ತಾಲೂಕಿನ ಸಂಶಿ ಬಳಿ ಬಂದ್ ಆಗಿತ್ತು. ಪ್ರಯಾಣಿಕರನ್ನು ಅರ್ಧಕ್ಕೆ ಇಳಿಸಲು ಸಾಧ್ಯವಾಗದ ಕಾರಣ, ಪ್ರಯಾಣಿಕರ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಚಾಲಕ ಸಂಶಿಯಿಂದ ಗುಡಗೇರಿ, ಅತ್ತಿಗೇರಿವರೆಗೆ ಬಸ್ ಚಲಾಯಿಸಿದ್ದರು. ಸಾಮಾನ್ಯವಾಗಿ 15-20 ನಿಮಿಷಗಳಲ್ಲಿ ತಲುಪುವ ಈ ಮಾರ್ಗವನ್ನು, ಚಾಲಕ ಒಂದೂವರೆ ಗಂಟೆ ಸಮಯ ತೆಗೆದುಕೊಂಡು ನಿಧಾನವಾಗಿ ಚಲಾಯಿಸಿ, ಪ್ರತಿಯೊಬ್ಬ ಪ್ರಯಾಣಿಕರನ್ನು ಅವರ ಗ್ರಾಮಗಳಿಗೆ ಸುರಕ್ಷಿತವಾಗಿ ತಲುಪಿಸುವಲ್ಲಿ ಯಶಸ್ವಿಯಾಗಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:46 am, Sun, 6 September 26



