RCB vs CSK IPL 2026: ಹೈವೋಲ್ಟೇಜ್ ಪಂದ್ಯದ ಹಿನ್ನೆಲೆ ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ಪೊಲೀಸ್ ಬಿಗಿ ಭದ್ರತೆ!
RCB vs CSK : ಬೆಂಗಳೂರು ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ-ಸಿಎಸ್‌ಕೆ ಐಪಿಎಲ್ ಪಂದ್ಯ ಹಿನ್ನೆಲೆ ಭದ್ರತೆ ಹೆಚ್ಚಿಸಲಾಗಿದೆ. 2,300ಕ್ಕೂ ಹೆಚ್ಚು ಪೊಲೀಸರು ನಿಯೋಜನೆಗೊಂಡಿದ್ದು, ಬಿಎಂಟಿಸಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಜನಸಂದಣಿ ನಿಯಂತ್ರಣ ಹಾಗೂ ಕಳ್ಳತನ ತಡೆಗೆ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು, ಏಪ್ರಿಲ್ 05: ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಐಪಿಎಲ್ 2026 ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) vs ಚೆನ್ನೈ ಸೂಪರ್ ಕಿಂಗ್ಸ್ (CSK) ಪಂದ್ಯದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ವಿಶೇಷವಾಗಿ ಆರ್ಸಿಬಿ ಮತ್ತು ಸಿಎಸ್‌ಕೆ ನಡುವಿನದು ಹೈವೋಲ್ಟೇಜ್ ಪಂದ್ಯವಾಗಿರುವುದರಿಂದ ಅಭಿಮಾನಿಗಳು ಕಿಕ್ಕಿರಿದು ಸೇರಲಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸುಮಾರು 2,300ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಕಳೆದ ಬಾರಿ ಸ್ಟೇಡಿಯಂನಲ್ಲಿ 70ಕ್ಕೂ ಹೆಚ್ಚು ಮೊಬೈಲ್ ಕಳ್ಳತನವಾದ ಹಿನ್ನೆಲೆ ಈ ಬಾರಿ ಯಾವುದೆ ಅವ್ಯವಸ್ಥೆಗೆ ಆಸ್ಪದ ಕೊಡಬಾರದೆಂಬ ಉದ್ದೇಶದಿಂದ ಎರಡು ಬ್ಯಾಗೇಜ್ ಕೌಂಟರ್‌ಗಳನ್ನು ನಿರ್ಮಿಸಲಾಗಿದೆ. ಸ್ಟೇಡಿಯಂ ಸುತ್ತಮುತ್ತ ಮೊಬೈಲ್ ಕಳ್ಳತನದ ಬಗ್ಗೆ ಹೆಚ್ಚು ಜಾಗೃತಿ ವಹಿಸಲು ಅಭಿಮಾನಿಗಳಿಗೆ ಸೂಚಿಸಲಾಗಿದೆ.
ಇದನ್ನೂ ಓದಿ RCB vs CSK ಪಂದ್ಯಕ್ಕೆ 6 ಆಟಗಾರರು ಅಲಭ್ಯ
ವಿಶೇಷ ಬಸ್ ಮತ್ತು ಪಾರ್ಕಿಂಗ್ ವ್ಯವಸ್ಥೆ
ಜನಸಂದಣಿ ನಿಯಂತ್ರಣಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವತಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ ವ್ಯವಸ್ಥೆ ಹಾಗೂ ಮೆಟ್ರೋ ಸೇವೆಯ ಅವಧಿಯೂ ಹಿಂದಿನಂತೆ ವಿಸ್ತರಿಸಲಾಗುತ್ತದೆ. ಇನ್ನೊಂದೆಡೆ, ಟಿಕೆಟ್ ಇಲ್ಲದವರು ಸ್ಟೇಡಿಯಂ ಸುತ್ತಮುತ್ತ ಬಾರದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಕಲಿ ಟಿಕೆಟ್ ಮಾರಾಟ ಮತ್ತು ಬೆಟ್ಟಿಂಗ್ ಚಟುವಟಿಕೆಗಳ ಮೇಲೂ ಸಿಸಿಬಿ ಅಧಿಕಾರಿಗಳು ನಿಗಾವಹಿಸಿದ್ದಾರೆ. ಸಾರ್ವಜನಿಕರು ಎಚ್ಚರಿಕೆಯಿಂದಿದ್ದು ಪೊಲೀಸರೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:56 am, Sun, 5 April 26




