Special Intensive Revision: ಮತದಾರರ ಪಟ್ಟಿಗೆ ಹೆಸರು ಸೇರಿಸಲು ಮತ್ತು ಮತಕ್ಷೇತ್ರ ಬದಲಾಯಿಸಲು ಏನೆಲ್ಲಾ ದಾಖಲೆಗಳನ್ನು ಕೊಡಬೇಕು?
ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ : ಭಾರತೀಯ ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ಆರಂಭವಾಗಿದ್ದು, ಹೊಸದಾಗಿ ಹೆಸರು ಸೇರಿಸಲು ಫಾರ್ಮ್-6 ಹಾಗೂ ವಿಳಾಸ ಅಥವಾ ಕ್ಷೇತ್ರ ಬದಲಾವಣೆಗೆ ಫಾರ್ಮ್-8 ಸಲ್ಲಿಸಬೇಕಿದೆ. ಇದಕ್ಕೆ ಬೇಕಾಗುವ ಅಗತ್ಯ ದಾಖಲೆಗಳಾದ ಸಂಪೂರ್ಣ ವಿವರ ಇಲ್ಲಿದೆ.

ಮುಖ್ಯಾಂಶಗಳು
- ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಮೂನೆ-6 ಸಲ್ಲಿಸುವುದು ಕಡ್ಡಾಯ.
- ವಿಳಾಸ ಅಥವಾ ಮತಕ್ಷೇತ್ರ ಬದಲಾವಣೆ ಮಾಡಿಕೊಳ್ಳಲು ನಮೂನೆ-8 ಬಳಸಬೇಕು.
- ಅರ್ಜಿಗಳೊಂದಿಗೆ ಆಧಾರ್, ಭಾವಚಿತ್ರ ಹಾಗೂ ವಾಸಸ್ಥಳದ ದಾಖಲೆ ನೀಡುವುದು ಅಗತ್ಯ.
ಬೆಂಗಳೂರು, ಜುಲೈ 04: ಭಾರತೀಯ ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಆರಂಭಿಸಿದೆ. ನೀವು ಮೊದಲ ಬಾರಿಗೆ ಮತದಾನ ಮಾಡಲು ಹೆಸರು ನೋಂದಾಯಿಸುತ್ತಿದ್ದರೆ ಅಥವಾ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಶಿಫ್ಟ್ ಆಗಿದ್ದರೆ, ಮತದಾರರ ಪಟ್ಟಿಯಲ್ಲಿ ನಿಮ್ಮ ವಿವರಗಳನ್ನು ನವೀಕರಿಸುವುದು ಅತ್ಯಗತ್ಯ. ಹಾಗಾದರೆ ಇದಕ್ಕೆ ಯಾವೆಲ್ಲಾ ಅರ್ಜಿ ನಮೂನೆಗಳು (Forms) ಮತ್ತು ದಾಖಲೆಗಳು (Documents) ಬೇಕಾಗುತ್ತವೆ? ಇಲ್ಲಿದೆ ಸಂಪೂರ್ಣ ವಿವರಣೆ.
1. ಹೊಸದಾಗಿ ಹೆಸರು ಸೇರಿಸಲು (ಮೊದಲ ಬಾರಿಗೆ ಮತದಾರರಾಗುವವರಿಗೆ)
ನಿಮಗೆ 18 ವರ್ಷ ತುಂಬಿದ್ದರೆ ಅಥವಾ ಇದುವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸದಿದ್ದರೆ ನೀವು ನಮೂನೆ-6 (Form 6)ಅನ್ನು ಭರ್ತಿ ಮಾಡಬೇಕು.
ಬೇಕಾಗುವ ಪ್ರಮುಖ ದಾಖಲೆಗಳು
- ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
- ವಯಸ್ಸಿನ ಪುರಾವೆ (ಆಧಾರ್ ಕಾರ್ಡ್/ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ/ ಜನನ ಪ್ರಮಾಣ ಪತ್ರ / ಪ್ಯಾನ್ ಕಾರ್ಡ್/ ಡ್ರೈವಿಂಗ್ ಲೈಸೆನ್ಸ್ / ಭಾರತೀಯ ಪಾಸ್‌ಪೋರ್ಟ್)
- ಪ್ರಸ್ತುತ ವಾಸಸ್ಥಳದ ಪುರಾವೆ ( ಪ್ರಸ್ತುತ ಚಾಲ್ತಿಯಲ್ಲಿರುವ ಬ್ಯಾಂಕ್ ಪಾಸ್‌ಬುಕ್ (ರಾಷ್ಟ್ರೀಕೃತ ಬ್ಯಾಂಕ್)/ ಗ್ಯಾಸ್ ಕನೆಕ್ಷನ್ ಬಿಲ್ / ವಿದ್ಯುತ್ ಬಿಲ್ / ನೀರಿನ ಬಿಲ್ (ಇತ್ತೀಚಿನದ್ದು/ ನೋಂದಾಯಿತ ಬಾಡಿಗೆ ಕರಾರು ಪತ್ರ / ವಾಸಸ್ಥಳ ದೃಢೀಕರಣ ಪತ್ರ)
2. ಮತಕ್ಷೇತ್ರ ಬದಲಾವಣೆ ಅಥವಾ ವಿಳಾಸ ಬದಲಾವಣೆ
ನೀವು ಈಗಾಗಲೇ ಮತದಾರರಾಗಿದ್ದು, ಮದುವೆಯಾಗಿ ಅಥವಾ ಉದ್ಯೋಗದ ನಿಮಿತ್ತ ಬೇರೆ ಮನೆಗೆ ಅಥವಾ ಬೇರೆ ಕ್ಷೇತ್ರಕ್ಕೆ ಶಿಫ್ಟ್ ಆಗಿದ್ದರೆ ನಮೂನೆ-8 (Form 8) ಅನ್ನು ಸಲ್ಲಿಸಬೇಕು. ಒಂದೇ ಕ್ಷೇತ್ರದೊಳಗೆ ಮನೆ ಬದಲಾಯಿಸಿದರೂ ಅಥವಾ ಬೇರೆ ವಿಧಾನಸಭಾ ಕ್ಷೇತ್ರಕ್ಕೆ ಬದಲಾಯಿಸಿದರೂ ಇದೇ ಫಾರ್ಮ್ ಬಳಸಬೇಕು.
ಬೇಕಾಗುವ ಪ್ರಮುಖ ದಾಖಲೆಗಳು
- ಹಳೆಯ ಮತದಾರರ ಗುರುತಿನ ಚೀಟಿ (EPIC Number)
- ಹೊಸ ವಾಸಸ್ಥಳದ ಪುರಾವೆ (ಹೊಸ ವಿಳಾಸ ಹೊಂದಿರುವ ಆಧಾರ್ ಕಾರ್ಡ್/ ಇತ್ತೀಚಿನ ಲೈಟ್ ಬಿಲ್ / ವಾಟರ್ ಬಿಲ್ / ಗ್ಯಾಸ್ ಬಿಲ್/ ಬ್ಯಾಂಕ್ ಖಾತೆ ಪುಸ್ತಕ (ಹೊಸ ವಿಳಾಸದೊಂದಿಗೆ)/ ಮದುವೆಯ ನಂತರ ವಿಳಾಸ ಬದಲಾಗಿದ್ದರೆ ‘ಮದುವೆ ನೋಂದಣಿ ಪ್ರಮಾಣಪತ್ರ’)
ನಿಮ್ಮ ಕುಟುಂಬದ ಸದಸ್ಯರೊಬ್ಬರ ವೋಟರ್ ಐಡಿ ಕಾರ್ಡ್ ನಕಲನ್ನು ಜೋಡಿಸಿದರೆ ನಿಮ್ಮ ವಿಳಾಸದ ಪರಿಶೀಲನೆ ಪ್ರಕ್ರಿಯೆ ಮತ್ತಷ್ಟು ಸುಲಭ ಮತ್ತು ವೇಗವಾಗುತ್ತದೆ. ನಿಮ್ಮ ವಿಭಾಗದ ಬಿಎಲ್ಓಗಳು ಪರಿಷ್ಕರಣೆಗಾಗಿ ಮನೆಗೆ ಭೇಟಿ ನೀಡಿದಾಗ ಈ ಎಲ್ಲಾ ಅಗತ್ಯ ದಾಖಲೆಗಳನ್ನು ನೀಡಿ, ಫಾರಂ ಭರಿಸಬೇಕು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




