ಬದುಕಲು ಬಿಡಿ, ಇಲ್ಲವೇ ದಯಾಮರಣಕ್ಕೆ ಅವಕಾಶ ಕೊಡಿ: ಹುಲಿ ಯೋಜನೆ ವಿರೋಧಿಸಿ ಸಂತ್ರಸ್ತರ ಪತ್ರ
ದಯಮರಣಕ್ಕೆ ಅನುಮತಿ ನೀಡಬೇಕೆಂದು ನರಸಿಂಹರಾಜಪುರ (ಎನ್.ಆರ್.ಪುರ) ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿರುವ ಹುಲಿ ಯೋಜನೆ ಸಂತ್ರಸ್ತರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.
ಚಿಕ್ಕಮಗಳೂರು: ನಮಗೆ ಬದುಕು ಅವಕಾಶ ಕೊಡಿ, ಇಲ್ಲವೇ ದಯಮರಣಕ್ಕೆ ಅನುಮತಿ ನೀಡಿ ಎಂದು ನರಸಿಂಹರಾಜಪುರ (ಎನ್.ಆರ್.ಪುರ) ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿರುವ ಹುಲಿ ಯೋಜನೆ ಸಂತ್ರಸ್ತರು (Tiger Project) ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ. ಎನ್.ಆರ್.ಪುರ ತಾಲ್ಲೂಕಿನ ಸಾರ್ಯಾ, ಸಾಲೂರು, ಹೆನ್ನಂಗಿ, ಆಡುವಳ್ಳಿ, ಮುದುಗುಣಿ, ಬೈರಾಪುರ, ಸೇರಿದಂತೆ ಹತ್ತಾರು ಹಳ್ಳಿಗಳ ಜನರು ಸಾಮೂಹಿಕ ದಯಾ ಮರಣಕ್ಕೆ ಒಪ್ಪಿಗೆ ನೀಡುವಂತೆ ಆಗ್ರಹಿಸಿ ಪತ್ರ ಬರೆದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಭದ್ರಾ ಹುಲಿ ಯೋಜನೆಯ ಬಫರ್ ಝೋನ್ ಹಾಗೂ ಸೂಕ್ಷ್ಮ ಪರಿಸರ ವಲಯ ಘೋಷಣೆಯ ಪ್ರಸ್ತಾವಕ್ಕೆ ಈ ಹಿಂದಿನಿಂದಲೂ ಜನರಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ಯೋಜನೆಯನ್ನು ವಿರೋಧಿಸಿ ಹಲವು ಬಾರಿ ಬಂದ್ ಹಾಗೂ ಪ್ರತಿಭಟನೆಗಳನ್ನು ನಡೆಸಲಾಗಿದೆ.
ಭದ್ರಾ ಹುಲಿ ಯೋಜನೆಯ ಬಫರ್ ಝೋನ್ ಹಾಗೂ ಪರಿಸರ ಸೂಕ್ಷ್ಮ ವಲಯದ ಹೆಸರಿನಲ್ಲಿ ತಾಲೂಕಿನ ಹತ್ತಾರು ಗ್ರಾಮಗಳು ಕಣ್ಮರೆಯಾಗಲಿವೆ. ಚಿಕ್ಕಮಗಳೂರು ಜಿಲ್ಲೆಯ 51 ಗ್ರಾಮಗಳು ಯೋಜನೆ ವ್ಯಾಪ್ತಿಗೆ ಬರಲಿದ್ದು, 8750 ಕುಟುಂಬ, 75ಕ್ಕೂ ಹೆಚ್ಚು ದೇವಸ್ಥಾನಗಳು, 3 ಚರ್ಚ್, 4 ಮಸೀದಿಗಳು ಈ ಯೋಜನೆ ವ್ಯಾಪ್ತಿಗೆ ಬರಲಿದೆ. ಹೀಗಾಗಿ ಈ ಯೋಜನೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಭದ್ರಾ ಹುಲಿಯೋಜನೆಗೆ 10 ಕಿಮೀ ವ್ಯಾಪ್ತಿಯ ಬಫರ್ ಜೋನ್ ಘೋಷಿಸಲು ಮುಂದಾಗಿರುವುದರಿಂದ ಇಡೀ ನರಸಿಂಹರಾಜಪುರ ಪಟ್ಟಣವೇ ಯೋಜನೆಯ ವ್ಯಾಪ್ತಿಗೆ ಸೇರಲಿದೆ.
ಇದನ್ನೂ ಓದಿ: ಕಾಡಂಚಿನ ಗ್ರಾಮಗಳ ರಕ್ಷಣೆಗೆ ಮುಂದಾದ ಅರಣ್ಯ ಇಲಾಖೆ; ಕಾಡು ಪ್ರಾಣಿಗಳಿಂದ ಮುಕ್ತಿ ಪಡೆಯಲು ಜಿರೋ ಕಾಸ್ಟ್ ಯೋಜನೆ ಇದನ್ನೂ ಓದಿ: ನಾನು ಸಿಎಂ ಆಗಿದ್ದ ಜಾರಿ ಮಾಡಿದ್ದ ಯೋಜನೆಗಳು ಈಗ ನಿಲ್ಲುತ್ತಿವೆ: ಸಿದ್ದರಾಮಯ್ಯ ವಿಷಾದ