ದೇವಸ್ಥಾನ ನನ್ನದು ಎಂದ ಮಾಲೀಕನ ವಿರುದ್ಧ ಗ್ರಾಮಸ್ಥರ ಆಕ್ರೋಶ; ಗುಡಿಯನ್ನು ಮುಜರಾಯಿಗೆ ಸೇರಿಸುವಂತೆ ಒತ್ತಾಯ
ಏಳು ವರ್ಷ ಅವಧಿಯಲ್ಲಿ ಒಂದೂವರೆ ಕೋಟಿಗೂ ಹೆಚ್ಚು ಆದಾಯವಾಗಿದೆ ಎಂಬುವುದು ಗ್ರಾಮಸ್ಥರಿಗೂ ತಿಳಿದು ಬಂದಿತ್ತು. ಗ್ರಾಮದಲ್ಲಿ ಚೌಟ್ರಿ ಒಂದನ್ನು ನಿರ್ಮಿಸಲು ಗ್ರಾಮಸ್ಥರು ಜಯಪ್ಪನವರ ಬಳಿ ಹಣ ಕೇಳಿದರು ಅಲ್ಲಿಂದ ಸಮಸ್ಯೆಗಳು ಆರಂಭವಾದವು.
ದಾವಣಗೆರೆ: ಜಿಲ್ಲೆಯ ಚೌಡಮ್ಮನ ದೇವಸ್ಥಾನ ಪುರಾಣ ಪ್ರಸಿದ್ಧವಾಗಿದೆ. ಇಲ್ಲಿನ ದೇವಿಯ ದರ್ಶನ ಪಡೆದರೆ ಇಷ್ಟಾರ್ಥ ಸಿದ್ದಿಯಾಗಿತ್ತದೆ ಎನ್ನುವ ನಂಬಿಕೆ ಇದೆ. ಚೌಡಮ್ಮ ದೇವಿ ದರ್ಶನಕ್ಕೆ ರಾಜ್ಯದಲ್ಲಿ ಮಾತ್ರವಲ್ಲದೇ ಅನ್ಯ ರಾಜ್ಯಗಳಿಂದ ಭಕ್ತರು (Devotees) ಆಗಮಿಸುತ್ತಾರೆ. ಹೀಗಾಗಿ ಇದು ಹೆಚ್ಚು ಜನಪ್ರಿಯತೆ ಪಡೆದಿದೆ. ಆದರೆ ಈ ದೇವಸ್ಥಾನ ಖಾಸಗಿ ವ್ಯಕ್ತಿಯೊಬ್ಬರ ಸ್ವಂತ ತೋಟದಲ್ಲಿದೆ. ಹೀಗಾಗಿ ದೇವಸ್ಥಾನ (Temple) ಇರುವ ಜಮೀನಿನ ಮಾಲೀಕ ಈ ದೇವಸ್ಥಾನ ನನ್ನ ಸ್ವಂತಕ್ಕೆ ಸೇರಿದ್ದು ಎಂದು ತಕರಾರು ಎತ್ತಿದ್ದಾರೆ. ಇದು ಸಹಜವಾಗಿಯೇ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಲಕ್ಷಾಂತರ ಆದಾಯ ತರುವ ಈ ದೇವಸ್ಥಾನವನ್ನು ಮುಜರಾಯಿಗೆ ಸೇರಿಸಿ ಎಂದು ಈಗ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಗಡಿಗ್ರಾಮ ಮಸಣಿಕೆರೆಯ ಶ್ರೀ ಪದ್ಮವತಿ ಚೌಡೇಶ್ವರಿ ದೇವಸ್ಥಾನ ಇರುವುದು ಮಸಣಿಕೆರೆ ಗ್ರಾಮದ ಜಯಪ್ಪ ಎಂಬುವವರ ತೋಟದಲ್ಲಿ. ಕಳೆದ ನೂರಾರು ವರ್ಷಗಳಿಂದ ಇಲ್ಲಿ ನೆಲೆಸಿದೆ. ಕಾಲಕ್ರಮೇಣ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಅದಾಯವು ಕೂಡ ಜಾಸ್ತಿಯಾಗಿದೆ. ಆದಾಯ ಜಾಸ್ತಿಯಾಗುತ್ತಿದ್ದಂತೆ. ಈ ಗ್ರಾಮಸ್ಥರಿಗೂ ಹಾಗೂ ತೋಟದ ಮಾಲೀಕ ಜಯಪ್ಪನವರ ಕುಟುಂಬ ಮಧ್ಯೆ ದೇವಸ್ಥಾನದ ಒಡೆತನಕ್ಕೆ ಸಂಬಂಧಿಸಿದ ವಿವಾದ ಭುಗಿಲೆದ್ದಿದೆ.
ಈ ಗ್ರಾಮದಲ್ಲಿ ವೀರಭದ್ರೇಶ್ವರ ಹಾಗೂ ಚೌಡಮ್ಮ ನೆಲೆ ನಿಂತು ಶತಮಾನ ಕಳೆದಿದೆ. ವೀರಭದ್ರಶ್ವರ ನೆಲೆ ಇರುವ ಜಾಗದಲ್ಲಿ ಚೌಡಮ್ಮ ಇದ್ದರೆ ಸಮಸ್ಯೆ ಆಗುತ್ತದೆ ಎಂಬುದು ಪೂರ್ವಿಕರ ನಂಬಿಕೆಯಾಗಿತ್ತು. ಇದೇ ಕಾರಣಕ್ಕೆ ಚೌಡಮ್ಮ ದೇವಿಯನ್ನು ಗ್ರಾಮದ ಹೊರವಲಯಕ್ಕೆ ಸಾಗಿಸಿದ್ದರು. ಜಯಪ್ಪನವರ ಹೊಲದಲ್ಲಿ ಚೌಡಮ್ಮ ನೆಲೆಯಾದಳು. ವರ್ಷಕ್ಕೆ 25 ಲಕ್ಷ ರೂಪಾಯಿ ಆದಾಯ ಜತೆಗೆ ಹರಕೆ ರೂಪದಲ್ಲಿ ಚಿನ್ನ, ಬೆಳ್ಳಿ ಆಭರಣಗಳು ಬರಲಾರಂಭಿಸಿದವು. ಜಯಪ್ಪನವರು ತಮ್ಮದೇ ಕುಟುಂಬವರು ಹಾಗೂ ಪರಿಚಯಸ್ಥರ ಹೆಸರಲ್ಲಿ ಟ್ರಸ್ಟ್ ಸ್ಥಾಪಿಸಿಕೊಂಡು ದೇವಸ್ಥಾನ ಟ್ರಸ್ಟ್ ಒಡೆತನಕ್ಕೆ ಸೇರಿದ್ದು ಎಂದು ಘೋಷಿಸಿಕೊಂಡರು.
ಏಳು ವರ್ಷ ಅವಧಿಯಲ್ಲಿ ಒಂದೂವರೆ ಕೋಟಿಗೂ ಹೆಚ್ಚು ಆದಾಯವಾಗಿದೆ ಎಂಬುವುದು ಗ್ರಾಮಸ್ಥರಿಗೂ ತಿಳಿದು ಬಂದಿತ್ತು. ಗ್ರಾಮದಲ್ಲಿ ಚೌಟ್ರಿ ಒಂದನ್ನು ನಿರ್ಮಿಸಲು ಗ್ರಾಮಸ್ಥರು ಜಯಪ್ಪನವರ ಬಳಿ ಹಣ ಕೇಳಿದರು ಅಲ್ಲಿಂದ ಸಮಸ್ಯೆಗಳು ಆರಂಭವಾದವು. ಈಗಾಗಲೇ ಪೊಲೀಸ್, ತಹಸೀಲ್ದಾರ್, ಜಿಲ್ಲಾಧಿಕಾರಿಗಳ ವರೆಗೆ ತಗಾದೆ ಹೋಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮದ ಮುಖಂಡ ಮಹಾರುದ್ರಪ್ಪ ಹೇಳಿದ್ದಾರೆ.
ಇದರ ಮಧ್ಯೆ ಮತ್ತೊಂದು ಸಮಸ್ಯೆ ಸೇರಿಕೊಂಡಿದೆ. ದೇವಸ್ಥಾನದಲ್ಲಿ ದಲಿತ ವ್ಯಕ್ತಿಗೆ ಪ್ರವೇಶ ನೀಡಿಲ್ಲ ಎಂದು ರಂಗಸ್ವಾಮಿ ಎಂಬುವವರು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೇವಸ್ಥಾನವಿರುವ ಜಮೀನು ಮಾಲೀಕ ಜಯಪ್ಪ ಸೇರಿದಂತೆ ನಾಲ್ಕು ಜನರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಾದ ಹಿನ್ನೆಲೆ, ಆ ವ್ಯಕ್ತಿಗಳು ತಲೆಮರೆಸಿಕೊಂಡಿದ್ದಾರೆ. ದೇವಸ್ಥಾನದ ಒಡೆತನದ ವಿಚಾರದಲ್ಲಿ ಗ್ರಾಮಸ್ಥರೆಲ್ಲಾ ಒಂದೆಡೆಯಾದರೆ, ಜಯಪ್ಪನವರ ಕುಟುಂಬದ ಟ್ರಸ್ಟ್ ಒಂದುಕಡೆಯಾಗಿದೆ. ಕೂಡಲೇ ಅಧಿಕಾರಿಗಳು ಮಧ್ಯ ಪ್ರವೇಶಿಸಿ ದೇವಸ್ಥಾನವನ್ನು ಮುಜರಾಯಿಗೆ ಸೇರಿಸಬೇಕು ಹಾಗೂ ಟ್ರಸ್ಟ್ನಿಂದ ದೇವಸ್ಥಾನವನ್ನು ಬಿಡಿಸಿ ಎಂದು ಸಾರ್ವಜನಿಕರ ಒತ್ತಾಯಿಸಿದ್ದಾರೆ.
ಒಟ್ಟಾರೆಯಾಗಿ ಜಮೀನು ಮಾಲೀಕ ಹಾಗೂ ಗ್ರಾಮಸ್ಥರ ನಡುವೆ ದೇವಸ್ಥಾನ ನಲುಗುತ್ತಿದ್ದು, ಜಮೀನು ಮಾಲೀಕ ಇದು ನಮ್ಮ ಸ್ವಂತ ಆಸ್ತಿ ಎಂದರೆ ಇತ್ತ ಗ್ರಾಮಸ್ಥರು ಮುಜರಾಯಿಗೆ ಸೇರಿಸಿ ಎಂದು ಪಟ್ಟು ಹಿಡಿದಿದ್ದಾರೆ. ಏನೇ ಆಗಲಿ ಗ್ರಾಮದ ಶಾಂತಿಗೆ ಭಂಗ ತಂದಿರುವ ಈ ದೇವಸ್ಥಾನದ ವಿಚಾರದಲ್ಲಿ ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ಸೂಕ್ತ ನಿರ್ಧಾರ ಪ್ರಕಟಿಸಬೇಕಿದೆ.
ವರದಿ: ಬಸವರಾಜ್ ದೊಡ್ಮನಿ
ಇದನ್ನೂ ಓದಿ: ಸಚ್ಚಿದಾನಂದ ಆಶ್ರಮದಲ್ಲಿ ಕಾರ್ಯಸಿದ್ಧಿ ಹನುಮಾನ್ ದೇವಾಲಯ ಉದ್ಘಾಟನೆ ಮಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ
ಸಚಿವ ಶ್ರೀರಾಮುಲುರಿಂದ ಜೀರ್ಣೋದ್ಧಾರ ಕಾರ್ಯ; ಮಹಾಲಕ್ಷ್ಮಿ ದೇವಾಲಯ, ಪಂಪಾ ಸರೋವರ ಧ್ವಂಸ ಆರೋಪ