ಕರ್ನಾಟಕದಲ್ಲಿ ಮುಂಗಾರು ದುರ್ಬಲ: ದಕ್ಷಿಣ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ
ಕರ್ನಾಟಕ ಹವಾಮಾನ ಮುನ್ಸೂಚನೆ ಸೆಪ್ಟೆಂಬರ್ 8: ಕರ್ನಾಟಕದಲ್ಲಿ ನೈಋತ್ಯ ಮುಂಗಾರು ದುರ್ಬಲಗೊಂಡಿದ್ದು, ಹಲವು ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿದಿದೆ. ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 8 ಮತ್ತು 9ರಂದು ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಮುಖ್ಯಾಂಶಗಳು
- ಕರ್ನಾಟಕದಲ್ಲಿ ಮುಂಗಾರು ದುರ್ಬಲ
- ಕರಾವಳಿ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಮುಂದುವರಿಕೆ
- ದಕ್ಷಿಣ ಒಳನಾಡಿನಲ್ಲಿ ಒಣಹವೆ ಮುಂದುವರಿಕೆ
ಬೆಂಗಳೂರು, ಸೆಪ್ಟೆಂಬರ್ 8: ಕರ್ನಾಟಕದಲ್ಲಿ ನೈಋತ್ಯ ಮುಂಗಾರು ದುರ್ಬಲಗೊಂಡಿದ್ದು, ರಾಜ್ಯದ ಹಲವು ಭಾಗಗಳಲ್ಲಿ ಒಣ ಹವೆ ಮುಂದುವರಿದಿದೆ. ಕರಾವಳಿ ಕರ್ನಾಟಕ ಹಾಗೂ ಉತ್ತರ ಒಳನಾಡಿನ ಕೆಲವೆಡೆ ಮಾತ್ರ ಮಳೆಯಾಗಿದ್ದು, ದಕ್ಷಿಣ ಒಳನಾಡಿನಲ್ಲಿ ಬಹುತೇಕ ಒಣ ಹವಾಮಾನ ಮುಂದುವರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರ ತಿಳಿಸಿದೆ. ಮುಂದಿನ ಎರಡು ದಿನಗಳಲ್ಲಿ ಕರಾವಳಿ ಪ್ರದೇಶವೂ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಆದರೆ ವ್ಯಾಪಕ ಮಳೆಯ ಮುನ್ಸೂಚನೆ ಇಲ್ಲದಿರುವುದರಿಂದ ಹಲವು ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಕರ್ನಾಟಕದಲ್ಲಿ ಕೆಲವೆಡೆ ಮಳೆ ಮುನ್ಸೂಚನೆ
ಸೆಪ್ಟೆಂಬರ್ 8ರಂದು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್ 9ರಂದು ಕೂಡ ಇದೇ ಮೂರು ಕರಾವಳಿ ಜಿಲ್ಲೆಗಳ ಕೆಲವೆಡೆ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಉತ್ತರ ಒಳನಾಡಿನ ನಾಲ್ಕು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
ಸೆಪ್ಟೆಂಬರ್ 8ರಂದು ಬೆಳಗಾವಿ, ಧಾರವಾಡ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಒಂದೆರಡು ಕಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್ 9ರಂದು ಧಾರವಾಡ, ಹಾವೇರಿ ಹಾಗೂ ಬೆಳಗಾವಿ ಜಿಲ್ಲೆಗಳ ಒಂದೆರಡು ಕಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಒಳನಾಡಿನಲ್ಲಿ ಸೀಮಿತ ಮಳೆ
ಸೆಪ್ಟೆಂಬರ್ 8ರಂದು ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ರಾಮನಗರ ಜಿಲ್ಲೆಗಳ ಒಂದೆರಡು ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್ 9ರಂದು ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಮೈಸೂರು ಜಿಲ್ಲೆಗಳ ಒಂದೆರಡು ಕಡೆ ಮಳೆಯಾಗುವ ಮುನ್ಸೂಚನೆ ಇದೆ.
ಉಳಿದ ಹಲವು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯ ಸಾಧ್ಯತೆ ಇಲ್ಲದೆ ಒಣ ಹವೆ ಮುಂದುವರಿಯುವ ಸಾಧ್ಯತೆ ಇದೆ.
ದುರ್ಬಲಗೊಂಡ ನೈಋತ್ಯ ಮುಂಗಾರು
ರಾಜ್ಯದಲ್ಲಿ ನೈಋತ್ಯ ಮುಂಗಾರು ದುರ್ಬಲಗೊಂಡಿದೆ. ಕರಾವಳಿ ಕರ್ನಾಟಕ ಹಾಗೂ ಉತ್ತರ ಒಳನಾಡು ಕರ್ನಾಟಕದಲ್ಲಿ ಮುಂಗಾರು ದುರ್ಬಲವಾಗಿದ್ದು, ಅಲ್ಲಲ್ಲಿ ಮಾತ್ರ ಸ್ವಲ್ಪವೇ ಮಳೆಯಾಗಿದೆ. ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಒಣ ಹವಾಮಾನ ಮುಂದುವರಿದಿದೆ.
ಸೋಮವಾರ ಸಂಜೆಗೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಕರಾವಳಿ ಕರ್ನಾಟಕ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆ ಮಾತ್ರ ಮಳೆಯಾಗಿದ್ದು, ದಕ್ಷಿಣ ಒಳನಾಡಿನಲ್ಲಿ ಮಳೆಯಾಗಿಲ್ಲ ಎಂದು ಐಎಂಡಿ ತಿಳಿಸಿದೆ. ಈ ಅವಧಿಯಲ್ಲಿ ಕಲಬುರಗಿ ಜಿಲ್ಲೆಯ ಸೆಡಂ, ಯಾದಗಿರಿ ಜಿಲ್ಲೆಯ ಹುಣಸಗಿ ಹಾಗೂ ಕಲಬುರಗಿ ಜಿಲ್ಲೆಯ ಕಮಲಾಪುರದಲ್ಲಿ ತಲಾ 1 ಸೆಂಟಿಮೀಟರ್ ಮಳೆಯಾಗಿದೆ.ಒಟ್ಟಾರೆ ರಾಜ್ಯದಲ್ಲಿ ಮುಂಗಾರು ಚಟುವಟಿಕೆ ದುರ್ಬಲವಾಗಿರುವುದರಿಂದ ಸದ್ಯಕ್ಕೆ ವ್ಯಾಪಕ ಮಳೆಯ ನಿರೀಕ್ಷೆ ಇಲ್ಲ. ಕೆಲ ಜಿಲ್ಲೆಗಳಲ್ಲಿ ಮಾತ್ರ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




