ಮೀಸಲಾತಿಗಾಗಿ ವಿದ್ಯಾರ್ಥಿಗಳ ಹೋರಾಟ; ಪ್ರತಿಭಟನೆ ಹತ್ತಿಕ್ಕಲು ರಾಯಚೂರು ಕೃಷಿ ವಿವಿಯಿಂದ ವಿವಾದಾತ್ಮಕ ಆದೇಶ!
ರಾಜ್ಯ ಸರ್ಕಾರದಿಂದ ನೇಮಕಾತಿ ಆಗುವ ಕೃಷಿ ಅಧಿಕಾರಿ ಮತ್ತು ಕೃಷಿ ಸಹಾಯಕ ಅಧಿಕಾರಿ ಹುದ್ದೆಯಲ್ಲಿ 15% ಮೀಸಲಾತಿಗೆ ಆಗ್ರಹಿಸಿ, ಕೃಷಿ ತಾಂತ್ರಿಕ (Agricultural Technology) ವಿದ್ಯಾರ್ಥಿಗಳು ಹೋರಾಟ ಮಾಡುತ್ತಿದ್ದಾರೆ. 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ, ಕೃಷಿ ಸಚಿವರಿಗೆ ಮನವಿ ಸಲ್ಲಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ.
ರಾಯಚೂರು: ರಾಜ್ಯ ಸರ್ಕಾರದಿಂದ ನೇಮಕಾತಿ ಆಗುವ ಕೃಷಿ ಅಧಿಕಾರಿ ಮತ್ತು ಕೃಷಿ ಸಹಾಯಕ ಅಧಿಕಾರಿ ಹುದ್ದೆಯಲ್ಲಿ 15% ಮೀಸಲಾತಿಗೆ ಆಗ್ರಹಿಸಿ, ಕೃಷಿ ತಾಂತ್ರಿಕ (Agricultural Technology) ವಿದ್ಯಾರ್ಥಿಗಳು ಹೋರಾಟ (Protest) ಮಾಡುತ್ತಿದ್ದಾರೆ. ರಾಯಚೂರು ನಗರದಲ್ಲಿರೊ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ (University for Agricultural Sciences, Raichur) 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಪಟ್ಟು ಹಿಡಿದಿದ್ದಾರೆ. ಜೊತೆಗೆ ಪ್ರತ್ಯೇಕ ಕೃಷಿ ತಾಂತ್ರಿಕ ವಿಭಾಗಕ್ಕೆ ನಿರ್ದೇಶನಾಲಯ ರಚಿಸಬೇಕು ಅನ್ನೋ ಕೂಗು ಕೂಡ ಇದೆ. ಈ ಬಗ್ಗೆ ಸರ್ಕಾರಕ್ಕೆ, ಕೃಷಿ ಸಚಿವರಿಗೆ ಮನವಿ ಸಲ್ಲಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಆದರೆ ನಾವು ಕ್ರಮಕೈಗೊಳ್ತಿವಿ ಅಂತ ಹೇಳಿ ಸರ್ಕಾರ ಕೈ ತೊಳೆದುಕೊಂಡಿದೆ, ಹೀಗಾಗಿ ವಿದ್ಯಾರ್ಥಿಗಳು ಹೋರಾಟ ಮುಂದುವರೆಸಿದ್ದಾರೆ. ಈ ಮಧ್ಯೆ ಈಗ ಹೋರಾಟ ಹತ್ತಿಕ್ಕಲು ಕೃಷಿ ವಿವಿ ಮುಂದಾಗಿದೆ.
ಎಷ್ಟೇ ಆಶ್ವಾಸನೆಗಳು ಸಿಕ್ಕಿರೂ ಮುಂದಿಟ್ಟ ಕಾಲು ಹಿಂದಿಡೋದಿಲ್ಲ ಅಂತ ಪಟ್ಟು ಹಿಡಿದಿರೊ ಕೃಷಿ ತಾಂತ್ರಿಕ ವಿಭಾಗದ ವಿದ್ಯಾರ್ಥಿಗಳನ್ನ ವಿಶ್ವವಿದ್ಯಾಲಯ ಸಂಕಷ್ಟಕ್ಕೆ ಸಿಲುಕಿಸಲಾಗ್ತಿದೆ. ಸರ್ಕಾರ ಹೋರಾಟ ನಿರತ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸುತ್ತೆ ಅಂತ ಹೇಳಿದ್ರೂ ಪ್ರತಿಭಟನೆ ಕೈಬಿಟ್ಟಿಲ್ಲ. ಈ ಹಿನ್ನೆಲೆ ಪ್ರತಿಭಟನೆ ಮೊಟಕುಗೊಳಿಸಲು ಅಡ್ಡದಾರಿ ಹಿಡಿದಿರೊ ರಾಯಚೂರು ಕೃಷಿ ವಿವಿ ಮುಷ್ಕರ ನಿರತ ವಿದ್ಯಾರ್ಥಿಗಳಿಗೆ ಕೃಷಿ ವಿವಿ ಹಾಸ್ಟೆಲ್ ಪ್ರವೇಶಕ್ಕೆ ನಿಷೇಧ ಹೇರಿ ವಿವಾದಾತ್ಮಕ ಆದೇಶ ಹೊರಡಿಸಿದೆ.
ವಿದ್ಯಾರ್ಥಿಗಳ ಹೋರಾಟಕ್ಕೆ ಕೊಕ್ಕೆ ಇಡಲು ಮುಂದಾಗಿರೊ ರಾಯಚೂರು ಕೃಷಿ ವಿವಿ, ‘ಶೈಕ್ಷಣಿಕ ಮಾಹಿತಿ ಹಾಗೂ ನಿಯಮಾವಳಿಗಳ ಷರತ್ತು 15’ ಅನ್ನ ವಿದ್ಯಾರ್ಥಿಗಳು ಉಲ್ಲಂಘಿಸಿದ್ದಾರೆ ಅಂತ ಉಲ್ಲೇಖಿಸಿದೆ. ಹೀಗಾಗಿ ತಕ್ಷಣಕ್ಕೆ ಜಾರಿಗೆ ಬರುವಂತೆ ಹೋರಾಟ ನಿರತ ವಿದ್ಯಾರ್ಥಿಗಳಿಗೆ ಕೃಷಿ ವಿವಿಯ ಹಾಸ್ಟೆಲ್ ಗಳ ಪ್ರವೇಶಕ್ಕೆ ನಿಷೇಧ ಹೇರಿದೆ. ಈ ವಿವಾದಾತ್ಮಕ ಆದೇಶಕ್ಕೂ ಕ್ಯಾರೆ ಎನ್ನದ ವಿದ್ಯಾರ್ಥಿಗಳು ತಮ್ಮ ಹೋರಾಟ ಮುಂದುವರೆಸಿದ್ದಾರೆ.
ನಂತರ ಅಕ್ಷರಶಃ ಕೆರಳಿರೊ ಕೃಷಿ ವಿವಿ ಮತ್ತೊಂದು ದೊಡ್ಡ ವಿವಾದವನ್ನೇ ಮೈಮೇಲೆ ಎಳೆದುಕೊಂಡಿದೆ. ಮೊದಲು ಹಾಸ್ಟೆಲ್ ಪ್ರವೇಶಕ್ಕೆ ನಿಷೇಧ ಹೇರಿದ್ದ ಆದೇಶಕ್ಕೆ ಯಾವೆಲ್ಲ ವಿದ್ಯಾರ್ಥಿಗಳು ಕವಡೆ ಕಾಸಿನ ಕಿಮ್ಮತ್ತು ಕೊಡ್ಲಿಲ್ವೋ ಆಗ ಮತ್ತೊಂದು ಅಸ್ತ್ರವನ್ನ ರಾಯಚೂರು ಕೃಷಿ ವಿವಿ ಪ್ರಯೋಗಿಸಿದೆ. ಕೂಡಲೇ ಹಾಸ್ಟೆಲ್ ಗಳಲ್ಲಿ ವಾಸವಿರೊ ವಿದ್ಯಾರ್ಥಿಗಳು ತಮಗೆ ಸಂಬಂಧಿಸಿದ ವಸ್ತುಗಳನ್ನ ತೆಗೆದುಕೊಂಡು ವಸತಿ ನಿಲಯ ಖಾಲಿ ಮಾಡಬೇಕು. ಆದೇಶದನ್ವಯ ಹಾಸ್ಟೆಲ್ ಗಳ ಮುಖ್ಯದ್ವಾರ ಹಾಗೂ ಕೊಠಡಿಗಳನ್ನ ಬಂದ್ ಮಾಡಲಾಗುವುದು ಅಂತ ನೋಟಿಸ್ ಹೊರಡಿಸಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಚುನಾವಣೆ ನಂತರ ಮತ್ತೆ ಆಪರೇಷನ್ ಕಮಲ ಆಗುತ್ತಾ? ರಮೇಶ್ ಜಾರಕಿಹೊಳಿ ಹೇಳಿದ್ದೇನು?
ಹಾಸ್ಟೆಲ್ ತೊರೆಯುವಂತೆ ಕೃಷಿ ವಿವಿ ಹೊರಡಿಸಿದ್ದ ಆದೇಶ ದೊಡ್ಡ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಈಗ ರಾಯಚೂರು ಕೃಷಿ ವಿವಿ ತನ್ನ ಆದೇಶವನ್ನು ಹಿಂಪಡೆದಿದೆ. ಇದರಿಂದ ನ್ಯಾಯಕ್ಕಾಗಿ ಹೋರಾಟಕ್ಕಿಳಿದಿದ್ದ ವಿದ್ಯಾರ್ಥಿಗಳಿಗೆ ಮತ್ತೆ ಆನೆ ಬಲ ಬಂದಂತಾಗಿದ್ದು ಕೃಷಿ ತಾಂತ್ರಿಕ ವಿಭಾಗದ ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ಮುಂದುವರೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ