ಕೊನೆಗೂ ಬಳ್ಳಾರಿ ಬಿಜೆಪಿ ಸಮಾವೇಶಕ್ಕೆ ಗ್ರೀನ್ ಸಿಗ್ನಲ್: ಸಿಎಂ ಸೂಚನೆ ಬಳಿಕ ಅನುಮತಿ ನೀಡಿದ ಡಿಸಿ
ಬಳ್ಳಾರಿಯ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಸೆಪ್ಟೆಂಬರ್ 10ರಂದು ನಡೆಯಲಿರವ ಬಿಜೆಪಿಯ ‘ಬಳ್ಳಾರಿ ಚಲೋ’ ಪಾದಯಾತ್ರೆಯ ಸಮಾರೋಪ ಸಮಾವೇಶಕ್ಕೆ ಒಂದು ವಾರದ ಬಳಿಕ ಕೊನೆಗೂ ಅನುಮತಿ ದೊರೆತಿದೆ. ಸಿಎಂ ಡಿಕೆ ಶಿವಕುಮಾರ್ ಸೂಚನೆ ಬೆನ್ನಲ್ಲೇ ಬಳ್ಳಾರಿ ಡಿಸಿ ಸಮಾವೇಶಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಶಿವಮೊಗ್ಗ/ಬಳ್ಳಾರಿ, ಸೆಪ್ಟೆಂಬರ್ 08: ಬಿಜೆಪಿಯ ‘ಬಳ್ಳಾರಿ ಚಲೋ’ ಪಾದಯಾತ್ರೆಯ ಸಮಾರೋಪ ಸಮಾವೇಶಕ್ಕೆ ಸೆಪ್ಟೆಂಬರ್ 10ರಂದು ಬಳ್ಳಾರಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬಹಿರಂಗ ಸಭೆಗೆ ಅನುಮತಿ ನೀಡಿರಲಿಲ್ಲ. ಕಳೆದ ಒಂದು ವಾರದಿಂದ ಅನುಮತಿ ಕೊಡದೇ ಜಿಲ್ಲಾಡಳಿತ ನಿರಾಕರಿಸಿತ್ತು. ಕಾನೂನಾತ್ಮಕವಾಗಿ ಅನುಮತಿ ಕೇಳಿದರೆ ಕೊಡಬಹುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದರು. ಇದೆಲ್ಲದರ ನಡೆವೆ ಸಿಎಂ ಡಿಕೆ ಶಿವಕುಮಾರ್ ಸೂಚನೆ ಬೆನ್ನಲ್ಲೇ ಕೊನೆಗೂ ಬಿಜೆಪಿ ಸಮಾವೇಶಕ್ಕೆ ಬಳ್ಳಾರಿ ಜಿಲ್ಲಾಡಳಿತ ಅನುಮತಿ ಕೊಟ್ಟಿದೆ.
ಒಂದು ವಾರದಿಂದ ಬಳಿಕ ಅನುಮತಿ ನೀಡಿದ ಜಿಲ್ಲಾಡಳಿತ
ಕಳೆದ ಒಂದು ವಾರದಿಂದ ತೀವ್ರ ಹಗ್ಗಜಗ್ಗಾಟ ಹಾಗೂ ವಿವಾದಕ್ಕೆ ಕಾರಣವಾಗಿದ್ದ ಬಳ್ಳಾರಿಯ ಬಿಜೆಪಿ ಬೃಹತ್ ಸಮಾವೇಶಕ್ಕೆ ಕೊನೆಗೂ ಜಿಲ್ಲಾಡಳಿತ ಅನುಮತಿ ನೀಡಿದೆ. ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಸಲು ಅನುಮತಿ ನಿರಾಕರಿಸಿದ್ದ ಜಿಲ್ಲಾಡಳಿತ ಹಾಗೂ ಸರ್ಕಾರದ ಧೋರಣೆ ವಿರುದ್ಧ ಕೇಸರಿ ಪಡೆ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಈ ಬೆನ್ನಲ್ಲೇ ಶಾಸಕ ಜಿ. ಜನಾರ್ದನ ರೆಡ್ಡಿ ಅವರ ನೇತೃತ್ವದ ಬಿಜೆಪಿ ನಿಯೋಗವು ಖುದ್ದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ ಬಳಿಕ, ಸೆಪ್ಟೆಂಬರ್ 10 ರಂದು ಸಮಾವೇಶ ನಡೆಸಲು ಅಧಿಕೃತ ಸಮ್ಮತಿ ದೊರೆತಿದೆ.
ಇದನ್ನೂ ಓದಿ: ಬಳ್ಳಾರಿ: ಬಿಜೆಪಿಯ ‘ಬಳ್ಳಾರಿ ಚಲೋ’ ಪಾದಯಾತ್ರೆಯ ಸಮಾರೋಪ ಸಮಾವೇಶಕ್ಕೆ ಶಾಲಾ ಶಿಕ್ಷಣ ಇಲಾಖೆಯಿಂದ ಅನುಮತಿ ನಿರಾಕರಣೆ
ಜಿಲ್ಲಾಡಳಿತದಿಂದ ಅನುಮತಿ ಸಿಗುತ್ತಿದ್ದಂತೆಯೇ ನಿರಾಳರಾದ ನಾಯಕರು ಸಮಾವೇಶದ ಸಿದ್ಧತೆಗೆ ಮುಂದಾಗಿದ್ದಾರೆ. ಜನಾರ್ದನ ರೆಡ್ಡಿ, ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಹಾಗೂ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ ಸ್ಥಳಕ್ಕೆ ಭೇಟಿ ನೀಡಿ ಮೈದಾನದ ಸಿದ್ಧತೆಗಳನ್ನು ಖುದ್ದು ಪರಿಶೀಲಿಸಿದರು.
ರಾಜಕೀಯ ಸಮಾವೇಶಕ್ಕೆ ಯಾವುದೇ ರೀತಿ ಅಡ್ಡಿ ಇಲ್ಲವೆಂದ ಸಿಎಂ
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಿ ಬೇಕಾದರೂ ಸಮಾವೇಶ ಮಾಡಬಹುದು. ರಸ್ತೆ ಹೊರತುಪಡಿಸಿ ಎಲ್ಲಿ ಬೇಕಾದರೂ ರ‍್ಯಾಲಿ ಮಾಡಿಕೊಳ್ಳಲಿ. ರಾಜಕೀಯ ಸಮಾವೇಶಕ್ಕೆ ಯಾವುದೇ ರೀತಿ ಅಡ್ಡಿ. ಎಷ್ಟೇ ದೊಡ್ಡ ಸಮಾವೇಶವನ್ನಾದರೂ ಮಾಡಿಕೊಳ್ಳಲಿ, ಅನುಮತಿ ನೀಡಿ’ ಎಂದು ಬಳ್ಳಾರಿ ಡಿಸಿ ಸಂಪರ್ಕಿಸಿ ಸಿಎಂ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ. ಈ ಬಗ್ಗೆ ಟಿವಿ9ಗೆ ಮುಖ್ಯಮಂತ್ರಿಗಳ ಕಚೇರಿಯ ಉನ್ನತ ಮೂಲಗಳಿಂದ ಮಾಹಿತಿ ನೀಡಲಾಗಿದೆ.
ಕಾನೂನಿನ ಚೌಕಟ್ಟಿನಲ್ಲಿ ಅವಕಾಶವಿಲ್ಲದಿದ್ದರೆ ಅನುಮತಿ ಅಸಾಧ್ಯ: ಮಧು ಬಂಗಾರಪ್ಪ
ಬಳ್ಳಾರಿಯ BJP ಸಮಾವೇಶಕ್ಕೆ ಅನುಮತಿ ನಿರಾಕರಣೆ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ‘ಮೈದಾನಗಳ ಬಳಕೆಗೆ ಸಂಬಂಧಿಸಿದಂತೆ ಸ್ಪಷ್ಟವಾದ ನಿಯಮಾವಳಿಗಳಿವೆ. ರಾಜ್ಯದಲ್ಲಿ ಕಾನೂನಿನ ಚೌಕಟ್ಟಿನಲ್ಲಿಯೇ ವ್ಯವಸ್ಥೆಗಳು ನಡೆಯುತ್ತವೆ. ಈ ಹಿಂದೆ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಯ ಅನ್ವಯ, ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಗೆ ಮುಂಚಿತವಾಗಿ ನಿಗದಿತ ನಿಯಮಗಳ ಪ್ರಕಾರ ಅನುಮತಿ ಪಡೆಯಬೇಕಾಗುತ್ತದೆ. ಕಾನೂನಿನಲ್ಲಿ ಅವಕಾಶವಿಲ್ಲದಿದ್ದಾಗ ನಮಗೆ ಹೇಗೆ ಬೇಕೋ ಹಾಗೆ ಅನುಮತಿ ನೀಡಲು ಸಾಧ್ಯವಿಲ್ಲ. ಸಮಾವೇಶವನ್ನು ನಿಯಮಬದ್ಧವಾಗಿ ಬೇರೆಡೆ ಎಲ್ಲಿ ಬೇಕಾದರೂ ಅವರು ಮಾಡಿಕೊಳ್ಳಲಿ’ ಎಂದು ಸ್ಪಷ್ಟನೆ ನೀಡಿದರು.
ಬೀದಿಯಲ್ಲಿ ಗಲಾಟೆ ಮಾಡುವುದಲ್ಲ, ಸದನದಲ್ಲಿ ಪ್ರಶ್ನಿಸುವ ಧೈರ್ಯ ತೋರಿ
‘ಕೇವಲ ಮಾಧ್ಯಮಗಳಲ್ಲಿ ಪ್ರಚಾರ ಸಿಗುತ್ತದೆ ಎಂಬ ಕಾರಣಕ್ಕೆ ಬೀದಿಗೆ ಬಂದು ಗಲಾಟೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಜನರೇನು ದಡ್ಡರಲ್ಲ, ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿದ್ದರೆ, ಬೀದಿಯಲ್ಲಿ ನಿಂತು ಪುಕ್ಕಟೆ ಭಾಷಣ ಬಿಗಿಯುವುದನ್ನು ಬಿಟ್ಟು ವಿಧಾನಸೌಧಕ್ಕೆ ಬಂದು ಚರ್ಚೆ ನಡೆಸಲಿ. ಸೆಪ್ಟೆಂಬರ್ 21ರಿಂದ ಮೂರು ದಿನಗಳ ವಿಶೇಷ ಅಧಿವೇಶನ ಕರೆಯಲಾಗಿದೆ. ಅಲ್ಲಿ ಬರ ಪರಿಸ್ಥಿತಿ, ರೈತರ ಸಮಸ್ಯೆ ಹಾಗೂ ಕಸ್ತೂರಿ ರಂಗನ್ ವರದಿಯಂತಹ ಗಂಭೀರ ವಿಚಾರಗಳ ಬಗ್ಗೆ ಚರ್ಚೆಯಾಗಲಿದೆ. ಧೈರ್ಯವಿದ್ದರೆ ಸದನಕ್ಕೆ ಬಂದು ಸರ್ಕಾರವನ್ನು ಪ್ರಶ್ನಿಸಲಿ, ಪ್ರತಿಯೊಂದಕ್ಕೂ ಉತ್ತರಿಸಲು ನಾವು ಸಿದ್ಧರಿದ್ದೇವೆ’ ಎಂದು ಸವಾಲು ಹಾಕಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:01 pm, Tue, 8 September 26



