AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

TV9 Kannada News highlights: ಶಾಲೆ ಮುಂದೆ ಶೂಗಳನ್ನು ಎಸೆದ ವಿದ್ಯಾರ್ಥಿಗಳು, ಕಳಪೆ ಶೂಗಳನ್ನು ವಾಪಸ್ ಕಳುಹಿಸಲು ನಿರ್ಧಾರ

Karnataka News Today Live Updates: ಚಿಕ್ಕಬಳ್ಳಾಪುರದಲ್ಲಿ ಟೆಲಿಗ್ರಾಂ ಮೂಲಕ ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಶಬ್ಬೀರ್ ಹಾಗೂ ಸಲ್ಮಾನ್ ಬಂಧನ. ಬಾಗಲಕೋಟೆ ಜಿಲ್ಲೆಗೆ ಬಿಜೆಪಿ ನಾಯಕಿ ಮಾಧವಿಲತಾಗೆ ಅಕ್ಟೋಬರ್ 23ರವರೆಗೆ ಪ್ರವೇಶ ನಿಷೇಧಿಸಿ ಡಿಸಿ ಆದೇಶ. ಇತ್ತ ಸಿಕ್ಕಿಂನ ರಿಂಬಿ ಗ್ರಾಮದಲ್ಲಿ ಭಾರಿ ಮಳೆಗೆ ಭೀಕರ ಭೂಕುಸಿತ. ಪ್ರಮುಖ ಸುದ್ದಿಗಳ ಲೈವ್ ಅಪ್‌ಡೇಟ್ಸ್‌ ಇಲ್ಲಿದೆ.

TV9 Kannada News highlights:  ಶಾಲೆ ಮುಂದೆ ಶೂಗಳನ್ನು ಎಸೆದ ವಿದ್ಯಾರ್ಥಿಗಳು, ಕಳಪೆ ಶೂಗಳನ್ನು ವಾಪಸ್ ಕಳುಹಿಸಲು ನಿರ್ಧಾರ
ಕಳಪೆ ಗುಣಮಟ್ಟದ ಶೂ
ಭಾವನಾ ಹೆಗಡೆ
| Edited By: |

Updated on:Sep 25, 2026 | 10:13 PM

Share

Breaking News Today Live Updates in Kannada: ಚಿಕ್ಕಬಳ್ಳಾಪುರದ ಬಾಪೂಜಿನಗರದ ಶಬ್ಬೀರ್ ಎಂಬ ಯುವಕನನ್ನು ದೇಶದಲ್ಲಿ ವಿಧ್ವಂಸಕ ಕೃತ್ಯ ಹಾಗೂ ಭಯೋತ್ಪಾದನೆಗೆ ಸಂಚು ರೂಪಿಸಿದ ಆರೋಪದ ಮೇಲೆ ಚಿಕ್ಕಬಳ್ಳಾಪುರ ಪೊಲೀಸರು ಬಿಎನ್‌ಎಸ್ ಕಾಯ್ದೆಯಡಿ ಬಂಧಿಸಿದ್ದಾರೆ. ಜೊತೆಗೆ ಉತ್ತರಭಾರತ ಮೂಲದ ಸಲ್ಮಾನ್ ಕೂಡ ಅರೆಸ್ಟ್​ ಆಗಿದ್ದಾನೆ. ಆರೋಪಿಗಳು ಟೆಲಿಗ್ರಾಂ ಆ್ಯಪ್‌ನಲ್ಲಿ ಗ್ರೂಪ್‌ ಸೃಷ್ಟಿಸಿ, ಶ್ರೀಮಂತರ ಅಪಹರಣದ ಮೂಲಕ ಹಣ ಸಂಗ್ರಹಿಸಿ ದೇಶದ ಪ್ರಭಾವಿ ಮೂವರು ನಾಯಕರ ಹತ್ಯೆ ಹಾಗೂ ಭಯೋತ್ಪಾದನೆ ಸೃಷ್ಟಿಸಲು ಪ್ರತಿದಿನ ಚರ್ಚಿಸುತ್ತಿದ್ದರು ಎಂಬುದು ತಿಳಿದುಬಂದಿದೆ. ಗ್ರೂಪ್‌ನಲ್ಲಿದ್ದ ಇತರರ ಪತ್ತೆಗೆ ಜಾಲ ಬೀಸಲಾಗಿದೆ. ಹೈದರಾಬಾದ್‌ನ ಬಿಜೆಪಿ ನಾಯಕಿ ಕೊಂಪೆಲ್ಲಾ ಮಾಧವಿಲತಾ ಅವರಿಗೆ ಬಾಗಲಕೋಟೆ ಜಿಲ್ಲೆಗೆ ಪ್ರವೇಶಿಸದಂತೆ ಅಕ್ಟೋಬರ್ 23ರವರೆಗೆ ನಿರ್ಬಂಧ ವಿಧಿಸಿ ಡಿಸಿ ಸಂಗಪ್ಪ ಆದೇಶಿಸಿದ್ದಾರೆ. ಹಿಂದೂ ಮಹಾಗಣಪತಿ ವಿಸರ್ಜನೆ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿದ್ದ ಅವರ ಪ್ರಚೋದನಾಕಾರಿ ಭಾಷಣದ ಸಾಧ್ಯತೆ ಕುರಿತು ಎಸ್‌ನ ಪತ್ರದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಪಶ್ಚಿಮ ಸಿಕ್ಕಿಂನ ರಿಂಬಿ ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಭೀಕರ ಭೂಕುಸಿತ ಸಂಭವಿಸಿದ್ದು, ರಸ್ತೆ ಹಾಗೂ ಆಸ್ತಪಾಸ್ತಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

LIVE NEWS & UPDATES

The liveblog has ended.
  • 25 Sep 2026 08:27 PM (IST)

    ಪೊಲೀಸರು ಕರೆದೊಯ್ಯುವಾಗ ರೈತ ಮಹಿಳೆ ವರಲಕ್ಷ್ಮೀ ಅಸ್ವಸ್ಥ

    ಬಿಡದಿ ಟೌನ್​ಶಿಪ್​ ಯೋಜನೆ ವಿರೋಧಿಸಿ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಬೈರಮಂಗಲ ಬಳಿ ಧರಣಿ ನಡೆಸುತ್ತಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಕರೆದೊಯ್ಯುವಾಗ ರೈತ ಮಹಿಳೆ ವರಲಕ್ಷ್ಮೀ ಅಸ್ವಸ್ಥಗೊಂಡಿದ್ದಾಳೆ. ಕೂಡಲೇ ಅಸ್ವಸ್ಥ ವರಲಕ್ಷ್ಮೀರನ್ನು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

  • 25 Sep 2026 08:25 PM (IST)

    ಮೂವರು ನ್ಯಾಯಮೂರ್ತಿಗಳು ಪ್ರಮಾಣ ವಚನ ಸ್ವಿಕಾರ

    ಕರ್ನಾಟಕ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಉಷಾರಾಣಿ, ಕುರುಬ ಶಾಂತಪ್ಪ ಭರತ್ ಕುಮಾರ್ ಮತ್ತು ನೇರಳೆ ವೀರಭದ್ರಯ್ಯ ಭವಾನಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ಇಂದು (ಸೆಪ್ಟೆಂಬರ್ 25) ಲೋಕಭವನದ ಗಾಜಿನ ಮನೆಯಲ್ಲಿ ಆಯೋಜಿಸಲಾದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೆಚ್ಚುವರಿ ನ್ಯಾಯಮೂರ್ತಿಗಳಿಗೆ ಪದವಿಯ ಅಧಿಕಾರ ಪ್ರಮಾಣ ವಚನ ಭೋಧಿಸಿದರು.

    ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಸಲೀಂ ಅಹಮ್ಮದ್, ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ವಿಬು ಭಖ್ರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಗಣ್ಯರು, ಉಚ್ಛ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳು, ರಿಜಿಸ್ಟ್ರಾರ್ ಜನರಲ್‌ ಅವರು ಸೇರಿದಂತೆ ವಕೀಲರು, ಪ್ರಮಾಣ ವಚನ ಸ್ವೀಕರಿಸಿದ ಗೌರವಾನ್ವಿತ ಹೆಚ್ಚುವರಿ ನ್ಯಾಯಮೂರ್ತಿಗಳ ಕುಟುಂಬ ವರ್ಗದವರು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

  • 25 Sep 2026 07:22 PM (IST)

    ಶೂಗಳನ್ನು ಎಸೆದ ವಿದ್ಯಾರ್ಥಿಗಳು

    ಶಾಲಾ ಮಕ್ಕಳಿಗೆ ಕಳಪೆ ಗುಣಮಟ್ಟದ ಶೂ ವಿತರಣೆ ಆರೋಪಗಳು ಕೇಳಿಬಂದಿದ್ದು, ಉತ್ತರ ಕನ್ನಡ ಜಿಲ್ಲೆ ಮುಂಡಗೋಡು ತಾಲೂಕಿನ ಬೆಡಸಗಾಂವ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಹಾಗೂ ಪೋಷಕರು ಶೂಗಳನ್ನು ತಿರಸ್ಕಾರ ಮಾಡಿದ್ದಾರೆ. ವಿತರಿಸಿದ ಶೂಗಳು ಗುಣಮಟ್ಟದ ಮಾನದಂಡಕ್ಕೆ ಅನುಗುಣವಾಗಿಲ್ಲ. ಮಕ್ಕಳ ಬಳಕೆಗೆ ಯೋಗ್ಯವಾಗಿಲ್ಲ ಎಂದು ಪಾಲಕರು, SDMC ಸದಸ್ಯರು ಆರೋಪಿಸಿದ್ದು, ಅಧಿಕಾರಿಗಳು ಮಕ್ಕಳ ಶೂಗಳ ಗುಣಮಟ್ಟ ಪರಿಶೀಲಿಸಲು ಆಗ್ರಹಿಸಿದ್ದಾರೆ. ಅಲ್ಲದೇ ಮಕ್ಕಳಿಗೆ ನೀಡಿದ ಕಳಪೆ ಶೂಗಳನ್ನು ವಾಪಸ್ ಕಳುಹಿಸಲು ನಿರ್ಧರಿಸಲಾಗಿದೆ. ಇನ್ನು ವಿದ್ಯಾರ್ಥಿಗಳು, ಶಾಲೆಯ ಮುಂದೆ ಶೂಗಳನ್ನು ಎಸೆದು ಆಕ್ರೋಶ ಹೊರಹಾಕಿದ್ದಾರೆ.

  • 25 Sep 2026 05:47 PM (IST)

    ಬಿಡದಿ ಟೌನ್​ಶಿಪ್ ಪ್ರತಿಭಟನೆ ನಡೆಸುತ್ತಿದ್ದ ರೈತರು ಪೊಲೀಸರ ವಶಕ್ಕೆ

    ಬಿಡದಿ ಟೌನ್​ಶಿಪ್ ಯೋಜನೆ ವಿರೋಧಿಸಿ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಬೈರಮಂಗಲ ಬಳಿ ಕಳೆದ ಐದು ದಿನಗಳಿಂದ ಪ್ರತಿಭಟನೆ ನಡೆಸಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಿಡದಿ-ಹಾರೋಹಳ್ಳಿ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದರು. ಕಳೆದ 5 ದಿನದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಹೀಗಾಗಿ ಇಂದು (ಸೆ.25) ಪೊಲೀಸರು ರೈತರನ್ನು ವಶಕ್ಕೆ ಪಡೆದುಕೊಂಡಿದ್ದು, ಜೊತೆಗೆ ರಸ್ತೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ಎತ್ತಿಕೊಂಡು ಹೋದರು. ಹಾಗೇ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದ ಎತ್ತಿನಗಾಡಿ, ಟ್ರ್ಯಾಕ್ಟರ್​ಗಳ ತೆರವುಗೊಳಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

  • 25 Sep 2026 04:35 PM (IST)

    ರಹಿಮಾನ್ ಹತ್ಯೆ ಕೇಸ್: ಕಲ್ಲಡ್ಕ ಪ್ರಭಾಕರ ಭಟ್​ಗೆ ನೊಟೀಸ್

    ಬಂಟ್ವಾಳದ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ RSS ಮುಖಂಡ ಕಲ್ಲಡ್ಕ ಪ್ರಭಾಕರ ಭಟ್​ಗೆ ನೊಟೀಸ್ ನೀಡಲಾಗಿದೆ. ರಹಿಮಾನ್ ಹತ್ಯೆ ವೇಳೆ ಆರೋಪಿಗಳ ಜೊತೆ ಸಂಪರ್ಕ ಇರುವ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣೆಯ ಸಹಾಯಕ ತನಿಖಾಧಿಕಾರಿ ಪಿ.ಕಲೈಮಾರ್​ ಅವರು ಪ್ರಭಾಕರ ಭಟ್​ಗೆ ನೋಟಿಸ್ ಜಾರಿ ಮಾಡಿದ್ದು, ನಾಳೆ (ಸೆ,26) ಕಲ್ಲಡ್ಕದ ಮನೆಯಲ್ಲೇ ಪ್ರಭಾಕರ್​ ಭಟ್ ಅವರ ವಿಚಾರಣೆ ನಡೆಯಲಿದೆ.

  • 25 Sep 2026 04:24 PM (IST)

    ಹಾಲಿನ ದರ ಕನಿಷ್ಠ 10 ರೂ. ಹೆಚ್ಚಳ ಮಾಡುವಂತೆ ಮನವಿ ಎಂದ ಸುರೇಶ್

    ಹಾಲಿನ ದರ ಏರಿಕೆ ಸಂಬಂಧ ಸತತ ಮೂರು ಗಂಟೆಗಳ ಕಾಲ ನಡೆದ ಸಭೆ ಅಂತ್ಯವಾಗಿದೆ. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಮುಲ್​ ಅಧ್ಯಕ್ಷ ಡಿ.ಕೆ.ಸುರೇಶ್​, ಹಾಲಿನ ದರ ಕನಿಷ್ಠ 10 ರೂ. ಹೆಚ್ಚಳ ಮಾಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ನಾಳೆ (ಸೆ.26) ಬೆಳಗ್ಗೆ 10 ಗಂಟೆಗೆ ಸಿಎಂ ಭೇಟಿಯಾಗಿ ಪ್ರಸ್ತಾವನೆ ಸಲ್ಲಿಸುತ್ತೇವೆ. ರೈತರ ಹಿತ ಕಾಪಾಡುವುದು ನಮ್ಮ ಉದ್ದೇಶ. ಕನಿಷ್ಠ 10 ರೂ. ಹೆಚ್ಚಳ ಮಾಡಲು ರೈತರು ಬೇಡಿಕೆ ಇಟ್ಟಿದ್ದಾರೆ. ಒಕ್ಕೂಟದ ಸಮಸ್ಯೆಗಳು, ಆಡಳಿತ ವೆಚ್ಚ, ಉತ್ಪಾದನೆ ಸೇರಿ ನಾಳೆ ಸಿಎಂ ಭೇಟಿ ಮಾಡಿ ಪ್ರಸ್ತಾವನೆಯನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.

  • 25 Sep 2026 04:09 PM (IST)

    ಹಾಲಿನ ದರ ಏರಿಕೆ ಕುರಿತು ಮೂಡದ ಒಮ್ಮತ

    ಹಾಲಿನ ದರ ಏರಿಕೆ ಕುರಿತು ಬೆಂಗಳೂರಿನ ಕೆಎಂಎಫ್ ಕೇಂದ್ರ ಕಚೇರಿಯಲ್ಲಿ ಕಳೆದ 3 ಗಂಟೆಯಿಂದ ಸಭೆ ನಡೆದಿದೆ. ಆದ್ರೆ, ಸಭೆಯಲ್ಲಿ ದರ ಏರಿಕೆ ವಿಚಾರದಲ್ಲಿ ಒಮ್ಮತ ಮೂಡುತ್ತಿಲ್ಲ. ರೈತರು ಕೇಳಿದಷ್ಟು ಹೆಚ್ಚಿಸುವಂತೆ ಕೆಲ ಒಕ್ಕೂಟಗಳ ಪಟ್ಟು ಹಿಡಿದಿದ್ದರೆ, ಗ್ರಾಹಕರ ಪರ ದರ ನಿಗದಿಗೆ ಕೆಲವು ಒಕ್ಕೂಟಗಳ ಮನವಿ ಮಾಡಿವೆ. ಸರ್ಕಾರಕ್ಕೆ ರಾಜ್ಯದಲ್ಲಿ ಸದ್ಯ ಉತ್ತಮ‌ವಾದ ಹೆಸರಿದೆ. ಯಾರಿಗೂ ಹೊರೆ ಆಗದಂತೆ ನಿರ್ಧರಿಸಿ ಎಂದು ಇನ್ನೂ ಕೆಲವು ಒಕ್ಕೂಟಗಳು ಅಭಿಪ್ರಾಯ ವ್ಯಕ್ತಪಡಿಸಿವೆ. ಹೀಗಾಗಿ ಯಾವುದೇ ಸಭೆಯಲ್ಲಿ ಯಾವುದೇ ಒಮ್ಮತ ಮೂಡಿ ಬರುತ್ತಿಲ್ಲ.

  • 25 Sep 2026 02:05 PM (IST)

    ಬೆಂಗಳೂರಲ್ಲಿ ನಂದಿನಿ ಹಾಲು ಕಳ್ಳತನ: ಕ್ರೇಟ್ ಸಮೇತ 48 ಲೀಟರ್ ಎಗರಿಸಿದ ಖದೀಮರು

    ರಾಜ್ಯದಲ್ಲಿ ನಂದಿನಿ ಹಾಲಿನ ದರ ಏರಿಕೆ ಚರ್ಚೆ ಬೆನ್ನಲ್ಲೇ ಬೆಂಗಳೂರಿನ ರಿಚ್ಮಂಡ್ ಟೌನ್‌ನಲ್ಲಿ ಕ್ರೇಟ್‌ಗಳ ಸಮೇತ 48 ಲೀಟರ್ ಹಾಲನ್ನು ಖದೀಮರು ಕದ್ದೊಯ್ದಿದ್ದಾರೆ. ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ಸ್ಕೂಟರ್‌ನಲ್ಲಿ ಬಂದ ಕಳ್ಳರು ಮುಂಜಾನೆ ಕೃತ್ಯ ಎಸಗಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

  • 25 Sep 2026 01:56 PM (IST)

    ಬಳ್ಳಾರಿ ಸಬ್ ರಿಜಿಸ್ಟ್ರಾರ್ ಕಚೇರಿ ಮುತ್ತಿಗೆ

    ಬಳ್ಳಾರಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬೆಂಗಳೂರಿನಲ್ಲಿರುವ ಸ್ವಪ್ನಾ ಅವರ 5 ಕೋಟಿ ರೂ. ಮೌಲ್ಯದ 6.87 ಎಕರೆ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿರುವ ಕೃತ್ಯ ಬೆಳಕಿಗೆ ಬಂದಿದೆ. ಸಬ್ ರಿಜಿಸ್ಟ್ರಾರ್ ದೇವಣ್ಣ ಅವರ ಭ್ರಷ್ಟಾಚಾರವನ್ನು ಖಂಡಿಸಿ ಬುಡಾ ಅಧ್ಯಕ್ಷ ಆಂಜನೇಯಲು ಹಾಗೂ ಸಂತ್ರಸ್ತ ನಾರಾಯಣಸ್ವಾಮಿ ನೇತೃತ್ವದಲ್ಲಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಲಾಯಿತು.

  • 25 Sep 2026 01:54 PM (IST)

    ಬಜೆಟ್ ಪ್ರತಿಯಿಂದ ವಿಷಯವೇ ಮಾಯ: ರಾಜ್ಯ ಸರ್ಕಾರದ ವಿರುದ್ಧ ಶಾಸಕ ಬಿ.ಆರ್. ಪಾಟೀಲ್ ಆಕ್ರೋಶ

    ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಕುರಿತು ಸಿದ್ದರಾಮಯ್ಯ ಬಜೆಟ್ ಪ್ರೂಫ್‌ರೀಡಿಂಗ್‌ನಲ್ಲಿದ್ದ ಅಂಶ ಕೊನೆ ಗಳಿಗೆಯಲ್ಲಿ ಮಾಯವಾಗಿದೆ ಎಂದು ಹಿರಿಯ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ. ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನದ ರಾಜೀನಾಮೆ ಹಿಂಪಡೆಯಲು ರಣದೀಪ್ ಸುರ್ಜೇವಾಲ ಸೂಚಿಸಿದ್ದು, ಪ್ರಣಾಳಿಕೆ ಭರವಸೆ ಈಡೇರಿಸುವಂತೆ ರಾಹುಲ್ ಗಾಂಧಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

  • 25 Sep 2026 01:54 PM (IST)

    ಕುಣಿಯಲಾರದವ ನೆಲ ಡೊಂಕು ಎನ್ನಬಾರದು: ಸಿಎಂಗೆ ಪ್ರಹ್ಲಾದ್ ಜೋಶಿ ತಿರುಗೇಟು

    ಸರ್ಕಾರದ ಭ್ರಷ್ಟಾಚಾರ ಹಾಗೂ ದಿವಾಳಿತನವನ್ನು ಮರೆಮಾಚಲು ರಾಜ್ಯ ನಾಯಕರು ಕೇಂದ್ರದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಹುದ್ದೆಗಳ ಹರಾಜು ಮತ್ತು ತಹಶೀಲ್ದಾರ್ ಲಂಚದ ಪ್ರಕರಣಗಳನ್ನು ಉಲ್ಲೇಖಿಸಿ, ರಾಹುಲ್ ಗಾಂಧಿಯವರನ್ನು ಮೆಚ್ಚಿಸಲು ಸಿಎಂ-ಡಿಸಿಎಂ ಹೀಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

  • 25 Sep 2026 01:53 PM (IST)

    ಸೋಲಿಗೆ ಮೋದಿ ಕಾರಣ ಎನ್ನುವುದು ಕಾಂಗ್ರೆಸ್‌ಗೆ ಅಭ್ಯಾಸ: ಪ್ರಹ್ಲಾದ್ ಜೋಶಿ ವಾಗ್ದಾಳಿ

    SIR ಪ್ರಕ್ರಿಯೆಗೆ ಶಿಕ್ಷಕರ ಬಳಕೆ ಹಾಗೂ ಸಿಇಸಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಗೆ ಕಿಡಿಕಾರಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸತತ ಸೋಲಿನಿಂದ ಕಂಗಾಲಾಗಿರುವ ಕಾಂಗ್ರೆಸ್ ಪ್ರತಿಯೊಂದಕ್ಕೂ ಪ್ರಧಾನಿ ಮೋದಿಯವರನ್ನೇ ಹೊಣೆ ಮಾಡುತ್ತಿದೆ ಎಂದಿದ್ದಾರೆ. ರಾಹುಲ್ ಗಾಂಧಿ ವಿದೇಶ ಸುತ್ತುತ್ತಿದ್ದರೆ, ಮೋದಿ ಹಳ್ಳಿ-ಗಲ್ಲಿಗಳಲ್ಲಿ ಶ್ರಮಿಸಿ ಗೆಲ್ಲುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

  • 25 Sep 2026 01:52 PM (IST)

    ಜಿಬಿಎ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕಾಯಂ ಕೊರತೆ: 4 ತಿಂಗಳಾದರೂ ಸಿಗದ ಸ್ವೆಟರ್, ಬ್ಯಾಗ್

    ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ 175 ಶಾಲಾ-ಕಾಲೇಜುಗಳ 21,000ಕ್ಕೂ ಹೆಚ್ಚು ಬಡ ಮಕ್ಕಳಿಗೆ 4 ತಿಂಗಳಾದರೂ ಶೂ, ಸಾಕ್ಸ್, ಸ್ವೆಟರ್ ಹಾಗೂ ಬ್ಯಾಗ್‌ಗಳು ಸಮರ್ಪಕವಾಗಿ ತಲುಪಿಲ್ಲ. ಟೆಂಡರ್‌ಗೆ ಗುತ್ತಿಗೆದಾರರು ಮುಂದೆ ಬಂದಿಲ್ಲ ಎಂದು ಅಧಿಕಾರಿಗಳು ನೆಪ ಹೇಳುತ್ತಿದ್ದು, ಮಕ್ಕಳ ವ್ಯಾಸಂಗಕ್ಕೆ ತೊಂದರೆಯಾಗಿದೆ.

  • 25 Sep 2026 01:51 PM (IST)

    ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ

    ರಾಜೀನಾಮೆ ಬೆದರಿಕೆ ಹಾಕಿದ ಕಾಂಗ್ರೆಸ್ ಶಾಸಕರ ತಾಲೂಕುಗಳನ್ನು ಮಾತ್ರ ಬರ ಪಟ್ಟಿಗೆ ಸೇರಿಸಿ, ವಿಪಕ್ಷಗಳ ಕ್ಷೇತ್ರಗಳನ್ನು ಕಡೆಗಣಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಎಸ್‍ಡಿಆರ್‍ಎಫ್‍ನಲ್ಲಿ ಹಣವಿದ್ದರೂ ರೈತರಿಗೆ ಬಿಡುಗಡೆ ಮಾಡದೆ ಸರ್ಕಾರ ವಿಳಂಬ ಧೋರಣೆ ತಳೆದಿದೆ ಎಂದು ಆರೋಪಿಸಿದ್ದಾರೆ.

  • 25 Sep 2026 01:51 PM (IST)

    ರಾಜ್ಯ ಸರ್ಕಾರದ್ದು ದಿವಾಳಿ ಸರ್ಕಾರ: ಬೆಂಗಳೂರಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ

    ಕೇಂದ್ರ ಸರ್ಕಾರದ ವಿರುದ್ಧ ನಿರಂತರ ಆರೋಪ ಮಾಡುವುದನ್ನು ಬಿಟ್ಟರೆ ರಾಜ್ಯ ಸರ್ಕಾರಕ್ಕೆ ಬೇರೇನೂ ಗೊತ್ತಿಲ್ಲ ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ. “ಕಾಂಟ್ರಾಕ್ಟರ್‌ಗಳಿಗೆ ಹಣ ಕೊಡಲು ಆಗದೆ ಸರ್ಕಾರ ದಿವಾಳಿಯಾಗಿದೆ, ಸಿದ್ದರಾಮಯ್ಯ ಅವಧಿಯಿಂದಲೂ ಪಾವತಿಯಾಗಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • 25 Sep 2026 01:41 PM (IST)

    ಬರ ಪರಿಹಾರ ರಾಜಕೀಯ: ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ

    ವಿಪಕ್ಷಗಳ ಕ್ಷೇತ್ರಗಳನ್ನು ಬಿಟ್ಟು, ರಾಜೀನಾಮೆ ಬೆದರಿಕೆ ಹಾಕಿದ ಶಾಸಕರ ತಾಲೂಕುಗಳನ್ನು ಮಾತ್ರವೇ ಸರ್ಕಾರ ಬರ ಪಟ್ಟಿಗೆ ಸೇರಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಎಸ್‍ಡಿಆರ್‍ಎಫ್‍ನಲ್ಲಿ ಹಣವಿದ್ದರೂ ಸರ್ಕಾರ ಏಕೆ ಬಿಡುಗಡೆ ಮಾಡುತ್ತಿಲ್ಲ ಎಂದು ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ.

  • 25 Sep 2026 01:20 PM (IST)

    ಪ್ರಚೋದನಕಾರಿ ವಿಡಿಯೋ ಪೋಸ್ಟ್: ಬಳ್ಳಾರಿಯಲ್ಲಿ ಹೆಚ್.ಡಿ.ಗೋವಿಂದ ವಿರುದ್ಧ ಎಫ್‌ಐಆರ್

    ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಹಾಗೂ ಭಯ ಹುಟ್ಟಿಸುವ ರೀತಿಯಲ್ಲಿ ಮಚ್ಚು, ಕತ್ತಿ ಹಿಡಿದ ವಿಡಿಯೋ ಪೋಸ್ಟ್ ಮಾಡಿದ್ದ ಹೆಚ್.ಡಿ.ಗೋವಿಂದ (44) ವಿರುದ್ಧ ಬಳ್ಳಾರಿಯ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರೋಪಿ ಇನ್‌ಸ್ಟಾಗ್ರಾಮ್‌ನಲ್ಲಿ ಹಿಂದುತ್ವ ಸಂಬಂಧಿತ ಪ್ರಚೋದನಕಾರಿ ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದನೆನ್ನಲಾಗಿದೆ.

  • 25 Sep 2026 01:01 PM (IST)

    ಹೆಸ್ಕಾಂ ಅಧಿಕಾರಿಗಳ ಮೇಲೆ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ಹಲ್ಲೆ ಆರೋಪ

    ಬೆಳಗಾವಿಯ ಕುವೆಂಪು ನಗರದ ನಿವಾಸದಲ್ಲಿ ಹೆಸ್ಕಾಂ ಎಇಇ ದೀಪಕ್ ಹಾಗೂ ಸೆಕ್ಷನ್ ಆಫೀಸರ್ ರಾಜು ಮೇಲೆ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆಪ್ತ ಪ್ರಮೋದ್ ಜಾಧವ್ ಅವರ ಸ್ಟೋನ್ ಕ್ರಷರ್‌ನ 77,360 ರೂ. ಕರೆಂಟ್ ಬಿಲ್ ಬಾಕಿ ಹಿನ್ನೆಲೆ ವಿದ್ಯುತ್ ಸಂಪರ್ಕ ಕಟ್ ಮಾಡಿದ್ದಕ್ಕೆ ಮನೆಗೆ ಕರೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲಾಗಿದೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.

  • 25 Sep 2026 01:00 PM (IST)

    ‘ಹನುಮಾನ್ ಅಂಶ್’ ಸಿನಿಮಾ: 50 ಲಕ್ಷ ಹೂಡಿಕೆ ಮಾಡಿ 50 ಕೋಟಿ ಗಳಿಸಿದ ಅನುಪ್ರಿಯಾ!

    ಯುಕೆಯಲ್ಲಿ ಅರ್ಥಶಾಸ್ತ್ರ ಓದಿ ಜ್ಯೂರಿಚ್‌ನ ಐಷಾರಾಮಿ ಉದ್ಯೋಗ ತೊರೆದ 21 ವರ್ಷದ ಅನುಪ್ರಿಯಾ ನಾಗರ್, ನೀಮ್ ಕರೋಲಿ ಬಾಬಾ ಜೀವನಾಧಾರಿತ ‘ಹನುಮಾನ್ ಅಂಶ್’ ಸಿನಿಮಾದಲ್ಲಿ 50 ಲಕ್ಷ ರೂ. ಹೂಡಿಕೆ ಮಾಡಿದ್ದರು. ಇದೀಗ ಸಿನಿಮಾ ಬ್ಲಾಕ್‌ಬಸ್ಟರ್ ಆಗಿ 50 ಕೋಟಿ ರೂ. ಭಾರಿ ಲಾಭ ಗಳಿಸಿದ್ದಾರೆ. ಮತ್ತಷ್ಟು ಓದಿ

  • 25 Sep 2026 12:57 PM (IST)

    ಹಾಸನಾಂಬ ಜಾತ್ರೆ 2026: ಅಕ್ಟೋಬರ್ 29 ರಿಂದ ದೇವಿ ದರ್ಶನ

    2026ರ ಹಾಸನಾಂಬೆ ದರ್ಶನೋತ್ಸವಕ್ಕೆ ಜಿಲ್ಲಾಡಳಿತ ತಯಾರಿ ನಡೆಸಿದೆ. ಅಕ್ಟೋಬರ್ 29 ರಿಂದ ನವೆಂಬರ್ 11 ರವರೆಗೆ ಒಟ್ಟು 14 ದಿನ ಗರ್ಭಗುಡಿ ಬಾಗಿಲು ತೆರೆದಿರಲಿದ್ದು, ಅಕ್ಟೋಬರ್ 30 ರಿಂದ ನವೆಂಬರ್ 10 ರವರೆಗೆ 12 ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುತ್ತದೆ.

  • 25 Sep 2026 12:56 PM (IST)

    ವಿಹೆಚ್‌ಪಿ, ಭಜರಂಗದಳ ಬ್ಯಾನರ್ ತೆರವು; ಪೊಲೀಸ್ ಕಾರ್ಯಾಚರಣೆಗೆ ಆಕ್ರೋಶ

    ತುಮಕೂರಿನಲ್ಲಿ ನಾಳೆ ನಡೆಯಲಿರುವ ಗಣೇಶ ವಿಸರ್ಜನಾ ಮೆರವಣಿಗೆಗೆ ಅನುಮತಿಯಿಲ್ಲದೆ ಹಾಕಲಾಗಿದ್ದ ವಿಹೆಚ್‌ಪಿ ಹಾಗೂ ಭಜರಂಗದಳದ ಬ್ಯಾನರ್, ಬಂಟಿಂಗ್ಸ್‌ಗಳನ್ನು ಪೊಲೀಸರ ಸಮ್ಮುಖದಲ್ಲಿ ತೆರವುಗೊಳಿಸಲಾಗಿದೆ. ಮೂರು ರಸ್ತೆಗಳಲ್ಲಿ ಅಳವಡಿಸಿದ್ದ ಬ್ಯಾನರ್‌ಗಳನ್ನು ತೆರವುಗೊಳಿಸಿರುವುದಕ್ಕೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • 25 Sep 2026 12:24 PM (IST)

    ಒಂದೇ ತಿಂಗಳಲ್ಲಿ ಬರಿದಾದ ಹೇಮಾವತಿ ಜಲಾಶಯ

    ಹಾಸನ ಜಿಲ್ಲೆ ಗೊರೂರಿನ ಹೇಮಾವತಿ ಜಲಾಶಯದಿಂದ ಕೇವಲ ಒಂದೇ ತಿಂಗಳಲ್ಲಿ 18 ಟಿಎಂಸಿ ನೀರು ಖಾಲಿಯಾಗಿದ್ದು, ಮುಂಗಾರು ಪೂರ್ವಕ್ಕೇ ನೀರು ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಕೆಆರ್‌ಎಸ್ ಮೂಲಕ ತಮಿಳುನಾಡಿಗೆ ನೀರು ಹರಿದಿರುವುದೂ ಸೇರಿ ಪ್ರಸ್ತುತ ಜಲಾಶಯದಲ್ಲಿ ಬಳಕೆಗೆ ಕೇವಲ 10.512 ಟಿಎಂಸಿ ನೀರು ಮಾತ್ರ ಉಳಿದಿದ್ದು, ಕುಡಿಯುವ ನೀರಿಗೆ ಆತಂಕ ಎದುರಾಗಿದೆ.

  • 25 Sep 2026 12:20 PM (IST)

    ಇಡಿ ಬೆನ್ನಲ್ಲೇ ಅಟ್ಟಿಕಾ ಗೋಲ್ಡ್ ಕಂಪನಿಗೆ ಐಟಿ ಶಾಕ್

    ಅಟ್ಟಿಕಾ ಗೋಲ್ಡ್ ಸಂಸ್ಥೆಯ ಮೇಲಿನ ಇಡಿ ದಾಳಿ ಮುಕ್ತಾಯಗೊಳ್ಳುತ್ತಿದ್ದಂತೆಯೇ ಐಟಿ (ಆದಾಯ ತೆರಿಗೆ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಿನ್ನೆ ರಾತ್ರಿಯಷ್ಟೇ ಇಡಿ ಶೋಧ ಕಾರ್ಯ ಕೊನೆಗೊಂಡಿದ್ದು, ಬೆನ್ನಲ್ಲೇ ಐಟಿ ಅಧಿಕಾರಿಗಳು 19 ವಿವಿಧ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿ ತಪಾಸಣೆ ಕೈಗೊಂಡಿದ್ದಾರೆ.

  • 25 Sep 2026 12:13 PM (IST)

    ಎಸ್​ಐಆರ್ ಪ್ರಕ್ರಿಯೆ ರದ್ದುಪಡಿಸಲು ಬಿ.ಕೆ. ಹರಿಪ್ರಸಾದ್ ಆಗ್ರಹ

    ಬಿಜೆಪಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಎಸ್​ಐಆರ್ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್, ಈ ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಬೆಂಗಳೂರಿನಲ್ಲಿ ಆಗ್ರಹಿಸಿದ್ದಾರೆ. ನಾವು ಮೊದಲಿನಿಂದಲೂ ಇದನ್ನು ವಿರೋಧಿಸುತ್ತಿದ್ದು, ಪ್ರಕ್ರಿಯೆ ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.

  • 25 Sep 2026 11:56 AM (IST)

    ಕಾವೇರಿ ನೀರು ಹರಿಸಲು ಆದೇಶ: ಮೈಸೂರಿನಲ್ಲಿ ಕನ್ನಡಪರ ಸಂಘಟನೆಗಳ ವಿನೂತನ ಪ್ರತಿಭಟನೆ

    ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸುವಂತೆ ನೀಡಿದ ಆದೇಶವನ್ನು ಖಂಡಿಸಿ ಮೈಸೂರಿನ ಹಳೇ ಡಿಸಿ ಕಚೇರಿ ಬಳಿ ಕರ್ನಾಟಕ ಸೇನಾ ಪಡೆ ಧರಣಿ ನಡೆಸಿತು. “ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ” ಧೋರಣೆ ಅನುಸರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕೈಯಲ್ಲಿ ಸುಣ್ಣ-ಬೆಣ್ಣೆ ಹಿಡಿದು ತಮಿಳುನಾಡಿಗೆ ನೀರು ಬಿಡದಂತೆ ಒತ್ತಾಯಿಸಿದರು.

  • 25 Sep 2026 11:54 AM (IST)

    ಬಿ.ಕೆ. ಹರಿಪ್ರಸಾದ್ ವಿರುದ್ಧ ಶಾಸಕ ಅಭಯ್ ಪಾಟೀಲ್ ವಾಗ್ದಾಳಿ

    ಎಸ್ಐಆರ್ ಪ್ರಕ್ರಿಯೆಯಲ್ಲಿ ಹೆಸರು ಡಿಲೀಟ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಅಭಯ್ ಪಾಟೀಲ್, ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ವಿರುದ್ಧ ಕಿಡಿಕಾರಿದ್ದಾರೆ. “ನಾನು ಬೋಗಸ್ ಮತದಾರರ ಪರಿಶೀಲನೆಗೆ ವರದಿ ನೀಡಿದ್ದೇನೆ ಹೊರತು ನೇರ ಡಿಲೀಟ್‌ಗಲ್ಲ. ಹರಿಪ್ರಸಾದ್‌ಗೆ ಕನ್ನಡ ಓದಲು ಬರುವುದಿಲ್ಲ, ಸಚಿವ ಸ್ಥಾನ ಸಿಗದೆ ಡಿಸ್ಟರ್ಬ್ ಆಗಿದ್ದಾರೆ,” ಎಂದು ವಾಗ್ದಾಳಿ ನಡೆಸಿದ್ದಾರೆ.

  • 25 Sep 2026 11:05 AM (IST)

    ಕಲಬುರಗಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ರೈಲಿಗೆ ಬಿದ್ದು ಆತ್ಮಹತ್ಯೆ

    ಕಲಬುರಗಿಯ ಬಿದ್ದಾಪುರ ಕಾಲೋನಿ ರೈಲ್ವೆ ಟ್ರ್ಯಾಕ್‌ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಕಸ್ತೂರಿ (21) ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಲೇಜು ಮುಗಿಸಿ ನೇರವಾಗಿ ಬಂದು ಈ ಹತ್ಯೆ ಮಾಡಿಕೊಂಡಿದ್ದು, ಮೃತರು ಡಬರಾಬಾದ್ ಕ್ರಾಸ್ ನಿವಾಸಿಯಾಗಿದ್ದಾರೆ. ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 25 Sep 2026 11:03 AM (IST)

    ಮೈಸೂರು ದಸರಾ ಯಶಸ್ಸಿಗೆ 22 ಸಚಿವರಿಗೆ ಜವಾಬ್ದಾರಿ!

    ಈ ಬಾರಿಯ ಮೈಸೂರು ದಸರಾವನ್ನು ಯಶಸ್ವಿಯಾಗಿ ನಡೆಸಲು ಮೈಸೂರು ಜಿಲ್ಲಾ ಉಸ್ತುವಾರಿ ಯತೀಂದ್ರ ಜೊತೆ 22 ಹಿರಿಯ ಸಚಿವರಿಗೆ ಹೊಣೆ ನೀಡಲು ಸರ್ಕಾರ ಪಟ್ಟಿ ಸಿದ್ಧಪಡಿಸಿದೆ. ಯಾವುದೇ ಯಡವಟ್ಟು ಆಗದಂತೆ ನೋಡಿಕೊಳ್ಳಲು ದಿನಾಲೂ ಇಬ್ಬರಂತೆ 11 ದಿನ ಸಚಿವರು ಕಾರ್ಯಕ್ರಮ, ಭದ್ರತೆ ಹಾಗೂ ಸೌಕರ್ಯಗಳ ಉಸ್ತುವಾರಿ ವಹಿಸಲಿದ್ದಾರೆ.

  • 25 Sep 2026 10:53 AM (IST)

    ಅಟ್ಟಿಕಾ ಬಾಬು ಮನೆ, ಕಚೇರಿ ಮೇಲೆ ಇಡಿ ದಾಳಿ: ‘ನಾನು ತಲೆಮರೆಸಿಕೊಂಡಿಲ್ಲ’ ಎಂದ ಬಾಬು

    ತಮ್ಮ ನಿವಾಸ ಮತ್ತು ಕಚೇರಿ ಮೇಲಿನ ಇಡಿ ದಾಳಿ ಕುರಿತು ಸ್ಪಷ್ಟನೆ ನೀಡಿರುವ ಅಟ್ಟಿಕಾ ಬಾಬು, “ನಾನು ತಲೆಮರೆಸಿಕೊಂಡಿಲ್ಲ, ಹಿರಿಯೂರಿನಲ್ಲಿದ್ದೇನೆ,” ಎಂದಿದ್ದಾರೆ. ತಾವು ಸಂಸ್ಥೆಯ ಮಾಲೀಕರಲ್ಲ, ಶೇರ್‌ಹೋಲ್ಡರ್ ಮಾತ್ರ ಎಂದಿರುವ ಅವರು, ಇಡಿ ಅಧಿಕಾರಿಗಳ ಪರಿಶೀಲನೆ ಹಾಗೂ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

  • 25 Sep 2026 10:16 AM (IST)

    ರೇಣುಕಾಸ್ವಾಮಿ ಕೊಲೆ ಕೇಸ್: ಪವಿತ್ರಾಗೌಡ ಜಾಮೀನು ಅರ್ಜಿ ಆದೇಶ ಇಂದು ಪ್ರಕಟ

    ದರ್ಶನ್ ಆ್ಯಂಡ್ ಗ್ಯಾಂಗ್‌ನಿಂದ ನಡೆದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ-1 ಆರೋಪಿ ಪವಿತ್ರಾಗೌಡ ಅವರ ಜಾಮೀನು ಅರ್ಜಿ ಸಂಬಂಧ ಇಂದು ಆದೇಶ ಹೊರಬೀಳಲಿದೆ. ಅನಾರೋಗ್ಯ ಸೇರಿದಂತೆ ವಿವಿಧ ಕಾರಣ ನೀಡಿ ಜಾಮೀನು ಕೋರಿದ್ದು, ಬೆಂಗಳೂರಿನ 59ನೇ ಸಿಸಿಹೆಚ್ ಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ.

  • 25 Sep 2026 10:10 AM (IST)

    ಬರ ಪರಿಹಾರ ರಾಜಕೀಯ; ಪ್ರತಿಪಕ್ಷಗಳ ಟೀಕೆಗೆ ಪರಮೇಶ್ವರ್ ತಿರುಗೇಟು

    ಬರ ಪರಿಹಾರ ಮೊತ್ತ ಸಾಲದೆಂಬ ಪ್ರತಿಪಕ್ಷಗಳ ಟೀಕೆಗೆ ಸಚಿವ ಜಿ. ಪರಮೇಶ್ವರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “250 ಕೋಟಿ ರೂ. ಸಣ್ಣ ಮೊತ್ತವಲ್ಲ, ಇದು ಮೊದಲ ಹಂತ. ಪ್ರತಿಪಕ್ಷಗಳಿಗೆ ರಾಜಕೀಯ ಬೇಕೇ ಹೊರತು ರೈತರ ಹಿತವಲ್ಲ. ಕರೆಂಟ್, ಅಕ್ಕಿ ಹಾಗೂ ಪಂಪ್‌ಸೆಟ್ ಸಬ್ಸಿಡಿಗಳೂ ರೈತರಿಗೆ ನೆರವೇ,” ಎಂದಿದ್ದಾರೆ.

  • 25 Sep 2026 10:04 AM (IST)

    ಕಾನ್ಪುರ ಉದ್ಯಮಿ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

    ಕಾನ್ಪುರದ ಔಷಧ ಉದ್ಯಮಿ ವಿನೀತ್ ಮನೋಚಾ ಹತ್ಯೆ ಪ್ರಕರಣದಲ್ಲಿ ಆಘಾತಕಾರಿ ಸತ್ಯ ಬಯಲಾಗಿದೆ. ಆಸ್ತಿ ಕೈತಪ್ಪುವ ಭೀತಿ ಹಾಗೂ ಸಾಲದ ಸುಳಿಯಲ್ಲಿದ್ದ ಮಗ ಸುಬ್ರತ್, ತಂದೆಯ ಕೊಲೆಗೆ 6 ಲಕ್ಷ ರೂ. ಸುಪಾರಿ ನೀಡಿದ್ದ. ಡಿಜಿಟಲ್ ಪುರಾವೆಗಳ ಆಧಾರದ ಮೇಲೆ ಪೊಲೀಸರು ಆರೋಪಿ ಮಗನನ್ನು ಬಂಧಿಸಿದ್ದಾರೆ. ಮತ್ತಷ್ಟು ಓದಿ

  • 25 Sep 2026 10:02 AM (IST)

    ‘ಪ್ಯಾರಡೈಸ್’ ಭರ್ಜರಿ ಗಳಿಕೆ: ನೆಗೆಟಿವ್ ರಿವ್ಯೂ ಮಧ್ಯೆಯೂ ಕೋಟಿ ಕೋಟಿ ಕಲೆಕ್ಷನ್

    ಭಾರಿ ಹೈಪ್ ಮೂಡಿಸಿದ್ದ ‘ಪ್ಯಾರಡೈಸ್’ ಸಿನಿಮಾ ನೆಗೆಟಿವ್ ವಿಮರ್ಶೆಗಳ ನಡುವೆಯೂ ಮೊದಲ ದಿನ ವಿಶ್ವದಾದ್ಯಂತ 74.90 ಕೋಟಿ ರೂ. ಗ್ರೋಸ್ ಗಳಿಸಿದೆ. ಭಾರತದಲ್ಲೇ 34.65 ಕೋಟಿ ನೆಟ್ ಗಳಿಸಿದರೂ, ಪ್ರೇಕ್ಷಕರ ಕಳಪೆ ಪ್ರತಿಕ್ರಿಯೆಯಿಂದಾಗಿ ಮುಂಬರುವ ದಿನಗಳಲ್ಲಿ ಬಾಕ್ಸ್ ಆಫೀಸ್ ಗಳಿಕೆ ಕುಸಿಯುವ ಭೀತಿ ಎದುರಾಗಿದೆ. ಮತ್ತಷ್ಟು ಓದಿ

  • 25 Sep 2026 10:00 AM (IST)

    ಸತೀಶ್ ಜಾರಕಿಹೊಳಿಗೆ ಇಡಿ ಸಂಕಷ್ಟ: ದೆಹಲಿ ಘಟಕಕ್ಕೆ ತನಿಖೆ ವರ್ಗಾವಣೆ?

    ಸಚಿವ ಸತೀಶ್ ಜಾರಕಿಹೊಳಿ ವಿರುದ್ಧದ ಲೋಕೋಪಯೋಗಿ ಕಾಮಗಾರಿ ಅಕ್ರಮ ಹಾಗೂ ವಿದೇಶಿ ಬಂಡವಾಳ ಹೂಡಿಕೆ ಆರೋಪದ ಇಡಿ ತನಿಖೆ ದೆಹಲಿ ಘಟಕಕ್ಕೆ ವರ್ಗಾವಣೆಯಾಗುವ ಸಾಧ್ಯತೆಯಿದೆ. ಇತ್ತೀಚಿನ ದಾಳಿ ವೇಳೆ ಪ್ರಮುಖ ಸಾಕ್ಷ್ಯಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ ಇಡಿ ತನಿಖೆ ಮತ್ತಷ್ಟು ಬಿಗಿಯಾಗುವ ಲಕ್ಷಣಗಳು ಗೋಚರಿಸಿವೆ. ಮತ್ತಷ್ಟು ಓದಿ 

  • 25 Sep 2026 09:59 AM (IST)

    ಪೆಟ್ರೋಲ್ ಬಂಕ್‌ನಲ್ಲಿ ಬಸ್‌ಗೆ ಬೆಂಕಿ, ತಪ್ಪಿದ ಭಾರೀ ದುರಂತ

    ಉಡುಪಿ ತಾಲೂಕಿನ ಮಣಿಪುರ ಪಂಚಾಯಿತಿ ವ್ಯಾಪ್ತಿಯ ದೆಂದೂರುಕಟ್ಟೆಯ ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಮುಂಜಾನೆ ಬೆಂಕಿಗಾಹುತಿಯಾಗಿದೆ. ಸಿಬ್ಬಂದಿ ಸಮಯಪ್ರಜ್ಞೆಯಿಂದ ಬೆಂಕಿ ನಂದಿಸಿದ್ದು, ಪಕ್ಕದಲ್ಲಿದ್ದ ಬಸ್‌ಗಳು, ಟೆಂಪೋ ಹಾಗೂ ಪೆಟ್ರೋಲ್ ಬಂಕ್‌ಗೆ ಎದುರಾಗಿದ್ದ ಭಾರೀ ಅಗ್ನಿ ಅವಘಡ ಕೂದಲೆಳೆ ಅಂತರದಲ್ಲಿ ತಪ್ಪಿದೆ.

  • 25 Sep 2026 09:04 AM (IST)

    ಟೆಲಿಗ್ರಾಂನಲ್ಲಿ ಟೆರರ್ ಚರ್ಚೆ: ಇಬ್ಬರ ಬಂಧನ, ಎಸ್​ಪಿ ಪ್ರತಿಕ್ರಿಯೆ

    ಟೆಲಿಗ್ರಾಂನಲ್ಲಿ ಭಯೋತ್ಪಾದನಾ ಕೃತ್ಯದ ಬಗ್ಗೆ ಚರ್ಚಿಸಿದ ಇಬ್ಬರನ್ನು ಬಂಧಿಸಲಾಗಿದೆ ಎಂದು ಎಸ್​ಪಿ ಪದ್ಮಿನಿ ಸಾಹು ತಿಳಿಸಿದ್ದಾರೆ. ಬಂಧಿತರಿಗೆ ಸದ್ಯಕ್ಕೆ ಉಗ್ರ ಹಿನ್ನೆಲೆಯಿಲ್ಲ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸಲಾಗುವುದು ಎಂದು ಅವರು ಟಿವಿ9ಗೆ ತಿಳಿಸಿದ್ದಾರೆ.

  • 25 Sep 2026 09:03 AM (IST)

    ಸಕ್ರೆಬೈಲು ಆನೆ ಬಿಡಾರ ನಾಳೆಯಿಂದ ಪುನರಾರಂಭ

    ಸುರಕ್ಷತಾ ಕಾರಣಗಳಿಂದ ತಾತ್ಕಾಲಿಕವಾಗಿ ಮುಚ್ಚಲಾಗಿದ್ದ ಸಕ್ರೆಬೈಲು ಆನೆ ಬಿಡಾರ ಸೆಪ್ಟೆಂಬರ್ 26 ರಿಂದ ಸಾರ್ವಜನಿಕರಿಗೆ ಮತ್ತೆ ಮುಕ್ತವಾಗಲಿದೆ. ಪ್ರತ್ಯೇಕ ಸಂಚಾರ ಮಾರ್ಗ, ಬಿಗಿ ಭದ್ರತೆ ಹಾಗೂ ಮುನ್ನೆಚ್ಚರಿಕಾ ಫಲಕಗಳ ಸ್ಥಾಪನೆ ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಪ್ರವೇಶಕ್ಕೆ ಅಧಿಕೃತ ಆದೇಶ ನೀಡಿದೆ.

  • 25 Sep 2026 08:57 AM (IST)

    ಗಣೇಶ ವಿಸರ್ಜನೆ ವೇಳೆ ಯುವಕರ ಮಾರಾಮಾರಿ

    ಕೊಪ್ಪಳ ತಾಲೂಕು ಕ್ರೀಡಾಂಗಣದ ಮುಂಭಾಗ 11ನೇ ದಿನದ ಗಣೇಶ ವಿಸರ್ಜನೆ ವೇಳೆ ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಭೀಕರ ಗಲಾಟೆ ನಡೆದಿದೆ. ರೊಚ್ಚಿಗೆದ್ದ ಯುವಕರು ಪರಸ್ಪರ ಬಡಿಗೆಗಳಿಂದ ಬಡಿದಾಡಿಕೊಂಡಿದ್ದಾರೆ. ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Published On - Sep 25,2026 8:56 AM

Follow Us