ಅನಧಿಕೃತ ನರ್ಸರಿ ಶಾಲೆಗಳ ವಿರುದ್ಧ ಕ್ರಮಕ್ಕೆ ಮುಂದಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಮಕ್ಕಳ ಬದುಕು ರೂಪಿಸಬೇಕಾಗಿರುವ ವಿದ್ಯಾ ದೇಗುಲಗಳು ಮಕ್ಕಳ ಭವಿಷ್ಯದ ಜೊತೆ ಚಲ್ಲಾಟವಾಡುತ್ತಿವೆ. ಪೋಷಕರ ನೂರಾರು ಕನಸುಗಳು ನುಚ್ಚು ನೂರು ಮಾಡುತ್ತಿವೆ. ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳ ಹಾವಳಿ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಅನಧಿಕೃತ ಎಲ್ಕೆಜಿ, ಯುಕೆಜಿ ಪ್ರೀ ನರ್ಸರಿ ಶಾಲೆಗಳು ಪೋಷಕರ ವಂಚನೆಗೆ ಮುಂದಾಗಿದ್ದು ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಚಾಟಿ ಬೀಸಿದೆ.
ಬೆಂಗಳೂರು, ಜುಲೈ 25: ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ನಾಯಿಕೊಡೆಗಳಂತೆ ಪೂರ್ವ ಪ್ರಾಥಮಿಕ, ನರ್ಸರಿ ಎಲ್ಕೆಜಿ, ಯುಕೆಜಿ ಶಾಲೆಗಳು ತಲೆಎತ್ತುತ್ತಿವೆ. ಈ ಶಾಲೆಗಳ ಹೆಸರಲ್ಲಿ ಪೋಷಕರಿಂದ ಲಕ್ಷ ಲಕ್ಷ ಸುಲಿಗೆಗೆ ಮುಂದಾಗಿದ್ದು, ಎಗ್ಗಿಲ್ಲದೆ ಎಲ್ಲೆಂದರಲ್ಲಿ ಅಕ್ರಮ ಎಸಗಲಾಗುತ್ತಿದೆ. ಯಾವುದೇ ಇಲಾಖೆಯ ಅನುಮತಿ ಇಲ್ಲದೆಯೇ, ಮಾನದಂಡಗಳನ್ನು ಪಾಲಿಸದೆಯೇ ಶಾಲೆಗಳ ಆರಂಭವಾಗುತ್ತಿವೆ.
ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಇವುಗಳಿಗೆ ಯಾವುದೇ ಕಠಿಣವಾದ ಮಾರ್ಗಸೂಚಿಗಳಿಲ್ಲ. ಪೂರ್ವ ಪ್ರಾಥಮಿಕ ಶಾಲೆಗಳ ನೊಂದಣಿ ಕಡ್ಡಾಯ ಮಾಡಿರುವುದು ಬಿಟ್ಟರೆ ಯಾವುದೇ ಮಾನದಂಡ ಇಲ್ಲ. ಇದೀಗ ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ ತಲೆ ಎತ್ತಿರುವ ಅನಧಿಕೃತ ನರ್ಸರಿ ಶಾಲೆಗಳ ವಿರುದ್ಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕ್ರಮಕ್ಕೆ ಮುಂದಾಗಿದೆ.
2018 ಶಿಕ್ಷಣ ಕಾಯ್ದೆಯ ಪ್ರಕಾರ, ನರ್ಸಿರಿ ಶಾಲೆಗಳ ನೊಂದಣಿ ಕಡ್ಡಾಯ. ಆದರೆ ಶಿಕ್ಷಣ ಇಲಾಖೆಯ STATS ನಲ್ಲಿ ಈ ನರ್ಸರಿ ಶಾಲೆಗಳು ರಿಜಿಸ್ಟರ್ ಮಾಡಿಸುವುದಿಲ್ಲ. ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ನರ್ಸಿರಿ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಆದರೆ ನೊಂದಣಿಯಾಗುತ್ತಿಲ್ಲ. ಹೀಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಜೊತೆ ಮಾತುಕತೆಗೆ ಮುಂದಾಗಿದ್ದು, ಅನಧಿಕೃತವಾಗಿ ತಲೆ ಎತ್ತಿರುವ ಪೂರ್ವ ಪ್ರಾಥಮಿಕ ಶಾಲೆಗಳ ವರದಿ ಪಡೆಯಲು ಮುಂದಾಗಿದೆ.
ಇದನ್ನೂ ಓದಿ: ವಾಹನ ಮಾಲೀಕರಿಗೆ ಶಾಕ್: ಸದ್ಯದಲ್ಲೇ ವಾಹನಗಳ ಎಮಿಷನ್ ಟೆಸ್ಟಿಂಗ್ ದರ ಹೆಚ್ಚಳ ಸಾಧ್ಯತೆ
ಎಷ್ಟು ಶಾಲೆಗಳಿಗೆ ಇದುವರೆಗೂ ಅನುಮತಿ ಸಿಕ್ಕಿದೆ? ಯಾವೆಲ್ಲ ಶಾಲೆ ಅನುಮತಿ ಪಡೆದಿಲ್ಲ ಎಂಬ ವರದಿ ಪಡೆಯಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂದಾಗಿದೆ. ಎಲ್ಕೆಜಿ ಹಾಗೂ ಯುಕೆಜಿ ಶಾಲೆಗಳಿಗೆ ಅನುಮತಿ ಸೇರಿದಂತೆ ಇರುವ ಕೆಲವು ಗೊಂದಲಗಳ ಬಗ್ಗೆ ಮಾಹಿತಿ ಪಡೆದು ಕಾನೂನಾತ್ಮಕ ಕ್ರಮಕ್ಕೆ ಮುಂದಾಗಿದೆ.
ಒಟ್ಟಿನಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತಿರುವ ಅನಧಿಕೃತ ನರ್ಸರಿ ಹಾಗೂ ಎಲ್ಕೆಜಿ, ಯುಕೆಜಿಗಳಿಗೆ ಸರ್ಕಾರ ಕಡಿವಾಣ ಹಾಕಲು ಮುಂದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ