ಯಾದಗಿರಿ ಜಿಲ್ಲಾ ಕೇಂದ್ರದಲ್ಲಿಯೇ ನೀರಿಗೆ ಹಾಹಾಕಾರ: ಕುಡಿಯಲು ನೀರು ಕೊಡದಿದ್ರೆ ಚುನಾವಣಾ ಬಹಿಷ್ಕಾರದ ಎಚ್ಚರಿಕೆ
ಆ ನಗರ ದಿನೇ ದಿನೇ ಬೆಳೆಯುತ್ತಿದೆ ಆದರೆ ಸರ್ಕಾರ ಮಾತ್ರ ಮೂಲಭೂತ ಸೌಕರ್ಯಗಳನ್ನ ಕೊಡುವುದನ್ನ ಮಾತ್ರ ಮರೆತು ಬಿಟ್ಟಿದೆ. ಹೌದು ನಗರದ ಪ್ರದೇಶದಲ್ಲೇ ಕುಡಿಯುವ ನೀರಿಗಾಗಿ ಜನ ಹಾಹಾಕಾರ ಹಾಕುವಂತಾಗಿದೆ. ಬೇಸಿಗೆ ಬರಲಿ ಮಳೆಗಾಲನೇ ಬರಲಿ ಬಿಂದಿಗೆ ಹಿಡಿದು ಜನ ನೀರಿಗಾಗಿ ಹುಡುಕಾಟ ನಡೆಸುವಂತಾಗಿದೆ.
ಯಾದಗಿರಿ: ಜಿಲ್ಲಾ ಕೇಂದ್ರದಲ್ಲಿಯೇ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಜನ ಕುಡಿಯಲು ನೀರು ಬೇಕು ಅಂದರೆ ಬಿಂದಿಗೆ ಹಿಡಿದು ಹುಡುಕಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಕುಡಿಯಲು ನೀರು ಕೊಡಿ ಎಂದು ಬಡಾವಣೆ ನಿವಾಸಿಗಳು ಆಗ್ರಹಿಸುತ್ತಿದ್ದಾರೆ. ಜೊತೆಗೆ ಈ ಬಾರಿ ನೀರು ಕೊಡದಿದ್ರೆ ಮತದಾನ ಮಾಡಲ್ಲ ಎನ್ನುತ್ತಿದ್ದಾರೆ. ಹೌದು ಈ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂ 28 ರ ಲಾಡಿಜ್ ಗಲ್ಲಿ ಬಡಾವಣೆಯಲ್ಲಿ. ಈ ಲಾಡಿಜ್ ಗಲ್ಲಿ ಬಡಾವಣೆಯ ಜನ ವರ್ಷಗಳಿಂದ ಕುಡಿಯುವ ನೀರಿಗಾಗಿ ಪರಿತಪ್ಪಿಸುತ್ತಿದ್ದಾರೆ. ವರ್ಷಗಳಿಂದ ಕುಡಿಯಲು ನೀರು ಹುಡುಕುತ್ತಾ ಬೇರೆ ಬಡಾವಣೆಗಳಿಗೆ ಕೈಯಲ್ಲಿ ಬಿಂದಿಗೆ ಹಿಡಿದುಕೊಂಡು ಹೋಗುತ್ತಿದ್ದಾರೆ. ಕುಡಿಯಲು ನೀರು ಕೊಡಿ ಎನ್ನುತ್ತಿದ್ದಾರೆ.
ಯಾದಗಿರಿ ನಗರಸಭೆಯಿಂದ ಪ್ರತಿಯೊಂದು ವಾರ್ಡ್ಗಳಲ್ಲಿ ದಿನದ 24 ಗಂಟೆ ನೀರು ಕೊಡುವ ಯೋಜನೆ ಹೆಸರಿಗೆ ಮಾತ್ರ ಜಾರಿಯಲ್ಲಿದೆ. ಯಾಕೆಂದರೆ ಈ ಬಡಾವಣೆಯ ಜನ ಈ 24 ಗಂಟೆ ನೀರಿನ ಯೋಜನೆಯಿಂದ ಇನ್ನೂವರೆಗೂ ಹನಿ ನೀರು ಕಂಡಿಲ್ಲ. ಅಷ್ಟೇ ಯಾಕೆ ಈ ಬಡಾವಣೆಯ ಜನ ನೀರಿನ ಪೈಪ್ ಲೈನ್ ಸಹ ಕಂಡಿಲ್ಲ. ಹೌದು ಮನೆ ಮನೆಗೆ ನಲ್ಲಿಗಳನ್ನ ಅಳವಡಿಸಿ ನೀರು ಕೊಡುತ್ತಾ ಇದ್ದೇವೆ ಎಂದು ಹೇಳುತ್ತಾರೆ. ಇಲ್ಲಿ ಪೈಪ್ಗಳೇ ಇಲ್ಲ, ಇನ್ನು ನೀರು ಎಲ್ಲಿಂದ ಬರಬೇಕು ಹೇಳಿ. ಇದೇ ಕಾರಣಕ್ಕೆ ಕುಡಿಯುವ ನೀರು ಕೊಡದೆ ಇದ್ದರೆ ಈ ಬಾರಿ ಮತದಾನ ಮಾಡಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಇದನ್ನೂ ಓದಿ:ಚಿಕ್ಕಮಗಳೂರು: ಮೂಲಸೌಕರ್ಯ ಆಗ್ರಹಿಸಿ ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ, ಚುನಾವಣಾ ಬಹಿಷ್ಕಾರದ ಎಚ್ಚರಿಕೆ
ಇನ್ನು ಈ ಬಡಾವಣೆಯ ಜನ ನೀರಿನ ಸಮಸ್ಯೆಯನ್ನ ಇವತ್ತು ನಿನ್ನೆಯಿಂದ ಅನುಭವಿಸುತ್ತಿಲ್ಲ ಬದಲಿಗೆ ಈ ಬಡಾವಣೆ ಯಾವಾಗ ನಿರ್ಮಾಣವಾಗಿದಿಯೋ ಆವಾಗಿನಿಂದ ಕುಡಿಯಲು ಸಹ ಜನ ನೀರು ಕಂಡಿಲ್ಲ. ಒಂದು ವೇಳೆ ಕುಡಿಯಲು ನೀರು ಬೇಕು ಅಂದರೆ ಕೈಯಲ್ಲಿ ಬಿಂದಿಗೆ ಹಿಡಿದುಕೊಂಡು ಮಕ್ಕಳೊಂದಿಗೆ ಬೇರೆ ಬೇರೆ ಬಡಾವಣೆಗಳಿಗೆ ಹಾಗೂ ಬೋರವೆಲ್ ಇರುವಂತ ಮನೆಗಳಿಗೆ ಹೋಗಿ ನೀರು ತರುವಂತಾಗಿದೆ. ಒಂದರ್ಥದಲ್ಲಿ ಇಲ್ಲಿನ ಜನ ಕುಡಿಯುವ ನೀರಿಗಾಗಿ ಭಿಕ್ಷೆ ಬೇಡುವಂತಾಗಿದೆ. ಇನ್ನು ಮಹಿಳೆಯರಿಗಂತೂ ನಿತ್ಯ ನೀರು ತರುವ ಕೆಲಸವೇ ಆಗಿದೆ.
ಬೆಳಗ್ಗೆ ಎದ್ದು ಮಕ್ಕಳಿಗೆ ರೆಡಿ ಮಾಡಿ ಶಾಲೆಗೆ ಕಳುಹಿಸಬೇಕೋ ಅಥವಾ ನೀರು ತರಬೇಕೋ ಎನ್ನುವಂತಾಗಿದೆ. ಇನ್ನು ಮಹಿಳೆಯರು ನೀರು ತರಲು ಹೋದರೆ ಇತ್ತ ಮನೆಯಲ್ಲಿ ಗಂಡಂದಿರು ಅಡುಗೆ ಮಾಡುವಂತೆ ತಾಕೀತು ಮಾಡುತ್ತಾರೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೇರೆ ಬಡಾವಣೆಗಳಿಗೆ ಹೋಗಿ ನೀರಿಗಾಗಿ ಮನೆ ಮನೆ ಸುತ್ತುವಂತಾಗಿದೆ. ಒಂದು ವೇಳೆ ಬೇರೆ ಮನೆಯರು ನೀರು ಕೊಡಲ್ಲ ಅಂದ್ರೆ ಖಾಲಿ ಕೊಡದೊಂದಿಗೆ ವಾಪಸ್ ಬರುವಂತಾಗಿದ್ದು, ಇನ್ನು ಇಲ್ಲಿನ ಜನ ಈ ಕುರಿತು ಸಾಕಷ್ಟು ಬಾರಿ ಜಿಲ್ಲಾಧಿಕಾರಿಗಳು, ನಗರಸಭೆ ಆಯುಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಇಲ್ಲಿಯವರೆಗೆ ಇಲ್ಲಿನ ನಿವಾಸಿಗಳಿಗೆ ನೀರು ಕೊಡುವಂತ ಕೆಲಸ ಮಾಡಿಲ್ಲ. ಆಯುಕ್ತರು.
ಇದನ್ನೂ ಓದಿ:KSRTC E-Bus: ರಾಜ್ಯದಲ್ಲಿ ಇ-ಬಸ್‌ಗಳಿಗೆ ಮೂಲಸೌಕರ್ಯ ಹೆಚ್ಚಿಸಿದ ಕೆಎಸ್‌ಆರ್‌ಟಿಸಿ
ಒಟ್ಟಿನಲ್ಲಿ ಯಾದಗಿರಿ ಜಿಲ್ಲಾ ಕೇಂದ್ರದಲ್ಲೇ ಜನರಿಗೆ ಕುಡಿಯಲು ನೀರು ಸಿಗದೆ ಇರುವುದು ನಾಚಿಕೆಗೇಡಿನ ಸಂಗತಿ. ಹೀಗಾಗಿ ಕೂಡಲೇ ಅಧಿಕಾರಿಗಳು ಇಲ್ಲಿನ ಜನರಿಗೆ ಕುಡಿಯಲು ನೀರು ಒದಗಿಸಿ ಸಮಸ್ಯೆ ಬಗೆ ಹರಿಸುವ ಕೆಲಸ ಮಾಡಬೇಕಾಗಿದೆ.
ವರದಿ: ಅಮೀನ್ ಹೊಸುರ್ ಟಿವಿ9 ಯಾದಗಿರಿ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ