ಸಾಹಿತ್ಯ ಪತ್ರಿಕೆಗಳ ಗಾತ್ರ ಸಣ್ಣದಾಗಿದ್ದರೂ, ಗುಣಮಟ್ಟ ಮಹತ್ವದ್ದಾಗಿದೆ: ಡಾ. ಎಚ್.ಎಸ್. ಶಿವಪ್ರಕಾಶ್
ಕನ್ನಡ ಸಾಹಿತ್ಯ ಭವನದಲ್ಲಿ ಸಂಗಾತ ಪತ್ರಿಕೆಯ ಮೂರನೇ ವರ್ಷಾಚರಣೆ ಹಾಗೂ ಕಥಾ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಎಚ್.ಎಸ್ ಶಿವಪ್ರಕಾಶ್ ಅವರು, ಸೃಜನಶೀಲವಾಗಿರುವ ಸಾಹಿತ್ಯ ಪತ್ರಿಕೆಗಳು ಗಾತ್ರ, ಪ್ರಸಾರದಲ್ಲಿ ಸಣ್ಣದಾಗಿದ್ದರೂ ಕೂಡ ತನ್ನ ಗುಣಮಟ್ಟದಿಂದ ಅವು ಉಂಟು ಮಾಡುವ ಪ್ರಭಾವ ಮತ್ತು ಪರಿಣಾಮಗಳು ಮಹತ್ವದ್ದಾಗಿವೆ ಎಂದು ಅಭಿಪ್ರಾಯಪಟ್ಟರು.

ಧಾರವಾಡ: ಇತ್ತೀಚಿನ ದಿನಗಳಲ್ಲಿ ವಾರಪತ್ರಿಕೆ, ಮಾಸ ಪತ್ರಿಕೆಗಳಿಗೆ ಭವಿಷ್ಯವೇ ಇಲ್ಲದಂತಾಗಿದೆ. ಅದರಲ್ಲೂ ಸಾಹಿತ್ಯಿಕ ಪತ್ರಿಕೆಗಳಂತೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಟ ಮಾಡುವಂತಾಗಿದೆ. ಆದರೆ ಧಾರವಾಡದ ತ್ರೈಮಾಸಿಕ ಸಾಹಿತ್ಯಿಕ ‘ಸಂಗಾತ’ ಪತ್ರಿಕೆಯೊಂದು ಮೂರು ವರ್ಷಗಳ ಕಾಲ ನಿರಂತರವಾಗಿ ಮುದ್ರಣಗೊಂಡು, ಲಾಭದಲ್ಲಿ ಮುನ್ನಡೆಯುತ್ತಿರುವುದು ಅಚ್ಚರಿಯ ಸಂಗತಿ. ಸಣ್ಣ ಗಾತ್ರದ, ಸಾಹಿತ್ಯದ ಪತ್ರಿಕೆಗಳು ಗುಣಮಟ್ಟ ಕಾಪಾಡಿಕೊಂಡರೆ ಅವಕ್ಕೂ ಉತ್ತಮ ಭವಿಷ್ಯ ಇದೆ ಎಂಬುದು ಇದರಿಂದ ಸಾಬೀತಾಗಿದೆ. ಧಾರವಾಡದ ಇಂಥ ಪತ್ರಿಕೆಯ ಮೂರನೇ ವರ್ಷದ ಆಚರಣೆಗೆ ಹಿರಿಯ ಕವಿ ಡಾ. ಎಚ್.ಎಸ್ ಶಿವಪ್ರಕಾಶ್ ಆಗಮಿಸಿ ಎಲ್ಲರ ಸಂತೋಷಕ್ಕೆ ಪಾತ್ರರಾದರು.
ಕನ್ನಡ ಸಾಹಿತ್ಯ ಭವನದಲ್ಲಿ ಸಂಗಾತ ಪತ್ರಿಕೆಯ ಮೂರನೇ ವರ್ಷಾಚರಣೆ ಹಾಗೂ ಕಥಾ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಎಚ್.ಎಸ್ ಶಿವಪ್ರಕಾಶ್ ಅವರು, ಸೃಜನಶೀಲವಾಗಿರುವ ಸಾಹಿತ್ಯ ಪತ್ರಿಕೆಗಳು ಗಾತ್ರ, ಪ್ರಸಾರದಲ್ಲಿ ಸಣ್ಣದಾಗಿದ್ದರೂ ಕೂಡ ತನ್ನ ಗುಣಮಟ್ಟದಿಂದ ಅವು ಉಂಟು ಮಾಡುವ ಪ್ರಭಾವ ಮತ್ತು ಪರಿಣಾಮಗಳು ಮಹತ್ವದ್ದಾಗಿವೆ ಎಂದು ಶ್ಲಾಘಸಿದರು.
ಈ ಕುರಿತಂತೆ ಮಾತನಾಡುತ್ತಾ, ಬಹುರಾಷ್ಟ್ರೀಯ ಕಂಪನಿಗಳ ಬಂಡವಾಳ ಹೂಡಿಕೆಯಿಲ್ಲದೇ, ಯಾವುದೇ ಉದ್ಯಮ ಸಾಧ್ಯವೇ ಇಲ್ಲ ಎನ್ನುವಂತಾಗಿರುವ ಈ ಸಂದರ್ಭದಲ್ಲಿ ಸಾಹಿತ್ಯ, ಕಲೆ, ಧರ್ಮ, ಆಧ್ಯಾತ್ಮ ಹೀಗೆ ಎಲ್ಲವುಗಳ ವಾಣಿಜ್ಯೀಕರಣವಾಗಿದೆ. ಪ್ರಭುತ್ವವೂ ಸೇರಿದಂತೆ ಎಲ್ಲವೂ ಕೂಡ ಬಹುರಾಷ್ಟ್ರೀಯ ಕಂಪೆನಿಗಳ ಅಣತಿಯಂತೆ ಸಾಗಬೇಕಾಗಿದೆ.
ಆದರೆ ಸಂಗಾತದಂತಹ ಪತ್ರಿಕೆ ಯಾವುದೇ ಸದ್ದು, ಗದ್ದಲವಿಲ್ಲದೇ ಕೇವಲ ಓದುಗರ, ಚಂದಾದಾರರ ಪ್ರೀತಿಯಿಂದ ನಿರುದ್ಯಮೀಕರಣದ ರೀತಿಯಲ್ಲಿ ಮೂರು ವರ್ಷ ಪೂರೈಸಿರುವುದು ಸಂತಸದ ಸಂಗತಿಯಾಗಿದೆ. ಕನ್ನಡದಲ್ಲಿ ಸಾಕ್ಷಿ, ಸಂಕ್ರಮಣ, ಶೂದ್ರ, ಋಜುವಾತು ಮೊದಲಾದ ಪತ್ರಿಕೆಗಳು ಈ ಮಾರ್ಗದಲ್ಲಿ ಈಗಾಗಲೇ ತಮ್ಮ ಛಾಪು ಮೂಡಿಸಿವೆ ಎಂದು ಅಭಿಪ್ರಾಯಪಟ್ಟರು.
ಸಂಗಾತ ಪತ್ರಿಕೆಯ ಜೊತೆಗೆ ಪ್ರಕಾಶನ, ಸಾಹಿತ್ಯ ಕಾರ್ಯಕ್ರಮಗಳನ್ನು ಟಿ.ಎಸ್ ಗೊರವರ ಅವರು ಬಹಳ ಪ್ರೀತಿಯಿಂದ ಯಾವುದೇ ರಾಜಿ ಇಲ್ಲದೇ ನಿರ್ವಹಿಸುತ್ತಿದ್ದಾರೆ. ಇಂದು ಅನೇಕ ಪ್ರಶಸ್ತಿಗಳ ಹಿಂದೆ ದೊಡ್ಡ ಮಟ್ಟದ ರಾಜಕಾರಣ, ಜಾತಿ, ಉಪಜಾತಿಗಳ ಗುದ್ದಾಟ ನಡೆಯುತ್ತಿರುತ್ತದೆ. ಸಂಗಾತ ಪತ್ರಿಕೆ ಅಂತಹ ಚಟುವಟಿಕೆಗಳಿಗೆ ಆಸ್ಪದವಿಲ್ಲದೇ ಸೃಜನಾತ್ಮಕವಾಗಿ ಸ್ಪರ್ಧೆಗಳನ್ನು ಆಯೋಜಿಸುತ್ತಿರುವುದು ಮಾದರಿಯಾಗಿದೆ ಎನ್ನಬಹುದು ಎಂದು ಶ್ಲಾಘಸಿದರು.

ಡಾ.ಎಚ್.ಎಸ್ ಶಿವಪ್ರಕಾಶ್
ಸಂಗಾತ, ಸಂಗಾತಿ, ಸಾಂಗತ್ಯ ಎಂಬ ಪದವೇ ಪರಸ್ಪರ ಬೆಸೆಯುವ ಸಂವೇದನೆ:
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ ಮಾತನಾಡಿ, ಸಂಗಾತ, ಸಂಗಾತಿ, ಸಾಂಗತ್ಯ ಎಂಬ ಪದವೇ ಪರಸ್ಪರ ಬೆಸೆಯುವ ಸಂವೇದನೆಯ ಪದಗಳಾಗಿವೆ. ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಸಮುದಾಯಗಳೊಂದಿಗೆ ಸಂವಹನ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಕವಿ ಆರಿಫ್ ರಾಜಾ ಅವರು ಬಹುಮಾನಿತ ಕಥೆಗಳ ಕುರಿತು ಮಾತನಾಡುತ್ತ, ಕನ್ನಡದಲ್ಲಿ ಕಥನ ಸಾಹಿತ್ಯದ ಟ್ರೆಂಡ್, ಕಾರ್ಪೊರೇಟ್ ವಲಯದಿಂದ ನಗರ ಕೇಂದ್ರಿತ ಸಂವೇದನೆಗೆ ಇದೀಗ ತೆರೆದುಕೊಳ್ಳುತ್ತಿದೆ. ಗ್ರಾಮೀಣ ಬದುಕಿನ ಚಿತ್ರಣಗಳನ್ನು ಕಟ್ಟಿಕೊಡುತ್ತಿರುವ ಭರವಸೆಯ ಹೊಸ ಕಥೆಗಾರರು ಕನ್ನಡದಲ್ಲಿ ಬರೆಯುತ್ತಿದ್ದಾರೆ ಎಂದು ಮಾತನಾಡಿದರು.
ಕಥಾ ಬಹುಮಾನ ವಿತರಣೆ: ಸಂಗಾತ ಪತ್ರಿಕೆಯ ವತಿಯಿಂದ ಪ್ರತಿವರ್ಷ ಕಥೆಗಳಿಗೆ ಬಹುಮಾನ ನೀಡಲಾಗುತ್ತದೆ. ಈ ಬಾರಿ ಕಥಾ ‘ಬಿಲದಿಂದ ಮಾಯವಾದವರು’ ಕತೆಗೆ ಬಹುಮಾನ ಪಡೆದಿರುವ ಗೌತಮ ಜ್ಯೋತ್ಸ್ನಾ ಹಾಗೂ ‘ಸೀರ’ ಕತೆಗೆ ಒಪ್ಪಿತ ಪುರಸ್ಕಾರ ಪಡೆದಿರುವ ಸಂಪತ್ ಸಿರಿಮನೆ ಅವರಿಗೆ ಕಥಾ ಬಹುಮಾನ ಹಾಗೂ ‘ಚಿತ್ರ ಚಿಗುರುವ ಹೊತ್ತು’ ಕವನ ಸಂಕಲನದ ಕತೃ ಚಾಂದಪಾಷಾ ಎನ್.ಎಸ್ ಅವರಿಗೆ ಚಿ.ಶ್ರೀನಿವಾಸರಾಜು ಕಾವ್ಯ ಪುರಸ್ಕಾರ ನೀಡಿ ಗೌರವಿಸಲಾಯಿತು.
Published On - 12:48 pm, Mon, 11 January 21



