ಹೈದರಾಬಾದ್‌ನ ಪ್ರಸಿದ್ಧ ಭಾಗ್ಯಲಕ್ಷ್ಮಿ ದೇವಾಲಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ, ವಿಶೇಷ ಪೂಜೆ ಸಲ್ಲಿಕೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಹೈದರಾಬಾದ್‌ನ ಐತಿಹಾಸಿಕ ಚಾರ್‌ಮಿನಾರ್‌ನಲ್ಲಿರುವ ಪ್ರಸಿದ್ಧ ಶ್ರೀ ಭಾಗ್ಯಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಅವರೊಂದಿಗೆ ದೇವಾಲಯಕ್ಕೆ ಆಗಮಿಸಿದ ಅಮಿತ್ ಶಾ ಅವರಿಗೆ ಅರ್ಚಕರು ವೇದ ಮಂತ್ರೋಚ್ಛಾರಣೆಗಳೊಂದಿಗೆ ಆಶೀರ್ವದಿಸಿ, ತೀರ್ಥ ಪ್ರಸಾದ ನೀಡಿದರು. ಅಮಿತ್ ಶಾ ಅವರ ಈ ಹೈದರಾಬಾದ್ ಪ್ರವಾಸದ ಅಂಗವಾಗಿ, ಚುನಾವಣಾ ಆಯೋಗದ ಎಸ್ಐಆರ್ ಪ್ರಕ್ರಿಯೆಯ ಕುರಿತು ಕಾಂಗ್ರೆಸ್ ಹರಡುತ್ತಿರುವ ಸುಳ್ಳು ನಿರೂಪಣೆಗಳ ವಿರುದ್ಧ ಬಿಜೆಪಿ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದೆ.

ಹೈದರಾಬಾದ್, ನವೆಂಬರ್ 2: ಕೇಂದ್ರ ಗೃಹ ಸಚಿವ ಅಮಿತ್ ಶಾ ತೆಲಂಗಾಣದ ರಾಜಧಾನಿ ಹೈದರಾಬಾದ್‌ನ ಐತಿಹಾಸಿಕ ಚಾರ್‌ಮಿನಾರ್ ಬಳಿ ಇರುವ ಪ್ರಸಿದ್ಧ ಭಾಗ್ಯಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದ್ದಾರೆ. ತಮ್ಮ ಹೈದರಾಬಾದ್ ಪ್ರವಾಸದ ಅಂಗವಾಗಿ ದೇವಾಲಯಕ್ಕೆ ಭೇಟಿ ನೀಡಿದ ಅಮಿತ್ ಶಾ ಅವರಿಗೆ ದೇವಸ್ಥಾನದ ಟ್ರಸ್ಟ್ ಹಾಗೂ ಪ್ರಮುಖ ಅರ್ಚಕರು ಸಾಂಪ್ರದಾಯಿಕವಾಗಿ ವೈಭವದ ಸ್ವಾಗತ ಕೋರಿದರು. ಈ ವೇಳೆ ಅಮಿತ್ ಶಾ ಅವರು ದೇವಿಗೆ ಪುಷ್ಪಾರ್ಚನೆ ಮಾಡಿ ಪ್ರಾರ್ಥಿಸಿದರು.
ಹೈದರಾಬಾದ್‌ನ ಭಾಗ್ಯಲಕ್ಷ್ಮಿ ದೇವಾಲಯವು ಬಿಜೆಪಿ ನಾಯಕರಿಗೆ ರಾಜಕೀಯವಾಗಿ ಹಾಗೂ ಧಾರ್ಮಿಕವಾಗಿ ಅತ್ಯಂತ ಮಹತ್ವದ ತಾಣವಾಗಿದೆ. ಮಹಾನಗರ ಪಾಲಿಕೆ ಹಾಗೂ ವಿಧಾನಸಭಾ ಚುನಾವಣೆಗಳ ಪ್ರಚಾರ ಸಂದರ್ಭಗಳಲ್ಲೂ ಬಿಜೆಪಿ ಹಿರಿಯ ನಾಯಕರು ಈ ದೇವಾಲಯಕ್ಕೆ ಭೇಟಿ ನೀಡುವುದು ವಾಡಿಕೆಯಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿಯ ಹಿನ್ನೆಲೆಯಲ್ಲಿ ತೆಲಂಗಾಣ ರಾಜ್ಯ ಬಿಜೆಪಿ ಅಧ್ಯಕ್ಷರು, ಸಂಸದರು, ಶಾಸಕರು ಹಾಗೂ ನೂರಾರು ಬೆಂಬಲಿಗರು ದೇವಾಲಯದ ಆವರಣದಲ್ಲಿ ಜಮಾಯಿಸಿ ಅದ್ದೂರಿ ಸ್ವಾಗತ ಕೋರಿದರು. ಈ ವೇಳೆ ಕೇಂದ್ರ ಸಚಿವ ಕಿಶನ್ ರೆಡ್ಡಿ ಕೂಡ ಉಪಸ್ಥಿತಿರುದ್ದರು.
ಚಾರ್‌ಮಿನಾರ್ ಸುತ್ತಮುತ್ತಲ ಸಂವೇದನಾಶೀಲ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹೈದರಾಬಾದ್ ನಗರ ಪೊಲೀಸರು ಮತ್ತು ಕೇಂದ್ರೀಯ ಭದ್ರತಾ ಪಡೆಗಳು (CRPF) ಬಿಗಿ ಭದ್ರತೆಯನ್ನು ಏರ್ಪಡಿಸಿದ್ದವು. ಗೃಹ ಸಚಿವರ ಭೇಟಿಯ ಹಿನ್ನೆಲೆಯಲ್ಲಿ ಹೈದರಾಬಾದ್‌ನ ಹಳೆಯ ನಗರ ಭಾಗದಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲಾಗಿದ್ದು, ಚಾರ್‌ಮಿನಾರ್ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.
#WATCH | Telangana: Union Home Minister Amit Shah offers prayers at Shri Bhagya Laxmi Mandir, Charminar, during his visit to Hyderabad.
Union Minister G Kishan Reddy, State BJP chief Ramchander Rao and other BJP leaders present. https://t.co/IXdLhTaeVu
— ANI (@ANI) November 2, 2026
ಇಂದು ಸಂಜೆ ಗೃಹ ಸಚಿವ ಅಮಿತ್ ಶಾ ಹೈದರಾಬಾದ್‌ನಲ್ಲಿ “ಪಾದಯಾತ್ರೆ” ನಡೆಸಲಿದ್ದಾರೆ. ತೆಲಂಗಾಣದ ಕಾಂಗ್ರೆಸ್ ಪಕ್ಷವು ಎಸ್ಐಆರ್ ಪ್ರಕ್ರಿಯೆಯ ಬಗ್ಗೆ ಸುಳ್ಳು ಮಾಹಿತಿಯನ್ನು ಹರಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಇದನ್ನು ಪ್ರತಿಭಟಿಸಲು ಬಿಜೆಪಿ ಈ ಅಭಿಯಾನವನ್ನು ಪ್ರಾರಂಭಿಸಿದ್ದು, ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಮೆರವಣಿಗೆ ನಡೆಯಲಿದೆ. ಅಮಿತ್ ಶಾ ಅವರ ಮೆರವಣಿಗೆ ಸಂಜೆ ಬಶೀರ್‌ಬಾಗ್‌ನಲ್ಲಿರುವ ಬಾಬು ಜಗಜೀವನ್ ರಾಮ್ ಅವರ ಪ್ರತಿಮೆಯಿಂದ ಪ್ರಾರಂಭವಾಗಿ ಮೊಜಮ್‌ಜಾಹಿ ಮಾರುಕಟ್ಟೆಯವರೆಗೆ ಮುಂದುವರಿಯುತ್ತದೆ.
#WATCH | Telangana: Union Home Minister Amit Shah arrives in Hyderabad.
Union HM Amit Shah will lead a Padyatra in Hyderabad under the BJP’s nationwide ‘Loktantra Bachao, Arajakta Hatao’ campaign here. https://t.co/49YF24bhKc
— ANI (@ANI) November 2, 2026
ಅಮಿತ್ ಶಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. “ಪದೇ ಪದೇ ಚುನಾವಣಾ ಸೋಲುಗಳಿಂದ ಹತಾಶೆಗೊಂಡಿರುವ ಕಾಂಗ್ರೆಸ್ ಪಕ್ಷವು ಈಗ ತನ್ನ ಅರಾಜಕ ಕ್ರಮಗಳ ಮೂಲಕ ಪ್ರಜಾಪ್ರಭುತ್ವವನ್ನು ಕೊಲ್ಲುವ ಮೂಲಕವೂ ಅಧಿಕಾರವನ್ನು ವಶಪಡಿಸಿಕೊಳ್ಳಲು ದೃಢನಿಶ್ಚಯ ಮಾಡಿದೆ. ಕಾಂಗ್ರೆಸ್ ಪಕ್ಷದ ಈ ದುಷ್ಟ ಪ್ರಯತ್ನಗಳಿಂದ ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸಲು, ನಾನು ಇಂದು ಸಂಜೆ ಹೈದರಾಬಾದ್‌ನಲ್ಲಿ ನಡೆಯಲಿರುವ ‘ಪ್ರಜಾಪ್ರಭುತ್ವವನ್ನು ಉಳಿಸಿ – ಅರಾಜಕತೆಯನ್ನು ನಿರ್ಮೂಲನೆ ಮಾಡಿ’ ಎಂಬ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




