ಇಂಗ್ಲಿಷ್ ಮಾಧ್ಯಮ ಶಾಲೆಗಳು: ಮಕ್ಕಳ ಕಲಿಕೆ, ಪೋಷಕರ ಆಯ್ಕೆ ಮತ್ತು ವಾಸ್ತವ
Santosh Nair's article in 'Your India' series: ಸಣ್ಣ ಪಟ್ಟಣದ ತಾಯಿಯ ಮಗಳನ್ನು ಇಂಗ್ಲಿಷ್ ಶಾಲೆಗೆ ಸೇರಿಸಿದ ಕಥೆಯು ಭಾರತದಲ್ಲಿನ ಶಿಕ್ಷಣದ ಗೊಂದಲವನ್ನು ಬಿಂಬಿಸುತ್ತದೆ. ಮಕ್ಕಳು ಮಾತೃಭಾಷೆಯಲ್ಲಿ ಉತ್ತಮವಾಗಿ ಕಲಿಯುತ್ತಾರೆ, ಆದರೆ ಉದ್ಯೋಗಾವಕಾಶಗಳಿಗೆ ಇಂಗ್ಲಿಷ್ ಅಗತ್ಯವೆಂಬ ಭಾವನೆ ಪ್ರಬಲವಾಗಿದೆ. ವಾಸ್ತವದಲ್ಲಿ, ಅನೇಕ "ಇಂಗ್ಲಿಷ್ ಮಾಧ್ಯಮ" ಶಾಲೆಗಳಲ್ಲಿ ಪರಿಣಾಮಕಾರಿ ಇಂಗ್ಲಿಷ್ ಬೋಧನೆ ಇರುವುದಿಲ್ಲ. ಇದರಿಂದ ಮಕ್ಕಳು ಮಾತೃಭಾಷೆಯ ಕಲಿಕೆ ಕಳೆದುಕೊಂಡು, ಇಂಗ್ಲಿಷ್ ಪ್ರಾವೀಣ್ಯತೆಯೂ ಪಡೆಯದೆ ಸಂಕಷ್ಟಕ್ಕೆ ಸಿಲುಕುತ್ತಾರೆ.

ಸಣ್ಣ ಪಟ್ಟಣವೊಂದರ ತಾಯಿಯೊಬ್ಬರು ಸ್ಥಳೀಯ ಭಾಷೆಯಲ್ಲಿ ಸರಳವಾಗಿ ಪಾಠ ಮಾಡುತ್ತಿದ್ದ ಸರ್ಕಾರಿ ಶಾಲೆಯಿಂದ ತಮ್ಮ ಮಗಳನ್ನು ಬಿಡಿಸಿ, ಇಂಗ್ಲಿಷ್ ಮಾಧ್ಯಮದ ಖಾಸಗಿ ಶಾಲೆಗೆ ಸೇರಿಸಿರುತ್ತಾರೆ. ಅಲ್ಲಿ ಪಠ್ಯಗಳನ್ನು ಇಂಗ್ಲಿಷ್‌ನಲ್ಲಿ ಬೋಧಿಸಲಾಗುತ್ತದೆ. ಆದರೆ ಆ ಭಾಷೆಯನ್ನು ಮಗಳು ಇನ್ನೂ ನಿರರ್ಗಳವಾಗಿ ಮಾತನಾಡಲು ಕಲಿತಿರುವುದಿಲ್ಲ. ಮನೆಯಲ್ಲಿಯೂ ಯಾರೂ ಆ ಭಾಷೆಯನ್ನು ಮಾತನಾಡುವುದಿಲ್ಲ. ಮೊದಲ ವರ್ಷದಲ್ಲಿ ಮಗಳು ತನ್ನ ತರಗತಿಯ ಪಾಠಗಳನ್ನು ಅರ್ಥಮಾಡಿಕೊಳ್ಳಲು ಹೆಣಗಾಡುತ್ತಾಳೆ. ತಾಯಿಗೆ ಇದು ತಿಳಿದಿದೆ. ಆದರೂ ಆಕೆ ಶಾಲೆ ಬದಲಾಯಿಸುವ ನಿರ್ಧಾರವನ್ನು ಕೈಗೊಳ್ಳುತ್ತಾಳೆ.
ಲಕ್ಷಾಂತರ ಭಾರತೀಯ ಕುಟುಂಬಗಳಲ್ಲಿ ಇಂಥ ನಿರ್ಧಾರ ಕಾಣಬಹುದು. ಕೆಲವೊಮ್ಮೆ ಕೇವಲ ಗೊಂದಲ ಅಥವಾ ಅಂತಸ್ತಿನ ಹಂಬಲ ಎಂದು ತಳ್ಳಿಹಾಕಲ್ಪಟ್ಟರೂ ಸಹ, ನಿಜವಾಗಿ ಹಂಗಲ್ಲ. ಇದು ಎರಡು ವೈರುದ್ಧ್ಯಗಳನ್ನು ಪ್ರತಿಬಿಂಬಿಸುತ್ತದೆ: ಮಕ್ಕಳು ತಮ್ಮ ಮೂಲಭೂತ ಪರಿಕಲ್ಪನೆಗಳನ್ನು ಈಗಾಗಲೇ ತಮಗೆ ಅರ್ಥವಾಗುವ ಭಾಷೆಯಲ್ಲೇ ಅತ್ಯುತ್ತಮವಾಗಿ ಕಲಿಯುತ್ತಾರೆ; ಎರಡನೆಯದು, ಭಾರತದಲ್ಲಿ ಉನ್ನತ ಶಿಕ್ಷಣ, ಖಾಸಗಿ ವಲಯದ ಉದ್ಯೋಗಗಳು ಮತ್ತು ಆರ್ಥಿಕ ಪ್ರಗತಿಗೆ ಇಂಗ್ಲಿಷ್ ಸೂಕ್ತವಾಗಿ ದಾರಿ ತೆರೆಯುವ ಭಾಷೆಯಾಗಿ ಉಳಿದಿದೆ.
ಅಂಕಿಅಂಶಗಳು ಇನ್ನು ಸ್ಪಷ್ಟವಾಗಿ ತೋರಿಸುತ್ತವೆ. ದೇಶಾದ್ಯಂತ ಸರ್ಕಾರಿ ಶಾಲೆಗಳ ದಾಖಲಾತಿಯು 2014-15ರಲ್ಲಿ ಶೇಕಡಾ 56.8ರಷ್ಟಿದ್ದುದು 2023-24ರ ವೇಳೆಗೆ ಶೇಕಡಾ 50ಕ್ಕೆ ಕುಸಿಯಿತು. ಇದು ಒಂದು ದಶಕಕ್ಕಿಂತ ಕಡಿಮೆ ಅವಧಿಯಲ್ಲಿ ಖಾಸಗಿ ಶಾಲೆಗಳತ್ತ ಆದ ಗಮನಾರ್ಹ ಬದಲಾವಣೆಯಾಗಿದೆ. ಅಜೀಮ್ ಪ್ರೇಮ್‌ಜಿ ಫೌಂಡೇಶನ್ ನಡೆಸಿದ ಸಂಶೋಧನೆಯ ಪ್ರಕಾರ, ಖಾಸಗಿ ಶಾಲೆಗಳನ್ನು ಆಯ್ಕೆ ಮಾಡುವ ಕುಟುಂಬಗಳಲ್ಲಿ ಶೇಕಡಾ 16ರಷ್ಟು ಕುಟುಂಬಗಳು ಇಂಗ್ಲಿಷ್ ಮಾಧ್ಯಮದ ಬೋಧನೆಯನ್ನು ತಮ್ಮ ಮುಖ್ಯ ಕಾರಣವೆಂದು ಉಲ್ಲೇಖಿಸಿವೆ. ಆದರೆ ಸರ್ಕಾರಿ ಶಾಲೆಗಳನ್ನು ಆದ್ಯತೆ ನೀಡಿದ ಕುಟುಂಬಗಳಲ್ಲಿ ಇದು ಕೇವಲ ಶೇಕಡಾ 1ರಷ್ಟಿತ್ತು. ಈ ಹೆಚ್ಚಿನ ಕುಟುಂಬಗಳಿಗೆ ಶಾಲೆ ಬದಲಾಯಿಸುವ ನಿರ್ಧಾರವು ಸ್ಪಷ್ಟವಾಗಿ ಮತ್ತು ಪ್ರಜ್ಞಾಪೂರ್ವಕವಾಗಿ ಭಾಷೆಗೆ ಸಂಬಂಧಿಸಿದ ವಿಷಯವಾಗಿದೆ.
ಇಲ್ಲಿಯೇ ಕಥೆಯು ಮತ್ತಷ್ಟು ಸಂಕೀರ್ಣವೂ ಮತ್ತು ಹೆಚ್ಚು ಸತ್ಯವನ್ನು ತೆರೆದಿಡುವಂಥದ್ದೂ ಆಗುತ್ತದೆ. ತಮ್ಮನ್ನು ಇಂಗ್ಲಿಷ್ ಮಾಧ್ಯಮ ಎಂದು ಪ್ರಚಾರ ಮಾಡಿಕೊಳ್ಳುವ ಬಹುತೇಕ ಶಾಲೆಗಳು ಪ್ರಾಯೋಗಿಕವಾಗಿ ಹೆಚ್ಚಿನ ಇಂಗ್ಲಿಷ್ ಬೋಧನೆಯನ್ನು ನೀಡುವುದಿಲ್ಲ. ಅದೇ ಅಜೀಮ್ ಪ್ರೇಮ್‌ಜಿ ಫೌಂಡೇಶನ್ ಸಂಶೋಧನೆಯು, ಶೇಕಡಾ 52ರಷ್ಟು ಶಾಲೆಗಳು ಇಂಗ್ಲಿಷ್ ಮಾಧ್ಯಮದವೆಂದು ಹೇಳಿಕೊಂಡರೂ, ತರಗತಿಯಲ್ಲಿ ನೈಜವಾಗಿ ಆ ರೀತಿ ಕಾರ್ಯಾಚರಿಸುತ್ತಿದ್ದುದು ಕೇವಲ ಶೇಕಡಾ 25ರಷ್ಟು ಶಾಲೆಗಳು ಮಾತ್ರ ಎಂದು ಕಂಡುಕೊಂಡಿದೆ. ಪೋಷಕರು ಹಣ ಪಾವತಿಸುತ್ತಿರುವ ಬೋರ್ಡ್/ಹೆಸರಿಗೂ ಮತ್ತು ಅವರ ಮಕ್ಕಳು ವಾಸ್ತವವಾಗಿ ಪಡೆಯುತ್ತಿರುವ ಬೋಧನೆಗೂ ನಡುವೆ ಇರುವ ಅಂತರವು ಅಗಾಧವಾಗಿದೆ ಮತ್ತು ಆಯ್ಕೆ ಮಾಡುವ ಕುಟುಂಬಗಳಿಗೆ ಇದು ಬಹುಮಟ್ಟಿಗೆ ಗೋಚರಿಸುವುದೇ ಇಲ್ಲ.
ಇದನ್ನೂ ಓದಿ: ಆರ್‌ಟಿಇ ಕಾಯ್ದೆ: ಖಾಸಗಿ ಶಾಲೆಗಳಲ್ಲಿ ಶೇ. 25 ಉಚಿತ ಪ್ರವೇಶ ಹಕ್ಕುಗಳನ್ನು ತಿಳಿಯಿರಿ
ಕಲಿಕೆಯ ಫಲಿತಾಂಶಗಳು ಇದನ್ನು ಕಠೋರವಾಗಿ ಎತ್ತಿ ತೋರಿಸುತ್ತವೆ. ಎಎಸ್‌ಇಆರ್ (ASER) ದತ್ತಾಂಶದ ಪ್ರಕಾರ, ಗ್ರಾಮೀಣ ಭಾರತದಲ್ಲಿ 5ನೇ ತರಗತಿಯ ಪ್ರತಿ ನಾಲ್ಕು ವಿದ್ಯಾರ್ಥಿಗಳಲ್ಲಿ ಒಬ್ಬರು ಮಾತ್ರ ಸರಳ ಇಂಗ್ಲಿಷ್ ವಾಕ್ಯವನ್ನು ಓದಬಲ್ಲರು, ಮತ್ತು 8ನೇ ತರಗತಿಯ ವೇಳೆಯೂ ಪ್ರತಿ ಇಬ್ಬರಲ್ಲಿ ಒಬ್ಬರು ಮಾತ್ರ ಅದನ್ನು ನಿಭಾಯಿಸಬಲ್ಲರು. ಅನೇಕ ಮಕ್ಕಳಿಗೆ, ಅವರ ಶಾಲೆಯು ಅವರಿಗೆ ಬಳಸಲು ತರಬೇತಿ ನೀಡದಿರುವ ಭಾಷೆಯಲ್ಲೇ ಬೋಧಿಸಲಾಗುತ್ತಿದೆ; ಇದು ಅವರಿಗೆ ಈಗಾಗಲೇ ತಿಳಿದಿರುವ ಭಾಷೆಯಲ್ಲಿ ಸ್ಪಷ್ಟವಾಗಿ ಪಾಠ ಮಾಡುವುದಕ್ಕಿಂತ ಕೆಲವು ರೀತಿಯಲ್ಲಿ ಕೆಟ್ಟ ಫಲಿತಾಂಶವಾಗಿದೆ.
ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ 2020 (NEP 2020) ಇದನ್ನು ನೇರವಾಗಿ ಬಗೆಹರಿಸಲು ಪ್ರಯತ್ನಿಸಿತು. ಮಕ್ಕಳಿಗೆ ಕನಿಷ್ಠ 5ನೇ ತರಗತಿಯವರೆಗೆ, ಸಾಧ್ಯವಾದರೆ 8ನೇ ತರಗತಿಯವರೆಗೆ ಅವರ ಮಾತೃಭಾಷೆ ಅಥವಾ ಪರಿಚಿತ ಪ್ರಾದೇಶಿಕ ಭಾಷೆಯಲ್ಲಿಯೇ ಬೋಧಿಸಬೇಕು ಎಂದು ಅದು ಶಿಫಾರಸು ಮಾಡಿದೆ. ಮಗು ಈಗಾಗಲೇ ಆಲೋಚಿಸುವ ಭಾಷೆಯಲ್ಲೇ ಕಲಿಕೆ ನಡೆದಾಗ ಮೂಲಭೂತ ಕಲಿಕೆ, ಓದಿನ ಗ್ರಹಿಕೆ, ಗಣಿತದ ತರ್ಕಗಳು ಹೆಚ್ಚು ಗಟ್ಟಿಯಾಗಿ ಮನಸ್ಸಿನಲ್ಲಿ ಉಳಿಯುತ್ತವೆ ಎಂಬ ಬಲವಾದ ಜಾಗತಿಕ ಶಿಕ್ಷಣ ಸಂಶೋಧನೆಗಳನ್ನು ಇದು ಆಧರಿಸಿದೆ. ಈ ನೀತಿಯು ಇಂಗ್ಲಿಷ್ ವಿರೋಧಿಯಲ್ಲ. ಮಗು ಮತ್ತೊಂದು ಭಾಷೆಯಲ್ಲಿ ಪ್ರಾವೀಣ್ಯತೆ ಪಡೆಯುವ ಮೊದಲೇ ಅದನ್ನು ಪ್ರತಿಯೊಂದು ವಿಷಯಕ್ಕೂ ಏಕೈಕ ಬೋಧನಾ ಮಾಧ್ಯಮವಾಗಿ ಬಳಸುವ ಬದಲು, ಇಂಗ್ಲಿಷ್ ಅನ್ನು ಒಂದು ಪ್ರತ್ಯೇಕ ವಿಷಯವಾಗಿ ಉತ್ತಮವಾಗಿ ಪರಿಚಯಿಸಬೇಕು ಮತ್ತು ಬೋಧಿಸಬೇಕು ಎಂದು ಅದು ವಾದಿಸುತ್ತದೆ.
ಆದರೆ ಈ ನೀತಿಯ ಶಿಫಾರಸು ಲಕ್ಷಾಂತರ ಪೋಷಕರ ನಂಬಿಕೆಗೆ ನೇರವಾಗಿ ವಿರುದ್ಧವಾಗಿದೆ. ಭಾರತದ ನೈಜ ಉದ್ಯೋಗ ಮಾರುಕಟ್ಟೆಯನ್ನು ಸರಿಯಾಗಿ ಅರ್ಥೈಸಿಕೊಳ್ಳುವ ಪೋಷಕರು, ಇದು ತಮ್ಮ ಮಗುವಿಗೆ ಉತ್ತಮ ಅವಕಾಶವನ್ನು ನೀಡುತ್ತದೆ ಎಂದು ನಂಬುತ್ತಾರೆ. ಭಾರತದಲ್ಲಿ ಉನ್ನತ ಶಿಕ್ಷಣ, ಖಾಸಗಿ ವಲಯದ ಹೆಚ್ಚಿನ ನೇಮಕಾತಿಗಳು, ಸ್ಪರ್ಧಾತ್ಮಕ ಸರ್ಕಾರಿ ಪರೀಕ್ಷೆಗಳು ಮತ್ತು ಅಂತರರಾಷ್ಟ್ರೀಯ ಅವಕಾಶಗಳಲ್ಲಿ ಇಂಗ್ಲಿಷ್ ಮೇಲುಗೈ ಸಾಧಿಸಿದೆ. ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ಆಯ್ಕೆ ಮಾಡುವ ಪೋಷಕರು (ಅದು ಅಷ್ಟೊಂದು ಪರಿಪೂರ್ಣವಲ್ಲದಿದ್ದರೂ ಸಹ), ಕೇವಲ ಫ್ಯಾಷನ್‌ಗಾಗಿ ಅಲ್ಲ, ತಮ್ಮ ಮಗುವಿನ ದೀರ್ಘಕಾಲೀನ ಆರ್ಥಿಕ ಪ್ರಗತಿಯ ಮೇಲೆ ತರ್ಕಬದ್ಧವಾದ ಭರವಸೆಯನ್ನು ಇಡುತ್ತಿದ್ದಾರೆ; ವಿಶೇಷವಾಗಿ ತಮ್ಮ ಮಗು ಕುಟುಂಬದಲ್ಲಿ ವೈಟ್-ಕಾಲರ್ ಅಥವಾ ವೃತ್ತಿಪರ ಕೆಲಸಕ್ಕೆ ಕಾಲಿಡುವ ಮೊದಲ ವ್ಯಕ್ತಿಯಾಗಲಿ ಎಂದು ಬಯಸುವ ಕುಟುಂಬಗಳಿಗೆ ಇದು ನಿಜವಾಗಿದೆ.
ಇದನ್ನೂ ಓದಿ: ಆನ್‌ಲೈನ್‌ನಲ್ಲಿ ವಂಚನೆ? ಸಾಮಾನ್ಯ ಜನರ ನೆರವಿಗೆ ಬರುತ್ತವೆ ಗ್ರಾಹಕ ರಕ್ಷಣಾ ಕಾಯ್ದೆ 2019 & CCPA
ಆರಂಭಿಕ ಸನ್ನಿವೇಶದಲ್ಲಿ ಉಲ್ಲೇಖಿಸಿದ ಮಗಳಿಗೆ ಇದರರ್ಥ ಏನೆಂಬುದನ್ನು ಯೋಚಿಸಿ. ಆಕೆಯ ಹೊಸ ಶಾಲೆಯು ಸೂಕ್ತ ಬೆಂಬಲದೊಂದಿಗೆ ನೈಜವಾಗಿ ಇಂಗ್ಲಿಷ್‌ನಲ್ಲಿ ಬೋಧಿಸಿದರೆ, ಆಕೆ ಅಂತಿಮವಾಗಿ ನಿಜವಾದ ಭಾಷಾ ಪ್ರಾವೀಣ್ಯತೆಯನ್ನು ಪಡೆಯಬಹುದು ಮತ್ತು ಅದರೊಂದಿಗೆ ಅರ್ಥಪೂರ್ಣ ಪ್ರಯೋಜನವನ್ನು ಪಡೆಯಬಹುದು. ಒಂದು ವೇಳೆ ಆಕೆಯ ಶಾಲೆಯು ಸರಿಯಾದ ಬೋಧನೆ ನೀಡದೆ ಕೇವಲ ‘ಇಂಗ್ಲಿಷ್ ಮಾಧ್ಯಮ’ ಎಂದು ಹೇಳಿಕೊಳ್ಳುವ ಬಹುಪಾಲು ಶಾಲೆಗಳಲ್ಲಿ ಒಂದಾಗಿದ್ದರೆ, ಆಕೆ ಎರಡೂ ಆಯ್ಕೆಗಳ ಅತ್ಯಂತ ಕೆಟ್ಟ ಪರಿಣಾಮವನ್ನು ಎದುರಿಸುವ ಅಪಾಯವಿದೆ: ಅಂದರೆ ಆಕೆಗೆ ಸಂಪೂರ್ಣವಾಗಿ ಅರ್ಥವಾಗದ ಭಾಷೆಯಲ್ಲಿ ದುರ್ಬಲ ಮೂಲಭೂತ ಕಲಿಕೆ, ಹಾಗೂ ಆಕೆಯ ಪೋಷಕರು ಅಪೇಕ್ಷಿಸಿದ ಇಂಗ್ಲಿಷ್ ಭಾಷಾ ಪ್ರಾವೀಣ್ಯತೆಯೂ ಸಿಗದಿರುವುದು.
ಇಂದು ಈ ಆಯ್ಕೆಯನ್ನು ಎದುರಿಸುತ್ತಿರುವ ಕುಟುಂಬಕ್ಕೆ, ಸಂಭಾವ್ಯ ಶಾಲೆಯನ್ನು ಕೇಳಬೇಕಾದ ಉಪಯುಕ್ತ ಪ್ರಶ್ನೆಯು ಕೇವಲ “ಇದು ಇಂಗ್ಲಿಷ್ ಮಾಧ್ಯಮವೇ?” ಎಂಬುದಲ್ಲ (ಏಕೆಂದರೆ ದತ್ತಾಂಶಗಳ ಪ್ರಕಾರ ಈ ಬೋರ್ಡ್‌ಗೆ ತೋರಿಕೆಯಷ್ಟು ಅರ್ಥವಿಲ್ಲ). ಕೇಳಬೇಕಾದ ಪ್ರಶ್ನೆಯು ಹೆಚ್ಚು ನಿರ್ದಿಷ್ಟ ಮತ್ತು ತೀಕ್ಷ್ಣವಾದುದು: ಇಲ್ಲಿ ಇಂಗ್ಲಿಷ್ ಅನ್ನು ವಾಸ್ತವವಾಗಿ ಹೇಗೆ ಬೋಧಿಸಲಾಗುತ್ತದೆ, ಮತ್ತು ಮಕ್ಕಳು ನಿರ್ದಿಷ್ಟ ತರಗತಿಯ ವೇಳೆಗೆ ಅದನ್ನು ಆತ್ಮವಿಶ್ವಾಸದಿಂದ ಓದುತ್ತಿದ್ದಾರೆ ಹಾಗೂ ಮಾತನಾಡುತ್ತಿದ್ದಾರೆ ಎಂಬುದನ್ನು ಶಾಲೆಯು ಕೇವಲ ಹೇಳಿಕೊಳ್ಳದೆ ಸಾಬೀತುಪಡಿಸಬಲ್ಲದೇ?
(ಆಧಾರಗಳು: ಅಜೀಮ್ ಪ್ರೇಮ್‌ಜಿ ಫೌಂಡೇಶನ್, ಖಾಸಗಿ ಶಾಲಾ ದಾಖಲಾತಿ ಪ್ರವೃತ್ತಿಗಳು ಮತ್ತು ಇಂಗ್ಲಿಷ್ ಮಾಧ್ಯಮ ಬೋಧನಾ ಅಂತರಗಳ ಕುರಿತ ಸಂಶೋಧನೆ; ವಾರ್ಷಿಕ ಶಿಕ್ಷಣ ಸ್ಥಿತಿ ವರದಿ (ASER), 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಲ್ಲಿ ಇಂಗ್ಲಿಷ್ ಓದುವ ಪ್ರಾವೀಣ್ಯತೆ ದತ್ತಾಂಶ; ರಾಷ್ಟ್ರೀಯ ಶಿಕ್ಷಣ ನೀತಿ 2020, ಶಿಕ್ಷಣ ಸಚಿವಾಲಯ, ಭಾರತ ಸರ್ಕಾರ, ಬೋಧನಾ ಭಾಷೆಯ ಶಿಫಾರಸುಗಳು.)
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




