AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ ಕ್ಯಾನ್ಸರ್ ಔಷಧಿ ಅಗ್ಗವಾದರೆ ಸಾಕೇ?; ಬೇಡ್ವಾ ಸ್ಕ್ಯಾನಿಂಗ್, ಶಸ್ತ್ರಚಿಕಿತ್ಸೆ ಮತ್ತು ಟೆಸ್ಟಿಂಗ್ ದರಗಳಿಗೂ ಕಟ್ಟುನಿಟ್ಟಿನ ನಿಯಂತ್ರಣ

ಭಾರತದಲ್ಲಿ ಕ್ಯಾನ್ಸರ್ ಚಿಕಿತ್ಸೆ ಸರಾಸರಿ 7.5 ಲಕ್ಷ ರೂ. ವೆಚ್ಚವಾಗುತ್ತಿದ್ದು, ಶೇ.80ರಷ್ಟು ಹಣ ರೋಗಿಯ ಜೇಬಿನಿಂದಲೇ. ಔಷಧಿಗಳ ಬೆಲೆ ನಿಯಂತ್ರಣವಿದ್ದರೂ ಸ್ಕ್ಯಾನಿಂಗ್, ಶಸ್ತ್ರಚಿಕಿತ್ಸೆ, ಪರೀಕ್ಷೆಗಳಂತಹ ಇತರೆ ವೆಚ್ಚಗಳು ದುಬಾರಿಯಾಗಿವೆ. ಆಯುಷ್ಮಾನ್ ಭಾರತ್, ವಿಮೆಗಳಿದ್ದರೂ ಪೂರ್ಣ ಪರಿಹಾರವಿಲ್ಲ. ಸಮಗ್ರ ಬೆಲೆ ನಿಯಂತ್ರಣವಿದ್ದಲ್ಲಿ ಮಾತ್ರ ಬಡವರಿಗೆ ಚಿಕಿತ್ಸೆ ಕೈಗೆಟುಕಬಹುದು ಎಂದು ಸಂಸದೀಯ ಸಮಿತಿ ಕಳವಳ ವ್ಯಕ್ತಪಡಿಸಿದೆ

ಕೇವಲ ಕ್ಯಾನ್ಸರ್ ಔಷಧಿ ಅಗ್ಗವಾದರೆ ಸಾಕೇ?; ಬೇಡ್ವಾ ಸ್ಕ್ಯಾನಿಂಗ್, ಶಸ್ತ್ರಚಿಕಿತ್ಸೆ ಮತ್ತು ಟೆಸ್ಟಿಂಗ್ ದರಗಳಿಗೂ ಕಟ್ಟುನಿಟ್ಟಿನ ನಿಯಂತ್ರಣ
ಕ್ಯಾನ್ಸರ್ Image Credit source: Getty Images
ನಯನಾ ರಾಜೀವ್
|

Updated on: Nov 03, 2026 | 2:24 PM

Share

ನವದೆಹಲಿ, ನವೆಂಬರ್ 02: ಕ್ಯಾನ್ಸರ್ ಎಂಬ ರೋಗದ ಹೆಸರು ಕೇಳಿದರೇ ಸಾಕು, ರೋಗಿಯ ಕುಟುಂಬದಲ್ಲಿ ಆತಂಕ ಶುರುವಾಗುತ್ತದೆ. ರೋಗದ ವಿರುದ್ಧ ಹೋರಾಡುವ ಧೈರ್ಯ ತಂದುಕೊಳ್ಳುವುದು ಒಂದೆಡೆಯಾದರೆ, ಚಿಕಿತ್ಸೆಗಾಗಿ ಹಣ ಹಂದಿರುವ ಚಿಂತೆ ಮತ್ತೊಂದೆಡೆ. ಶಸ್ತ್ರ ಚಿಕಿತ್ಸೆ, ಕೀಮೋಥೆರಪಿ, ರೇಡಿಯೇಷನ್ ಚಿಕಿತ್ಸೆ, ದುಬಾರಿ ಔಷಧಗಳು, ನಿರಂತರ ಪರೀಕ್ಷೆಗಳು, ಕ್ಯಾನ್ಸರ್ ಚಿಕಿತ್ಸೆಯ ಪ್ರತಿಯೊಂದು ಹಂತವೂ ಕುಟುಂಬದ ಆರ್ಥಿಕ ಸ್ಥಿತಿಗೆ ಸವಾಲಾಗಬಹುದು.

ಇದೆಲ್ಲಾ ಸ್ಥಿತಿಯನ್ನು ಗಮನಿಸಿದ ಸರ್ಕಾರ ಔಷಧ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ. ಎನ್​ಪಿಪಿಎ ಕೆಲವು ಔಷಧಗಳ ಗರಿಷ್ಠ ಬೆಲೆಯನ್ನು ನಿಗದಿಪಡಿಸುತ್ತದೆ. ಜನೌಷಧಿ ಕೇಂದ್ರಗಳ ಮೂಲಕ ಜೆನೆರಿಕ್ ಔಷಧಿಗಳೂ ಲಭ್ಯವಿವೆ. ಆಯುಷ್ಮಾನ್ ಭಾರತ್ ಸೇರಿದಂತೆ ಸರ್ಕಾರಿ ಆರೋಗ್ಯ ಯೋಜನೆಗಳು ಚಿಕಿತ್ಸೆಯ ವೆಚ್ಚದ ಹೊರೆ ಕಡಿಮೆ ಮಾಡಲು ನೆರವಾಗುತ್ತವೆ. ಆದರೂ, ಕ್ಯಾನ್ಸರ್ ಚಿಕಿತ್ಸೆಯ ಒಟ್ಟು ವೆಚ್ಚ ಎಲ್ಲರಿಗೂ ಕೈಗೆಟುವಂತಿದೆಯೇ? ಔಷಧಿಗಳ ಬೆಲೆ ನಿಜವಾಗಿಯೂ ಹೇಗೆ ನಿರ್ಧಾರವಾಗುತ್ತದೆ? ವಿಮೆ ಇದ್ದರೆ ಎಲ್ಲ ವೆಚ್ಚವೂ ಭರ್ತಿಯಾಗುತ್ತದೆಯೇ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಸಣ್ಣ ಪ್ರಯತ್ನ ಟಿವಿ9 ಕನ್ನಡ ಮಾಡಿದೆ.

ಕ್ಯಾನ್ಸರ್ ಚಿಕಿತ್ಸೆ ಅಂದರೆ ಔಷಧಿಗಳ ವೆಚ್ಚ ಮಾತ್ರವಲ್ಲ

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಔಷಧಿಗಳ ಬೆಲೆ ಒಂದು ಪ್ರಮುಖ ಭಾಗವಾದರೂ, ಒಟ್ಟು ವೆಚ್ಚ ಅದಕ್ಕಿಂತ ದೊಡ್ಡದಿರುತ್ತದೆ. ರೋಗದ ಹಂತ, ಕ್ಯಾನ್ಸರ್‌ನ ವಿಧ, ಚಿಕಿತ್ಸೆಯ ವಿಧಾನ ಮತ್ತು ಆಸ್ಪತ್ರೆಯ ಆಯ್ಕೆಯ ಆಧಾರದ ಮೇಲೆ ಖರ್ಚು ಬದಲಾಗುತ್ತದೆ. ಕೀಮೋಥೆರಪಿ ಔಷಧಿಗಳು, ಇಮ್ಯುನೋಥೆರಪಿ, ಟಾರ್ಗೆಟೆಡ್ ಥೆರಪಿ, ಶಸ್ತ್ರಚಿಕಿತ್ಸೆ, ರೇಡಿಯೇಷನ್, ಪಿಇಟಿ-ಸಿಟಿ ಸ್ಕ್ಯಾನ್, ರಕ್ತ ಪರೀಕ್ಷೆಗಳು ಹಾಗೂ ಚಿಕಿತ್ಸೆಯ ನಂತರದ ಆರೈಕೆ ಹೀಗೆ ಹಲವು ವೆಚ್ಚಗಳು ಸೇರಿಕೊಳ್ಳುತ್ತವೆ.

2026ರ ಆಗಸ್ಟ್‌ನಲ್ಲಿ ಸಂಸತ್ತಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸ್ಥಾಯಿ ಸಮಿತಿ ಮಂಡಿಸಿದ ವರದಿಯ ಪ್ರಕಾರ, ಭಾರತದಲ್ಲಿ ಕ್ಯಾನ್ಸರ್ ಚಿಕಿತ್ಸೆಯ ಒಟ್ಟು ವೆಚ್ಚದ ಶೇ.70ರಿಂದ 80ರಷ್ಟು ಹಣವನ್ನು ರೋಗಿಗಳು ಮತ್ತು ಅವರ ಕುಟುಂಬಗಳೇ ನೇರವಾಗಿ ಭರಿಸುತ್ತಿದ್ದಾರೆ. ಪ್ರತಿ ರೋಗಿಗೆ ಚಿಕಿತ್ಸೆಯ ಸರಾಸರಿ ವೆಚ್ಚ ಸುಮಾರು 7.5 ಲಕ್ಷ ರೂ. ಎಂದು ವರದಿ ಉಲ್ಲೇಖಿಸಿದೆ. ಅಂದರೆ ಆರೋಗ್ಯ ವಿಮೆ ಅಥವಾ ಸರ್ಕಾರಿ ನೆರವು ಇಲ್ಲದ ಕುಟುಂಬಕ್ಕೆ ಕ್ಯಾನ್ಸರ್ ಚಿಕಿತ್ಸೆ ದೊಡ್ಡ ಆರ್ಥಿಕ ಹೊರೆಯಾಗಬಹುದು.

‘‘ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆ ಸ್ವಾಗತಾರ್ಹ ಹೆಜ್ಜೆ; ಆರ್ಥಿಕ ಹೊರೆಯಿಂದಾಗಿ ಕುಟುಂಬಗಳು ಚಿಕಿತ್ಸೆ ಮುಂದುವರೆಸಲಾಗದೆ ಕನ್ಸಲ್ಟೇಶನ್ ರೂಮ್‌ಗಳಿಂದ ಹೊರನಡೆಯುವುದನ್ನು ಇದು ತಪ್ಪಿಸಲು ನೆರವಾಗುತ್ತದೆ’’. ಡಾ. ರವಿ ಕಣ್ಣನ್ (ಖ್ಯಾತ ಸರ್ಜಿಕಲ್ ಆಂಕಾಲಜಿಸ್ಟ್ ಹಾಗೂ ಕ್ಯಾಚಾರ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರು) ಗಾರ್ಡಿಯನ್​ಗೆ ನೀಡಿದ ಸಂದರ್ಶನದಲ್ಲಿ  ಹೇಳಿದ್ದಾರೆ.

ಔಷಧಿಗಳ ಎಂಆರ್‌ಪಿ ಯಾರು ನಿಗದಿಪಡಿಸುತ್ತಾರೆ?

ಔಷಧಿ ಅಂಗಡಿಯಲ್ಲಿ ಕಾಣುವ ಎಂಆರ್‌ಪಿ ಎಂದರೆ ಗರಿಷ್ಠ ಚಿಲ್ಲರೆ ಮಾರಾಟ ಬೆಲೆ. ಆದರೆ ಔಷಧಿಗಳ ಬೆಲೆ ನಿಗದಿಪಡಿಸುವಲ್ಲಿ ಸರ್ಕಾರದ ಪಾತ್ರವೂ ಇದೆ. ಭಾರತದಲ್ಲಿ ಔಷಧಿಗಳ ಬೆಲೆ ನಿಯಂತ್ರಣಕ್ಕೆ ನ್ಯಾಷನಲ್ ಫಾರ್ಮಾಸ್ಯುಟಿಕಲ್ ಪ್ರೈಸಿಂಗ್ ಅಥಾರಿಟಿ (NPPA) ಕಾರ್ಯನಿರ್ವಹಿಸುತ್ತದೆ. ಇದು ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆ. ಔಷಧಿಗಳ ಬೆಲೆ ನಿಗದಿ, ಪರಿಷ್ಕರಣೆ ಮತ್ತು ನಿಯಂತ್ರಣ ಇದರ ಪ್ರಮುಖ ಜವಾಬ್ದಾರಿಗಳು.

ಔಷಧಿಗಳ ಬೆಲೆ ನಿಯಂತ್ರಣಕ್ಕೆ 2013ರ ಡ್ರಗ್ಸ್ ಪ್ರೈಸ್ ಕಂಟ್ರೋಲ್ ಆರ್ಡರ್ (DPCO) ಪ್ರಮುಖ ಆಧಾರ. ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿಯಲ್ಲಿ ಸೇರಿರುವ ಔಷಧಿಗಳಿಗೆ ಎನ್‌ಪಿಪಿಎ ಗರಿಷ್ಠ ಬೆಲೆ ಮಿತಿಯನ್ನು ನಿಗದಿಪಡಿಸುತ್ತದೆ. ಕಂಪನಿಗಳು ಆ ಮಿತಿಗಿಂತ ಹೆಚ್ಚಿನ ಬೆಲೆಗೆ ಔಷಧಿ ಮಾರಾಟ ಮಾಡುವಂತಿಲ್ಲ. ಹಾಗಾದರೆ ಎಲ್ಲ ಔಷಧಿಗಳ ಬೆಲೆಯನ್ನೂ ಸರ್ಕಾರವೇ ನಿರ್ಧರಿಸುತ್ತದೆಯೇ? ಇಲ್ಲ. ಬೆಲೆ ನಿಯಂತ್ರಣ ಪಟ್ಟಿಯಲ್ಲಿರುವ ಔಷಧಿಗಳಿಗೆ ಗರಿಷ್ಠ ಬೆಲೆ ಮಿತಿಯನ್ನು ಎನ್‌ಪಿಪಿಎ ನಿಗದಿಪಡಿಸುತ್ತದೆ. ಇತರ ಔಷಧಿಗಳ ಬೆಲೆಯನ್ನು ಕಂಪನಿಗಳು ನಿಗದಿಪಡಿಸುತ್ತವೆ. ಆದರೆ ಸಾರ್ವಜನಿಕ ಹಿತದೃಷ್ಟಿಯಿಂದ ಅಗತ್ಯವಿದ್ದರೆ ಅವುಗಳ ಬೆಲೆಯ ಮೇಲೂ ಎನ್‌ಪಿಪಿಎ ಕ್ರಮ ಕೈಗೊಳ್ಳಬಹುದು.

ಕ್ಯಾನ್ಸರ್ ಔಷಧಿಗಳ ಬೆಲೆ ನಿಯಂತ್ರಣಕ್ಕೆ ಏನೆಲ್ಲ ಕ್ರಮ?

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಕೆಲವು ಅಗತ್ಯ ಔಷಧಿಗಳ ಬೆಲೆ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ. ಎನ್​ಪಿಪಿಎ 2025ರ ಮಾರ್ಚ್​ 31ರ ವೇಳೆಗೆ ಎನ್​ಎಲ್​ಇಎಂ ಪಟ್ಟಿಯಡಿ ಒಟ್ಟು 928 ಔಷಧಿ ಫಾರ್ಮುಲೇಷನ್​ಗಳಿಗಿಂತ ಗರಿಷ್ಠ ಬೆಲೆ ನಿಗದಿಪಡಿಸಲಾಗಿತ್ತು. ಈ ಪಟ್ಟಿಯಲ್ಲಿ ಕ್ಯಾನ್ಸರ್ ಔಷಧಿಗಳೂ ಸೇರಿವೆ. ಆದರೆ ಬೆಲೆ ನಿಯಂತ್ರಣವಿದ್ದರೂ ಎಲ್ಲಾ ಕ್ಯಾನ್ಸರ್ ಔಷಧಿಗಳೂ ಅಗ್ಗವಾಗಿವೆ ಎಂದರ್ಥವಲ್ಲ. ಹೊಸ ತಲೆಮಾರಿನ ಔಷಧಿಗಳು, ನಿರ್ದಿಷ್ಟ ಕ್ಯಾನ್ಸರ್​ಗಲಿಗೆ ಬಳಸುವ ಟಾರ್ಗೆಟೆಡ್ ಥೆರಪಿ ಮತ್ತು ಇಮ್ಯುನೋಥೆರಪಿ ಔಷಧಿಗಳ ಬೆಲೆ ಇನ್ನೂ ಹೆಚ್ಚರಿಬಹುದು. ಕೆಲವು ಔಷಧಿಗಳ ಪರ್ಯಾಯ ಡೋಸ್​ಗಳು ಅಥವಾ ಬೇರೆ ಫಾರ್ಮುಲೇಷ್​ಗಳ ಬೆಲೆಯಲ್ಲೂ ವ್ಯತ್ಯಾಸವಿರಬಹುದು.

2026ರ ಆಗಸ್ಟ್‌ನಲ್ಲಿ ಮಂಡಿಸಲಾದ ಸಂಸದೀಯ ಸಮಿತಿಯ ವರದಿಯೂ ಇದೇ ವಿಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಕ್ಯಾನ್ಸರ್ ಔಷಧಿಗಳ ಬೆಲೆ ನಿಯಂತ್ರಣದ ವ್ಯಾಪ್ತಿಯನ್ನು ವಿಸ್ತರಿಸಬೇಕು, ಔಷಧಿಗಳ ಮೇಲಿನ ವ್ಯಾಪಾರ ಲಾಭದ ಪ್ರಮಾಣವನ್ನು ಪರಿಶೀಲಿಸಬೇಕು ಮತ್ತು ಪಿಇಟಿ-ಸಿಟಿ, ಎಂಆರ್‌ಐ, ಜೆನೆಟಿಕ್ ಪರೀಕ್ಷೆಗಳಂತಹ ಪ್ರಮುಖ ತಪಾಸಣೆಗಳಿಗೂ ಬೆಲೆ ಮಿತಿ ನಿಗದಿಪಡಿಸುವ ಬಗ್ಗೆ ಪರಿಗಣಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಇವು ಸಮಿತಿಯ ಶಿಫಾರಸುಗಳು, ಜಾರಿಯಾಗಿರುವ ಹೊಸ ನಿಯಮಗಳೆಂದು ಪರಿಗಣಿಸಬಾರದು.

ಜೆನೆರಿಕ್ ಔಷಧಿ ಎಂದರೇನು? ಬ್ರ್ಯಾಂಡೆಡ್ ಔಷಧಿಗಿಂತ ಹೇಗೆ ಭಿನ್ನ?

ಒಂದೇ ಕಾಯಿಲೆಗೆ ಒಂದೇ ರೀತಿಯ ಸಕ್ರಿಯ ಔಷಧೀಯ ಘಟಕ ಹೊಂದಿರುವ ಔಷಧಿಗಳು ಬೇರೆ ಬೇರೆ ಕಂಪನಿಗಳಿಂದ ಬೇರೆ ಬ್ರ್ಯಾಂಡ್‌ಗಳ ಹೆಸರಿನಲ್ಲಿ ಮಾರಾಟವಾಗಬಹುದು. ಇವುಗಳಲ್ಲಿ ಬ್ರ್ಯಾಂಡ್ ಹೆಸರಿನ ಬದಲು ಔಷಧಿಯ ಅಧಿಕೃತ ಅಥವಾ ಸಾಮಾನ್ಯ ಹೆಸರಿನಲ್ಲಿ ಮಾರಾಟವಾಗುವ ಔಷಧಿಯನ್ನು ಜೆನೆರಿಕ್ ಔಷಧಿ ಎಂದು ಕರೆಯಲಾಗುತ್ತದೆ.

ಉದಾಹರಣೆಗೆ, ಒಂದೇ ಸಕ್ರಿಯ ಔಷಧೀಯ ಘಟಕ ಹೊಂದಿರುವ ಎರಡು ಔಷಧಿಗಳಲ್ಲಿ ಒಂದು ಪ್ರಸಿದ್ಧ ಕಂಪನಿಯ ಬ್ರ್ಯಾಂಡ್ ಹೆಸರಿನಲ್ಲಿ ಮಾರಾಟವಾಗಬಹುದು. ಮತ್ತೊಂದು ಜೆನೆರಿಕ್ ಹೆಸರಿನಲ್ಲಿ ಕಡಿಮೆ ಬೆಲೆಗೆ ಲಭ್ಯವಿರಬಹುದು. ಜೆನೆರಿಕ್ ಔಷಧಿಗಳು ಗುಣಮಟ್ಟದ ಮಾನದಂಡಗಳನ್ನು ಪೂರೈಸಿದರೆ, ಅವುಗಳ ಚಿಕಿತ್ಸಕ ಪರಿಣಾಮ ಬ್ರ್ಯಾಂಡೆಡ್ ಔಷಧಿಗಳಂತೆಯೇ ಇರಬಹುದು. ಜನೌಷಧಿ ಕೇಂದ್ರಗಳ ಮೂಲಕ ಇಂತಹ ಔಷಧಿಗಳನ್ನು ಕಡಿಮೆ ಬೆಲೆಗೆ ಒದಗಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಆದರೆ ಕ್ಯಾನ್ಸರ್ ಚಿಕಿತ್ಸೆಯಲ್ಲಿ ವೈದ್ಯರು ಸೂಚಿಸಿರುವ ಔಷಧಿಯನ್ನು ಸ್ವತಃ ಬದಲಾಯಿಸುವುದು ಸರಿಯಲ್ಲ. ಅದೇ ಔಷಧಿಯ ಸುರಕ್ಷಿತ ಮತ್ತು ಸೂಕ್ತ ಜೆನೆರಿಕ್ ಪರ್ಯಾಯ ಲಭ್ಯವಿದೆಯೇ ಎಂಬುದನ್ನು ಆಂಕಾಲಜಿಸ್ಟ್ ಅಥವಾ ಔಷಧ ತಜ್ಞರೊಂದಿಗೆ ಚರ್ಚಿಸಬೇಕು.

ಕ್ಯಾನ್ಸರ್ ಬಳಿಕ ಹಾರ್ಟ್‌, ಕಿಡ್ನಿ ಔಷಧಗಳ ದರ ನಿಯಂತ್ರಣಕ್ಕೆ ಚಿಂತನೆ: ರಾಜ್ಯದಿಂದ ಕೇಂದ್ರಕ್ಕೆ ಮನವಿ

ಆರೋಗ್ಯ ವಿಮೆ ಇದ್ದರೆ ಕ್ಯಾನ್ಸರ್ ಚಿಕಿತ್ಸೆ ಉಚಿತವೇ?

ಆರೋಗ್ಯ ವಿಮೆ ಕ್ಯಾನ್ಸರ್ ಚಿಕಿತ್ಸೆಯ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ವಿಮೆ ಇದೆ ಎಂದ ಮಾತ್ರಕ್ಕೆ ಚಿಕಿತ್ಸೆಯ ಪ್ರತಿಯೊಂದು ವೆಚ್ಚವೂ ಭರ್ತಿಯಾಗುತ್ತದೆ ಎಂದು ಹೇಳಲಾಗುವುದಿಲ್ಲ. ಕೆಲವು ವಿಮಾ ಪಾಲಿಸಿಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ, ಕೀಮೋಥೆರಪಿ, ರೇಡಿಯೇಷನ್ ಮತ್ತು ಆಸ್ಪತ್ರೆ ವೆಚ್ಚಗಳಿಗೆ ಕವರ್ ಇರಬಹುದು. ಆದರೆ ಪಾಲಿಸಿಯ ನಿಯಮಗಳ ಪ್ರಕಾರ ಕಾಯುವ ಅವಧಿ, ವಿಮಾ ಮೊತ್ತದ ಮಿತಿ, ಸಹಪಾವತಿ , ನೆಟ್‌ವರ್ಕ್ ಆಸ್ಪತ್ರೆಗಳು ಮತ್ತು ಹೊರರೋಗಿ ಚಿಕಿತ್ಸೆಯ ಕವರ್‌ನಲ್ಲಿ ವ್ಯತ್ಯಾಸವಿರುತ್ತದೆ. ಆದ್ದರಿಂದ ವಿಮೆ ಪಡೆಯುವಾಗ ಕ್ಯಾನ್ಸರ್ ಚಿಕಿತ್ಸೆ, ಕೀಮೋಥೆರಪಿ, ಇಮ್ಯುನೋಥೆರಪಿ, ಟಾರ್ಗೆಟೆಡ್ ಥೆರಪಿ, ಆಸ್ಪತ್ರೆಯ ಹೊರಗೆ ಪಡೆಯುವ ಔಷಧಿಗಳು ಮತ್ತು ಫಾಲೋಅಪ್ ಪರೀಕ್ಷೆಗಳಿಗೆ ಕವರ್ ಇದೆಯೇ ಎಂಬುದನ್ನು ಪರಿಶೀಲಿಸುವುದು ಮುಖ್ಯ.

ಬಡವರಿಗೆ ನೆರವಾಗುವ ಸರ್ಕಾರಿ ಆರೋಗ್ಯ ಯೋಜನೆಗಳು

ಆಯುಷ್ಮಾನ್ ಭಾರತ್ – ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (AB-PMJAY): ಅರ್ಹ ಕುಟುಂಬಗಳಿಗೆ ವರ್ಷಕ್ಕೆ 5 ಲಕ್ಷ ರೂ.ವರೆಗೆ ಆಸ್ಪತ್ರೆ ಆಧಾರಿತ ಚಿಕಿತ್ಸೆಗೆ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತದೆ. 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೂ ಆದಾಯದ ಮಿತಿಯಿಲ್ಲದೆ ವರ್ಷಕ್ಕೆ 5 ಲಕ್ಷದವರೆಗೆ ಆರೋಗ್ಯ ಕವರ್ ವಿಸ್ತರಿಸಲಾಗಿದೆ. ಆದರೆ ನಿರ್ದಿಷ್ಟ ಕ್ಯಾನ್ಸರ್ ಚಿಕಿತ್ಸೆ ಮತ್ತು ಔಷಧಿ ಯಾವ ಪ್ಯಾಕೇಜ್‌ನಲ್ಲಿ ಒಳಗೊಂಡಿದೆ ಎಂಬುದನ್ನು ಆಸ್ಪತ್ರೆ ಹಾಗೂ ಯೋಜನೆಯ ನಿಯಮಗಳ ಮೂಲಕ ಖಚಿತಪಡಿಸಿಕೊಳ್ಳಬೇಕು.

ಕರ್ನಾಟಕದ ಆರೋಗ್ಯ ಯೋಜನೆಗಳು

ರಾಜ್ಯದಲ್ಲಿ ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ನಿಗದಿತ ಚಿಕಿತ್ಸಾ ಪ್ಯಾಕೇಜ್‌ಗಳ ಮೂಲಕ ನೆರವು ಲಭ್ಯವಿದೆ. ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದ ಸೇವೆಗಳು, ಅರ್ಹತೆ ಮತ್ತು ಆಸ್ಪತ್ರೆಗಳ ವಿವರಗಳನ್ನು ಆಯಾ ಆಸ್ಪತ್ರೆಯ ಆರೋಗ್ಯ ಮಿತ್ರ ವಿಭಾಗ ಅಥವಾ ಆರೋಗ್ಯ ಕರ್ನಾಟಕದ ಅಧಿಕೃತ ವ್ಯವಸ್ಥೆಯಲ್ಲಿ ಪರಿಶೀಲಿಸಬಹುದು. ಯಶಸ್ವಿನಿ, ಸಂಜೀವಿನಿ ಆರೋಗ್ಯ ಯೋಜನೆಗಳೂ ಇವೆ. ಜನೌಷಧಿ ಕೇಂದ್ರಗಳು: ಕಡಿಮೆ ಬೆಲೆಯ ಜೆನೆರಿಕ್ ಔಷಧಿಗಳನ್ನು ಒದಗಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ ಜಾರಿಯಲ್ಲಿದೆ. ಕೆಲವು ಚಿಕಿತ್ಸಾ ವಿಭಾಗಗಳ ಔಷಧಿಗಳು ಇಲ್ಲಿ ಲಭ್ಯವಿರಬಹುದು. ಆದರೆ ಎಲ್ಲ ದುಬಾರಿ ಕ್ಯಾನ್ಸರ್ ಔಷಧಿಗಳೂ ಜನೌಷಧಿ ಕೇಂದ್ರಗಳಲ್ಲಿ ಲಭ್ಯವಿವೆ ಎಂದು ಭಾವಿಸಬಾರದು.

ಕ್ಯಾನ್ಸರ್ ಚಿಕಿತ್ಸೆಯಲ್ಲಿ ರೋಗಿಯ ಜೀವ ಉಳಿಸುವುದಷ್ಟೇ ಅಲ್ಲ, ಚಿಕಿತ್ಸೆ ನಿರಂತರವಾಗಿ ಮುಂದುವರಿಯುವಂತೆ ಆರ್ಥಿಕ ನೆರವು ಒದಗಿಸುವುದೂ ಮುಖ್ಯ. ಔಷಧಿಗಳ ಬೆಲೆ ಕಡಿಮೆಯಾದರೂ ತಪಾಸಣೆ, ಆಸ್ಪತ್ರೆ, ಪ್ರಯಾಣ, ವಸತಿ ಮತ್ತು ಚಿಕಿತ್ಸೆಯ ನಂತರದ ಆರೈಕೆಯ ವೆಚ್ಚ ಕುಟುಂಬಕ್ಕೆ ಹೊರೆಯಾಗಬಹುದು.

ಔಷಧಿ ಅಗ್ಗವಾದಾಕ್ಷಣ ಚಿಕಿತ್ಸೆ ಕೈಗೆಟುಕುವುದಿಲ್ಲ

ಕ್ಯಾನ್ಸರ್ ಚಿಕಿತ್ಸೆಯ ವೆಚ್ಚವನ್ನು ಕಡಿಮೆ ಮಾಡಲು ಔಷಧಿಗಳ ಬೆಲೆ ನಿಯಂತ್ರಣ ಅತ್ಯಗತ್ಯ. ಆದರೆ ಅದೊಂದೇ ಸಾಕಾಗುವುದಿಲ್ಲ. ಔಷಧಿಗಳ ಜೊತೆಗೆ ಸ್ಕ್ಯಾನಿಂಗ್, ರೋಗನಿರ್ಣಯ ಪರೀಕ್ಷೆಗಳು, ಆಸ್ಪತ್ರೆ ಶುಲ್ಕ, ಶಸ್ತ್ರಚಿಕಿತ್ಸೆ ಮತ್ತು ಚಿಕಿತ್ಸೆಯ ನಂತರದ ಆರೈಕೆಯ ವೆಚ್ಚವೂ ನಿಯಂತ್ರಣಕ್ಕೆ ಬರಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯಗಳು ಹೆಚ್ಚಬೇಕು. ಆರೋಗ್ಯ ವಿಮೆ ನಿಜವಾದ ಅಗತ್ಯದ ಸಮಯದಲ್ಲಿ ರೋಗಿಗಳಿಗೆ ನೆರವಾಗಬೇಕು. ಕ್ಯಾನ್ಸರ್ ವಿರುದ್ಧ ಹೋರಾಡುವಾಗ ರೋಗಿಯ ಕುಟುಂಬವು ಹಣದ ಚಿಂತೆಯಿಂದಲೇ ಚಿಕಿತ್ಸೆ ನಿಲ್ಲಿಸಬೇಕಾದ ಪರಿಸ್ಥಿತಿ ಬರಬಾರದು. ರೋಗಕ್ಕೆ ಚಿಕಿತ್ಸೆ ಸಿಗುವುದು ಮಾತ್ರವಲ್ಲ, ಆ ಚಿಕಿತ್ಸೆ ಬಡವರಿಗೂ ಕೈಗೆಟುಕುವಂತಾಗುವುದು ನಿಜವಾದ ಆರೋಗ್ಯ ಸಮಾನತೆ.

ಮಾಹಿತಿ : PIB, Jan Aushadhi

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More