AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

24 ಗಂಟೆಗಳ ಭೇಟಿ, 15,000 ಸಿಬ್ಬಂದಿ, ಹೋಟೆಲ್ ಮೇಲೆ ಹಾರಾಟ ನಿಷೇಧ; ಚೀನಾ ಅಧ್ಯಕ್ಷರಿಗಾಗಿ ಭದ್ರತಾ ಕೋಟೆಯಾದ ದೆಹಲಿ!

ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇಂದು (ಶನಿವಾರ) ನವದೆಹಲಿಗೆ ಆಗಮಿಸಿದ್ದಾರೆ. 7 ವರ್ಷಗಳ ನಂತರ ಕ್ಸಿ ಜಿನ್‌ಪಿಂಗ್ ಅವರು ಭಾರತಕ್ಕೆ ಭೇಟಿ ನೀಡಿದ್ದು, ಕೇವಲ ಒಂದು ದಿನದ ಪ್ರವಾಸಕ್ಕಾಗಿ ಇಡೀ ದೆಹಲಿಯಲ್ಲಿ ಬೃಹತ್ ಮಟ್ಟದ ಭದ್ರತಾ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ನೀಡಿರುವ ಭದ್ರತೆಯಂತೆಯೇ ಚೀನಾ ಅಧ್ಯಕ್ಷರಿಗೂ ದೆಹಲಿಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಆ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ.

24 ಗಂಟೆಗಳ ಭೇಟಿ, 15,000 ಸಿಬ್ಬಂದಿ, ಹೋಟೆಲ್ ಮೇಲೆ ಹಾರಾಟ ನಿಷೇಧ; ಚೀನಾ ಅಧ್ಯಕ್ಷರಿಗಾಗಿ ಭದ್ರತಾ ಕೋಟೆಯಾದ ದೆಹಲಿ!
ಕ್ಸಿ ಜಿನ್‌ಪಿಂಗ್ Image Credit source: PTI
ಸುಷ್ಮಾ ಚಕ್ರೆ
|

Updated on: Sep 12, 2026 | 6:16 PM

Share

ನವದೆಹಲಿ, ಸೆಪ್ಟೆಂಬರ್ 12: ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇಂದು ನವದೆಹಲಿಗೆ ಆಗಮಿಸಿದ್ದಾರೆ. ಕಳೆದ 7 ವರ್ಷಗಳಲ್ಲಿ ಕ್ಸಿ ಜಿನ್‌ಪಿಂಗ್ ಅವರು ಭಾರತಕ್ಕೆ ನೀಡಿದ ಮೊದಲ ಭೇಟಿ ಇದಾಗಿದ್ದು, ಕೇವಲ 24 ಗಂಟೆಗಳ ಕಾಲ ಅವರ ಪ್ರವಾಸ ನಿಗದಿಯಾಗಿದೆ. ಭಾನುವಾರ ಬೆಳಿಗ್ಗೆ 11 ಗಂಟೆಗೆ ಅವರು ಭಾರತದಿಂದ ಚೀನಾಗೆ ವಾಪಾಸ್ ತೆರಳಲಿದ್ದಾರೆ. ಚೀನಾ ಅಧ್ಯಕ್ಷರು ವಾಸ್ತವ್ಯ ಹೂಡುವ ದೆಹಲಿಯ ತಾಜ್ ಪ್ಯಾಲೇಸ್‌ ಹೋಟೆಲ್‌ನ ಎಲ್ಲಾ ಕೊಠಡಿಗಳನ್ನು ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಈ ಹೋಟೆಲ್ ಸುತ್ತಮುತ್ತಲಿನ ವಾಯುಪ್ರದೇಶವನ್ನು ‘ನೋ-ಫ್ಲೈ ಝೋನ್’ ಎಂದು ಘೋಷಿಸಲಾಗಿದೆ.

ಪರಮಾಣು, ವಿಕಿರಣ, ಹಾಗೂ ಜೈವಿಕ ಅಪಾಯಗಳನ್ನು ಪತ್ತೆಹಚ್ಚಲು ವಿಶೇಷ ಬಾಂಬ್ ಪತ್ತೆ ದಳ ಮತ್ತು ಭಯೋತ್ಪಾದನಾ ನಿಗ್ರಹ ಪಡೆಗಳನ್ನು ನಿಯೋಜಿಸಲಾಗಿದೆ. ಹೋಟೆಲ್ ಸುತ್ತಮುತ್ತಲಿನ ಭೂಗತ ಪೈಪ್‌ಲೈನ್‌ಗಳನ್ನೂ ತನಿಖೆಗೆ ಒಳಪಡಿಸಲಾಗಿದೆ.

ಹೋಟೆಲ್ ಸುತ್ತ ನೋ-ಫ್ಲೈ ಝೋನ್:

ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ವಾಸ್ತವ್ಯ ಹೂಡಿರುವ ನವದೆಹಲಿಯ ‘ತಾಜ್ ಪ್ಯಾಲೇಸ್’ ಹೋಟೆಲ್ ಸುತ್ತಮುತ್ತಲಿನ ವಾಯುಪ್ರದೇಶವನ್ನು ‘ನೋ-ಫ್ಲೈ ಝೋನ್’ ಎಂದು ಘೋಷಿಸಲಾಗಿದೆ. ಪರಮಾಣು, ಜೈವಿಕ ಹಾಗೂ ವಿಕಿರಣ ಭೀತಿಯನ್ನು ಪತ್ತೆಹಚ್ಚುವ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಹೋಟೆಲ್ ಮತ್ತು ಅದರ ಪೈಪ್‌ಲೈನ್‌ಗಳನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗಿದೆ.

ಇದನ್ನೂ ಓದಿ: ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್; ಚೀನಾ ಅಧ್ಯಕ್ಷರಿಗೆ ವಿಶೇಷತೆ ವಿವರಿಸಿದ ಮೋದಿ

15,000 ಸಿಬ್ಬಂದಿ ಹಾಗೂ 200 ಅರೆಸೇನಾ ತುಕಡಿಗಳು:

ದೆಹಲಿಯಲ್ಲಿ ಚೀನಾ ಅಧ್ಯಕ್ಷರಿಗೆ ಹೆಚ್ಚಿನ ಭದ್ರತೆ ಒದಗಿಸಲು 15,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ 200 ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಾಂತಿ ಪಥ ಮತ್ತು ಹೋಟೆಲ್ ಸಂಪರ್ಕಿಸುವ ಮಾರ್ಗಗಳಲ್ಲಿ 700ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, 5 ವಿಶೇಷ ಕಂಟ್ರೋಲ್ ರೂಮ್‌ಗಳ ಮೂಲಕ ಭದ್ರತೆಯನ್ನು ಪರಿಶೀಲಿಸಲಾಗುತ್ತಿದೆ.

ಸ್ವಂತ ಬೂಲೆಟ್‌ಪ್ರೂಫ್ ಕಾರು, ವಿಶೇಷ ವಿಮಾನ:

ಕ್ಸಿ ಜಿನ್‌ಪಿಂಗ್ ಅವರ ಅಧಿಕೃತ ‘ಹೊಂಗ್‌ಕಿ’ ಲಿಮೋಸಿನ್ ಬೂಲೆಟ್‌ಪ್ರೂಫ್ ಕಾರನ್ನು 10 ದಿನಗಳ ಮುಂಚಿತವಾಗಿಯೇ ಕಾರ್ಗೋ ವಿಮಾನದ ಮೂಲಕ ದೆಹಲಿಗೆ ತರಲಾಗಿತ್ತು. ಅಷ್ಟೇ ಅಲ್ಲದೆ, ಕ್ಷಿಪಣಿ ನಿಗ್ರಹ ವ್ಯವಸ್ಥೆ ಹೊಂದಿರುವ ಹಾಗೂ ಎನ್‌ಕ್ರಿಪ್ಟೆಡ್ ಸ್ಯಾಟಲೈಟ್ ಸಂಪರ್ಕವುಳ್ಳ ಅವರ ‘ಬೋಯಿಂಗ್ 747-8’ ಹಾರುವ ಕಮಾಂಡ್ ವಿಮಾನದಲ್ಲೇ ಅವರು ಭಾರತಕ್ಕೆ ಆಗಮಿಸಿದ್ದಾರೆ. ಇದು ಕೇವಲ ವಿಮಾನವಲ್ಲದೆ, ಅತ್ಯಾಧುನಿಕ ‘ಮೊಬೈಲ್ ಕಮಾಂಡ್ ಸೆಂಟರ್’ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಚೀನಾದ ಸೇನಾ ಕಮಾಂಡರ್‌ಗಳೊಂದಿಗೆ ಸಂಪರ್ಕ ಸಾಧಿಸಲು ಎನ್‌ಕ್ರಿಪ್ಟೆಡ್ ವ್ಯವಸ್ಥೆ, ಕ್ಷಿಪಣಿ ನಿಗ್ರಹ ವ್ಯವಸ್ಥೆ ಮತ್ತು ಎಲೆಕ್ಟ್ರಾನಿಕ್ಸ್ ಸುರಕ್ಷತೆಗೆ ಇಎಂಪಿ ಕವರ್ ಅನ್ನು ಒಳಗೊಂಡಿದೆ.

ಇದನ್ನೂ ಓದಿ: ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಷಿ ಜಿನ್‌ಪಿಂಗ್

ಇಂದು ಸಂಜೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕ್ಸಿ ಜಿನ್‌ಪಿಂಗ್ ನಡುವೆ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆ ನಿಗದಿಯಾಗಿದ್ದು, ಉಭಯ ದೇಶಗಳ ನಡುವಿನ ವ್ಯಾಪಾರ ಮತ್ತು ಹೂಡಿಕೆ ಬಾಂಧವ್ಯವನ್ನು ಮರುಸ್ಥಾಪಿಸುವ ಕುರಿತು ಪ್ರಮುಖ ಚರ್ಚೆಗಳು ನಡೆಯುವ ನಿರೀಕ್ಷೆಯಿದೆ. ಚೀನಾದ ಹಿರಿಯ ಸರ್ಕಾರಿ ಅಧಿಕಾರಿಗಳು ಹಾಗೂ ಪ್ರಮುಖ ಉದ್ಯಮಿಗಳನ್ನೊಳಗೊಂಡ ಹೈ-ಪ್ರೊಫೈಲ್ ನಿಯೋಗ ಅಧ್ಯಕ್ಷರ ಜೊತೆಗಿರಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More