- Kannada News Photo gallery Bidar Gupta Lingeshwara Temple miracle water from nandi mouth kannada news
ಬೀದರ್ ಗುಪ್ತಲಿಂಗೇಶ್ವರ ದೇವಾಲಯ: 5 ವರ್ಷದ ಬಳಿಕ ಜಲಪಾತಕ್ಕೆ ಸೃಷ್ಟಿ, ನಂದಿ ಬಾಯಿಂದ ಹರಿಯುವ ನೀರಿಗಿದೆ ಔಷಧಿ ಗುಣ
ಐತಿಹಾಸಿಕ ಗಾಯಮುಖ ಗುಪ್ತಲಿಂಗ ದೇವಸ್ಥಾನ ತನ್ನದೆಯಾದ ಇತಿಹಾಸ ಹೊಂದಿದೆ. ಕಾಡಿನ ಅಂಚಿನಲ್ಲಿರುವ ಈ ದೇವಸ್ಥಾನ ಹತ್ತಾರು ಪವಾಡಗಳಿಗೂ ಸಾಕ್ಷಿಯಾಗಿದೆ. ಎಂಥಹ ಬೇಸಿಗೆಯಲ್ಲಿಯೂ ನಂದಿಯ ಬಾಯಿಂದ ನೀರು ಬಿಳುವುದು ಇಲ್ಲಿ ನಿಂತಿಲ್ಲ. ಈಗ ಮಳೆಯಿಂದಾಗಿ ಶಿವಲಿಂಗದ ಪಕ್ಕದಲ್ಲಿಯೇ ಮಿನಿ ಜೋಗ ಜಲಪಾತವೊಂದು ಸೃಷ್ಟಿಯಾಗಿದ್ದು ಭಕ್ತರನ್ನ ತನ್ನತ್ತ ಸೆಳೆಯುತ್ತಿದೆ. ಐವತ್ತು ಅಡಿ ಎತ್ತರದಿಂದ ಬೀಳುವ ನೀರಿನಲ್ಲಿ ಮಿಂದೆದ್ದು, ಪೋಟೋ ಕ್ಲಿಕ್ಕಿಸಿಕೊಂಡು ಖಷಿ ಪಡುತ್ತಿದ್ದಾರೆ.
Updated on: Sep 17, 2024 | 10:44 AM

ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಖಾನಾಪುರ ಗ್ರಾಮದ ಬಳಿಯ ಬೆಟ್ಟದಲ್ಲಿ ಸುಕ್ಷೇತ್ರ ಗಾಯಮುಖ ಗುಪ್ತಲಿಂಗೇಶ್ವರ ದೇವಾಲಯವಿದೆ. ಈ ದೇವಾಲಯ ಐದಾರು ಶತಮಾನದಷ್ಟು ಪುರಾತನವಾಗಿದ್ದು ಈ ಗುಪ್ತಲಿಂಗವಿರುವ ಬೆಟ್ಟ ಹಲವಾರು ವಿಸ್ಮಯಗಳನ್ನೊಳಗೊಂಡಿದೆ

ಪಕ್ಕದ ಆಂಧ್ರ, ತೆಲಂಗಾಣ ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಇಲ್ಲಿಗೆ ಭಕ್ತರು ಬರುತ್ತಾರೆ. ಅಮಾವಾಸ್ಯೆ ಹಾಗೂ ಹುಣ್ಣಿಮೆಯಂದು ಸಾಕಷ್ಟು ಪ್ರಮಾಣಲ್ಲಿ ಭಕ್ತರು ಇಲ್ಲಿಗೆ ಬಂದು ದೇವರ ದರ್ಶನ ಪಡೆದು ಹೋಗುತ್ತಾರೆ. ಇನ್ನೂ ಗುಪ್ತಲಿಂಗ ದೇವಸ್ಥಾನದ ಸುತ್ತಮುತ್ತ ಸಾಕಷ್ಟು ಪ್ರಮಾಣದಲ್ಲಿ ಅರಣ್ಯ ಪ್ರದೇಶವಿದ್ದು ದೇವಸ್ಥಾನದಲ್ಲಿ ನೀರಿನ ಝರಿ ಇದುವರೆಗೂ ಬತ್ತಿರುವ ಉದಾಹರಣೆಗಳೇ ಇಲ್ಲ.

ಇನ್ನೂ ಜಿಲ್ಲೆಯಲ್ಲಿ ಈ ವರ್ಷ ಮಳೆ ಉತ್ತಮವಾಗಿದ್ದು ಗಾಯಮುಖಿ ದೇವಸ್ಥಾನದ ಗುಪ್ತಲಿಂಗದ ಕೂಗಳೆತೆಯಲ್ಲಿಯೇ ಮಿನಿ ಜಲಪಾತವೊಂದು ಸೃಷ್ಟಿಯಾಗಿದೆ. ಇಲ್ಲಿಗೆ ಬರುವ ಭಕ್ತರು ಈ ಜಲಪಾತವನ್ನ ನೋಡಿ ಖುಷಿ ಪಡುತ್ತಿದ್ದಾರೆ. ಅಷ್ಟೇ ಅಲ್ಲದೆ ಐವತ್ತು ಅಡಿ ಎತ್ತರದಿಂದ ಬೀಳುವ ನೀರಿನಲ್ಲಿ ಸ್ನಾನ ಮಾಡಿ ಸೆಲ್ಪಿ ಕ್ಲಿಕ್ಕಿಸಿಕೊಂಡು ಫೋಟೋ ತೆಗೆಸಿಕೊಂಡು ಖುಷಿ ಪಡುತ್ತಿದ್ದಾರೆ.

ಇನ್ನೂ ಈ ಮಿನಿ ಜಲಪಾತ ಐದು ವರ್ಷದ ಬಳಿಕ ಇದೆ ಮೊದಲ ಸಲ ಇಲ್ಲಿಂದ ನೀರು ಬರುತ್ತಿವೆ. ಇದರಿಂದಾಗಿ ಇಲ್ಲಿಗೆ ಬರುವ ಭಕ್ತರಿಗೂ ಕೂಡ ಇದು ಸಹಜವಾಗಿಯೇ ಖುಷಿ ಕೊಡುತ್ತಿದೆ. ಇನ್ನೂ ಈ ದೇವಸ್ಥಾನದ ಬಗ್ಗೆ ಹೇಳೋದಾದರೆ ಈ ದೇವಸ್ಥಾನ ಹತ್ತಾರು ಅಚ್ಚರಿಗಳನ್ನ ಸೃಷ್ಟಿಸಿಕೊಂಡಿದೆ.

ಬೇಸಿಗೆ ಬಂದರೆ ಸಾಕು ಬೀದರ್ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವಾಡುತ್ತದೆ. ಬಾವಿ, ಬೋರ್ ವೆಲ್ ನಲ್ಲಿಯೂ ನೀರು ಖಾಲಿಯಾಗಿ ಜನ, ಪ್ರಾಣಿ, ಪಕ್ಷಿಗಳು ನೀರಿಗಾಗಿ ಹಾಹಾಕಾರ ಪಡುತ್ತವೆ. ಆದರೇ ಆ ದೇವಸ್ಥಾನದ ಬೆಟ್ಟದಲ್ಲಿ ಮಾತ್ರ ನೀರಿನ ಸೇಲೆ ನಿರಂತರವಾಗಿದ್ದು ಶತಮಾನಗಳಿಂದ ಎಂದೂ ಕೂಡಾ ಬೆಟ್ಟದಿಂದ ನೀರು ಬರುವುದು ನಿಂತಿಲ್ಲ. ಯಾವ ಭಾಗದಿಂದ ನೀರು ಹರಿದು ಬರುತ್ತದೆಂಬುವುದು ಮಾತ್ರ ಇಲ್ಲಿ ನಿಗೂಢವಾಗಿದೆ.

ಗುಹೆಯಲ್ಲಿರುವ ಶಿವಲಿಂಗದ ಮೂಲಕವೂ ನೀರು ಹರಿದು ಬರುವುದು ಕೂಡ ಇಲ್ಲಿನ ವಿಶೇಷವಾಗಿದೆ. ಇಲ್ಲಿನ ನೀರಿನ ಝರಿ ದಿನದ 24 ಗಂಟೆಯೂ ನೀರು ಧುಮ್ಮಿಕ್ಕುತ್ತದೆ. ಇಲ್ಲಿ ಬೆಟ್ಟದ ಅಂಚಿನಿಂದ ಬರುವ ನೀರು ನಂದಿ ಬಾಯಿಯಿಂದ ಕಿರು ಕಲ್ಯಾಣಿಗೆ ಬಂದು ಬೀಳುತ್ತದೆ.

ನೀರಿನ ಹರಿವು ಸದಾ ಒಂದೇ ಸಮನಾಗಿರುತ್ತದೆ. ಶುದ್ಧ ಕುಡಿಯುವ ನೀರಿನ ಘಟಕಗಳು ಇರದ ಕಾಲದಲ್ಲಿ ಹೆಚ್ಚಿನವರು ವಾಹನಗಳಲ್ಲಿ ಸುತ್ತಮುತ್ತಲಿನ ಗ್ರಾಮದ ಜನರು ಇಲ್ಲಿಗೆ ಬಂದು ನೀರು ತುಂಬಿಕೊಂಡು ಹೋಗುತ್ತಿದ್ದರು ಎಂದು ಇಂದಿನ ಕಾಲದ ಹಿರಿಯರು ಹೇಳುತ್ತಾರೆ.

ಇದೀಗ ಮನೆ ಮನೆಗೆ ನೀರು ಬರುತ್ತಿರುವುದರಿಂದ ದೇವಸ್ಥಾನದಿಂದ ನೀರು ತೆಗೆಕೊಂಡು ಹೋಗುವುದು ಈಗ ನಿಂತಿದೆ. ದೇವಸ್ಥಾನಕ್ಕೆ ಬರುವವರು, ಇಲ್ಲಿಂದ ನೀರು ತೆಗೆದುಕೊಂಡು ಹೋಗುತ್ತಾರೆ. ಪ್ರಾಣಿ, ಪಕ್ಷಿಗಳ ನೀರಿನ ದಾಹ ಕೂಡ ಈ ಸ್ಥಳ ತಣಿಸುತ್ತಿದೆ. ಇಲ್ಲಿಗೆ ಬರುವ ಭಕ್ತರು ಈ ನೀರಿನಲ್ಲಿ ಸ್ನಾನ ಮಾಡುತ್ತಾರೆ.

ಜೊತೆಗೆ ನೀರನ್ನ ಔಷಧಿ ರೂಪದಲ್ಲಿಯೂ ಪೂಜಿಸಲಾಗುತ್ತೆ. ಪ್ರತಿನಿತ್ಯ ಈ ನೀರನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿರುವ ಖಾಯಿಲೆಗಳು ವಾಸಿಯಾಗುತ್ತದೆ. ಜೊತೆಗೆ ಇಲ್ಲಿನ ನೀರು ಚರ್ಮರೋಗದ ನಿವಾರಣೆಗೆ ಈ ನೀರು ರಾಮಬಾಣದಂತೆ ಕೆಲಸ ಮಾಡುತ್ತದೆಂಬ ಭಾವನೆ ಇಲ್ಲಿಗೆ ಬರುವ ಭಕ್ತರದ್ದು. ಈ ದೇವಸ್ಥಾನಕ್ಕೆ ಬಂದು ನಾವು ಏನು ಬೇಡಿಕೊಂಡರು ಕೂಡಾ ಆ ಕೆಲಸ ನಮ್ಮಂತೆ ಆಗುತ್ತದೆಂದು ಇಲ್ಲಿನ ಭಕ್ತರು ಹೇಳುತ್ತಿದ್ದಾರೆ.

ಇನ್ನೂ ಬೆಸಿಗೆ, ಮಳೆಗಾಲ, ಚಳಿಗಾಲ ಯಾವುದೆ ಋತುವಿನಲ್ಲಿಯೂ ಇಲ್ಲಿಗೆ ಬಂದರೆ ಸಾಕು ಇಲ್ಲಿ ನೀರು ನಿರಂತರವಾಗಿ ಹರಿಯುತ್ತಲೇ ಇರುತ್ತದೆ. ಹೀಗಾಗಿ ಈ ದೇವಾಲಯ ಭಕ್ತರನ್ನ ಸೆಳೆಯುತ್ತಿದೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಗುಪ್ತಲಿಂಗನ ದರ್ಶನ ಪಡೆಯಲು ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.

ಇಲ್ಲಿನ ಐತಿಹಾಸಿಕ ದೇಸ್ಥಾನದ ನೀರು ಇಲ್ಲಿನ ಭಕ್ತರನ್ನ ಸೇಳೆಯುತ್ತಿರುವುದರ ಜೊತೆಗೆ ಭಕ್ತರ ಅನೇಕ ರೋಗಗಳನ್ನ ರಾಮಬಾಣದಂತೆ ಕೆಲಸ ಮಾಡುತ್ತಿದೆ ಎಂದು ಇಲ್ಲಿಗೆ ಬರುವ ಭಕ್ತರು ಹೇಳುತ್ತಿದ್ದಾರೆ. ಆದರೇ ಈ ದೇವಸ್ಥಾನ ಇಲ್ಲಿದೆ ಅನ್ನೋದು ಅದೇಷ್ಟೋ ಭಕ್ತರಿಗೆ ಗೊತ್ತಿಲ್ಲ ಅನ್ನೋದು ಬೇಸರದ ವಿಚಾರವಾಗಿದೆ. ಇದರ ಜೊತೆಗೆ ಸರಕಾರವೂ ಕೂಡಾ ಇಂತಹ ಐತಿಹಾಸಿಕ ದೇವಸ್ಥಾನವನ್ನ ಗುರುತಿಸಿ ದೇವಸ್ಥಾನದ ಜಿರ್ಣೋದ್ದಾರ ಮಾಡಿಬೇಕಾಗಿದೆ.



















