AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: 2-0 ಇರೋದ್ನ 4-0 ಮಾಡ್ತೀನಿ; ಸಿಎಸ್​ಕೆಗೆ ಸವಾಲು ಹಾಕಿದ ವೈಭವ್ ಸೂರ್ಯವಂಶಿ

CSK vs RR IPL 2026: ಐಪಿಎಲ್ 2026 ಮಾರ್ಚ್ 30 ರಂದು ನಡೆಯಲಿರುವ CSK vs RR ಪಂದ್ಯಕ್ಕೂ ಮುನ್ನ, ರಾಜಸ್ಥಾನ್ ರಾಯಲ್ಸ್‌ನ 14 ವರ್ಷದ ವೈಭವ್ ಸೂರ್ಯವಂಶಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಸವಾಲು ಹಾಕಿದ್ದಾರೆ. 'ಧೋನಿ ತಂಡವನ್ನು 4-0 ಅಂತರದಿಂದ ಸೋಲಿಸುತ್ತೇವೆ' ಎಂದು ವೈಭವ್ ಘೋಷಿಸಿದ್ದಾರೆ. ಕಳೆದ ಐಪಿಎಲ್‌ನಲ್ಲಿ ಸಿಎಸ್‌ಕೆಯನ್ನು ಎರಡು ಬಾರಿ ಸೋಲಿಸಿದ್ದ ಆರ್‌ಆರ್, ಈ ಬಾರಿಯೂ ಮೇಲುಗೈ ಸಾಧಿಸುವ ವಿಶ್ವಾಸದಲ್ಲಿದೆ. ಈ ಯುವ ಆಟಗಾರನ ಸವಾಲು ಪಂದ್ಯದ ಕುತೂಹಲ ಹೆಚ್ಚಿಸಿದೆ.

IPL 2026: 2-0 ಇರೋದ್ನ 4-0 ಮಾಡ್ತೀನಿ; ಸಿಎಸ್​ಕೆಗೆ ಸವಾಲು ಹಾಕಿದ ವೈಭವ್ ಸೂರ್ಯವಂಶಿ
Vaibhav Suryavanshi
ಪೃಥ್ವಿಶಂಕರ
|

Updated on: Mar 25, 2026 | 10:40 PM

Share

2026 ರ ಐಪಿಎಲ್ (IPL 2026) ಮಾರ್ಚ್ 28 ರಂದು ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ (RCB vs SRH) ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಈ ಪಂದ್ಯ ಮುಗಿದ ಒಂದು ದಿನದ ನಂತರ ಅಂದರೆ ಮಾರ್ಚ್​ 30 ರಂದು ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ (CSK vs RR) ತಂಡಗಳು ಮುಖಾಮುಖಿಯಾಗಲಿವೆ. ಆದರೆ ಈ ಪಂದ್ಯಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆರಂಭಿಕ ಆಟಗಾರ 14 ವರ್ಷದ ವೈಭವ್ ಸೂರ್ಯವಂಶಿ (Vaibhav Suryavanshi), ಧೋನಿ ತಂಡ ಸಿಎಸ್‌ಕೆಗೆ ಮುಕ್ತ ಸವಾಲು ಹಾಕಿದ್ದು, ಈ ಆವೃತ್ತಿಯಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸುವುದಾಗಿ ಭರವಸೆ ನೀಡಿದ್ದಾರೆ.

ಸಿಎಸ್‌ಕೆಗೆ ಸವಾಲು ಹಾಕಿದ ವೈಭವ್

ವಾಸ್ತವವಾಗಿ ಕೆಲವು ದಿನಗಳ ಹಿಂದೆ ನಡೆದಿದ್ದ ಬಿಸಿಸಿಐ ನಮನ್ ಪ್ರಶಸ್ತಿ ಸಮಾರಂಭದಲ್ಲಿ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುವ ವೈಭವ್ ಸೂರ್ಯವಂಶಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಆಯುಷ್ ಮ್ಹಾತ್ರೆ ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಇಬ್ಬರು ಅಂಡರ್ 19 ಕ್ರಿಕೆಟ್‌ನಲ್ಲಿ ಒಟ್ಟಿಗೆ ಆಡಿದ್ದರಿಂದ ಇಬ್ಬರ ಮಧ್ಯೆ ಆತ್ಮೀಯತೆ ಹೆಚ್ಚಿದೆ. ಹೀಗಾಗಿ ಆ ಕಾರ್ಯಕ್ರಮದಲ್ಲಿ, ವೈಭವ್ ಸೂರ್ಯವಂಶಿ, ಸಿಎಸ್​ಕೆ ಪರ ಆಡುವ ಆಯುಷ್ ಮ್ಹಾತ್ರೆಗೆ ಸವಾಲೊಂದನ್ನು ಹಾಕಿದ್ದರು.

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೇರಿದಾಗಿನಿಂದ ಸಿಎಸ್‌ಕೆ ಎರಡು ಬಾರಿ ಸೋತಿದೆ. ಈ ಬಾರಿ ಅದು 4-0 ಅಂತರಕ್ಕೇರಲಿದೆ ಎಂದು ವೈಭವ್ ಸೂರ್ಯವಂಶಿ, ಆಯುಷ್ ಮ್ಹಾತ್ರೆ ಅವರಿಗೆ ತಿಳಿಸಿದರು. ಸೂರ್ಯವಂಶಿ ಹೇಳಿಕೆಯ ಅರ್ಥ, ಐಪಿಎಲ್ 2025 ರಲ್ಲಿ ಸಿಎಸ್‌ಕೆ, ಆರ್‌ಆರ್ ವಿರುದ್ಧ ಆಡಿದ್ದ ಎರಡೂ ಪಂದ್ಯಗಳನ್ನು ಸೋತಂತೆ, ಈ ಬಾರಿಯೂ ಸೋಲಲಿದೆ ಎಂದಿದ್ದಾರೆ. ಐಪಿಎಲ್ ಗುಂಪು ಹಂತದಲ್ಲಿ ಪ್ರತಿಯೊಂದು ತಂಡವು ಪರಸ್ಪರ ಎರಡು ಬಾರಿ ಮುಖಾಮುಖಿಯಾಗಲಿದ್ದು, ಈ ಎರಡೂ ಪಂದ್ಯಗಳಲ್ಲಿ ಸಿಎಸ್​ಕೆ ತಂಡವನ್ನು ಸೋಲಿಸುವುದಾಗಿ ವೈಭವ್ ಸೂರ್ಯವಂಶಿ ತಮಾಷೆಯಾಗಿ ಹೇಳಿದ್ದಾರೆ.

ಐಪಿಎಲ್​ನಲ್ಲಿ 30 ಲಕ್ಷಕ್ಕೆ ಮಾರಾಟವಾಗಿದ್ದವ ಈಗ 16 ಸಾವಿರ ಕೋಟಿ ಮೌಲ್ಯದ ಆರ್​ಸಿಬಿಗೆ ಅಧ್ಯಕ್ಷ

ಕಳೆದ ಮುಖಾಮುಖಿ ಹೇಗಿತ್ತು?

ಐಪಿಎಲ್ 2025 ರಲ್ಲಿ ಆರ್‌ಆರ್ ಮತ್ತು ಸಿಎಸ್‌ಕೆ ನಡುವಿನ ಮೊದಲ ಮುಖಾಮುಖಿ ಮಾರ್ಚ್ 30 ರಂದು ನಡೆದಿತ್ತು ಇದರಲ್ಲಿ ರಾಜಸ್ಥಾನ್, ಚೆನ್ನೈ ತಂಡವನ್ನು 6 ರನ್‌ಗಳಿಂದ ಸೋಲಿಸಿತ್ತು. ವೈಭವ್ ಸೂರ್ಯವಂಶಿ ಆ ಪಂದ್ಯದಲ್ಲಿ ಆಡದಿದ್ದರೂ, ರಾಜಸ್ಥಾನ ತಂಡದ ಭಾಗವಾಗಿದ್ದರು. ಉಭಯ ತಂಡಗಳ ಎರಡನೇ ಮುಖಾಮುಖಿ ಮೇ 20 ರಂದು ನಡೆದಿತ್ತು. ಈ ಪಂದ್ಯದಲ್ಲೂ ರಾಜಸ್ಥಾನ್, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ, ವೈಭವ್ ಸೂರ್ಯವಂಶಿ 33 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 57 ರನ್​ಗಳ ಇನ್ನಿಂಗ್ಸ್‌ ಆಡಿದ್ದರು. ಇದೀಗ ಲೀಗ್ ಆರಂಭಕ್ಕೂ ಮುನ್ನ ಈ ರೀತಿಯ ಹೇಳಿಕೆ ನೀಡಿರುವ ವೈಭವ್, ಪಂದ್ಯದ ದಿನ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us