AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಕ್ವಿಂಟನ್ ಡಿಕಾಕ್!

Quinton de Kock: ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೂಲಕ ಸೌತ್ ಆಫ್ರಿಕಾದ ಸ್ಪೋಟಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಟೂರ್ನಿಯ 23ನೇ ಪಂದ್ಯದಲ್ಲಿ ಬಾರ್ಬಡೋಸ್ ಟ್ರೈಡೆಂಟ್ಸ್ ಪರ ಕಣಕ್ಕಿಳಿದು ಭರ್ಜರಿ ಸೆಂಚುರಿ ಬಾರಿಸಿದ ಅವರು, ಟಿ20 ಕ್ರಿಕೆಟ್ ಇತಿಹಾಸದಲ್ಲೇ ಈ ಸಾಧನೆ ಮಾಡಿದ ಮೊದಲ ವಿಕೆಟ್ ಕೀಪರ್ ಬ್ಯಾಟರ್ ಎನಿಸಿಕೊಂಡಿದ್ದಾರೆ.

ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಕ್ವಿಂಟನ್ ಡಿಕಾಕ್!
Quinton De KockImage Credit source: CPL
ಝಾಹಿರ್ ಯೂಸುಫ್
|

Updated on: Sep 02, 2026 | 11:35 AM

Share

ಕೆರಿಬಿಯನ್ ಪ್ರೀಮಿಯರ್ ಲೀಗ್​ನ 23ನೇ ಪಂದ್ಯದಲ್ಲಿ ಕ್ವಿಂಟನ್ ಡಿಕಾಕ್ ಭರ್ಜರಿ ಸೆಂಚುರಿ ಸಿಡಿಸಿದ್ದಾರೆ. ಈ ಶತಕದೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ 10 ಶತಕ ಬಾರಿಸಿದ ಮೊದಲ ವಿಕೆಟ್ ಕೀಪರ್ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಡಿಕಾಕ್ ತಮ್ಮದಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಚುಟುಕು ಕ್ರಿಕೆಟ್​ನಲ್ಲಿ ಎರಡಂಕಿ ಶತಕ ಸಿಡಿಸಿದ 5ನೇ ಬ್ಯಾಟ್ಸ್​​ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಭರ್ಜರಿ ಸೆಂಚುರಿ: ಬೃಹತ್ ಮೊತ್ತ!

ಸೇಂಟ್ ಕಿಟ್ಸ್​ನ ವಾರ್ನರ್ ಪಾರ್ಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ಮತ್ತು ಬಾರ್ಬಡೋಸ್ ಟ್ರೈಡೆಂಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ಬೌಲಿಂಗ್ ಆಯ್ದುಕೊಂಡಿತು.

ಅದರಂತೆ ಮೊದಲು ಬ್ಯಾಟ್ ಮಾಡಿದ ಬಾರ್ಬಡೋಸ್ ಟ್ರೈಡೆಂಟ್ಸ್ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕ್ವಿಂಟನ್ ಡಿಕಾಕ್ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಡಿಕಾಕ್ ಕೇವಲ 54 ಎಸೆತಗಳಲ್ಲಿ ಸೆಂಚುರಿ ಪೂರೈಸಿದರು.

ಅಂತಿಮವಾಗಿ 57 ಎಸೆತಗಳನ್ನು ಎದುರಿಸಿದ ಕ್ವಿಂಟನ್ ಡಿಕಾಕ್ 6 ಸಿಕ್ಸರ್ ಹಾಗೂ 11 ಫೋರ್​ಗಳೊಂದಿಗೆ 106 ರನ್ ಬಾರಿಸಿದರು. ಈ ಸೆಂಚುರಿ ನೆರವಿನೊಂದಿಗೆ ಬಾರ್ಬಡೋಸ್ ಟ್ರೈಡೆಂಟ್ಸ್ ತಂಡವು 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 217 ರನ್ ಕಲೆಹಾಕಿತು.

ಚಾರ್ಲ್ಸ್​ ಸಿಡಿಲಬ್ಬರ:

218 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ತಂಡಕ್ಕೆ ಆರಂಭಿಕ ದಾಂಡಿಗ ಜಾನ್ಸನ್ ಚಾರ್ಲ್ಸ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಕೇವಲ 45 ಎಸೆತಗಳನ್ನು ಎದುರಿಸಿದ ಚಾರ್ಲ್ಸ್ 7 ಸಿಕ್ಸ್ ಹಾಗೂ 6 ಫೋರ್​ಗಳೊಮದಿಗೆ 78 ರನ್ ಬಾರಿಸಿದರು.

ಇನ್ನು ಅಂತಿಮ ಹಂತದಲ್ಲಿ ಆ್ಯಂಡ್ರೆ ಫ್ಲೆಚರ್ ಕೇವಲ 8 ಎಸೆತಗಳಲ್ಲಿ 22 ರನ್ ಚಚ್ಚುವ ಮೂಲಕ 19.1 ಓವರ್​ಗಳಲ್ಲಿ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ಪಡೆ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಇದನ್ನೂ ಓದಿ: ರೋಹಿತ್ ಶರ್ಮಾ ಹೆಗಲಿಗೆ ಮುಂಬೈ ಇಂಡಿಯನ್ಸ್ ‘ನಾಯಕ’ನ ಆಯ್ಕೆ!

ಭರ್ಜರಿ ದಾಖಲೆ:

ಈ ಪಂದ್ಯದಲ್ಲಿ ಸಿಡಿಸಿದ ಭರ್ಜರಿ ಶತಕದೊಂದಿಗೆ ಕ್ವಿಂಟನ್ ಡಿಕಾಕ್ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಸೆಂಚುರಿ ಸಿಡಿಸಿದ ವಿಕೆಟ್ ಕೀಪರ್ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ಡೇವಿಡ್ ವಾರ್ನರ್ ಹಾಗೂ ಬಾಬರ್ ಆಝಂ ಬಳಿಕ ಟಿ20 ಕ್ರಿಕೆಟ್​ನಲ್ಲಿ 10 ಶತಕ ಸಿಡಿಸಿದ 5ನೇ ಬ್ಯಾಟ್ಸ್​ಮನ್ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಬ್ಯಾಟರ್​ಗಳ ಪಟ್ಟಿ ಈ ಕೆಳಗಿನಂತಿದೆ…

ಬ್ಯಾಟರ್ ದೇಶ ಟಿ20 ಶತಕಗಳು
ಕ್ರಿಸ್ ಗೇಲ್ ವೆಸ್ಟ್ ಇಂಡೀಸ್ 22
ಬಾಬರ್ ಆಝಂ ಪಾಕಿಸ್ತಾನ್ 13
ಕ್ವಿಂಟನ್ ಡಿ ಕಾಕ್ ಸೌತ್ ಆಫ್ರಿಕಾ 10
ವಿರಾಟ್ ಕೊಹ್ಲಿ ಭಾರತ 10
ಡೇವಿಡ್ ವಾರ್ನರ್ ಆಸ್ಟ್ರೇಲಿಯಾ 10
Follow Us