Special Olympics Bharat: ಬುದ್ಧಿಮಾಂದ್ಯ ಮಕ್ಕಳಿಗಾಗಿ ‘ವಿಶೇಷ ಸಾಮರಸ್ಯ’ ಕಾರ್ಯಕ್ರಮ
Special Olympics Bharat: ವಿಶೇಷ ಒಲಿಂಪಿಕ್ಸ್ ಭಾರತ್, ಬುದ್ಧಿಮಾಂದ್ಯ ಮಕ್ಕಳ ಸಾಮರ್ಥ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅವರ ಸಾಮರ್ಥ್ಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದು ಹೇಗೆ ಎಂಬುದರ ಕುರಿತು ಅರಿವು ಮೂಡಿಸಲು "ವಿಶೇಷ ಸಾಮರಸ್ಯ" ಕಾರ್ಯಕ್ರಮವನ್ನು ಆಯೋಜಿಸಿತು. ಖ್ಯಾತ ಗಾಯಕ ಅಮಿತ್ ಕುಮಾರ್ ಸೇರಿದಂತೆ ಹಲವು ಕಲಾವಿದರು ಇದರಲ್ಲಿ ಭಾಗವಹಿಸಿದ್ದರು.
ಬುದ್ಧಿಮಾಂದ್ಯ ಮಕ್ಕಳ ಕ್ರೀಡೆಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ರಾಷ್ಟ್ರೀಯ ಕ್ರೀಡಾ ಒಕ್ಕೂಟ (ಎನ್‌ಎಸ್‌ಎಫ್) ವಿಶೇಷ ಒಲಿಂಪಿಕ್ಸ್ ಭಾರತ, ಈ ಮಕ್ಕಳ ಸಾಮರ್ಥ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅವರ ಸಾಮರ್ಥ್ಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದು ಹೇಗೆ ಎಂಬುದರ ಕುರಿತು ಅರಿವು ಮೂಡಿಸಲು ಭಾನುವಾರದಂದು ‘ವಿಶೇಷ ಸಾಮರಸ್ಯ’ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಅಮಿತ್ ಕುಮಾರ್ ಮತ್ತು ಇತರ ಖ್ಯಾತ ಕಲಾವಿದರೊಂದಿಗೆ ಹದಿನೈದು ಬುದ್ಧಿಮಾಂದ್ಯ ಮಕ್ಕಳು ಭಾಗವಹಿಸಿದ್ದರು.
ನವ ದೆಹಲಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮ
ನವ ದೆಹಲಿಯ ತ್ಯಾಗರಾಜ್ ಕ್ರೀಡಾಂಗಣದಲ್ಲಿ ನವೆಂಬರ್ 17 ರ ಭಾನುವಾರದಂದು ನಡೆದ ಈ ಕಾರ್ಯಕ್ರಮವು ಬುದ್ಧಿಮಾಂದ್ಯ ಮಕ್ಕಳ ಉತ್ಸಾಹ ಮತ್ತು ಪ್ರತಿಭೆಯನ್ನು ಕೊಂಡಾಡುವ ಸಂಗೀತ ಕಚೇರಿಯನ್ನು ಸಹ ಒಳಗೊಂಡಿತ್ತು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ಮನೋಜ್ ತಿವಾರಿ ಮತ್ತು ವಿಶೇಷ ಒಲಿಂಪಿಕ್ಸ್ ಭಾರತ ಅಧ್ಯಕ್ಷೆ ಮಲ್ಲಿಕಾ ನಡ್ಡಾ ಕೂಡ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಲ್ಲಿಕಾ ನಡ್ಡಾ, ‘ಈ ಕಾರ್ಯಕ್ರಮವು ಕೇವಲ ಪ್ರಾತ್ಯಕ್ಷಿಕೆಯಲ್ಲ, ಈ ಮಕ್ಕಳನ್ನು ಸಶಕ್ತಗೊಳಿಸುವುದು ಮತ್ತು ಒಳಗೊಳ್ಳುವಿಕೆಯ ಶಕ್ತಿಯನ್ನು ಜಗತ್ತಿಗೆ ತೋರಿಸುವುದು ಇದರ ಉದ್ದೇಶ ಎಂದರು.
ಪಂದ್ಯಗಳಿಗೆ ತಂಡಗಳು ಪ್ರಕಟ
ತ್ಯಾಗರಾಜ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶೇಷ ಒಲಿಂಪಿಕ್ಸ್ ಏಷ್ಯಾ ಪೆಸಿಫಿಕ್ ಬೌಚಿ ಮತ್ತು ಬೌಲಿಂಗ್ ಸ್ಪರ್ಧೆಗೆ ಸಂಬಂಧಿಸಿದಂತೆ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದು ಈ ತಿಂಗಳ ನವೆಂಬರ್ 22 ರವರೆಗೆ ನಡೆಯಲಿದೆ. ವಿಶೇಷ ಒಲಿಂಪಿಕ್ಸ್ ಭಾರತ ಇತ್ತೀಚೆಗೆ ಈ ಆಟಗಳಿಗೆ 16 ಸದಸ್ಯರ ತಂಡವನ್ನು ಪ್ರಕಟಿಸಿತ್ತು. ಬೌಚಿ ಸ್ಪರ್ಧೆಗೆ ತಲಾ 4 ಮಹಿಳಾ ಮತ್ತು ಪುರುಷರ ತಂಡಗಳನ್ನು ಆಯ್ಕೆ ಮಾಡಲಾಗಿದೆ. ಪುರುಷರ ತಂಡದಲ್ಲಿ ಕಬೀರ್ ಪ್ರೀತಮ್ ಬರುವಾ, ಎಬಿನೇಜರ್ ಡೇವಿಡ್, ವಿಲ್ಫ್ರೆಡ್ ಡಿಸೋಜಾ ಮತ್ತು ದೇವಾಂಶ್ ಅಗರ್ವಾಲ್ ಸ್ಥಾನ ಪಡೆದಿದ್ದರೆ, ಮಹಿಳಾ ತಂಡದಲ್ಲಿ ಪ್ರಿಯಾಂಕಾ, ಮಂಜುಳಾ, ಪೂರ್ಣಿಮಾ ಮದನ್ ಮತ್ತು ಜಿ ಸುಭಾಷಿಣಿ ಸ್ಥಾನ ಪಡೆದಿದ್ದಾರೆ. ಎರಡೂ ತಂಡಗಳಲ್ಲಿ ತಲಾ ಇಬ್ಬರು ಕೋಚ್‌ಗಳನ್ನು ನೇಮಿಸಲಾಗಿದೆ.
ಅದೇ ರೀತಿ ಬೌಲಿಂಗ್ ಸ್ಪರ್ಧೆಗೆ ತಲಾ 4 ಮಹಿಳಾ ಮತ್ತು ಪುರುಷರ ತಂಡಗಳನ್ನು ಆಯ್ಕೆ ಮಾಡಲಾಗಿದ್ದು, ಮಹಿಳಾ ತಂಡದಲ್ಲಿ ನೇಹಾ ಸಿಂಗ್, ಸಿಮ್ರಾನ್ ಪೂಜಾರ, ಶ್ರದ್ಧಾ ಪಟೇಲ್ ಮತ್ತು ಶ್ರೀಮತಿ ಸಂಗೀತಾ ನಾಯಕ್ ಆಯ್ಕೆಯಾಗಿದ್ದರೆ, ಪುರುಷರ ತಂಡದಲ್ಲಿ ಇಭಾನನ್ ಸಾಹು, ಅಂಕಿತ್, ಪ್ರಕಾಶ್ ವಘೇಲಾ ಮತ್ತು ನಿರುಪಮ್ ಡೇ ಸೇರಿದ್ದಾರೆ. ಬೌಚಿ ಸ್ಪರ್ಧೆಯಂತೆ, ಬೌಲಿಂಗ್ ಸ್ಪರ್ಧೆಗೂ ತಲಾ ಇಬ್ಬರೂ ಕೋಚ್‌ಗಳನ್ನು ನೇಮಿಸಲಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:14 pm, Mon, 18 November 24