ಹುಬ್ಬಳ್ಳಿ-ಧಾರವಾಡದಲ್ಲಿ ಹೊಸ ಯೋಜನೆ: ಬಂದ್ ಆಗುತ್ತಾ ಚಿಗರಿ ಬಸ್ ಓಡಾಟ?
ಹುಬ್ಬಳ್ಳಿ-ಧಾರವಾಡದ ಬಿಆರ್ಟಿಎಸ್ ಯೋಜನೆ ಆರ್ಥಿಕ ನಷ್ಟದಲ್ಲಿದೆ ಮತ್ತು ಅನಾನುಕೂಲಗಳನ್ನು ಹೆಚ್ಚಾಗಿ ಉಂಟುಮಾಡುತ್ತಿದೆ. ಈ ಯೋಜನೆಯನ್ನು ಬದಲಿಸಿ, ವಿದ್ಯುತ್ ಬಸ್ಗಳನ್ನು ಚಾಲನೆ ಮಾಡುವ ಹೊಸ ಯೋಜನೆಯನ್ನು ಜಾರಿಗೆ ತರಲು ಚಿಂತನೆ ನಡೆಯುತ್ತಿದೆ. ಸಚಿವ ಸಂತೋಷ್ ಲಾಡ್ ಈ ಕುರಿತು ಫ್ರಾನ್ಸ್ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಬಂದಿದ್ದಾರೆ.
ಹುಬ್ಬಳ್ಳಿ, ಜನವರಿ 06: ಅದು ಹುಬ್ಬಳ್ಳಿ-ಧಾರವಾಡ (Hubballi-Dharwad) ಅವಳಿ ನಗರದ ಮಹತ್ವಾಕಾಂಕ್ಷೆಯ ಯೋಜನೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆ ಯೋಜನೆ ಆರಂಭ ಮಾಡುವ ಮುನ್ನವೇ ಸಾಕಷ್ಟು ಅಪಸ್ವರ ಕೇಳಿ ಬಂದಿದ್ದವು. ಹಾಗೂ ಹೀಗೂ ಯೋಜನೆ ಆರಂಭಿಸಲಾಗಿತ್ತು. ಆದರೆ ಆ ಯೋಜನೆಯಿಂದ ಆಗಿರುವ ಅನಕೂಲಕ್ಕಿಂತ ಅನಾನೂಕಲವೇ ಜಾಸ್ತಿ. ಆರ್ಥಿಕವಾಗಿಯೂ ಆ ಯೋಜನೆ ಸಾಕಷ್ಟು ನಷ್ಟದಲ್ಲಿದೆ. ಅವಳಿ ನಗರದಲ್ಲಿರುವ ಆ ಯೋಜನೆ ಇದೀಗ ಬಂದ್ ಆಗೋ ಲಕ್ಷಣವೇ ಹೆಚ್ಚಾಗಿದೆ. ಆ ಯೋಜನೆ ಬದಲಾಗಿ ಮತ್ತೊಂದು ಯೋಜನೆ ಶಿಘ್ರವೇ ಅವಳಿ ನಗರಕ್ಕೆ ಬರಲಿದೆ. ಅಷ್ಟಕ್ಕೂ ಆ ಹೊಸ ಯೋಜನೆ ಯಾವುದು ಎಂಬ ನಿಮ್ಮ ಪ್ರಶ್ನೆಗೆ ಮುಂದೆ ಉತ್ತರವಿದೆ ಓದಿ.
ಬಿಆರ್ಟಿಎಸ್ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದ ಅವಧಿಯಲ್ಲಿ ಹುಬ್ಬಳ್ಳಿ-ಧಾರವಾಡ ನಡುವೆ ಆರಂಭವಾಗಿದ್ದ ಯೋಜನೆ. ಹೊರ ರಾಜ್ಯದಲ್ಲಿ ವಿಫಲವಾದ ಯೋಜನೆ ರಾಜ್ಯಕ್ಕೆ ತರೋವಾಗಲೇ ಸಾಕಷ್ಟು ವಿವಾದವಾಗಿತ್ತು. BRTS ವ್ಯಾಪ್ತಿಯಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ನಿತ್ಯ ನೂರಾರು ಚಿಗರಿ ಬಸ್ ಗಳು ಸಂಚಾರ ಮಾಡುತ್ತವೆ. ಅದಕ್ಕೆಂದೆ ಪ್ರತ್ಯೇಕ ಕಾರಿಡಾರ್ ಇದೆ. ಅಲ್ಲಿ ಬೇರೆ ಯಾವ ವಾಹನಗಳಿಗೂ ಅವಕಾಶ ಇಲ್ಲ. ಹೀಗಾಗಿ ಹುಧಾ ಅವಳಿ ನಗರದ ಪ್ರಯಾಣಿಕರಿಗೆ ಅನಕೂಲವಾಗಲು ಯೋಜನೆ ಜಾರಿಯಾಗಿತ್ತು. ಆದರೆ ಈ ಯೋಜನೆಯಿಂದ ಅನಾನಕೂಲವೇ ಜಾಸ್ತಿಯಾಗಿದೆ.
ಚಿಗರಿ ಬಸ್ ಬದಲಾಗಿ ಎಲೆಕ್ಟ್ರಿಕ್ ಬಸ್ ಬರುವ ಸಾಧ್ಯತೆ
ಚಿಗರಿ ಸಾರಿಗೆ ಮೇಲೆ ಸಾಕಷ್ಟು ಆರೋಪಗಳಿವೆ. ದಿನಕ್ಕೆ ಒಂದಲ್ಲಾ ಒಂದು ಕಡೆ ಚಿಗರಿ ಬಸ್ ಅಪಘಾತಕ್ಕೆ ಒಳಗಾಗುತ್ತಿವೆ. ಕೆಲ ಕಡೆ ಬಸ್ಗಳು ಕೆಟ್ಟು ನಿಂತಿವೆ. ಈ ಬಸ್ನಿಂದ ತಿಂಗಳಿಗೆ ಹೆಚ್ಚು ಕಡಿಮೆ 40 ಕೋಟಿ ರೂ. ನಷ್ಟವಾಗ್ತಿದೆ. ಹೀಗಿದ್ರೂ ಚಿಗರಿ ಬಸ್ ಓಡಾಡುತ್ತಿವೆ. ಈ ಯೋಜನೆ ವಿರೋಧಿಸಿ ಅನೇಕ ಹೋರಾಟಗಳು ಆಗಿವೆ. ಆ ಕಾರಿಡಾರ್ನಲ್ಲಿ ಬೇರೆ ವಾಹನಗಳಿಗೂ ಅವಕಾಶ ಕೊಡಬೇಕು ಅನ್ನೋ ಕೂಗು ಇತ್ತು. ಆದರೆ ಇದೀಗ ಈ ಯೋಜನೆ ಸಂಪೂರ್ಣ ಬಂದ್ ಆಗತ್ತಾ ಅನ್ನೋ ಅನುಮಾನ ಮೂಡಿದೆ. ಏಕೆಂದರೆ ಚಿಗರಿ ಬಸ್ ಬದಲಾಗಿ ಹುಬ್ಬಳ್ಳಿ ಧಾರವಾಡಕ್ಕೆ ಎಲೆಕ್ಟ್ರಿಕ್ ಬಸ್ ಬರುವ ಸಾಧ್ಯತೆ ಇದೆ.
ಇದನ್ನೂ ಓದಿ: ಧಾರವಾಡ ಕೃಷಿ ವಿವಿ ಆವರಣದಲ್ಲಿ ಅಯ್ಯಪ್ಪ ಮೂರ್ತಿ ಪ್ರತ್ಯಕ್ಷ: ಹರಿದು ಬರುತ್ತಿರುವ ಭಕ್ತರು
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಚಿಂತನೆ ನಡೆಸಿದ್ದಾರೆ. ಈಗಾಗಲೇ ಸ್ವತಃ ಸಂತೋಷ್ ಲಾಡ್ ಫ್ರಾನ್ಸ್ಗೆ ಹೋಗಿ ಮಾಹಿತಿ ಪಡೆದುಕೊಂಡು ಬಂದಿದ್ದಾರೆ. ಎಲೆಕ್ಟ್ರಿಕಲ್ ಬಸಗಳಲ್ಲಿ ಓಡಾಡಿ ಮಾಹಿತಿ ಪಡೆದಿದ್ದಾರೆ. BRTS ಬದಲಾಗಿ LRT ಯೋಜನೆ ಅಡಿಯಲ್ಲಿ ಎಲೆಕ್ಟ್ರಿಕಲ್ ಬಸಗಳು ರೋಡಿಗಳಿಯಬಹುದು.
40 ಕೋಟಿ ರೂ ನಷ್ಟ
ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸುಮಾರು ದಿನವೊಂದಕ್ಕೆ ನೂರಕ್ಕೂ ಹೆಚ್ಚು ಚಿಗರಿ ಬಸ್ ಓಡಾಡುತ್ತವೆ. ಹವಾ ನಿಯಂತ್ರಣ ಬಸ್ ಆಗಿರೋ ಕಾರಣಕ್ಕೆ ಇಲಾಖೆಗೆ ಅರ್ಥಿಕ ಹೊರೆಯಾಗುತ್ತಿದೆ. ಸಾರಿಗೆ ಇಲಾಖೆಗೆ 40 ಕೋಟಿಗೂ ಅಧಿಕ ಹೊರೆಯಾಗತಿದೆ. ಇದೇ ಕಾರಣಕ್ಕೆ ಚಿಗರಿ ಬಸ್ ಒಡಾಡೋ ಕಾರಿಡಾರ್ನಲ್ಲಿ ಎಲೆಕ್ಟ್ರಿಕಲ್ ಬಸ್ ಓಡಿಸೋ ಯೋಜನೆಗೆ ಚಿಂತನೆ ನಡೆಸಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಲಾಡ್ ಅವರು ಭೇಟಿ ನೀಡಿದ್ದ HESS ಲೈಟ್ ಟ್ರಾಮ್ಗಳು ವಿದ್ಯುತ್ ಮೂಲಕ ಚಲಿಸುತ್ತವೆ. ಇದು ಸಾಂಪ್ರದಾಯಿಕ ಡೀಸೆಲ್ ಚಾಲಿತ ಬಸ್ಗಳಿಗೆ ಹೋಲಿಸಿದರೆ ವಾಯಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡಿ ವಾಯುಗುಣಮಟ್ಟಕ್ಕೆ ಧನಾತ್ಮಕ ಕೊಡುಗೆ ನೀಡುತ್ತದೆ ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸಲು ಸಹಾಯ ಮಾಡುತ್ತದೆ.
ಸಾರಿಗೆ ಎಂದಾಕ್ಷಣ ಹೇಗೆ ಮಾಲಿನ್ಯಕಾರಕವೊ ಅದೇ ರೀತಿ ಶಬ್ದವನ್ನೂ ಉಂಟು ಮಾಡುತ್ತದೆ ಎಂಬ ಭಾವನೆ ನಮ್ಮೆಲ್ಲರಲ್ಲಿ ಬರುವುದು ಸಾಮಾನ್ಯ. ಆದರೆ ಲೈಟ್ ಟ್ರಾಮ್ ಆಂತರಿಕ ದಹನಕಾರಿ ಎಂಜಿನ್ ಹೊಂದಿರುವ ವಾಹನಗಳಿಗಿಂತ ನಿಶ್ಯಬ್ದವಾಗಿದೆ. ಇದು ನಗರ ಪ್ರದೇಶಗಳಲ್ಲಿ ಶಬ್ದ ಮಾಲಿನ್ಯ ಕಡಿಮೆ ಮಾಡುತ್ತದೆ. ಇನ್ನು ನಿರ್ವಹಣಾ ವೆಚ್ಚಕ್ಕೆ ಬರುವುದಾರೆ ಇದು ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿದೆ. ರಿಯಲ್ ಟೈಮ್ ಟ್ರ್ಯಾಕಿಂಗ್ ವ್ಯವಸ್ಥೆಗಳು, ವೈ-ಫೈ ಸಂಪರ್ಕ ಮತ್ತು ಶಕ್ತಿ-ಸಾಮರ್ಥ್ಯ HVAC ವ್ಯವಸ್ಥೆ ಇದರಲ್ಲಿವೆ. ಈ ಕುರಿತು ಮಾತು ಕತೆ ನಡೆಯುತ್ತಿದ್ದು, ಶೇಕಡಾ 50 ರಷ್ಟು ಸಕ್ಸಸ್ ಆಗಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಇನ್ನು ಈ ಬಗ್ಗೆ NWKSRTC ಅಧ್ಯಕ್ಷರನ್ನ ಕೇಳಿದರೆ ಅದು ನನಗೆ ಗೊತ್ತಿಲ್ಲ ಎಂದಿದ್ದಾರೆ. ಮತ್ತೊಂದು ಕಡೆ ಬಿಜೆಪಿ ಶಾಸಕ ಬೆಲ್ಲದ್ ಯೋಜನೆ ಸ್ವಾಗತ ಮಾಡಿ ಕೆಲ ಸಲಹೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಜೋಯಿಡಾ: ಶಾಲಾ ಪ್ರವಾಸದ ಬಸ್ ಪಲ್ಟಿಯಾಗಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ
ಬೆಲ್ಲದ್ BRTS ನಲ್ಲಿ ಕಾರಿಡಾರ್ನಲ್ಲಿ ಖಾಸಗಿ ವಾಹನಗಳಿಗೂ ಅವಕಾಶ ಕೊಡಿ, ಟೋಲ್ ಮಾಡಿದರೆ ಆರ್ಥಿಕವಾಗಿ ಸಹಾಯ ಆಗತ್ತೆ ಎಂದಿದ್ದಾರೆ. ಸದಾ ಸುದ್ದಿಯಲ್ಲಿದ್ದ ಚಿಗರಿ ಬಸ್ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದು, ಚಿಗರಿ ಬಸ್ ಬಂದ್ ಆಗೋ ಸಾಧ್ಯತೆ ದಟ್ಟವಾಗಿದ್ದು, ಶೀಘ್ರದಲ್ಲೇ ಹುಬ್ಬಳ್ಳಿಗೆ ಎಲೆಕ್ಟ್ರಿಕಲ್ ಬಸ್ ಬರೋದು ಗ್ಯಾರಂಟಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.