ಇಸ್ಪೀಟ್ ದಂಧೆಗೆ ಕುಮ್ಮಕ್ಕು ಆರೋಪದಲ್ಲಿ ನಗರಸಭೆ ಸದಸ್ಯನ ಗಡಿಪಾರು; ಆದೇಶ ವಾಪಸ್ ಪಡೆಯುವಂತೆ ಬೆಂಬಲಿಗರ ಪಟ್ಟು
ವಿಧಾನಸಭೆ ಮತದಾನಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಕೆಲವರನ್ನ ಗಡಿಪಾರು ಸಹ ಮಾಡಿದ್ದಾರೆ. ಅದೇ ರೀತಿ ಇಲ್ಲೊಬ್ಬ ನಗರಸಭೆ ಸದಸ್ಯನನ್ನ ಸಹ ಗಡಿಪಾರು ಮಾಡಿದ್ದು, ಇದೀಗ ಜನಪ್ರತಿನಿಧಿಯ ಗಡಿಪಾರಿನ ವಿರುದ್ದ ರೊಚಿಗೆದ್ದ ಜನರು ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರು ಗ್ರಾಮಾಂತರ: ಮತದಾನದ ದಿನ ಸಮೀಪಿಸುತ್ತಿರುವ ಬೆನ್ನಲ್ಲೆ ಎಲ್ಲೆಡೆ ಪೊಲೀಸ(Police)ರು ಅಲರ್ಟ್ ಆಗಿದ್ದು, ಅಕ್ರಮ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣೀಟ್ಟಿದ್ದಾರೆ. ಜೊತೆಗೆ ಕೋಮು ಗಲಬೆ, ಶಾಂತಿ ಕದಡುವಂತಹ ಪ್ರತಿಭಟನೆ ಧರಣಿಗಳಿಗೂ ಬ್ರೇಕ್ ಹಾಕಿದ್ದು, ಎಲ್ಲೆಡೆ ಪುಲ್ ಟೈಟ್ ಮಾಡಿದ್ದಾರೆ. ಆದ್ರೆ, ಈ ನಡುವೆಯು ಇಲ್ಲೊಂದು ಗ್ರಾಮದಲ್ಲಿ ಜನರು ಪೊಲೀಸರ ವಿರುದ್ದವೆ ಪ್ರತಿಭಟನೆ ನಡೆಸಿದ್ದು ಜನಪ್ರತಿನಿಧಿಗಾಗಿ ಪಟ್ಟು ಹಿಡಿದಿದ್ದಾರೆ. ಇಲ್ಲಿ ಈ ರೀತಿ ವಾರ್ಡ್ನ ಮಧ್ಯ ಭಾಗದಲ್ಲಿ ನಿಂತು ಜನರು ಆಕ್ರೋಶ ಹೊರ ಹಾಕುತ್ತಿರುವುದು ಇದೇ ನಗರಸಭೆ ಸದಸ್ಯ ಮುನಿರಾಜು ಅಲಿಯಾಸ್ ಚಿಕ್ಕಪ್ಪಿಗಾಗಿ, ಹೌದು ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಮುತ್ತೂರು ವಾರ್ಡ್ನಿಂದ ಕಳೆದ ನಗರಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ವರ್ದಿಸಿ ಗೆದ್ದಿದ್ದ ವಾರ್ಡ್ನ ಸದಸ್ಯ ಮುನಿರಾಜು ಆಲಿಯಾಸ್ ಚಿಕ್ಕಪ್ಪಿಯನ್ನ ಚುನಾವಣಾ ಸಂಧರ್ಭದಲ್ಲಿ ಪೊಲೀಸರು ಏಕಾಏಕಿ ಗಡಿಪಾರು ಮಾಡಿದ್ದಾರೆ.
ಚುನಾವಣೆ ವೇಳೆ ನಗರ ಸಭೆ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವಂತೆ ಸದಸ್ಯ ಜೂಜಿಗೆ ಕುಮ್ಮಕ್ಕು ನೀಡುತ್ತಿದ್ದಾನೆ ಎಂದು ದೊಡ್ಡಬಳ್ಳಾಪುರ ಪೊಲೀಸರು ಚುನಾವಣಾಧಿಕಾರಿಗಳಿಗೆ ವರದಿ ನೀಡಿದ್ದರಂತೆ. ಹೀಗಾಗಿ ಮುತ್ತೂರು ವಾರ್ಡ್ ಸದಸ್ಯ ಮುನಿರಾಜುನನ್ನ ಜೂಜು ಆಡಲು ಸಹಕಾರದ ಆರೋಪದ ಮೇಲೆ ಒಂದು ತಿಂಗಳು ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿದ್ದಾರೆ. ಇದರಿಂದ ಬೇಸತ್ತ ಮುತ್ತೂರು ವಾರ್ಡ್ನ ಜನ ದೊಡ್ಡಬಳ್ಳಾಪುರ ನಗರ ಪೊಲೀಸರು ಮತ್ತು ಚುನಾವಣಾಧಿಕಾರಿಗಳ ಕ್ರಮದ ವಿರುದ್ದ ಆಕ್ರೋಶ ಹೊರ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ:ಕುಸ್ತಿ ಫೆಡರೇಷನ್‌ನ ಮುಖ್ಯಸ್ಥರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು ಟೀಕಿಸಿದ ಪಿಟಿ ಉಷಾ
ಇನ್ನು ದೊಡ್ಡಬಳ್ಳಾಪುರ ನಗರಸಭೆಯು ಮುತ್ತೂರು ರೈಲ್ವೆ ಸ್ಟೇಷನ್ಗೆ ಹೊಂದಿಕೊಂಡಿರುವ ಪ್ರದೇಶವಾಗಿದ್ದು ಬಡ ಕೂಲಿ ಕಾರ್ಮಿಕರೆ ಹೆಚ್ಚು. ಜೊತೆಗೆ ಈ ಪ್ರದೇಶದಲ್ಲಿ ನಗರಸಭೆ ಸದಸ್ಯ ಮುನಿರಾಜು ಜನಪರ ಕೆಲಸಗಳಿಂದ ಫೇಮಸ್ ಆಗಿದ್ದಾರಂತೆ. ಅಲ್ಲದೆ ಗ್ರಾಮದಲ್ಲಿ ವಾಟರ್ ಟ್ಯಾಂಕ್ ಕಟ್ಟಿಸುವ ಭರವಸೆ ನೀಡಿದ್ದು ಕೆಲ ವಿರೋಧಿಗಳು ಸದಸ್ಯನ ಗಡಿಪಾರಿಗೆ ಕಾರಣವಾಗಿರಬಹುದು ಎಂದು ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೆ ಎಲ್ಲರ ಮೆಚ್ಚಿನ ನಾಯಕ ಹೀಗೆ ಏಕಾಏಕಿ ಗಡಿಪಾರಾದ ಕಾರಣ, ಈ ಹಿಂದೆ ಆಹಾರ, ನೀರು ಹಾಕಿ, ಸಾಕಿ ಸಲುಹುತ್ತಿದ್ದ ಪ್ರಾಣಿ ಪಕ್ಷಿಗಳು ಅನಾಥವಾಗಿವೆಯಂತೆ. ಇನ್ನು ವಾರ್ಡ್ನಲ್ಲಿ ಚರಂಡಿ ಸಮಸ್ಯೆ, ನೀರಿನ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದು, ಕೂಡಲೇ ಗಡಿಪಾರು ರದ್ದು ಮಾಡಿ ನಮ್ಮ ನಗರಸಭೆ ಸದಸ್ಯರನ್ನ ವಾಪಸ್ ಕರೆಸುವಂತೆ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಒಟ್ಟಾರೆ ಜೂಜು ಆಡಿಸುತ್ತಿದ್ದ ಎಂಬ ಆರೋಪದಲ್ಲಿ ನಗರಸಭೆ ಸದಸ್ಯನನ್ನ ವಿಧಾನಸಭಾ ಚುನಾವಣಾ ಸಂಧರ್ಭದಲ್ಲಿ ಗಡಿಪಾರು ಮಾಡಿರುವುದಕ್ಕೆ ವಾರ್ಡ್ನ ಜನ ರೊಚಿಗೆದ್ದಿದ್ದಾರೆ. ನಮ್ಮ ಜನಪ್ರತಿನಿಧಿಯನ್ನ ವಾಪಸ್ ಕರೆಸಲಿಲ್ಲ ಎಂದರೆ, ಚುನಾವಣಾ ಬಹಿಷ್ಕಾರ ಮಾಡುವುದಾಗಿಯು ಎಚ್ಚರಿಕೆ ನೀಡಿದ್ದು, ವಾರ್ಡ್ ಜನರನ್ನ ಅಧಿಕಾರಿಗಳು ಯಾವ ರೀತಿ ಮನವೊಲಿಸುತ್ತಾರೆ ಎನ್ನುವುದನ್ನ ಕಾದು ನೋಡಬೇಕಿದೆ.
ವರದಿ: ನವೀನ್ ಟಿವಿ9 ದೇವನಹಳ್ಳಿ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:43 am, Tue, 2 May 23