ಬೆಂಗಳೂರು – ತಿರುವನಂತಪುರ ಮಧ್ಯೆ ವಿಶೇಷ ರೈಲು ಸಂಚಾರ: ಇಲ್ಲಿದೆ ವೇಳಾಪಟ್ಟಿ, ನಿಲುಗಡೆ ವಿವರ
Bengaluru-Thiruvananthapuram Special Train: ಓಣಂ ಹಬ್ಬದ ಕಾರಣ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಹಿನ್ನೆಲೆ ನೈಋತ್ಯ ರೈಲ್ವೆಯು ಬೆಂಗಳೂರಿನಿಂದ ತಿರುವನಂತಪುರಂ ನಾರ್ತ್‌ಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ ಪ್ರಕಟಿಸಿದೆ. ಆಗಸ್ಟ್ 22ರಂದು SMVTಯಿಂದ ಹೊರಡುವ ರೈಲು ಕರ್ನಾಟಕ ಹಾಗೂ ಕೇರಳದ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.

ಮುಖ್ಯಾಂಶಗಳು
- ಬೆಂಗಳೂರು-ತಿರುವನಂತಪುರ ನಡುವೆ ವಿಶೇಷ ರೈಲು ಸೇವೆ
- ಆಗಸ್ಟ್ 22ರಂದು ಬೆಂಗಳೂರಿನಿಂದ ಸಂಚಾರ
- ಆಗಸ್ಟ್ 23ರಂದು ತಿರುನಂತಪುರದಿಂದ ಬೆಂಗಳೂರಿಗೆ ಸಂಚಾರ
ಬೆಂಗಳೂರು, ಆಗಸ್ಟ್ 21: ಓಣಂ ಹಬ್ಬದ (Onam Festival) ಪ್ರಯುಕ್ತ ಕೇರಳಕ್ಕೆ (Keralam) ತೆರಳುವ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು ನೈಋತ್ಯ ರೈಲ್ವೆ ಬೆಂಗಳೂರಿನಿಂದ (Bengaluru) ತಿರುವನಂತಪುರಂ ನಾರ್ತ್‌ಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಿಸಲಿದೆ. SMVT ಬೆಂಗಳೂರು–ತಿರುವನಂತಪುರಂ ನಾರ್ತ್–ಬೆಂಗಳೂರು ಕ್ಯಾಂಟ್ ನಡುವೆ ಒಂದು ಟ್ರಿಪ್ ವಿಶೇಷ ರೈಲು ಸಂಚಾರ ನಡೆಸಲಿದೆ ಎಂದು ಎಕ್ಸ್ ಮೂಲಕ ನೈಋತ್ಯ ರೈಲ್ವೆ ತಿಳಿಸಿದೆ.
ಬೆಂಗಳೂರು – ತಿರುವನಂತಪುರ ವಿಶೇಷ ರೈಲು ಸಮಯ
ನೈಋತ್ಯ ರೈಲ್ವೆ ಪ್ರಕಟಿಸಿರುವ ಮಾಹಿತಿಯಂತೆ, 06575 ಸಂಖ್ಯೆಯ SMVT ಬೆಂಗಳೂರು–ತಿರುವನಂತಪುರಂ ನಾರ್ತ್ ವಿಶೇಷ ಎಕ್ಸ್‌ಪ್ರೆಸ್ ಆಗಸ್ಟ್ 22ರ ಶನಿವಾರ ಸಂಜೆ 4.40ಕ್ಕೆ SMVT ಬೆಂಗಳೂರಿನಿಂದ ಹೊರಡಲಿದೆ. ಮರುದಿನ ಭಾನುವಾರ ಬೆಳಗ್ಗೆ 10 ಗಂಟೆಗೆ ತಿರುವನಂತಪುರಂ ನಾರ್ತ್ ತಲುಪಲಿದೆ.
06576 ಸಂಖ್ಯೆ ತಿರುವನಂತಪುರಂ ನಾರ್ತ್–ಬೆಂಗಳೂರು ಕ್ಯಾಂಟ್ ವಿಶೇಷ ಎಕ್ಸ್‌ಪ್ರೆಸ್ ಆಗಸ್ಟ್ 23ರ ಭಾನುವಾರ ಮಧ್ಯಾಹ್ನ 12.40ಕ್ಕೆ ತಿರುವನಂತಪುರಂ ನಾರ್ತ್‌ನಿಂದ ಹೊರಡಲಿದ್ದು, ಆಗಸ್ಟ್ 24ರ ಸೋಮವಾರ ಬೆಳಗ್ಗೆ 5.15ಕ್ಕೆ ಬೆಂಗಳೂರು ಕ್ಯಾಂಟ್ ತಲುಪಲಿದೆ.
ನೈಋತ್ಯ ರೈಲ್ವೆ ಎಕ್ಸ್ ಸಂದೇಶ
Special Express trains between SMVT Bengaluru – Thiruvananthapuram North- Bengaluru Cantt. to cater extra rush of passengers during #onam festival#SWRupdates pic.twitter.com/nvd27BXxJd
— South Western Railway (@SWRRLY) August 20, 2026
ಬೆಂಗಳೂರಿನಿಂದ ಕೇರಳಕ್ಕೆ ಹೋಗಿ ಬರುವವರಿಗೆ ಅನುಕೂಲ
ಓಣಂ ಹಬ್ಬದ ಸಂದರ್ಭದಲ್ಲಿ ಕೇರಳದತ್ತ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಈ ವಿಶೇಷ ರೈಲು ಬೆಂಗಳೂರಿನ ಪ್ರಯಾಣಿಕರಿಗೆ ಅನುಕೂಲವಾಗಲಿದೆ. 20 ಬೋಗಿಗಳನ್ನು ಒಳಗೊಂಡಿರುವ ಈ ವಿಶೇಷ ರೈಲು ಎರಡೂ ದಿಕ್ಕಿನಲ್ಲಿ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ಬೆಂಗಳೂರು – ತಿರುವನಂತಪುರ ವಿಶೇಷ ರೈಲಿಗೆ ಎಲ್ಲೆಲ್ಲಿ ನಿಲುಗಡೆ?
SMVT ಬೆಂಗಳೂರು–ತಿರುವನಂತಪುರಂ ನಾರ್ತ್ ಮಾರ್ಗದಲ್ಲಿ ಕೃಷ್ಣರಾಜಪುರಂ, ಬಂಗಾರಪೇಟೆ, ಕುಪ್ಪಂ, ಸೇಲಂ, ಈರೋಡ್, ತಿರುಪ್ಪೂರು, ಪೊದನೂರು, ಪಾಲಕ್ಕಾಡ್, ತ್ರಿಶೂರ್, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಶ್ಶೇರಿ, ತಿರುವಲ್ಲಾ, ಚೆಂಗನ್ನೂರು, ಮಾವೇಲಿಕರ, ಕಾಯಂಕುಳಂ, ಕರುನಾಗಪ್ಪಳ್ಳಿ, ಶಾಸ್ತಾಂಕೋಟ ಹಾಗೂ ಕೊಲ್ಲಂ ನಿಲ್ದಾಣಗಳಲ್ಲಿ ರೈಲು ನಿಲ್ಲಲಿದೆ. ತಿರುವನಂತಪುರಂ ನಾರ್ತ್‌ನಿಂದ ಬೆಂಗಳೂರಿಗೆ ವಾಪಸಾಗುವ 06576 ರೈಲಿಗೆ SMVT ಬೆಂಗಳೂರಿನಲ್ಲಿ ನಿಲುಗಡೆ ಇರುವುದಿಲ್ಲ.
ಇದನ್ನೂ ಓದಿ: ಕರ್ನಾಟಕ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಳಗಾವಿ, ಸಿಕಂದರಾಬಾದ್, ಚರ್ಲಪಲ್ಲಿ ವೀಕ್ಲಿ ವಿಶೇಷ ರೈಲುಗಳು ಇನ್ನು ಕಾಯಂ!
ಪ್ರಯಾಣಿಕರು ರೈಲಿನ ವೇಳಾಪಟ್ಟಿ ಹಾಗೂ ಇತರೆ ವಿವರಗಳನ್ನು ಅಧಿಕೃತ ರೈಲ್ವೆ ವೆಬ್‌ಸೈಟ್, NTES ಆ್ಯಪ್ ಅಥವಾ 139 ಸಹಾಯವಾಣಿ ಮೂಲಕ ಪರಿಶೀಲಿಸಬಹುದು ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




