ಪಠ್ಯದಲ್ಲಿ ಬಸವಣ್ಣನಿಗೆ ಅಪಮಾನ ಖಂಡಿಸಿ ಜು.11ರಂದು ಬೀದರ್ ಬಂದ್ಗೆ ಕರೆ ನೀಡಿದ ಸಂಘಟನೆಗಳು
9ನೇ ತರಗತಿಯ ಪರಿಷ್ಕೃತ ಪಠ್ಯಪುಸ್ತಕದಲ್ಲಿ ಬಸವಣ್ಣನವರಿಗೆ ಅಪಚಾರವೆಸಗಲಾಗಿದೆ. ಈ ಸಂಬಂಧ ದೂರವಾಣಿಯ ಮುಖಾಂತರ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲಾಗಿತ್ತು. ಮುಖ್ಯಮಂತ್ರಿಗಳು ಭರವಸೆ ನೀಡಿದಾಗ್ಯೂ ಇಲ್ಲಿಯವರೆಗೂ ಪಠ್ಯ ವಾಪಸ್ ಪಡೆದಿಲ್ಲ.
ಬೀದರ್: ಪಠ್ಯದಲ್ಲಿ ಬಸವಣ್ಣನಿಗೆ ಅಪಮಾನ ಖಂಡಿಸಿ ಬಸವ ಭಕ್ತರು ಕನ್ನಡ ಪರ ಸಂಘಟನೆಗಳು ಜು.11ರಂದು ಬೀದರ್ ಬಂದ್ (Bidar Bundh) ಗೆ ಕರೆ ನೀಡಲಾಗಿದೆ. 9ನೇ ತರಗತಿ ಪರಿಷ್ಕೃತ ಪಠ್ಯವನ್ನ (textbook) ಜುಲೈ 11ರೊಳಗೆ ಹಿಂಪಡೆಯದೆ ಹೋದರೆ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಲಾಗಿದೆ. ಬಸವಕಲ್ಯಾಣದ ಅನುಭವ ಮಂಟಪ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ನೇತೃತ್ವದಲ್ಲಿ ಬೃಹತ ಪ್ರತಿಭಟನೆ ಬಂದ್ ನಡೆಯಲಿದೆ. ಈ ಸಂಬಂಧ ನಗರದ ಗಾಂಧಿಗಂಜ್ ಬಸವೇಶ್ವರ ದೇವಸ್ಥಾನದಲ್ಲಿ ಸಭೆ ನಡೆಸಿ ತಿರ್ಮಾಣ ಕೈಗೊಳ್ಳಲಾಗಿದೆ. ಲಿಂಗಾಯತ ಸ್ವತಂತ್ರ್ಯ ಧರ್ಮ ಮಾನ್ಯತೆಗಾಗಿ ನಡೆದಿದ್ದ ರ್ಯಾಲಿ ಮಾದರಿಯಲ್ಲಿಯೇ ಪ್ರತಿಭಟನೆಗೆ ಸಿದ್ದತೆ ಮಾಡಲಾಗುತ್ತಿದೆ. ಪ್ರತಿ ಗ್ರಾಮದಿಂದಲೂ ಬಸವಾನುಯಾಯಿಗಳು ಸಾರ್ವಜನಿಕರಿಗೆ ಬಂದ್ನಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಲಾಗಿದೆ. ಬಂದ್ ಅಂಗವಾಗಿ ನಗರದಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಳ್ಳುವ ಕುರಿತಾಗಿಯೂ ಒಮ್ಮತದ ನಿರ್ಧಾರ ಮಾಡಿದ್ದು, ಬಸವಣ್ಣನವರು ಇಡೀ ಮನುಕುಲದ ಆಸ್ತಿ ಹೀಗಾಗಿ ಹೋರಾಟ ಜಾತ್ಯತೀತವಾಗಿ ನಡೆಯುತ್ತದೆ ಎಂದು ಬಸವಕಲ್ಯಾಣದ ಅನುಭವ ಮಂಟಪ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.
ಇದನ್ನೂ ಓದಿ: Skin Care: ನಿಮ್ಮ ಒಣ ತ್ವಚೆಯನ್ನು ಕೋಮಲವಾಗಿಸಲು ಈ ಆಯಿಲ್ಗಳನ್ನು ಬಳಕೆ ಮಾಡಿ
9ನೇ ತರಗತಿಯ ಪರಿಷ್ಕೃತ ಪಠ್ಯಪುಸ್ತಕದಲ್ಲಿ ಬಸವಣ್ಣನವರಿಗೆ ಅಪಚಾರವೆಸಗಲಾಗಿದೆ. ಈ ಸಂಬಂಧ ದೂರವಾಣಿಯ ಮುಖಾಂತರ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲಾಗಿತ್ತು. ಮುಖ್ಯಮಂತ್ರಿಗಳು ಭರವಸೆ ನೀಡಿದಾಗ್ಯೂ ಇಲ್ಲಿಯವರೆಗೂ ಪಠ್ಯ ವಾಪಸ್ ಪಡೆದಿಲ್ಲ. ಜುಲೈ 11ರ ಒಳಗೆ ಬಸವಣ್ಣನವರ ಬಗ್ಗೆ ಬರೆದಿರುವ ಪುಸ್ತಕ ಹಿಂಪಡೆಯದೆ ಹೋದರೆ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.
ಪಠ್ಯ ಪುಸ್ತಕ ಪರಿಷ್ಕರಣೆಗೆ ವಿವಿಧ ಮಠಗಳ ಸ್ವಾಮೀಜಿಗಳಿಂದ ಆಕ್ಷೇಪ!
ಪಠ್ಯ ಪುಸ್ತಕ ಪರಿಷ್ಕರಣೆಗೆ ವಿವಿಧ ಮಠಗಳ ಸ್ವಾಮೀಜಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಕನಕದಾಸರ ಬಗ್ಗೆ ಕೇವಲ ಒಂದೇ ಸಾಲಿನಲ್ಲಿ ವಿವರಣೆ ನೀಡಿದ್ದಕ್ಕೆ ಕನಕ ಗುರುಪೀಠದ ಶ್ರೀಗಳು ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರಿಗೆ ಪತ್ರ ಬರೆದಿದ್ದಾರೆ. 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಕನಕದಾಸರ ಪರಿಚಯವಿದೆ. ಭಕ್ತಿಪಂತ ಪಠ್ಯದಲ್ಲಿ ಕೇವಲ ಒಂದೇ ಒಂದು ಸಾಲಿನಲ್ಲಿ ಕನಕದಾಸರ ಬಗ್ಗೆ ತಿಳಿಸಲಾಗಿದೆ. ಈ ಹಿಂದಿನ ಸಮಿತಿ ಸುಮಾರು ಮುಕ್ಕಾಲು ಪುಟಗಳಷ್ಟು ವಿವರವನ್ನು ನೀಡಿತ್ತು ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಪಠ್ಯದಲ್ಲಿ ಕನಕದಾಸರ ಕುರಿತಾದ ವಿವರ ಒಂದೇ ಸಾಲಿಗೆ ಸೀಮಿತಗೊಳಿಸಿರುವುದಕ್ಕೆ ಸ್ವಾಮೀಜಿ ಅಸಮಾಧಾನಗೊಂಡಿದ್ದಾರೆ.
ಹೀಗಾಗಿ ಪತ್ರ ಬರೆದಿರುವ ಸ್ವಾಮೀಜಿ ಕೇವಲ ಒಂದೇ ಒಂದು ಸಾಲಿನಲ್ಲಿ ಪರಿಚಯಿಸಿರುವ ಕಾರಣ ತಿಳಿಯುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. 16ನೇ ಶತಮಾನದಲ್ಲಿ ಸಾಮಾಜಿಕ ವೈರುಧ್ಯಗಳ ವಿರುದ್ಧ, ಕಂದಾಚಾರಗಳ, ಜಾತೀಯತೆ ಹೋಗಲಾಡಿಸಲು ಕನಕದಾಸರು ಬಹು ದೊಡ್ಡ ಕೊಡುಗೆ ನೀಡಿದ್ದಾರೆ. ಕೀರ್ತನೆಗಳ ಮೂಲಕ ದಾಸಸಾಹಿತ್ಯವನ್ನು ಶ್ರೀಮಂತಗೊಳಿಸಿದವರು ಕನಕದಾಸರು. ಅವರ ಬಗ್ಗೆಯೇ ಮಾಹಿತಿ ಇಲ್ಲದಿರುವುದು ಎಷ್ಟು ಸರಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.