ಕೊರೊನಾ ಸೋಂಕಿನಿಂದ ನೂರಾರು ಮಂದಿ ಸಾವು; ಮೃತಪಟ್ಟವರ ಅಂತ್ಯಕ್ರಿಯೆಗೆ ಮುಂದಾದ ಯಾದಗಿರಿ ಸಂಘಟನೆ
ಯಾದಗಿರಿ ಜಿಲ್ಲೆಯಲ್ಲಿ ಎಲ್ಲೇ ಸೋಂಕಿತರು ಮೃತ ಪಟ್ಟರೆ ಸಾಕು ಪಿಎಪ್ಐ ಸಂಘಟನೆ ಹಾಜರ್ ಇರುತ್ತದೆ. ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯಿಂದ ಪಿಪಿಇ ಕಿಟ್ ಧರಿಸಿ ಅಂತ್ಯಕ್ರಿಯೆ ಮಾಡುವ ಬಗ್ಗೆ ತರಬೇತಿ ಪಡೆದಿರುವ ಪಿಎಪ್ಐ ಕಾರ್ಯಕರ್ತರು ಈ ಸೇವೆಗೆ ಇಳಿದಿದ್ದಾರೆ.
ಯಾದಗಿರಿ: ಕೊರೊನಾದ ಎರಡನೇ ಅಲೆಯಿಂದಾಗಿ ದೇಶವೇ ನಲುಗಿ ಹೋಗಿದೆ. ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗಿದ್ದು, ಸಾವಿನ ಸಂಖ್ಯೆಯಲ್ಲಿ ಕೂಡ ಏರಿಕೆಯಾಗಿದೆ. ಮೃತಮಟ್ಟ ಸೋಂಕಿತರ ಸಂಬಂಧಿಕರೆ ಹತ್ತಿರ ಬರಲು ಹೆದರುವಂತ ಪರಸ್ಥಿತಿ ನಿರ್ಮಾಣವಾಗಿದೆ. ಆದರೆ ಯಾದಗಿರಿಯ ಸಂಘಟನೆಯೊಂದು ಸೋಂಕಿತರ ಅಂತ್ಯಕ್ರಿಯೆ ಮಾಡುವ ಮೂಲಕ ಮಾನವ ಧರ್ಮವನ್ನ ಪಾಲಿಸುತ್ತಿದೆ. ಜಾತಿ ಮತ ನೋಡದೆ ಅಂತ್ಯಕ್ರಿಯೆ ಧಾವಿಸಿದ್ದು, ಮಾನವೀಯತೆ ಮೆರೆದಿದೆ.
ತೆಲಂಗಾಣದ ಗಡಿಯನ್ನ ಹಂಚಿಕೊಂಡಿರುವ ಯಾದಗಿರಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ. ನಿತ್ಯ 700 ಕ್ಕೂ ಅಧಿಕ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ. ಅದರಲ್ಲೂ ಕಳೆದ ಎರಡೇ ವಾರದಲ್ಲಿ ಜಿಲ್ಲೆಯಲ್ಲಿ 5 ಸಾವಿರಕ್ಕೂ ಅಧಿಕ ಮಂದಿ ಕೊವಿಡ್ಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ನಿತ್ಯ ಜಿಲ್ಲೆಯಲ್ಲಿ ನಾಲ್ಕೈದು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದು, ಇಲ್ಲಿಯವರೆಗೆ ಜಿಲ್ಲೆಯಲ್ಲಿ 100 ಕ್ಕೂ ಅಧಿಕ ಮಂದಿ ಪ್ರಾಣವನ್ನ ಕಳೆದುಕೊಂಡಿದ್ದಾರೆ.
ಈ ನಡುವೆ ಕೊರೊನಾ ಎಷ್ಟರಮಟ್ಟಿಗೆ ಜನರಲ್ಲಿ ಭಯ ಹುಟ್ಟಿಸಿದೆ ಎಂದರೆ ಮೃತರ ಕುಟುಂಬಸ್ಥರು ಕೂಡ ಅಂತ್ಯಕ್ರಿಯೆ ಮಾಡಲು ಹೆದರುತ್ತಿದ್ದಾರೆ. ಇಂತಹ ವಿಷಮ ಸ್ಥಿತಿಯಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಪಾಫುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಮಾನವೀಯತೆ ಮೆರೆಯುತ್ತಿದೆ. ಸೋಂಕಿತರು ಮೃತ ಪಟ್ಟರೆ ಶವದ ಸಮೀಪವು ಕುಟುಂಬಸ್ಥರು ಬಾರದೆ ಇರುವ ಕಾರಣಕ್ಕೆ ಜೊತೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಅಂತ್ಯಕ್ರಿಯೆ ವೇಳೆ ಕನಿಷ್ಟ ಗೌರವವನ್ನು ಸಹ ಕೊಡುತ್ತಿಲ್ಲ ಎಂದು ಅಂತ್ಯಕ್ರಿಯೆ ಮಾಡುವ ಕೆಲಸಕ್ಕೆ ಮುಂದಾಗಿದ್ದೇವೆ ಎಂದು ಪಿಎಪ್ಐ ಸಂಘಟನೆ ಕಾರ್ಯದರ್ಶಿ ಮೊಹ್ಮದ್ ಜಮೀರ್ ಹೇಳಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಎಲ್ಲೇ ಸೋಂಕಿತರು ಮೃತ ಪಟ್ಟರೆ ಸಾಕು ಪಿಎಪ್ಐ ಸಂಘಟನೆ ಹಾಜರ್ ಇರುತ್ತದೆ. ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯಿಂದ ಪಿಪಿಇ ಕಿಟ್ ಧರಿಸಿ ಅಂತ್ಯಕ್ರಿಯೆ ಮಾಡುವ ಬಗ್ಗೆ ತರಬೇತಿ ಪಡೆದಿರುವ ಪಿಎಪ್ಐ ಕಾರ್ಯಕರ್ತರು ಈ ಸೇವೆಗೆ ಇಳಿದಿದ್ದಾರೆ. ಜಿಲ್ಲೆಯಲ್ಲಿ ಮೊದಲ ಅಲೆ ಉಂಟಾದಾಗ 64 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಸಂದರ್ಭದಲ್ಲಿ ಕೂಡ ಪಿಎಪ್ಐ ಸಂಘಟನೆ ಕಾರ್ಯಕರ್ತರು ಪಿಪಿಇ ಕಿಟ್ ಧರಿಸಿ 28 ಮಂದಿ ಸೋಂಕಿತರ ಅಂತ್ಯಕ್ರಿಯೆಯನ್ನು ಮಾಡಿ ಮಾನವೀಯತೆ ಮೆರೆದಿದ್ದಾರೆ.
ಈಗ ಕೊರೊನಾ ಎರಡನೇ ಅಲೆ ಜೋರಾಗಿದ್ದರಿಂದ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಎರಡನೇ ಅಲೆಗೆ ಸಿಲುಕಿ ಮೃತ ಪಟ್ಟವರಲ್ಲಿ ಈಗಾಗಲೇ 23 ಶವಗಳನ್ನ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಂಘಟನೆ ಮೊಬೈಲ್ ನಂಬರ್ ಶೇರ್ ಮಾಡಿದ್ದು, ಎಲ್ಲೇ ಸೋಂಕಿತರು ಮೃತಪಟ್ಟರೆ ಕರೆ ಮಾಡಿ ಕರೆಯುವಂತೆ ಹೇಳಿದ್ದಾರೆ. ಹೀಗಾಗಿ ಕರೆ ಬಂದ ಕೂಡಲೆ ಕಾರ್ಯಕರ್ತರು ಸ್ವತಃ ಗಾಡಿ ಮಾಡಿಕೊಂಡು ಯಾವುದೇ ರೀತಿಯಲ್ಲಿ ನಗದು ಪಡೆಯದೆ ಸಮಾಜ ಸೇವೆಯನ್ನ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಜಾತಿ ಧರ್ಮ ಅಂತ ನಿತ್ಯ ಜಗಳ ಮಾಡಿಕೊಂಡು ಪ್ರಾಣ ಕಳೆದುಕೊಳ್ಳುತ್ತಿರುವ ಇಂತಹ ಸಂದರ್ಭದಲ್ಲಿ ಪಿಎಪ್ಐ ಸಂಘಟನೆಯ ಸೇವೆ ಎಲ್ಲರಿಗೂ ಮಾದರಿಯಾಗಿದೆ.
ಇದನ್ನೂ ಓದಿ: ಚಾಮರಾಜನಗರ ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಗಳ ಅಂತ್ಯಕ್ರಿಯೆಗೆ ಜಿಲ್ಲಾಡಳಿತದಿಂದ ಸಿದ್ಧತೆ; ಯಡಬೆಟ್ಟದ ಬಳಿ ಗುಂಡಿ ನಿರ್ಮಾಣ
ಬೆಳಗಾವಿಯಲ್ಲಿ ಮಾನವೀಯ ಅಂತ್ಯಸಂಸ್ಕಾರ; 84 ವರ್ಷದ ಕ್ರಿಶ್ಚಿಯನ್ ವೃದ್ಧನ ಅಂತ್ಯಕ್ರಿಯೆ ನೆರವೇರಿಸಿದ ಮುಸ್ಲಿಂ ಬಾಂಧವರು