Chanakya Niti: ಈ ಸ್ಥಳಗಳಲ್ಲಿ ಮನೆ ನಿರ್ಮಿಸುವ, ಖರೀದಿಸುವ ತಪ್ಪನ್ನು ಎಂದಿಗೂ ಮಾಡಬೇಡಿ
ಸ್ವಂತ ಮನೆಯನ್ನು ಕಟ್ಟಿ, ಆ ಮನೆಯಲ್ಲಿ ನೆಮ್ಮದಿಯ ಜೀವನ ನಡೆಸಬೇಕೆಂದು ಎಲ್ಲರೂ ಬಯಸುತ್ತಾರೆ. ಹೆಚ್ಚಿನವರು ಸುಂದರವಾದ ಮನೆ ಕಟ್ಟುವತ್ತ ಹೆಚ್ಚಿನ ಗಮನವನ್ನು ನೀಡುತ್ತಾರೆ. ಆದರೆ ಆಚಾರ್ಯ ಚಾಣಕ್ಯರ ಪ್ರಕಾರ ನಾವು ಎಷ್ಟು ಸುಂದರವಾಗಿರುವ ಮನೆ ನಿರ್ಮಾಣ ಮಾಡಬೇಕು ಅನ್ನೋದಕ್ಕಿಂತ ಎಂತಹ ಜಾಗದಲ್ಲಿ ಮನೆಯನ್ನು ಕಟ್ಟಿದರೆ ಉತ್ತಮ ಎಂಬ ವಿಷಯಕ್ಕೆ ಹೆಚ್ಚಿನ ಗಮನವನ್ನು ನೀಡಬೇಕು. ಹಾಗಾದರೆ ಎಂತಹ ಜಾಗದಲ್ಲಿ ಮನೆ ಕಟ್ಟುವುದು ಒಳ್ಳೆಯದಲ್ಲ ಎಂಬುದನ್ನು ನೋಡೋಣ ಬನ್ನಿ.

ಒಂದೊಳ್ಳೆ ಮನೆ (house)ಕಟ್ಟಿ ಅಥವಾ ಮನೆ ಖರೀದಿಸಿ ಕುಟುಂಬದೊಂದಿಗೆ ಸುಖ, ಶಾಂತಿ, ನೆಮ್ಮದಿಯಿಂದ ಜೀವನ ನಡೆಸಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಹೀಗೆ ಕನಸಿನ ಮನೆಯನ್ನು ನಿರ್ಮಾಣ ಮಾಡುವಾಗ ಎಷ್ಟು ಚೆನ್ನಾಗಿ ಮನೆ ಕಟ್ಟಬೇಕು ಎನ್ನುವುದಕ್ಕಿಂತ ಎಂತಹ ಸ್ಥಳದಲ್ಲಿ ಮನೆಯನ್ನು ಕಟ್ಟಿದರೆ ಒಳ್ಳೆಯದು ಎಂಬ ವಿಚಾರಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು. ಏಕೆಂದರೆ ಆಸೆ, ಕನಸುಗಳನ್ನು ಹೊತ್ತು ನಾವೇನಾದರೂ ತಪ್ಪಾದ ಸ್ಥಳದಲ್ಲಿ ಮನೆಯನ್ನು ನಿರ್ಮಾಣ ಮಾಡಿದರೆ, ಇದು ನಮ್ಮ ಏಳಿಗೆಯ ಮೇಲೆ ಸಾಕಷ್ಟು ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಹೌದು ಈ ಸಣ್ಣ ವಿಚಾರ ಭದ್ರತೆ, ಉದ್ಯೋಗಾವಕಾಶ ಮತ್ತು ಜೀವನಶೈಲಿಯ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತವೆ. ಹಾಗಾಗಿ ಉತ್ತಮವಾದ ಜೀವನವನ್ನು ನಡೆಸಲು ಬಯಸಿದರೆ ಈ ಒಂದಷ್ಟು ಸ್ಥಳಗಳಲ್ಲಿ ಮನೆಯನ್ನು ನಿರ್ಮಾಣ ಮಾಡುವ ತಪ್ಪನ್ನು ಮಾಡಬೇಡಿ.
ಉದ್ಯೋಗಾವಕಾಶವಿಲ್ಲದ ಸ್ಥಳಗಳಲ್ಲಿ ಮನೆ ನಿರ್ಮಾಣ ಮಾಡಬೇಡಿ:
ಉದ್ಯೋಗಾವಕಾಶವಿಲ್ಲದ ಅಥವಾ ಯಾವುದೇ ಜೀವನೋಪಾಯವಿಲ್ಲದ ಪ್ರದೇಶದಲ್ಲಿ ಮನೆಯನ್ನು ನಿರ್ಮಾಣ ಮಾಡುವುದು ಒಳ್ಳೆಯದಲ್ಲ. ಇಂತಹ ಸ್ಥಳಗಳಲ್ಲಿ ಮನೆಯನ್ನು ನಿರ್ಮಿಸುವುದರಿಂದ ನೀವು ಸಾಕಷ್ಟು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೌದು ಉದ್ಯೋಗಕ್ಕಾಗಿ ದೂರದೂರಿಗೆ ಪ್ರಯಾಣಿಸಬೇಕಾಗುತ್ತದೆ. ಇದು ಪ್ರಯಾಣದ ವೆಚ್ಚವನ್ನು ಹೆಚ್ಚಿಸುವುದಲ್ಲದೆ, ನಿಮ್ಮ ಸಮಯವನ್ನೂ ವ್ಯರ್ಥ ಮಾಡುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಆದ್ದರಿಂದ ಮನೆಯನ್ನು ನಿರ್ಮಿಸಲು ಸ್ಥಳವನ್ನು ಹುಡುಕುವಾಗ, ಆ ಜಾಗವಿರುವ ಸುತ್ತಮುತ್ತ ಉತ್ತಮ ಉದ್ಯೋಗಾವಕಾಶ ಮತ್ತು ಸಾರಿಗೆ ಸೌಲಭ್ಯಗಳಿವೆಯೇ ಎಂಬುದನ್ನು ಪರಿಗಣಿಸಬೇಕು.
ನಿರ್ಜನ ಪ್ರದೇಶಗಳಲ್ಲಿ ಮನೆ ಕಟ್ಟುವ ತಪ್ಪನ್ನು ಮಾಡಬೇಡಿ:
ಯಾವುದೇ ಜನವಸತಿಯಿಲ್ಲದ ನಿರ್ಜನ ಪ್ರದೇಶಗಳಲ್ಲಿ ಮನೆಗಳನ್ನು ನಿರ್ಮಿಸುವುದು ಒಳ್ಳೆಯದಲ್ಲ. ಅಂತಹ ಸ್ಥಳಗಳಲ್ಲಿ ಹೆಚ್ಚು ನಕಾರಾತ್ಮಕ ಶಕ್ತಿಗಳು ಇರುತ್ತವೆ. ಮಾತ್ರವಲ್ಲದೆ ಅಂತಹ ಪ್ರದೇಶಗಳಲ್ಲಿ ಸರಿಯಾದ ರಸ್ತೆಗಳು, ನೀರು, ವಿದ್ಯುತ್, ವೈದ್ಯಕೀಯ ಸೌಲಭ್ಯಗಳು ಇರುವುದಿಲ್ಲ. ಉತ್ತಮ ಗುಣಮಟ್ಟದ ಜೀವನವನ್ನು ನಡೆಸಲು ಯಾವಾಗಲೂ ಮೂಲ ಸೌಕರ್ಯಗಳಿರುವ ಸ್ಥಳಗಳಲ್ಲಿಯೇ ಮನೆಯನ್ನು ನಿರ್ಮಿಸಬೇಕು ಎಂದಿದ್ದಾರೆ ಚಾಣಕ್ಯ.
ಅಸುರಕ್ಷಿತ ಪ್ರದೇಶಗಳಲ್ಲಿ ಮನೆ ನಿರ್ಮಿಸುವುದು ಒಳ್ಳೆಯದಲ್ಲ:
ನೀವು ಮನೆ ಕಟ್ಟುವಾಗ ಅಥವಾ ಮನೆಯನ್ನು ಖರೀದಿಸುವಾಗ ಆ ಪ್ರದೇಶದಲ್ಲಿ ಸೂಕ್ತ ಭದ್ರತೆ ಇದೆಯೇ ಎಂಬುದನ್ನು ಮೊದಲು ನೋಡಬೇಕು. ಕಳ್ಳತನ, ಹಿಂಸಾತ್ಮಕ ಘಟನೆಗಳು ನಡೆಯುವ ಸ್ಥಳಗಳಲ್ಲಿ ಮನೆ ನಿರ್ಮಿಸಿದರೆ, ಕುಟುಂಬ ಸದಸ್ಯರು ಆತಂಕದಲ್ಲಿಯೇ ಬದುಕಬೇಕಾಗುತ್ತದೆ. ಇದು ಮನೆಯ ಸದಸ್ಯರ ನೆಮ್ಮದಿಯನ್ನೇ ಕೆಡಿಸುತ್ತದೆ. ಹಾಗಾಗಿ ಭಯವಿಲ್ಲದ ಪ್ರದೇಶದಲ್ಲಿ ಮನೆ ಕಟ್ಟಬೇಕು. ಜೊತೆಗೆ ಮನೆ ನಿರ್ಮಿಸಲು ಸ್ಥಳವನ್ನು ಆಯ್ಕೆ ಮಾಡುವಾಗ ರಸ್ತೆಗಳು, ಬೀದಿ ದೀಪಗಳು, ತುರ್ತು ಸೇವೆಗಳು, ಪೊಲೀಸ್ ಸೇವೆಗಳು ಲಭ್ಯವಿದೆಯೇ ಎಂಬುದನ್ನು ಪರಿಶೀಲಿಸಬೇಕು.
ಇದನ್ನೂ ಓದಿ: ಜೀವನದಲ್ಲಿ ನೆಮ್ಮದಿ ಬೇಕೆಂದ್ರೆ ಈ ರೀತಿಯ ಜನರಿಂದ ಆದಷ್ಟು ದೂರವಿರಿ
ಸುತ್ತಮುತ್ತಲಿನ ಜನರು ಸಂಸ್ಕಾರವಂತರೇ ಎಂಬುದನ್ನು ಪರೀಕ್ಷಿಸಬೇಕು:
ನಮ್ಮ ಸುತ್ತಮುತ್ತಲಿನ ಜನರು ನಮ್ಮ ಆಲೋಚನೆಗಳು ಮತ್ತು ಅಭ್ಯಾಸಗಳ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರುತ್ತಾರೆ. ಅದರಲ್ಲೂ ವಿಶೇಷವಾಗಿ ಮಕ್ಕಳು ಸುತ್ತಮುತ್ತಲಿನ ಜನರನ್ನು ನೋಡಿ ಸಾಕಷ್ಟು ಕಲಿಯುತ್ತಾರೆ. ಆದ್ದರಿಂದ ಮಕ್ಕಳ ಏಳಿಗೆಯ ದೃಷ್ಟಿಯಿಂದ ಉತ್ತಮ ಮೌಲ್ಯಗಳನ್ನು ಹೊಂದಿರುವ ಜನರು ಪ್ರದೇಶದಲ್ಲಿಯೇ ಮನೆಯನ್ನು ನಿರ್ಮಾಣ ಮಾಡಬೇಕು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಹೀಗೆ ಪರಸ್ಪರ ಗೌರವ, ಸಹಾಯ, ಪ್ರಾಮಾಣಿಕತೆ ಇರುವ ಪ್ರದೇಶದಲ್ಲಿ ವಾಸಿಸುವುದರಿಂದ ನೆಮ್ಮದಿಯ ಜೀವನವನ್ನು ನಡೆಸಬಹುದು.
ಕನಸಿನ ಮನೆ ಕಟ್ಟಲು ಸರಿಯಾದ ಸ್ಥಳವನ್ನು ಆಯ್ಕೆ ಮಾಡುವುದು ಹೇಗೆ?
ಚಾಣಕ್ಯರ ಪ್ರಕಾರ ಮನೆ ಕಟ್ಟುವ ಅಥವಾ ಮನೆ ಖರೀದಿಸುವ ಮೊದಲು ಉದ್ಯೋಗಾವಕಾಶಗಳು, ಭದ್ರತೆ, ಸಾರಿಗೆ ಸೌಲಭ್ಯ, ಶಾಲಾ-ಕಾಲೇಜು, ವೈದ್ಯಕೀಯ ಸೌಲಭ್ಯ ಸೇರಿದಂತೆ ಮೂಲ ಸೌಕರ್ಯಗಳಿವೆಯೇ ಎಂಬುದನ್ನು ಪರಿಗಣಿಸಬೇಕು. ಮನೆಯ ಸುತ್ತಮುತ್ತಲಿನ ಪರಿಸರವು ಕುಟುಂಬದ ಅಗತ್ಯಗಳಿಗೆ ಅನುಕೂಲಕರವಾಗಿರಬೇಕು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




