ದೆಹಲಿಗೆ ಬಂಪರ್ ಗಿಫ್ಟ್: ಆ.17 ರಂದು 11,000 ಕೋಟಿ ರೂ. ಮೌಲ್ಯದ ಯೋಜನೆ ಉದ್ಘಾಟಿಸಲಿರುವ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ 11,000 ಕೋಟಿ ರೂಪಾಯಿ ವೆಚ್ಚದ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಾದ ದ್ವಾರಕಾ ಎಕ್ಸ್‌ಪ್ರೆಸ್‌ವೇ ಮತ್ತು ಅರ್ಬನ್ ಎಕ್ಸ್‌ಟೆನ್ಶನ್ ರೋಡ್-II (UER-II) ಅನ್ನು ಉದ್ಘಾಟಿಸಲಿದ್ದಾರೆ. ಈ ಹೆದ್ದಾರಿಗಳು ದೆಹಲಿಯ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಸಂಚಾರವನ್ನು ಸುಧಾರಿಸಲು ಸಹಾಯ ಮಾಡುತ್ತವೆ.

ನವದೆಹಲಿ, ಆಗಸ್ಟ್ 16: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ ದೆಹಲಿಯ (Delhi) ರೋಹಿಣಿ ಪ್ರದೇಶದಲ್ಲಿ ಸುಮಾರು 11,000 ಕೋಟಿ ರೂ. ಮೌಲ್ಯದಲ್ಲಿ ನಿರ್ಮಾಣವಾಗಿರುವ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನು ಉದ್ಘಾಟಿಸಲಿದ್ದಾರೆ. ಅರ್ಬನ್ ಎಕ್ಸ್‌ಟೆನ್ಶನ್ ರೋಡ್-II (UER-II) ಮತ್ತು ದ್ವಾರಕಾ ಎಕ್ಸ್ಪ್ರೆಸ್ವೇಯನ್ನು ಪ್ರಧಾನಿ ಮೋದಿಯವರು ಲೋಕಾರ್ಪಣೆಗೊಳಿಸಲಿದ್ದಾರೆ. ಈ ಸಂದರ್ಭದಲ್ಲಿ, ಪ್ರಧಾನಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ರಾಜಧಾನಿ ದೆಹಲಿಯ ದಟ್ಟಣೆಯನ್ನು ಕಡಿಮೆ ಮಾಡಲು ಈ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರವನ್ನು ಸುಧಾರಿಸುವುದು, ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದು ಮತ್ತು ದಟ್ಟಣೆಯನ್ನು ನಿಯಂತ್ರಿಸುವುದು ಇದರ ಉದ್ದೇಶವಾಗಿದೆ.
ಈ ಯೋಜನೆಯು ಜೀವನ ಸುಗಮತೆಯನ್ನು ಹೆಚ್ಚಿಸುವ ಮತ್ತು ಸುಗಮ ಚಲನಶೀಲತೆಯನ್ನು ವೇಗಗೊಳಿಸಲು ವಿಶ್ವ ದರ್ಜೆಯ ಮೂಲಸೌಕರ್ಯವನ್ನು ನಿರ್ಮಿಸುವ ಪ್ರಧಾನಿ ನರೇಂದ್ರ ಮೋದಿಯವರ ಬದ್ಧತೆಯನ್ನು ಈ ಉಪಕ್ರಮವು ಪ್ರತಿಬಿಂಬಿಸುತ್ತದೆ.
ದ್ವಾರಕಾ ಎಕ್ಸ್‌ಪ್ರೆಸ್‌ವೇಯ 10.1 ಕಿಮೀ ಉದ್ದದ ದೆಹಲಿ ವಿಭಾಗವನ್ನು ಸುಮಾರು 5,360 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ವಿಭಾಗವು ಡಿಎಂಆರ್‌ಸಿ ಬ್ಲೂ ಲೈನ್ ಮತ್ತು ಆರೆಂಜ್ ಲೈನ್, ಮುಂಬರುವ ಬಿಜ್ವಾಸನ್ ರೈಲ್ವೆ ನಿಲ್ದಾಣ, ಯಶೋಭೂಮಿ ಮತ್ತು ದ್ವಾರಕಾ ಕ್ಲಸ್ಟರ್ ಬಸ್ ಡಿಪೋಗೆ ಸಂಪರ್ಕವನ್ನು ಕಲ್ಪಿಸುತ್ತದೆ.
ದ್ವಾರಕಾ ಎಕ್ಸ್‌ಪ್ರೆಸ್‌ವೇಯು ಶಿವ ಮೂರ್ತಿ ಚೌಕದಿಂದ ದ್ವಾರಕಾ ಸೆಕ್ಟರ್-21 ರಲ್ಲಿರುವ ರೋಡ್ ಅಂಡರ್ ಬ್ರಿಡ್ಜ್ (RUB) ವರೆಗಿನ 5.9 ಕಿ.ಮೀ. ಮತ್ತು ದ್ವಾರಕಾ ಸೆಕ್ಟರ್ -21 ರಲ್ಲಿ ರೋಡ್ ಅಂಡರ್ ಬ್ರಿಡ್ಜ್ (RUB) ನಿಂದ ದೆಹಲಿ-ಹರಿಯಾಣ ಗಡಿಯವರೆಗಿನ 4.2 ಕಿ.ಮೀ ವಿಭಾಗವನ್ನು ಒಳಗೊಂಡಿದೆ. ಇದು ನಗರ ವಿಸ್ತರಣಾ ರಸ್ತೆ-II ಗೆ ನೇರವಾಗಿ ಸಂಪರ್ಕ ಕಲ್ಪಿಸುತ್ತದೆ. ಮಾರ್ಚ್ 2024 ರಲ್ಲಿ ಪ್ರಧಾನಿ ಮೋದಿ ದ್ವಾರಕಾ ಎಕ್ಸ್‌ಪ್ರೆಸ್‌ವೇಯ 19 ಕಿಮೀ ಉದ್ದದ ಹರಿಯಾಣ ವಿಭಾಗವನ್ನು ಉದ್ಘಾಟಿಸಿದ್ದರು.
ಇದನ್ನೂ ಓದಿ: ಜಿಎಸ್ಟಿ ಬದಲಾವಣೆಯಿಂದ ಸೆಮಿಕಂಡಕ್ಟರ್ ಚಿಪ್ವರೆಗೆ ಪ್ರಧಾನಿ ಮೋದಿಯ 8 ಪ್ರಮುಖ ಘೋಷಣೆಗಳು
ಜೊತೆಗೆ ಪ್ರಧಾನಿ ಮೋದಿಯವರು ಭಾನುವಾರ ಸುಮಾರು 5,580 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸೋನಿಪತ್ ಮತ್ತು ಬಹದ್ದೂರ್‌ಗಢಕ್ಕೆ ಹೊಸ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಉದ್ಘಾಟಿಸಲಿದ್ದಾರೆ. ಇದರೊಂದಿಗೆ, ಪ್ರಧಾನಿ ಮೋದಿಯವರು ಅರ್ಬನ್ ಎಕ್ಸ್‌ಟೆನ್ಶನ್ ರೋಡ್-II (UER-II) ರ ಅಲಿಪುರದಿಂದ ಡಿಚಾವ್ ಕಲಾನ್ ವಿಭಾಗವನ್ನು ಸಹ ಉದ್ಘಾಟಿಸಲಿದ್ದಾರೆ.
ಇದು ದೆಹಲಿಯ ಒಳ ಮತ್ತು ಹೊರ ವರ್ತುಲ ರಸ್ತೆಗಳು ಮತ್ತು ಧೌಲಾ ಕುವಾನ್, ಮುಕರ್ಬಾ ಚೌಕ್ ಮತ್ತು NH-09 ನಂತಹ ಜನನಿಬಿಡ ಸ್ಥಳಗಳಲ್ಲಿ ಸಂಚಾರವನ್ನು ಸುಗಮಗೊಳಿಸುತ್ತದೆ. ಸೋನಿಪತ್ ಮತ್ತು ಹೊಸ ಸೇತುವೆಗಳು ಬಹದ್ದೂರ್‌ಗಢಕ್ಕೆ ನೇರ ಪ್ರವೇಶವನ್ನು ನೀಡುತ್ತದೆ. ಈ ಯೋಜನೆಯ ಪ್ರಾರಂಭವು ಕೈಗಾರಿಕಾ ಸಂಪರ್ಕವನ್ನು ಸುಧಾರಿಸುತ್ತದೆ. ನಗರ ದಟ್ಟಣೆಯನ್ನು ಕಡಿಮೆ ಮಾಡುವುದರ ಜೊತೆಗೆ, ರಾಷ್ಟ್ರ ರಾಜಧಾನಿಯಲ್ಲಿ ಸರಕುಗಳ ಚಲನೆಯು ವೇಗಗೊಳ್ಳುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 9:50 pm, Sat, 16 August 25




