AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಕ್ಕೆ ಪಾವತಿಸುವ ಜನರ ತೆರಿಗೆ ಹಣ ವಾಸ್ತವದಲ್ಲಿ ಎಲ್ಲಿಗೆ ಹೋಗುತ್ತದೆ, ಏನಾಗುತ್ತದೆ? ಇಲ್ಲಿದೆ ಅದರ ಕುತೂಹಲಕಾರಿ ಪಯಣ

ನಾವು ಪಾವತಿಸುವ ಪ್ರತಿಯೊಂದು ರೂಪಾಯಿಯೂ ಅತ್ಯಂತ ಬೃಹತ್ ಸಾರ್ವಜನಿಕ ವೆಚ್ಚ ವ್ಯವಸ್ಥೆಯ ಭಾಗವಾಗುತ್ತದೆ. ರಾಜ್ಯಗಳು ಮತ್ತು ರಕ್ಷಣಾ ವಲಯದಿಂದ ಹಿಡಿದು ಬಡ್ಡಿ, ಪಿಂಚಣಿ ಹಾಗೂ ಸಹಾಯಧನಗಳವರೆಗೆ, ಸರ್ಕಾರದ ಹಣ ಹೇಗೆ ಚಲಿಸುತ್ತದೆ ಮತ್ತು ಸಾರ್ವಜನಿಕರು ಅದು ಎಲ್ಲಿಗೆ ತಲುಪುತ್ತದೆ ಎಂಬುದರ ಕುರಿತು ಏಕೆ ಗಮನ ಹರಿಸಬೇಕು ಎಂಬುದನ್ನು ಕೇಂದ್ರ ಬಜೆಟ್ ತೋರಿಸಿಕೊಡುತ್ತದೆ ಎಂದು ಟಿವಿ ನೆಟ್ವರ್ಕ್​ನ ಎಕ್ಸಿಕ್ಯೂಟಿವ್ ಸಂತೋಷ್ ನಾಯರ್ ಬರೆಯುತ್ತಾರೆ.

ಸರ್ಕಾರಕ್ಕೆ ಪಾವತಿಸುವ ಜನರ ತೆರಿಗೆ ಹಣ ವಾಸ್ತವದಲ್ಲಿ ಎಲ್ಲಿಗೆ ಹೋಗುತ್ತದೆ, ಏನಾಗುತ್ತದೆ? ಇಲ್ಲಿದೆ ಅದರ ಕುತೂಹಲಕಾರಿ ಪಯಣ
ಸಂತೋಷ್ ನಾಯರ್, ಎಕ್ಸಿಕ್ಯೂಟಿವ್ ಎಡಿಟರ್ (ನೆಟ್ವರ್ಕ್ ಕೋಆರ್ಡಿನೇಶನ್), ಟಿವಿ9 ನೆಟ್ವರ್ಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 13, 2026 | 5:47 PM

Share

ರಸ್ತೆಬದಿಯ ಚಹಾ ಅಂಗಡಿಯೊಂದರಲ್ಲಿ ತಂದೆಯೊಬ್ಬರು ಟೀ ಖರೀದಿಸುತ್ತಾರೆ. ಅದರ ಬೆಲೆ ₹20. ತಂದೆ ಹಣ ನೀಡುವುದನ್ನು ನೋಡಿ ಮಗ, “ಅಪ್ಪ, ಈ ಹಣ ಎಲ್ಲಿಗೆ ಹೋಗುತ್ತದೆ?” ಎಂದು ಕೇಳುತ್ತಾನೆ.

“ಅಂಗಡಿಯವನಿಗೆ,” ಎಂದು ಹೇಳಿ ತಂದೆ ನಗುತ್ತಾರೆ.

ಅವರು ಹೇಳಿದ್ದು ಸರಿ. ಆದರೆ ಭಾಗಶಃ ಮಾತ್ರ.

ಅಂಗಡಿಯವನು ಆ ₹20 ನಾಣ್ಯವನ್ನು ಹಾಲು, ಸಕ್ಕರೆ ಮತ್ತು ಟೀ ಪುಡಿ ಕೊಳ್ಳಲು ಬಳಸುತ್ತಾನೆ. ಇತ್ತ ಸಗಟು ವ್ಯಾಪಾರಿಯು ತನ್ನ ಪೂರೈಕೆದಾರನಿಗೆ ಹಣ ಪಾವತಿಸುತ್ತಾನೆ. ಈ ಹಾದಿಯಲ್ಲಿ ಯಾರೋ ಒಬ್ಬರು ಕೆಲಸಗಾರನಿಗೆ ಕೂಲಿ ನೀಡುತ್ತಾರೆ, ಇನ್ನೊಬ್ಬರು ತೆರಿಗೆ ಪಾವತಿಸುತ್ತಾರೆ. ಅದೇ ಒಂದು ರೂಪಾಯಿ ಒಬ್ಬ ವ್ಯಕ್ತಿಯ ಶ್ರಮದ ಸಣ್ಣ ತುಣುಕನ್ನು ಮತ್ತೊಬ್ಬರ ಜೀವನಕ್ಕೆ ತಲುಪಿಸುತ್ತಾ ಚಲಿಸುತ್ತಲೇ ಇರುತ್ತದೆ. ಹಣ ನಮ್ಮ ಜೇಬಿನಿಂದ ಹೊರಬಿದ್ದ ಕ್ಷಣವನ್ನು ನಾವು ತಕ್ಷಣ ಗಮನಿಸುತ್ತೇವೆ. ಆದರೆ ಅದರ ನಂತರ ಅದು ಎಲ್ಲಿಗೆ ಹೋಗುತ್ತದೆ ಎಂಬುದನ್ನು ಗಮನಿಸುವುದು ತೀರಾ ವಿರಳ.

ಸರ್ಕಾರದ ಹಣವೂ ಇದೇ ರೀತಿ ಚಲಿಸುತ್ತದೆ. ಆದರೆ ಅದನ್ನು ಕಣ್ಣಾರೆ ನೋಡುವುದು ಕೊಂಚ ಕಷ್ಟ.

ನೀವು ಸರ್ಕಾರಕ್ಕೆ ನೇರವಾಗಿ ಹಣದ ನೋಟನ್ನು ನೀಡದಿರಬಹುದು. ಆದರೆ ನೀವು ಖರೀದಿಸುವ ಹೆಚ್ಚಿನ ವಸ್ತುಗಳಲ್ಲಿ ಜಿಎಸ್‌ಟಿ (GST) ಸೇರಿರುತ್ತದೆ. ನಿಮ್ಮ ಆದಾಯವು ನಿಗದಿತ ಮಿತಿಗಿಂತ ಹೆಚ್ಚಿದ್ದರೆ, ಆದಾಯ ತೆರಿಗೆಯೂ ಅದರಲ್ಲಿ ತನ್ನ ಪಾಲು ಪಡೆಯುತ್ತದೆ. ಇಂತಹ ಕೋಟ್ಯಂತರ ಸಣ್ಣ ಮತ್ತು ದೊಡ್ಡ ಪಾವತಿಗಳು ಒಟ್ಟಾಗಿ ನಾವು ‘ಸರ್ಕಾರದ ಹಣ’ ಎಂದು ಕರೆಯುವ ನಿಧಿಯಾಗುತ್ತದೆ.

ಇದು ನಿಜವಾಗಿಯೂ ಯಾರ ಹಣ?

ಈ ಪ್ರಶ್ನೆಯನ್ನು ಕೊಂಚ ಸರಳಗೊಳಿಸೋಣ. ಬಜೆಟ್‌ನಲ್ಲಿರುವ ಲಕ್ಷಾಂತರ ಕೋಟಿಗಳನ್ನು ಬದಿಗಿಡಿ. ಸರ್ಕಾರದ ಬಳಿ ಸರಿಯಾಗಿ ₹1 ಇದೆ ಎಂದು ಕಲ್ಪಿಸಿಕೊಳ್ಳಿ. ಅದು ಎಲ್ಲಿಗೆ ಹೋಗುತ್ತದೆ?

ಕೇಂದ್ರ ಬಜೆಟ್ ಇದಕ್ಕೆ ಆಶ್ಚರ್ಯಕರವಾದ ಸರಳ ಚಿತ್ರಣವನ್ನು ನೀಡುತ್ತದೆ. ಸರ್ಕಾರಕ್ಕೆ ಹೋಗುವ ಒಂದು ರುಪಾಯಿಯಲ್ಲಿ 22 ಪೈಸೆಯು ರಾಜ್ಯ ಸರ್ಕಾರಗಳ ಸಂವಿಧಾನಾತ್ಮಕ ಪಾಲಾಗಿ ತಲುಪುತ್ತದೆ. ಸರ್ಕಾರ ಹಿಂದೆ ಪಡೆದ ಸಾಲಗಳ ಬಡ್ಡಿ ಪಾವತಿಸಲು 20 ಪೈಸೆ ಬಳಕೆಯಾಗುತ್ತದೆ.

17 ಪೈಸೆಯು ಕೇಂದ್ರ ವಲಯದ ಯೋಜನೆಗಳಿಗೆ ಧನಸಹಾಯ ನೀಡುತ್ತದೆ. 11 ಪೈಸೆ ದೇಶದ ರಕ್ಷಣಾ ವ್ಯವಸ್ಥೆಗೆ ಹೋಗುತ್ತದೆ. 8 ಪೈಸೆ ರಾಜ್ಯಗಳೊಂದಿಗೆ ಜಂಟಿಯಾಗಿ ಅನುಷ್ಠಾನಗೊಳಿಸುವ ಯೋಜನೆಗಳಿಗೆ ಮೀಸಲಾಗುತ್ತದೆ. 7 ಪೈಸೆ ಹಣಕಾಸು ಆಯೋಗದ ಶಿಫಾರಸಿನ ಇತರ ವರ್ಗಾವಣೆಗಳಿಗೆ ತೆರಳುತ್ತದೆ.

6 ಪೈಸೆ ಸಹಾಯಧನಕ್ಕೆ (ಮುಖ್ಯವಾಗಿ ಆಹಾರ ಮತ್ತು ರಸಗೊಬ್ಬರ ಸಬ್ಸಿಡಿ) ವೆಚ್ಚವಾಗುತ್ತದೆ. 7 ಪೈಸೆ ಸಾಮಾನ್ಯ ಸರ್ಕಾರಿ ಆಡಳಿತ ವೆಚ್ಚವನ್ನು ಭರಿಸುತ್ತದೆ. 2 ಪೈಸೆ ಪಿಂಚಣಿ ಪಾವತಿಗೆ ಬಳಕೆಯಾಗುತ್ತದೆ.

ಇದನ್ನು ಮತ್ತೊಮ್ಮೆ ನಿಧಾನವಾಗಿ ಓದಿ.

ಇಪ್ಪತ್ತೆರಡು ಪೈಸೆ ನೀವು ಎಂದೂ ಭೇಟಿ ನೀಡದಿರುವ ಯಾವುದೋ ರಾಜ್ಯಕ್ಕೆ ಪ್ರಯಾಣಿಸುತ್ತದೆ. ಇಪ್ಪತ್ತು ಪೈಸೆ ಕಳೆದುಹೋದ ಸಮಯಕ್ಕೆ ಹಿಂತಿರುಗಿ, ವರ್ಷಗಳ ಹಿಂದೆ ಪಡೆದ ಸಾಲವನ್ನು ತೀರಿಸುತ್ತದೆ. ಹನ್ನೊಂದು ಪೈಸೆ ದೇಶದ ರಕ್ಷಣೆಯನ್ನು ಬಲಪಡಿಸುತ್ತದೆ. ಉಳಿದದ್ದು ವಿವಿಧ ಯೋಜನೆಗಳು, ಸಬ್ಸಿಡಿಗಳು, ಪಿಂಚಣಿಗಳು ಮತ್ತು ಸರ್ಕಾರದ ನಿಶ್ಯಬ್ದ ಆಡಳಿತ ಯಂತ್ರದ ಮೂಲಕ ಚಲಿಸುತ್ತದೆ.

ಹೀಗಾಗಿ ಬಜೆಟ್ ಕೇವಲ ಸಂಖ್ಯೆಗಳ ಪುಸ್ತಕವಾಗಿ ಉಳಿಯುವುದಿಲ್ಲ. ಅದೊಂದು ಪಯಣವಾಗುತ್ತದೆ.

ಆ ಸುದೀರ್ಘ ಪಯಣದಲ್ಲಿ, ನಿಮ್ಮ ರೂಪಾಯಿಯು ನೀವು ಎಂದಿಗೂ ನೋಡದ ಹಳ್ಳಿಯೊಂದರ ರಸ್ತೆಯಾಗಬಹುದು. ನೀವು ಎಂದಿಗೂ ಭೇಟಿಯಾಗದ ಮಗುವಿನ ಶಾಲೆಯ ಮಧ್ಯಾಹ್ನದ ಊಟವಾಗಬಹುದು. ನೀವು ಎಂದಿಗೂ ಕಾಣದ ಕುಟುಂಬದ ಸಬ್ಸಿಡಿಯಾಗಬಹುದು. ಅಥವಾ ನೀವು ಹೆಸರು ಕೇಳಿರದ ವ್ಯಕ್ತಿಯ ಪಿಂಚಣಿಯಾಗಬಹುದು.

ಸಾರ್ವಜನಿಕ ಹಣದ ವಿಚಿತ್ರ ಸಂಗತಿಯೆಂದರೆ – ಹಣ ಪಾವತಿಸುವ ವ್ಯಕ್ತಿ ಮತ್ತು ಅದರ ಸೌಲಭ್ಯ ಪಡೆಯುವ ವ್ಯಕ್ತಿ ಅಪರೂಪಕ್ಕೊಮ್ಮೆ ಒಬ್ಬರೇ ಆಗಿರುತ್ತಾರೆ!

ಇಂದು ಯುವ ಉದ್ಯೋಗಿಯೊಬ್ಬರು ತೆರಿಗೆ ಪಾವತಿಸುತ್ತಾರೆ. ವರ್ಷಗಳ ನಂತರ ಮತ್ತಾರೋ ಸಾರ್ವಜನಿಕ ಆಸ್ಪತ್ರೆಯ ನೆರವು ಪಡೆಯುತ್ತಾರೆ. ಒಬ್ಬ ಅಂಗಡಿಯವನು ವ್ಯವಸ್ಥೆಗೆ ತನ್ನ ಕೊಡುಗೆ ನೀಡಿದರೆ, ಇನ್ನೊಬ್ಬ ನಾಗರಿಕನ ಮಗು ಸರ್ಕಾರಿ ಶಾಲೆಯಲ್ಲಿ ಕಲಿಯುತ್ತದೆ. ಸಮೃದ್ಧ ನಗರದಲ್ಲಿ ವಾಸಿಸುವ ವ್ಯಕ್ತಿಯು ತಾನು ಎಂದೂ ಕಾಲಿಡದ ಜಿಲ್ಲೆಯ ಸೇವೆಗಳಿಗೆ ಧನಸಹಾಯ ನೀಡಲು ನೆರವಾಗುತ್ತಾನೆ.

ನಾವು ಈ ಸೂಕ್ಷ್ಮ ಎಳೆಗಳನ್ನು ಗಮನಿಸುವುದು ವಿರಳ. ಬಹುಶಃ ಇದೇ ಕಾರಣಕ್ಕೆ ಸರ್ಕಾರದ ಹಣ ಎಂದರೆ ಅದು ‘ಯಾರದೋ ಹಣ’ ಎಂದು ನಮಗೆ ಭಾಸವಾಗಬಹುದು.

ಆದರೆ ಅದು ಯಾರದ್ದೋ ಹಣವಲ್ಲ, ನಮ್ಮದೇ ಹಣ.

ನಮ್ಮ ಸಂವಿಧಾನ ಇಲ್ಲೊಂದು ಸ್ಪಷ್ಟ ಗಡಿಯನ್ನು ಎಳೆದಿದೆ. ಕಾನೂನಿನ ಅಧಿಕಾರವಿಲ್ಲದೆ ಯಾವುದೇ ತೆರಿಗೆಯನ್ನು ಸಂಗ್ರಹಿಸುವಂತಿಲ್ಲ. ಹಾಗೆಯೇ ಸಾರ್ವಜನಿಕ ಹಣವನ್ನು ಮನಸ್ಸಿಗೆ ಬಂದಂತೆ ವೆಚ್ಚ ಮಾಡುವಂತೆಯೂ ಇಲ್ಲ. ಅದು ಹೇಗೆ ಚಲಿಸಬೇಕು ಎಂಬುದನ್ನು ಸಂವಿಧಾನಾತ್ಮಕ ಮತ್ತು ಕಾನೂನು ಪ್ರಕ್ರಿಯೆಗಳು ನಿಯಂತ್ರಿಸುತ್ತವೆ. ಈ ಇಡೀ ವ್ಯವಸ್ಥೆಯ ಹಿಂದಿರುವ ಮೂಲ ತತ್ವ ಸರಳವಾಗಿದೆ: ಸಾರ್ವಜನಿಕ ಹಣವು ಸಾರ್ವಜನಿಕ ಉದ್ದೇಶಕ್ಕಾಗಿಯೇ ಬಳಕೆಯಾಗಬೇಕು.

ಈಗ ನಿಮ್ಮ ವಾಲೆಟ್‌ನಲ್ಲಿರುವ ₹100 ರ ಬಗ್ಗೆ ಯೋಚಿಸಿ. ಅದನ್ನು ಖರ್ಚು ಮಾಡಿ ಪ್ರತಿಯಾಗಿ ಏನೂ ಸಿಗದಿದ್ದರೆ ನೀವು ಪ್ರಶ್ನಿಸುತ್ತೀರಿ. ಅಂಗಡಿಯವನು ಹೆಚ್ಚುವರಿ ಹಣ ವಸೂಲಿ ಮಾಡಿದರೆ ತಕ್ಷಣ ಗಮನಿಸುತ್ತೀರಿ.

ಅದೇ ಹಣ ಸಾರ್ವಜನಿಕ ನಿಧಿಯಾದ ಕ್ಷಣದಲ್ಲಿ ಆ ಕುತೂಹಲ ಮತ್ತು ಜಾಗರೂಕತೆ ಏಕೆ ಇಲ್ಲದಂತಾಗುತ್ತದೆ?

ನಾವು ಸರ್ಕಾರವನ್ನು ಸಂಶಯದಿಂದ ನೋಡಬೇಕಾಗಿಲ್ಲ, ಹಾಗೆಯೇ ಕುರುಡಾಗಿ ನಂಬಬೇಕಾಗಿಯೂ ಇಲ್ಲ. ಈ ಎರಡರ ನಡುವೆ ಅತ್ಯಂತ ಸಮತೋಲಿತ ಸ್ಥಳವೊಂದಿದೆ; ಅದೇ ‘ಗಮನಿಸುವುದು’ (Attention). ಹಣ ಎಲ್ಲಿಂದ ಬಂತು? ಎಲ್ಲಿಗೆ ಹೋಯಿತು? ಅದು ಯಾವ ಉದ್ದೇಶಕ್ಕಾಗಿ ಮೀಸಲಾಗಿತ್ತು? ಆ ಉದ್ದೇಶ ಈಡೇರಿತೇ? ಇಲ್ಲದಿದ್ದರೆ, ಅದಕ್ಕೆ ಯಾರು ಉತ್ತರದಾಯಿಗಳು?

ಈ ಪ್ರಶ್ನೆಗಳು ಕೇವಲ ಅರ್ಥಶಾಸ್ತ್ರಜ್ಞರಿಗೆ ಮಾತ್ರ ಸೀಮಿತವಲ್ಲ. ಒಬ್ಬ ರೈತ ಇದನ್ನು ಕೇಳಬಹುದು, ಒಬ್ಬ ವಿದ್ಯಾರ್ಥಿ ಕೇಳಬಹುದು. ಅಂಗಡಿಯವನು, ನಿವೃತ್ತ ಶಿಕ್ಷಕ, ಕಾಲೇಜು ಪದವೀಧರ — ಪ್ರತಿಯೊಬ್ಬರೂ ಇದನ್ನು ಕೇಳಬಹುದು. ಚಹಾ ಅಂಗಡಿಯಲ್ಲಿದ್ದ ಸಣ್ಣ ಹುಡುಗ ಕೂಡ ಮೊದಲ ಪ್ರಶ್ನೆಯಿಂದಲೇ ತನ್ನ ಜಿಜ್ಞಾಸೆಯನ್ನು ಪ್ರಾರಂಭಿಸಬಹುದು: ಹಣ ಎಲ್ಲಿಗೆ ಹೋಗುತ್ತದೆ?

ಅವನು ತನಗೆ ತಿಳಿಯದೆಯೇ ಅತ್ಯಂತ ದೊಡ್ಡ ಪ್ರಶ್ನೆಯನ್ನು ಕೇಳುತ್ತಿದ್ದಾನೆ.

ನಾಗರಿಕತ್ವ ಎಂಬುದು ಕೇವಲ ಮತದಾನದ ಕೇಂದ್ರದ ಒಳಗಿನಿಂದಷ್ಟೇ ಪ್ರಾರಂಭವಾಗುವುದಿಲ್ಲ. ಈ ದೇಶವನ್ನು ಯಾರೋ ಬೇರೆಯವರು ನಡೆಸುತ್ತಿದ್ದಾರೆ ಎಂಬುದರ ಬದಲಿಗೆ, ಇದು ನಮ್ಮೆಲ್ಲರ ಸಮ್ಮಿಶ್ರ ಮನೆ ಮತ್ತು ನಾವೆಲ್ಲರೂ ಇದರಲ್ಲಿ ಒಟ್ಟಾಗಿ ವಾಸಿಸುತ್ತಿದ್ದೇವೆ ಎಂದು ಅರ್ಥ ಮಾಡಿಕೊಂಡ ಕ್ಷಣದಿಂದಲೇ ಅದು ಪ್ರಾರಂಭವಾಗುತ್ತದೆ. ಇಲ್ಲಿನ ರಸ್ತೆಗಳು, ಶಾಲೆಗಳು, ಆಸ್ಪತ್ರೆಗಳು, ಪಿಂಚಣಿಗಳು, ಸಬ್ಸಿಡಿಗಳು — ಇವು ಯಾರದ್ದೋ ಬೇರೆಯವರ ಕಥೆಯಲ್ಲ, ಇವು ನಮ್ಮದೇ ಕಥೆ. ಹಾಗೆಯೇ ಅದಕ್ಕೆ ವೆಚ್ಚವಾಗುವ ಹಣವೂ ನಮ್ಮದೇ!

ನಮ್ಮ ಸ್ವಂತ ಹಣವನ್ನು ಜಾಗರೂಕತೆಯಿಂದ ಎಣಿಸುವುದನ್ನು ನಮಗೆ ಕಲಿಸಲಾಗಿದೆ. ಬಹುಶಃ ನಮ್ಮ ಜೇಬಿನಿಂದ ಹೊರಟು ಹೋದ ಹಣದ ಹಾದಿಯನ್ನು ಹಿಂಬಾಲಿಸುವುದನ್ನೂ ನಾವು ಕಲಿಯಬೇಕಿದೆ. ಸಂಶಯದಿಂದಲ್ಲ, ಜವಾಬ್ದಾರಿಯಿಂದ!

ಏಕೆಂದರೆ, ನಿಮ್ಮ ಜೇಬಿನಿಂದ ಹೊರಬಿದ್ದ ಒಂದು ರೂಪಾಯಿ ಸಾರ್ವಜನಿಕ ಜೀವನವನ್ನು ಪ್ರವೇಶಿಸಿದ ತಕ್ಷಣ ನಿಮ್ಮ ಜವಾಬ್ದಾರಿ ಮುಗಿಯುವುದಿಲ್ಲ.

ಪ್ರಜಾಪ್ರಭುತ್ವದಲ್ಲಿ, ನಿಜವಾದ ಜವಾಬ್ದಾರಿ ಪ್ರಾರಂಭವಾಗುವುದೇ ಆ ಕ್ಷಣದಲ್ಲಿ.

ಲೇಖಕರು: ಸಂತೋಷ್ ನಾಯರ್, ಎಕ್ಸಿಕ್ಯೂಟಿವ್ ಎಡಿಟರ್ (ನೆಟ್ವರ್ಕ್ ಕೋಆರ್ಡಿನೇಶನ್), ಟಿವಿ9 ನೆಟ್ವರ್ಕ್

Follow Us