AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆಡುಜೀವಿತಂ’ಗೆ ಇಲ್ಲ ಪ್ರಶಸ್ತಿ, ಜ್ಯೂರಿ ಆಶುತೋಷ್​ರದ್ದು ಇಬ್ಭಗೆ ವ್ಯಕ್ತಿತ್ವ ಎಂದ ನಿರ್ದೇಶಕ

Aadujeevitham movie: ಇತ್ತೀಚೆಗಷ್ಟೆ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಯ್ತು. ಹಲವು ಸಿನಿಮಾಗಳಿಗೆ ಪ್ರಶಸ್ತಿ ದೊರಕಿದವು. ಆದರೆ ಮಲಯಾಳಂನ ‘ಆಡುಜೀವಿತಂ’ ಸಿನಿಮಾಕ್ಕೆ ಒಂದೇ ಒಂದು ವಿಭಾಗದಲ್ಲಿಯೂ ಪ್ರಶಸ್ತಿ ಸಿಗಲಿಲ್ಲ. ಆದರೆ ಚಲನಚಿತ್ರ ಆಯ್ಕೆ ಸಮಿತಿ ಅಧ್ಯಕ್ಷರು ‘ಆಡುಜೀವಿತಂ’ ಸಿನಿಮಾವನ್ನು ಮೊದಲು ಕೊಂಡಾಡಿದ್ದರಂತೆ. ಆದರೆ ಪ್ರಶಸ್ತಿ ನೀಡಲಿಲ್ಲ. ಈ ಬಗ್ಗೆ ನಿರ್ದೇಶಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಆಡುಜೀವಿತಂ’ಗೆ ಇಲ್ಲ ಪ್ರಶಸ್ತಿ, ಜ್ಯೂರಿ ಆಶುತೋಷ್​ರದ್ದು ಇಬ್ಭಗೆ ವ್ಯಕ್ತಿತ್ವ ಎಂದ ನಿರ್ದೇಶಕ
Adujeevitam
ಮಂಜುನಾಥ ಸಿ.
|

Updated on: Aug 07, 2025 | 5:40 PM

Share

ಇತ್ತೀಚೆಗಷ್ಟೆ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಘೋಷಣೆ ಮಾಡಲಾಯ್ತು. ‘12ತ್ ಫೇಲ್’ಗೆ ಅತ್ಯುತ್ತಮ ಸಿನಿಮಾ, ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾಕ್ಕೆ ಅತ್ಯುತ್ತಮ ನಿರ್ದೇಶಕ ಮತ್ತು ಸಿನಿಮಾಟೊಗ್ರಫಿ ಪ್ರಶಸ್ತಿಗಳನ್ನು ನೀಡಲಾಯ್ತು. ನಟ ಶಾರುಖ್ ಖಾನ್ ಹಾಗೂ ವಿಕ್ರಾಂತ್ ಮಾಸಿಗೆ ಅತ್ಯುತ್ತಮ ನಟ ಪ್ರಶಸ್ತಿಗಳನ್ನು ನೀಡಲಾಯ್ತು. ಆದರೆ ಮಲಯಾಳಂನ ‘ಆಡುಜೀವಿತಂ’ ಸಿನಿಮಾಕ್ಕೆ ಯಾವುದೇ ವಿಭಾಗದಲ್ಲಿ ಒಂದೇ ಒಂದು ಪ್ರಶಸ್ತಿ ಸಹ ಸಿಗಲಿಲ್ಲ. ಇದು ಸಹಜವಾಗಿಯೇ ಸಿನಿಮಾ ಪ್ರೇಮಿಗಳಿಗೆ ಆಶ್ಚರ್ಯ ತಂದಿದೆ. ಇದೀಗ ‘ಆಡುಜೀವಿತಂ’ ನಿರ್ದೇಶಕ ಬ್ಲೆಸ್ಸಿ, ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಆಶುತೋಶ್ ಅವರ ಇಬ್ಭಗೆ ವ್ಯಕ್ತಿತ್ವವನ್ನು ಬಹಿರಂಗ ಪಡಿಸಿದ್ದಾರೆ.

ನಿರ್ದೇಶಕ ಬ್ಲೆಸ್ಸಿ ಹೇಳಿರುವಂತೆ ‘ಆಡುಜೀವಿತಂ’ ಸಿನಿಮಾವನ್ನು ಈ ಮೊದಲು ವೀಕ್ಷಿಸಿದ್ದ ಆಯ್ಕೆ ಸಮಿತಿ ಅಧ್ಯಕ್ಷ ಆಶುತೋಷ್ ಗೊವರೀಕರ್ ಸಿನಿಮಾ ಅನ್ನು 1962 ಕ್ಲಾಸಿಕ್ ಹಾಲಿವುಡ್ ಸಿನಿಮಾ, ಏಳು ಆಸ್ಕರ್ ಗೆದ್ದಿರುವ ‘ಲಾರೆನ್ಸ್ ಆಫ್ ಅರೆಬಿಯಾ’ಕ್ಕೆ ಹೋಲಿಸಿದ್ದರಂತೆ. ಸಿನಿಮಾ ಅನ್ನು ಬಹುವಾಗಿ ಕೊಂಡಾಡಿದ್ದ ಆಶುತೋಷ್ ಗೋವರೀಕರ್, ಬೆಸ್ಲಿಯನ್ನು ಮನೆಗೆ ಊಟಕ್ಕೆ ಸಹ ಆಹ್ವಾನಿಸಿದ್ದರಂತೆ. ಆದರೆ ಬೆಸ್ಲಿ ಬೇರೆಡೆ ತೆರಳಬೇಕಾಗಿದ್ದ ಕಾರಣಕ್ಕೆ ಹೋಗಲು ಆಗಿರಲಿಲ್ಲವಂತೆ. ಆದರೆ ಈಗ ಅದೇ ವ್ಯಕ್ತಿ ‘ಆಡುಜೀವಿತಂ’ ಸಿನಿಮಾ ಅನ್ನು ಯಾವೊಂದು ವಿಭಾಗದಲ್ಲಿಯೂ ಸಹ ಪ್ರಶಸ್ತಿಗೆ ಪರಿಗಣಿಸಿಲ್ಲ.

ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದ ಮಲಯಾಳಂ ಚಿತ್ರಕರ್ಮಿ ಪ್ರದೀಪ್ ನಾಯರ್, ಸಂದರ್ಶನವೊಂದರಲ್ಲಿ ಮಾತನಾಡಿ, ‘ಜ್ಯೂರಿ ಅಧ್ಯಕ್ಷ ಅಶುತೋಷ್ ಗೋವಾರಿಕರ್ ಈ ಹಿಂದೆ ಗೋವಾದಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ‘ಆಡುಜೀವಿತಂ’ ಸಿನಿಮಾ ನೋಡಿದ್ದರು ಮತ್ತು ಚಿತ್ರವನ್ನು ಅಳವಡಿಸಿಕೊಂಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಗೋವಾರಿಕರ್ ಮತ್ತು ಆಯ್ಕೆ ಸಮಿತಿಯ ಇತರರು ಸಹ ರೂಪಾಂತರದಲ್ಲಿ ಸ್ವಂತಿಕೆಯ ಕೊರತೆಯಿದೆ ಮತ್ತು ನಟನೆ ಕೃತಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು’ ಎಂದಿದ್ದಾರೆ.

ಇದನ್ನೂ ಓದಿ:ಇದು ಜೋಕ್ ಅಲ್ಲ ತಾನೇ; ಆಸ್ಕರ್ ರೇಸ್​ನಲ್ಲಿ ‘ಕಂಗುವ’ ಹಾಗೂ ‘ಆಡುಜೀವಿತಂ’

ಸಿನಿಮಾದ ಹಾಡುಗಳಿಗೆ ನಿರ್ಮಾಪಕರು ಸರಿಯಾದ ಆಂಗ್ಲಭಾಷೆ ಸಬ್​ಟೈಟಲ್​ಗಳನ್ನು ನೀಡಿರಲಿಲ್ಲವಾದ್ದರಿಂದ ಸಿನಿಮಾದ ಹಾಡುಗಾರರಿಗೆ, ಚಿತ್ರ ಸಾಹಿತ್ಯ ವಿಭಾಗದಲ್ಲಿಯೂ ಸಹ ಪ್ರಶಸ್ತಿಗೆ ಪರಿಗಣಿಸಲಿಲ್ಲ. ಸಿನಿಮಾದಲ್ಲಿ ನಟಿಸಿರುವ ಕೆಎಲ್ ಗೋಕುಲ್ ಅವರ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಯ್ತು, ಆದರೆ ಸಿನಿಮಾದ ಒಟ್ಟಾರೆ ಗುಣಮಟ್ಟ ‘ಚೆನ್ನಾಗಿಲ್ಲ’ದ ಕಾರಣ ಅವರಿಗೂ ಪ್ರಶಸ್ತಿ ಸಿಗಲಿಲ್ಲ’ ಎಂದಿದ್ದಾರೆ.

ಇನ್ನು ಈ ಬಾರಿ ಅತ್ಯುತ್ತಮ ಪೋಷಕನಟಿ ಪ್ರಶಸ್ತಿ ಪಡೆದಿರುವ ಮಲಯಾಳಂ ನಟಿ ಊರ್ವಶಿ, ‘ಆಡುಜೀವಿತಂ’ ಸಿನಿಮಾಕ್ಕೆ ಪ್ರಶಸ್ತಿ ಸಿಗದೇ ಇರುವುದನ್ನು ತೀವ್ರವಾಗಿ ಖಂಡಿಸಿದ್ದು, ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿದ್ದ ‘ಎಂಪುರನ್’ ಸಿನಿಮಾದ ಕಾರಣಕ್ಕೆ ಅವರ ‘ಆಡುಜೀವಿತಂ’ ಸಿನಿಮಾಕ್ಕೆ ಪ್ರಶಸ್ತಿ ನಿರಾಕರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೃಥ್ವಿರಾಜ್ ನಿರ್ದೇಶನ ಮಾಡಿದ್ದ ‘ಎಂಪುರನ್’ ಸಿನಿಮಾ ಅನ್ನು ಬಿಜೆಪಿಗರು ವಿರೋಧಿಸಿದ್ದರು. ಕೆಲವು ಸಂಭಾಷಣೆಗಳು, ಕೆಲ ಪಾತ್ರಗಳ ಹೆಸರುಗಳ ಬಗ್ಗೆ ತೀವ್ರ ಆಕ್ಷೇಪಣೆ ಎತ್ತಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ