ಕೋಲಾರ: ಬಂಗಾರ ತಿರುಪತಿ ದೇವಾಲಯದ ಹುಂಡಿ ಹಣ ಕದ್ದು ಸಿಕ್ಕಿಬಿದ್ದ ನೌಕರ
ಕೋಲಾರದ ಬಂಗಾರ ತಿರುಪತಿ ನೇತ್ರ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಹುಂಡಿ ಎಣಿಕೆ ವೇಳೆ ನೌಕರ ಸಾವಿರಾರು ರೂ ಹಣ ಕದ್ದು ಸಿಕ್ಕಿಬಿದ್ದ ಘಟನೆ ನಡೆದಿದೆ. ಮುಜರಾಯಿ ಅಧಿಕಾರಿಗಳು ಹಣವನ್ನು ವಶಪಡಿಸಿಕೊಂಡು ಕ್ರಮಕ್ಕೆ ಮುಂದಾಗಿದ್ದಾರೆ. ದೇವಾಲಯದ ಮುಖ್ಯ ಹುಂಡಿಯಲ್ಲಿ 13 ಲಕ್ಷ ರೂ ಹಾಗೂ ಅನ್ನದಾಸೋಹ ಹುಂಡಿಯಲ್ಲಿ 53 ಸಾವಿರ ರೂ ಸಂಗ್ರಹವಾಗಿದೆ ಎಂದು ಇಓ ಮಂಜುನಾಥ್ ತಿಳಿಸಿದ್ದಾರೆ.

ಮುಖ್ಯಾಂಶಗಳು
- ಬಂಗಾರ ತಿರುಪತಿ ದೇವಾಲಯದ ಹುಂಡಿ ಹಣ ಎಗರಿಸಿದ ನೌಕರ
- ನೌಕರನ ಕೃತ್ಯ ಸಿಸಿಟಿವಿಯಲ್ಲಿ ಸೆರೆ
- ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಕೋಲಾರ, ಜುಲೈ 16: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಬಂಗಾರಪೇಟೆ ತಾಲ್ಲೂಕಿನ ಬಂಗಾರ ತಿರುಪತಿ ಶ್ರೀ ನೇತ್ರ ವೆಂಕಟರಮಣ ಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯದ ವೇಳೆ, ದೇವಸ್ಥಾನದ ನೌಕರನೊಬ್ಬ ಹಣ ಕದ್ದು (temple Hundi theft) ಸಿಕ್ಕಿಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ. ಹೆಚ್ಆರ್ ಮಂಜುನಾಥ್ ಹಣ ಎಗರಿಸಿದ ಸಿಬ್ಬಂದಿ. ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸಿಸಿಟಿವಿ ಕ್ಯಾಮೆರಾದಲ್ಲಿ ಕೃತ್ಯ ಸೆರೆ
ಮುಜರಾಯಿ ತಹಶೀಲ್ದಾರ್ ಶ್ರೀನಿವಾಸರೆಡ್ಡಿ ಹಾಗೂ ಕಂದಾಯ ಮತ್ತು ಮುಜರಾಯಿ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿತ್ತು. ಈ ವೇಳೆ ಕರ್ತವ್ಯದಲ್ಲಿದ್ದ ದೇವಾಲಯದ ಸಿಬ್ಬಂದಿ ಹೆಚ್.ಆರ್. ಮಂಜುನಾಥ್ ಎಂಬಾತ ಯಾರಿಗೂ ತಿಳಿಯದಂತೆ 3,100 ರೂ ಹಣವನ್ನು ಎಗರಿಸಿದ್ದಾನೆ. ಹಣ ಕದ್ದು ಅದನ್ನು ಪರಿಶೀಲಿಸುತ್ತಿದ್ದ ದೃಶ್ಯವು ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಬಿಎಂಟಿಸಿ ಪ್ರಯಾಣಿಕರೇ ಎಚ್ಚರ: ಪ್ರಯಾಣಿಕರ ಸೋಗಿನಲ್ಲಿ ಬಂದು ಕಂಡಕ್ಟರ್ ಬ್ಯಾಗನ್ನೇ ಎಗಿರಿಸಿದ ಮಹಿಳೆ, ವಿಡಿಯೋ ವೈರಲ್
ಇನ್ನು ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಮುಜರಾಯಿ ಅಧಿಕಾರಿಗಳು ಸದ್ಯ ಆರೋಪಿ ಮಂಜುನಾಥ್‌ನಿಂದ ಕದ್ದ ಹಣವನ್ನು ವಶಪಡಿಸಿಕೊಂಡಿದ್ದು, ಆತನ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಹುಂಡಿಯಲ್ಲಿ 13.5 ಲಕ್ಷಕ್ಕೂ ಅಧಿಕ ಹಣ ಸಂಗ್ರಹ
ಇತ್ತ ದೇವಾಲಯದ ಹುಂಡಿ ಎಣಿಕೆ ಕಾರ್ಯ ಕೂಡ ಮುಕ್ತಾಯಗೊಂಡಿದ್ದು, ಭಕ್ತರು ದೊಡ್ಡ ಪ್ರಮಾಣದಲ್ಲಿ ಕಾಣಿಕೆ ಅರ್ಪಿಸಿದ್ದಾರೆ. ದೇವಾಲಯದ ಪ್ರಮುಖ ಹುಂಡಿಯಲ್ಲಿ ಒಟ್ಟು 13 ಲಕ್ಷ ರೂ ಹಾಗೂ ಅನ್ನದಾಸೋಹ ಹುಂಡಿಯಲ್ಲಿ 53 ಸಾವಿರ ರೂ ನಗದು ಸಂಗ್ರಹವಾಗಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್ ಮಾಹಿತಿ ನೀಡಿದ್ದಾರೆ.
ಸಂಬಂಧಿಯಿಂದಲೇ 5 ಲಕ್ಷ ರೂ ಮೌಲ್ಯದ ಚಿನ್ನದ ಸರ ಕಳ್ಳತನ
ಇನ್ನು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಯಲ್ಲೂರು ಗ್ರಾಮದಲ್ಲಿ ಮತ್ತೊಂದು ಕಳ್ಳತನ ಘಟನೆ ನಡೆದಿದೆ. ಮನೆಗೆ ಬಂದಿದ್ದ ಸಂಬಂಧಿಯಿಂದಲೇ ಚಿನ್ನದ ಸರ ಕಳ್ಳತನ ಮಾಡಲಾಗಿದೆ. ಸುಶೀಲಮ್ಮ ಎಂಬುವವರಿಂದ ಕೃತ್ಯವೆಸಗಲಾಗಿದೆ. ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮೈಸೂರು: ಮಹಾಬಲೇಶ್ವರ ದೇವಸ್ಥಾನದ ಹುಂಡಿ ಹಣ, ಬೆಳ್ಳಿ ವಿಗ್ರಹಗಳು, ಕಂಚಿನ ಆಭರಣ ದೋಚಿದ ಕಳ್ಳರು
ಮನೆಗೆ ಆಗಮಿಸಿದ್ದ ಸುಶೀಲಮ್ಮ, ಮುನಿಲಕ್ಷ್ಮಮ್ಮ ಕುತ್ತಿಗೆಯಲ್ಲಿದ್ದ 5 ಲಕ್ಷ ರೂ ಮೌಲ್ಯದ 45 ಗ್ರಾಂ ಚಿನ್ನದ ಸರ ದೋಚಿದ್ದಾರೆ. ಹಳೆ ದ್ವೇಷ ಹಿನ್ನೆಲೆ ಸಂಚು ಮಾಡಿ ಬಾಲಕನೊಂದಿಗೆ ಸರ ಕಳ್ಳತನ ಮಾಡಲಾಗಿದೆ. ಸದ್ಯ ಘಟನೆ ನಡೆದು 36 ಗಂಟೆಯೊಳಗೆ ಶ್ರೀನಿವಾಸಪುರ ಪೊಲೀಸರು ಆರೋಪಿನ್ನು ಬಂಧಿಸಿ, ಚಿನ್ನದ ಸರ ವಶಕ್ಕೆ ಪಡೆದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




