ಜ್ಞಾನದ ದೀಪ ಹಚ್ಚುವವರ ಬದುಕಿನಲ್ಲಿ 17 ತಿಂಗಳಿಂದ ಕತ್ತಲೆ: ಉತ್ತರ ಕನ್ನಡದ 219 ಗ್ರಂಥಾಲಯ ಮೇಲ್ವಿಚಾರಕರ ಕಣ್ಣೀರು
ಉತ್ತರ ಕನ್ನಡ ಜಿಲ್ಲೆಯ 219 ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರು 17 ತಿಂಗಳಿಂದ ಪೂರ್ಣ ವೇತನವಿಲ್ಲದೆ ಪರದಾಡುತ್ತಿದ್ದಾರೆ. ಜಿಲ್ಲಾ ಪಂಚಾಯತ್‌ನಿಂದ ಬರಬೇಕಾದ ಹೆಚ್ಚುವರಿ ವೇತನ ಬಾಕಿ ಉಳಿದಿದ್ದು, ಇಲಾಖೆಗಳ ನಡುವಿನ ಒಳಜಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ತಮ್ಮ ಬೇಡಿಕೆ ಈಡೇರದಿದ್ದರೆ ಅಹೋರಾತ್ರಿ ಧರಣಿ ನಡೆಸುವುದಾಗಿ ಮೇಲ್ವಿಚಾರಕರು ಎಚ್ಚರಿಸಿದ್ದಾರೆ. ಈ ಅನ್ಯಾಯಕ್ಕೆ ಶೀಘ್ರ ಪರಿಹಾರ ಕೋರಿದ್ದಾರೆ.

ಕಾರವಾರ, ಸೆ.2: ಸಾರ್ವಜನಿಕರಿಗೆ ಜ್ಞಾನದ ದೀಪ ಹಚ್ಚುವ ಕೆಲಸ ಮಾಡುವ ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರ (Library Supervisors) ಬದುಕಿನಲ್ಲಿ ಕಳೆದ 17 ತಿಂಗಳಿಂದ ಕತ್ತಲೆ ಆವರಿಸಿದೆ. ಇಲಾಖೆಗಳ ನಡುವಿನ ಒಳಜಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ 219 ಗ್ರಂಥಾಲಯ ಮೇಲ್ವಿಚಾರಕರು ನ್ಯಾಯಬದ್ಧವಾಗಿ ಸಿಗಬೇಕಾದ ಪೂರ್ಣ ವೇತನ ಸಿಗದೇ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಕನಿಷ್ಠ ವೇತನ ಕಾಯ್ದೆಯಡಿ ಗ್ರಂಥಾಲಯ ಮೇಲ್ವಿಚಾರಕರಿಗೆ ಸಿಗಬೇಕಾದ ಹೆಚ್ಚುವರಿ ವೇತನಕ್ಕೆ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಕೊಕ್ಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
2019ಕ್ಕಿಂತ ಮುಂಚೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿದ್ದ ಈ ಸಿಬ್ಬಂದಿಯನ್ನು ಸರ್ಕಾರದ ಆದೇಶದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ವರ್ಗಾಯಿಸಲಾಯಿತು.ನಿಯಮದ ಪ್ರಕಾರ ಇವರಿಗೆ ನೀಡುವ 12 ಸಾವಿರ ರೂ. ಗೌರವಧನದ ಜೊತೆಗೆ ಜಿಲ್ಲಾ ಪಂಚಾಯತ್‌ನ ತೆರಿಗೆ ವಸೂಲಿ ಅನುದಾನದಿಂದ 7,200 ರೂ. ಹೆಚ್ಚುವರಿ ವೇತನ ನೀಡಬೇಕು. ಆದರೆ, ಕಳೆದ 17 ತಿಂಗಳಿಂದ ಜಿ.ಪಂ ಈ ಹಣವನ್ನು ಬಿಡುಗಡೆ ಮಾಡದೇ ಬಾಕಿ ಉಳಿಸಿಕೊಂಡಿದೆ.
ಗ್ರಾಮ ಪಂಚಾಯತಿಯ ಎಸ್‌ಐಆರ್ (SIR) ಸೇರಿದಂತೆ ಎಲ್ಲಾ ರಕಮಿನ ಕೆಲಸಗಳನ್ನು ಇವರಿಂದ ಮಾಡಿಸಿಕೊಳ್ಳಲಾಗುತ್ತದೆ. ಆದರೆ, ವೇತನದ ವಿಷಯ ಬಂದಾಗ ತಾವು ಯಾವ ಇಲಾಖೆಯ ವ್ಯಾಪ್ತಿಗೆ ಬರುತ್ತೇವೆ ಎಂಬ ಸ್ಪಷ್ಟನೆಯನ್ನೂ ಅಧಿಕಾರಿಗಳು ನೀಡುತ್ತಿಲ್ಲ. ಜಿ.ಪಂ ಹಾಗೂ ಆರ್‌ಡಿಪಿಆರ್ (RDPR) ಇಲಾಖೆಗಳು ತಮ್ಮಿಂದ ಕೆಲಸ ಪಡೆಯುತ್ತಿದ್ದರೂ ವೇತನ ನೀಡುವಾಗ ಮಾತ್ರ ತಮ್ಮನ್ನು ಅನಾಥರಂತೆ ನಡೆಸಿಕೊಳ್ಳುತ್ತಿವೆ ಎಂದು ಮೇಲ್ವಿಚಾರಕರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು ಉತ್ತರ ಕನ್ನಡ ಜಿ.ಪಂ ಉಪಕಾರ್ಯದರ್ಶಿ ಪ್ರಕಾಶ್ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದ್ದು, ತಮ್ಮ ಬೇಡಿಕೆಯನ್ನು ತಕ್ಷಣ ಈಡೇರಿಸುವಂತೆ ಒತ್ತಾಯಿಸಲಾಗಿದೆ.
ಇದನ್ನೂ ಓದಿ; ಕಾರ್ಕಳದಲ್ಲಿ ಬಿಸಿ ಏರಿಸಿದ ‘ಪರಶುರಾಮ ಥೀಮ್ ಪಾರ್ಕ್’ ಸಮರ: ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು ಬೀದಿಗೆ
ಅಧಿಕಾರಿಗಳ ಉದಾಸೀನತೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಿಬ್ಬಂದಿ, ಇನ್ನು ಒಂದು ತಿಂಗಳ ಒಳಗಾಗಿ ಈ ವೇತನ ತಾರತಮ್ಯದ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಜಿಲ್ಲಾ ಪಂಚಾಯತ್ ಕಚೇರಿಯ ಎದುರು ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




