ಆಗಾಗ ಅರುಂಧತಿ: ‘ಬರೆಯುತ್ತಿದ್ದೇನೆ’ ಎಂಬ ಸತ್ಯವೇ ದೊಡ್ಡದೆನ್ನಿಸಿತು ಈ ಅಂಕಣ ಬರೆಯುತ್ತಾ ಹೋದಂತೆ
Column : ಮತ್ತೆ ಸಂಪಾದಕರನ್ನು ಸಂಪರ್ಕಿಸಿದೆ. ಎಲ್ಲದಕ್ಕೂ ಉತ್ತರ ನಿಮಗೆ ಬೇಕಾದ ಸ್ವರೂಪದಲ್ಲೇ ಸಿಗುವುದಿಲ್ಲ. ಆದರೆ, ನಿಮಗೆ ಭೂತ ಮುಖ್ಯವೋ ಭವಿಷ್ಯ ಮುಖ್ಯವೋ ವಾಸ್ತವ ಮುಖ್ಯವೋ ಎಂದರು. ವಾಸ್ತವ ಎಂದೆ. ಬರೆಯಲಾರಂಭಿಸಿದೆ. ಇದು ಕೊನೆಯ ಕಂತು.
ಆಗಾಗ ಅರುಂಧತಿ: ಬೆಳಗ್ಗೆ ಎದ್ದವಳೇ ನನ್ನನ್ನೇ ನಾನು ದಿಟ್ಟಿಸಿಕೊಂಡೆ ಕನ್ನಡಿಯಲ್ಲಿ. ಸಾಕು ಇನ್ನು ಬರೆದಿದ್ದು ಕೊನೆಯ ಕಂತು ಬರೆದು ಮುಗಿಸಿಬಿಡೋಣ ಎಂದು ಗೇಟಿನತ್ತ ನಡೆದೆ. ಚೀಲದಲ್ಲಿದ್ದ ಹಾಲಿನ ಪ್ಯಾಕೆಟ್ ತೆಗೆದುಕೊಂಡು ಕಾಯಲು ಇಟ್ಟೆ. ಕಾಫಿಯೊಂದಿಗೆ ಬಾಲ್ಕನಿಯಲ್ಲಿ ಬಂದು ಕುಳಿತೆ. ಈ ಅಂಕಣವನ್ನು ಮನಸ್ಸು ಬಂದಾಗ ಬರೆಯುತ್ತೇನೆ ಎಂದು ಸಂಪಾದಕರಿಗೆ ಹೇಳಿದ್ದೆನಾದ್ದರಿಂದ ನನ್ನ ಹೆಸರಿನ ಹಿಂದೆ ‘ಆಗಾಗ’ ಎಂದು ಸೇರಿಸಿ ಅವರು ಮೊದಲು ನನಗೊಂದು ನಿರಾಳ ಭಾವ ತಂದರು. ಕಥೆ ಕಾದಂಬರಿ ಓದಿ ಗೊತ್ತಿತ್ತು. ಆದರೆ ಆತನಕ ಬರೆವಣಿಗೆ ನನ್ನ ಮಾಧ್ಯಮವಾಗಿರಲಿಲ್ಲ. ಬರೆಯುತ್ತ ಹೋದಂತೆ ಇದು ನನಗೊಂದು ಶಾಶ್ವತ ಪರ್ಯಾಯ ಮಾರ್ಗವೇ ಆಗುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ. ಆದರೆ, ಸಂಪಾದಕರದು ಒಂದೇ ಶರತ್ತು. ನೀವು ಏನೇ ಬರೆದರೂ ಸತ್ಯವನ್ನೇ ಬರೆಯಬೇಕು. ಆ ಪ್ರಕಾರ ನಾನು ಬರೆಯುತ್ತ ಹೋದೆ ನೀವೆಲ್ಲ ಓದುತ್ತ ಹೋದಿರಿ. ನಾನೀಗ ಕೊನೆಯ ಸತ್ಯವನ್ನು ನಿಮ್ಮೆದುರು ಬಿಚ್ಚಿಡುವಂಥ ಸಮಯ ಬಂದಿದೆ. ಅರುಂಧತಿ (Arundhati)
ನಾನು ಸಾಫ್ಟ್ವೇರ್ ಎಂಜಿನಿಯರ್. ಫೋಟೋಗ್ರಫಿ ನನ್ನ ಹವ್ಯಾಸ. ಐದನೇ ಕ್ಲಾಸಿಗೇ ನನ್ನ ತಾಯಿ ಊಟಿಯ ರೆಸಿಡೆನ್ಶಿಯಲ್ ಶಾಲೆಗೆ ಸೇರಿಸಿದರು. ನಂತರ ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಓದಿ ಕೆಲಸಕ್ಕೆ ಸೇರಿಕೊಂಡೆ. ಯಾವಾಗ ವರ್ಕ್ ಫ್ರಂ ಹೋಮ್ ಶುರುವಾಯಿತೋ ನಾನು ನನ್ನ ಊರಿಗೆ ಮರಳಿದೆ. ಆತನಕ ನನಗೆ ಕನಸಿನಲ್ಲಿ ಪ್ರೋಗ್ರ್ಯಾಂಗಳು ಬಿಟ್ಟರೆ, ಅಪರೂಪಕ್ಕೆ ಯಾವುದೋ ಕಾಡು ನದಿ ಅಲೆಯುತ್ತಿರುವಂಥ ದೃಶ್ಯಗಳು ಹಾದು ಹೋಗುತ್ತಿದ್ದವು. ಆದರೆ ಆನಂತರ ಬಿದ್ದ ಕನಸುಗಳು ನನ್ನನ್ನು ಅದೆಷ್ಟು ಕಂಗೆಡಿಸಿಬಿಟ್ಟವೆಂದರೆ… ಪೂರ್ವಜನ್ಮಕ್ಕೇನಾದರೂ ಮರಳುತ್ತಿದ್ದೇನಾ ಎಂಬಂತೆ. ಇದ್ಯಾವುದನ್ನೂ ನಂಬದ ನಾನು ಇದರಿಂದ ಹೊರಬರುವುದು ಹೇಗೆ? ಬೀಳುತ್ತಿದ್ದ ಕನಸುಗಳಿಗೂ ನನ್ನ ಆಸಕ್ತಿ, ಆಲೋಚನೆಗಳಿಗೂ ಸಂಬಂಧವೇ ಇರಲಿಲ್ಲ.
ಅಜ್ಜಿಯ ಬಳಿ ಹೇಳಿಕೊಂಡರೆ ದೇವರು ದಿಂಡಿರು ಕೊನೆಗೆ ದೆವ್ವವೆಂದೂ ಹೇಳಿಯಾರು. ಅಮ್ಮನ ಬಳಿ ಹೋದರೆ ಕೌನ್ಸೆಲಿಂಗ್, ಥೆರಪಿ ಅಂತ ಅಂದರೂ ಅಂದರೇ. ಸ್ನೇಹಿತರ ಬಳಿ ಹೇಳಿಕೊಂಡರೆ ಮಳ್ಳು ನೀನು ಎಂದು ನಕ್ಕು ಅವಮಾನಿಸಲೂ ಹಿಂದೆಮುಂದೆ ನೋಡರು. ಹಾಗಿದ್ದರೆ ಏನು ಮಾಡಲಿ? ಎಲ್ಲರ ಬಳಿ ನನ್ನ ಸಮಸ್ಯೆ ಹೇಳಿಕೊಂಡು, ಅವರವರ ಆಲೋಚನೆಗೆ ತಕ್ಕಂತೆ ಪರಿಹಾರ ಕಂಡುಕೊಳ್ಳಲು ನನ್ನನ್ನು ಎಳೆದಾಡುತ್ತ ಹೋದರೆ ನನ್ನ ಪರಿಸ್ಥಿತಿ? ಆದರೆ ಹಾಗೆಂದು ನನಗೆ ಸುಮ್ಮನಿರಲು ಆಗುತ್ತಿಲ್ಲ. ನಿದ್ದೆ ಬರುತ್ತಿಲ್ಲ. ಇದರಿಂದ ಕೆಲಸ ಮಾಡುವಲ್ಲಿ ಏಕಾಗ್ರತೆ ಒದಗುತ್ತಿಲ್ಲ. ಏನಾದರೂ ಒಂದು ಪರಿಹಾರ ಕಂಡುಕೊಳ್ಳಲೇಬೇಕು ಎಂದು ಯೋಚಿಸಿದೆ.
ಇದನ್ನೂ ಓದಿ : ಆಗಾಗ ಅರುಂಧತಿ : ಸ್ನೇಹಿತೆಯರೂ ಇಲ್ಲ, ಫೋನಿನಲ್ಲಿ ಒಬ್ಬ ಗಂಡಸಿನ ನಂಬರಾದರೂ?
ಇದೆಲ್ಲ ನಡೆಯುವಾಗಲೇ ನನ್ನ ಗೆಳತಿಯೊಬ್ಬಳು ತಾನು ಬರೆದ ಮೊದಲ ಕವಿತೆ ವೆಬ್ವೊಂದರಲ್ಲಿ ಪ್ರಕಟವಾಗಿದೆಯೆಂದು ಲಿಂಕ್ ಕಳಿಸಿದಳು. ಕವಿತೆಯ ಜಾಡು ಹಿಡಿದು ಓದುತ್ತಿದ್ದಂತೆ ಅನೇಕ ಅನುಭವ ಕಥನಗಳು, ಸರಣಿಗಳು, ಲೇಖನಗಳು, ಅನುವಾದಗಳು, ಕಲೆ ಸಾಹಿತ್ಯ ಸಂಬಂಧಿ ಅಂಕಣಗಳೆಲ್ಲವೂ ನನ್ನ ಹಿಡಿದಿಡುತ್ತ ಹೋದವು. ತಿಂಗಳುಗಟ್ಟಲೆ ಓದುತ್ತಲೇ ಹೋದೆ. ಕೊನೆಗೆ ಸಂಪಾದಕರನ್ನು ಫೇಸ್ಬುಕ್ನಲ್ಲಿ ಹುಡುಕಿದೆ. ಅವರಿಗೊಂದು ದಿನ ಮೆಸೇಜ್ ಹಾಕಿ ನನ್ನ ಕನಸಿನ ಬಗ್ಗೆ ಮುಲಾಜಿಲ್ಲದೆ ಹೇಳಿಕೊಳ್ಳಬೇಕು ಎನ್ನಿಸಿ ಹೇಳಿಕೊಂಡೇ ಬಿಟ್ಟೆ. ಆಗ ಅವರು ನಿಮಗೆ ಬರೆಯುವುದೊಂದೇ ಉಪಾಯ ಎಂದರು. ಅದು ಹೇಗೆ ಸಾಧ್ಯ? ಎಂದು ಅಚ್ಚರಿಗೆ ಬಿದ್ದೆ. ತಮಾಷೆ ಮಾಡುತ್ತಿದ್ದಾರೆಂದು ಎರಡು ದಿನ ಸುಮ್ಮನಾದೆ. ಆಗಲೂ ಅವರು ಅದನ್ನೇ ಹೇಳಿದರು. ಇದೇನು AI? ಎಂದುಕೊಂಡೆ. ಮತ್ತೆ ಮೂರನೇ ದಿನವೂ ಅದೇ ಉತ್ತರ. ಆದರೆ ಸ್ವಲ್ಪ ಬದಲಾವಣೆ ಇತ್ತು. ಹೀಗೆ ಆನ್ಲೈನ್ನಲ್ಲಿ ಓದುತ್ತಾ ಇಂಗ್ಲಿಷ್ ಮ್ಯಾಗಝೀನುಗಳಲ್ಲಿ ವಿವಿಧ ಬರಹಗಾರರ ಸಂದರ್ಶನಗಳನ್ನು ಓದುತ್ತಿದ್ದೆ. ಅವರ ಕಥೆ, ಕಾದಂಬರಿ ಹುಟ್ಟಿದ ಹಿನ್ನೆಲೆಯ ಬಗ್ಗೆ ಅವರು ನಿಜಜೀವನದ ಘಟನೆಗಳನ್ನು ಹಂಚಿಕೊಂಡಿದ್ದು ಕಣ್ಣಿಗೆ ಬಿದ್ದಿತು. ಆಗ ಯಾಕೆ ನಾನೂ ಬರೆಯಲು ಪ್ರಯತ್ನಿಸಬಾರದು ಎನ್ನಿಸಿತು. ಕೆಲದಿನಗಳ ಕಾಲ ಬರೆಯುವುದು ಅಳಿಸುವುದು ಮಾಡುತ್ತಲೇ ಹತಾಶೆಗೊಳಗಾದೆ. ಎಲ್ಲಕ್ಕಿಂತ ನನ್ನನ್ನು ಕಾಡುವುದು ನನ್ನ ವ್ಯಕ್ತಿತ್ವಕ್ಕೂ ನನಗೂ ಸಂಬಂಧವಿಲ್ಲದ ಪಾತ್ರ ನನ್ನ ಕನಸಿನಲ್ಲಿ ಹೇಗೆ ಬಂದಿತು ಎನ್ನುವುದು.
ಮತ್ತೆ ಸಂಪಾದಕರನ್ನು ಸಂಪರ್ಕಿಸಿದೆ. ಎಲ್ಲದಕ್ಕೂ ಉತ್ತರ ನಿಮಗೆ ಬೇಕಾದ ಸ್ವರೂಪದಲ್ಲೇ ಸಿಗುವುದಿಲ್ಲ. ಕನಸೋ ನಿಜವೋ… ಪ್ರಶ್ನೆ ಅದಲ್ಲ. ಆದರೆ, ನಿಮಗೆ ಭೂತ ಮುಖ್ಯವೋ ಭವಿಷ್ಯ ಮುಖ್ಯವೋ ವಾಸ್ತವ ಮುಖ್ಯವೋ ಎಂದರು. ವಾಸ್ತವ ಎಂದೆ. ಸದ್ಯದ ತೊಳಲಾಟದಿಂದ ನಾನು ಪಾರಾಗಬೇಕು ಎಂದೆ. ಆದರೆ ನಾನು ಯಾರ ಕೈವಶವಾಗದೆಯೇ ಈ ಸ್ಥಿತಿಯಿಂದ ದಾಟಬೇಕು ಎಂದೆ. ಅದಕ್ಕವರು, ಹಾಗಿದ್ದರೆ ಬರೆಯುತ್ತ ಹೋಗು ಎಂದು ಮತ್ತಷ್ಟು ಸಲಹೆಗಳನ್ನು ನೀಡಿದರು. ಕನಸನ್ನಷ್ಟೇ ಬರೆದೆ. ಎರಡು ಪುಟದಲ್ಲಿ ಮುಗಿಯಿತು. ನೀನು ಸ್ಕೂಲು ಹುಡುಗಿಯೇ? ಪ್ರಬಂಧ ಬರೆಯಲು ಹೇಳಿದ್ದೇನೆ? ಎಂದರು. ನಿಮಗೆ ಬುದ್ಧಿ ಇದೆ. ಭಾವವಿದೆ. ಆಲೋಚನಾ ಶಕ್ತಿಯೂ ಇದೆ. ಜೊತೆಗೆ ಓದು ಕೂಡ ಇದೆ. ಎಲ್ಲ ಸೇರಿಸಿ ಒಟ್ಟಂದಗೊಳಿಸಿ ಎಂದರು. ಬರೆಯುತ್ತ ಬರೆಯುತ್ತ ನನ್ನ ಕನಸಿನಲ್ಲಿ ಬಂದ ನಾನಲ್ಲದ ಪಾತ್ರಕ್ಕೆ ನನ್ನನ್ನು ಸಂಪೂರ್ಣ ಅರ್ಪಿಸಿಕೊಳ್ಳುತ್ತಾ, ಮತ್ತಷ್ಟು ಪಾತ್ರಗಳನ್ನು ಸೃಷ್ಟಿಸುತ್ತಾ, ಸನ್ನಿವೇಶ ಜೋಡಿಸುತ್ತಾ ಹೋದೆ. ಆರಂಭದಲ್ಲಿಯಂತೂ ದಿನವೂ ಬರೆದು ಕಳಿಸುತ್ತಿದ್ದೆ. ಇದರಲ್ಲಿ ಬಂದ ಪಾತ್ರಗಳು ಕನಸಿನಾಚೆಯೂ ಬೆಳೆದು ಸ್ಕ್ರೀನ್ ಮೇಲೆ ಕಾಣಿಸಿಕೊಂಡಾಗ, ಪಡೆದ ಸ್ವರೂಪದ ಬಗ್ಗೆ ಖುಷಿ ಎನ್ನಿಸಿ ಆತ್ಮವಿಶ್ವಾಸ ಬರಲಾರಂಭಿಸಿತು. ಬರೆಯುತ್ತ ಹೋದೆ. ಕ್ರಮೇಣ ಆ ಕನಸುಗಳು ನೆನಪಿಸಿಕೊಳ್ಳಲಾಗದಷ್ಟು ನನ್ನಿಂದ ದೂರ ಓಡಿಹೋದವು.
ಇದನ್ನೂ ಓದಿ : ಆಗಾಗ ಅರುಂಧತಿ: ಕಟಕರೊಟ್ಟಿ ಬೆಳ್ಳುಳ್ಳಿ ಖಾರ ಮತ್ತು ಬ್ಲ್ಯಾಕ್ ಟೀ ಹಂಬಲ
ಆದರೆ, ಇದನ್ನು ಮುಗಿಸುವ ಮೊದಲು ಕಳೆದ ವಾರ ನಡೆದ ಒಂದು ಘಟನೆಯನ್ನು ಹೇಳಬೇಕೆನ್ನಿಸುತ್ತದೆ. ಆದರೆ ಇದು ಕನಸಲ್ಲ! ನಾನು ನಮ್ಮ ಸಂಬಂಧಿಕರ ಮನೆಗೆ ಹೋಗಿದ್ದೆ. ಅವರದು ಧಾರಾವಾಹಿ ಜಗತ್ತು. ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಾರೆ. ಹೊಸ ಕಥೆಯ ಹುಡುಕಾಟದಲ್ಲಿದ್ದರು. ತಲೆ ಕೆರೆದುಕೊಳ್ಳುವುದು ಪಟಪಟ ಕೀ ಬೋರ್ಡ್ ಕುಟ್ಟುವುದು. ಹತ್ತಾರು ಬಾರಿ ಹೆಂಡತಿಯ ಕೈಯಿಂದ ಕಾಫಿ ತರಿಸಿಕೊಂಡು ಕುಡಿಯುವುದು, ಪುಟ್ಟಮಕ್ಕಳಿಗೆ ಅರಚುವುದು, ಪುಸುಪುಸು ಸಿಗರೇಟು ಸೇದುವುದು. ಕೊನೆಗೆ ಸುಮ್ಮನಿರದೆ ನಾನೂ ಕೇಳಿಯೇಬಿಟ್ಟೆ. ಇಷ್ಟೊಂದೆಲ್ಲ ಯಾಕೆ ತಲೆ ಕೆಡಿಸಿಕೊಳ್ಳುತ್ತಿದ್ದೀರಿ? ಕಥೆ ಬರೆಯಬೇಕೆಂದರೆ ಒಂದು ರೂಮಿನಲ್ಲಿ ಕುಳಿತು ಏಕಾಂತ ಒದಗಿಸಿಕೊಳ್ಳಿ. ಅದನ್ನು ಬಿಟ್ಟು ಹೀಗೆ ನಿಮ್ಮ ಸುತ್ತಮುತ್ತಲೂ ಇರುವವರ ಮೇಲೆ ಏನಿದು ಸಿಡಿಮಿಡಿ? ಇದರಿಂದ ಯಾರಿಗೆ ನೆಮ್ಮದಿ ಇದೆ?
ಅದಕ್ಕವರು, ಕಥೆ ಬರೆಯುವುದು ಅಷ್ಟು ಸುಲಭವಲ್ಲ. ಪ್ರೇಕ್ಷಕರನ್ನು ಕಣ್ಣೀರ ಕಡಲಲ್ಲಿ ಮುಳುಗಿಸಬೇಕು. ಬೆಕ್ಕಸ ಬೆರಗಾಗಿಸಬೇಕು. ಜಗತ್ತಿನ ಜಂಜಾಟಗಳನ್ನು ಮರೆಯುವಂಥ ನಶೆಯಲ್ಲಿ ತೇಲಿಸಬೇಕು. ಇದನ್ನು ಪ್ರತೀ ಎಪಿಸೋಡ್ನಲ್ಲಿಯೂ ಹೊಸಹೊಸದಾಗಿ ಹೆಣೆಯಬೇಕು. ಇದು ಅಷ್ಟು ಸುಲಭದ ಕೆಲಸ ಎಂದುಕೊಂಡಿದ್ದೀಯಾ ಎಂದು ನನ್ನನ್ನೇ ತರಾಟೆಗೆ ತೆಗೆದುಕೊಂಡರು. ನನಗೆ ಬೇಸರವಾಗದೆ ಉತ್ಸಾಹ ಬಂದಿತು. ನಾನೇ ಬರೆಯಲೇ? ಎಂದೆ. ನೀನು ಒಂದು ವಾರದಲ್ಲಿ ನನಗೊಂದು ಕಥೆ ಬರೆದುಕೊಟ್ಟರೆ ನಿನಗೆ ಹೊಸ ಮೊಬೈಲ್ ಕೊಡಿಸುತ್ತೇನೆ ಎಂದು ಚಿಕ್ಕಮಕ್ಕಳಿಗೆ ಹೇಳಿದ ಹಾಗೆ ಹೇಳಿದರು. ನಾನು ಯಾಕೆ ಸುಮ್ಮನಿರುವುದು ಎಂದು ಅದೇನು ಮಹಾ ಎಂದು ಸವಾಲಾಗಿ ತೆಗೆದುಕೊಂಡು ಬೀಗಿದೆ.
ಇದನ್ನೂ ಓದಿ : ಆಗಾಗ ಅರುಂಧತಿ: ಮನಸ್ಸನ್ನು ಏಕಾಗ್ರಗೊಳಿಸಿಕೊಂಡರೆ ನನಗೆ ನಾನೇ ಮಿತ್ರ, ಇಲ್ಲ ಶತ್ರು
ಆ ದಿನ ರಾತ್ರಿ ಹನ್ನೆರಡಾದರೂ ಅವರ ನಿರೀಕ್ಷೆಗೆ ತಕ್ಕಂತೆ ನನಗೆ ಬರೆಯಲು ಒಂದೆಳೆಯೂ ಸಿಗಲಿಲ್ಲ. ರಾತ್ರಿಪೂರ್ತಿ ಒಂದರ ಮೇಲೊಂದು ಕಾಫಿ ಮಾಡಿಕೊಂಡು ಕುಡಿದೆ. ಸದ್ಯ ಸಿಗರೇಟು ಇರಲಿಲ್ಲ ಎನ್ನಿ. ಕೊನೆಗೆ ಇಲ್ಲಿ ಬರೆದ ಅಂಕಣಬರಹವನ್ನೇ ಒಟ್ಟು ಮಾಡಿ ಇದೇ ಕಥೆಯೆಂದು ಕೊಟ್ಟರೆ ಹೇಗಿರುತ್ತದೆ? ಎಂದೂ ಯೋಚಿಸಿದೆ. ಸ್ವಲ್ಪ ಹೊತ್ತಿಗೆ ಅದನ್ನವರು ಧಾರಾವಾಹಿ ಸ್ಟೈಲ್ನಲ್ಲಿ ತೆರೆಯ ಮೇಲೆ ತಂದರೆ ಹೇಗಿರುತ್ತದೆ! ಎಂಬ ಭಯಂಕರ ಕಲ್ಪನೆಯಲ್ಲೇ ಬೆವೆತು ಹೋದೆ. ನನ್ನ ಕನಸಿನ ಪಾತ್ರವಾದರೂ ಸರಿ. ಅದು ನನ್ನೊಳಗೆ ಮೂಡಿದ್ದು, ಅದು ನನ್ನೊಳಗೇ ಇರಲಿ ಎಂದು ಸುಮ್ಮನುಳಿದೆ.
ಮರುದಿನ ಅವರ ಹೆಂಡತಿಗೆ ಫೋನ್ ಮಾಡಿ, ‘ಆಂಟಿ ನಾನು ಸೋತೆ. ನನ್ನಿಂದ ಮಾತ್ರ ಈ ಕೆಲಸ ಸಾಧ್ಯವೇ ಇಲ್ಲ. ಕ್ಷಮಿಸಿ’ ಎಂದೆ. ಆಗ ಅವರ ಗಂಡ, ‘ಏನಮ್ಮಾ ಗೊತ್ತಾಯ್ತಾ ಕಥೆ ಬರೆಯೋದು ಅಂದ್ರೆ ಏನಂತ. ನಿನ್ನ ಹಾಗೆ ಝೀರೋ, ಕೋಲನ್, ಸ್ಟಾರ್, ಬ್ರ್ಯಾಕೆಟ್, ಸ್ಲ್ಯಾಷ್ ನಂಬರ್ ಬರೆದು ಪ್ರೋಗ್ರ್ಯಾಂ ಬರೆದಂತೆ ಅನ್ಕೊಂಡಿದ್ದೀಯಾ? ಒಂದಾದರೂ ಕಥೆ, ಕಾದಂಬರಿ ಬರೆಯೋ ಪ್ರಯತ್ನ ಮಾಡಿನೋಡು ಆಗ ಗೊತ್ತಾಗತ್ತೆ. ಎಲ್ಲದಕ್ಕೂ ಸ್ಪೂರ್ತಿ ಅನ್ನೋದು ಬೇಕು! ನನಗೀಗ ಅಂಥ ಸ್ಪೂರ್ತಿ ಬೇಕು…ಬೇಕೂ…’ ವೀರಾವೇಶದಿಂದ ಹಾರಾಡುತ್ತ, ಅತ್ತ ಹೆಂಡತಿಗೆ ಗುಟುರು ಹಾಕುತ್ತ, ಕಿರ್ರೋಮರ್ರೋ ಅನ್ನುವ ಮಕ್ಕಳಿಗೆ ಗದರುತ್ತ ಫೋನಿಟ್ಟರು. ಜೊತೆಗೆ ಚಹಾ ಚೆಲ್ಲಿತೋ ಏನೋ ಕಪ್ಪು ಒಡೆದ ಶಬ್ದವೂ ಕೇಳಿಸಿತು.
ನೀವು ಈ ಅಂಕಣವನ್ನು ಓದಿ ಹೇಗೆ ಪ್ರತಿಕ್ರಿಯಿಸುತ್ತೀರಿ ಎಂಬ ಕುತೂಹಲ, ಆತಂಕ ಎಲ್ಲವೂ ನನಗೆ ಇದ್ದೇ ಇತ್ತು. ಮರುಗಿದಿರಿ, ಪ್ರೀತಿಯಿಂದ ಸಾಂತ್ವನವನ್ನೂ ಹೇಳಿದಿರಿ. ಬರೆಯುತ್ತಿರುವಾಕೆ ಯಾರು ಎಂಬ ಕುತೂಹಲವನ್ನೂ ವ್ಯಕ್ತಪಡಿಸಿದಿರಿ. ನಿಮ್ಮಲ್ಲಿ ಕೆಲವರು ಸಂಪಾದಕರಿಗೂ ವಿಚಾರಿಸಿದಿರಿ. ನನ್ನ ಇನ್ಬಾಕ್ಸಿಗೆ ಬಂದು ಮಾತನಾಡಲು ಪ್ರಯತ್ನಿಸಿದಿರಿ. ಸ್ನೇಹದ ಕೈ ಚಾಚಿದಿರಿ. ನಿಮ್ಮ ಸ್ಪಂದನೆಯಿಂದಲೇ ನನ್ನಲ್ಲಿ ಹೊಸ ಶಕ್ತಿ ಸಂಚಯಿಸುತ್ತಿದೆ ಎನ್ನಿಸಲಾರಂಭಿಸಿ ಮತ್ತೆ ಮತ್ತೆ ಬರೆಯುತ್ತ ಹೋದೆ. ಇದೀಗ ವರ್ಕ್ ಫ್ರಂ ಹೋಮ್ ಮುಗಿದು ಮತ್ತೆ ಕೆಲಸಕ್ಕೆ ಮರಳಬೇಕಿದೆ. ಹೊಸ ಹುರುಪಿನೊಂದಿಗೆ, ಹುಮ್ಮಸ್ಸಿನೊಂದಿಗೆ.
ಕ್ಷಮೆ ಇರಲಿ, ಇದು ನನ್ನ ಮೊದಲ ಪ್ರಯತ್ನ. ಚೂರು ಏರುಪೇರಾಗಿರಬಹುದು. ಆದರೂ ಬರೆವಣಿಗೆ ಎಂಬುದು ದೊಡ್ಡ ಶಕ್ತಿ ತಾನೆ?
(ಈ ಅಂಕಣ ಇಲ್ಲಿಗೆ ಮುಗಿಯಿತು. ಅಂಕಣದ ಎಲ್ಲಾ ಬರಹಗಳನ್ನು ಓದಲು ಕ್ಲಿಕ್ ಮಾಡಿ)
ಪ್ರತಿಕ್ರಿಯೆಗಾಗಿ : tv9kannadadigital@gmail.com
Published On - 5:33 pm, Sat, 4 June 22