ಸಂಪತ್ತು ಹೆಚ್ಚಿಸಬೇಕೆ? ಈ ಮೂಲಭೂತ ಗುಣ ನಿಮಗೆ ತಿಳಿದಿರಲಿ
Secret to wealth creation: ಉತ್ತಮ ರೀತಿಯಲ್ಲಿ ಸಂಪಾದನೆ ಮಾಡುತ್ತಿದ್ದರೂ ನಿಮ್ಮ ಬಳಿ ಸದಾ ಹಣದ ಕೊರತೆ ಕಾಡುತ್ತಿದ್ದರೆ ಅದಕ್ಕೆ ನಿಮ್ಮ ಹಣಕಾಸು ಮಹತ್ವದ ಬಗ್ಗೆ ಅರಿವಿನ ಕೊರತೆಯೇ ಪ್ರಮುಖ ಕಾರಣ ಇರುತ್ತದೆ. ಕಡಿಮೆ ಸಂಪಾದನೆ ಮಾಡುತ್ತಿರುವವರ ಬಳಿ ಹೆಚ್ಚು ಹಣ ಓಡಾಡುತ್ತಿದೆ ಎಂದರೆ ಅದಕ್ಕೆ ಸಕಾರಗಳಂತೂ ಇದ್ದೇ ಇರುತ್ತದೆ. ನೀವು ಹೆಚ್ಚು ಸಂಪತ್ತು ಕಾಣಬೇಕೆಂದರೆ ನಿಮ್ಮ ವೆಚ್ಚಕಡಿತ ಸಾಧ್ಯವಾದಷ್ಟೂ ಕಡಿಮೆ ಮಾಡಿ, ಉಳಿತಾಯವನ್ನು ಸಾಧ್ಯವಾದಷ್ಟೂ ಹೆಚ್ಚಿಸಬೇಕು.
ನೀವು ಒಳ್ಳೆಯ ಸಂಬಳ ಪಡೆಯುತ್ತಿದ್ದೀರಿ. ಉತ್ತಮ ಜೀವನ ನಡೆಸುತ್ತಿದ್ದೀರಿ. ಆದರೆ, ಯಾವುದಾದರೂ ತುರ್ತು ಸಂದರ್ಭ ಬಂದು ಹಣದ ಅಗತ್ಯ ಬಿದ್ದರೆ ನಿಮ್ಮ ಬಳಿ ಹಣ ಇರುವುದಿಲ್ಲ. ಸಾಲ ಮಾಡಬೇಕು. ಈ ರೀತಿ ಸಾಲದ ಮೇಲೆ ಸಾಲ ಆಗಿ ಅದರ ಹೊರೆ ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸಿರಬಹುದು. ಅದೇ ನಿಮ್ಮ ಕಣ್ಮುಂದೆ ನಿಮಗಿಂತ ಕಡಿಮೆ ಸಂಪಾದನೆ ಮಾಡುವ ಕುಟುಂಬ ಇರುತ್ತದೆ. ಅವರ ಬಳಿ ಇರುವ ಹೇರಳ ಹಣ ನಿಮ್ಮನ್ನು ಚಕಿತಗೊಳಿಸಬಹುದು. ಯಾಕೆ ಹೀಗೆ ಎಂದು ನಿಮಗೆ ಆಶ್ಚರ್ಯ ಆಗಬಹುದು. ಹಣದ ಮೇಲೆ ನಿಮಗಿರುವ ಧೋರಣೆ ಮತ್ತು ಜವಾಬ್ದಾರಿ ಏನು ಎಂಬುದರ ಮೇಲೆ ನಿಮ್ಮ ಹಣಬಲ, ಸಂಪತ್ತು ಶೇಖರಣೆ ಇರುತ್ತದೆ. ಸರಿಯಾದ ಹಣಕಾಸು ನಿರ್ವಹಣೆ (money management) ನಿಮಗೆ ಬಾರದಿದ್ದರೆ ನೀವೆಷ್ಟೇ ಸಂಪಾದನೆ ಮಾಡಿದರೂ ನಿರುಪಯುಕ್ತವಾಗುತ್ತದೆ.
ಹಣಕಾಸು ನಿರ್ವಹಣೆಯ ಅಗ್ರ ಪಾಠವೇ ಉಳಿತಾಯ…
ಹಣಕಾಸು ಸಾಕ್ಷರತೆಯಲ್ಲಿ ನೀವು ತಿಳಿಯಬೇಕಾದ ಅತಿದೊಡ್ಡ ಪಾಠ ಎಂದರೆ ಅದು ಉಳಿತಾಯ. ನೀವು ಸಂಪಾದಿಸಿದ ಹಣವನ್ನು ಸಮರ್ಪಕ ರೀತಿಯಲ್ಲಿ ಉಳಿಸದೇ ಹೋದಲ್ಲಿ ನೀರಲ್ಲಿ ಹೋಮ ಮಾಡಿದಂತಾಗುತ್ತದೆ. ನಿಮ್ಮ ಸಂಪಾದನೆಯಲ್ಲಿ ಖರ್ಚು ಆಗಿ ಉಳಿದ ಹಣವನ್ನು ಸೇವಿಂಗ್ ಆಗಿ ಇಟ್ಟುಕೊಳ್ಳುತ್ತೇನೆ ಎಂದು ನೀವು ಭಾವಿಸಿದ್ದರೆ ಅದು ಸರಿ ಅಲ್ಲ. ಯಾಕೆಂದರೆ ನೀವು ಖರ್ಚನ್ನು ತಗ್ಗಿಸುವ ಪ್ರಯತ್ನವನ್ನೇ ಮಾಡುವುದಿಲ್ಲ.
ಇದನ್ನೂ ಓದಿ: ಬೆಲೆ ಏರಿಕೆ, ಹಣ ಮೌಲ್ಯ ಕುಸಿತ ಪರಿಗಣಿಸಿ ರಿಟೈರ್ಮೆಮೆಂಟ್ಗೆ ಎಷ್ಟು ಹಣ ಬೇಕಾಗಬಹುದು? ಇಲ್ಲಿದೆ ಲೆಕ್ಕಾಚಾರ ಉಪಾಯ
ನೀವು ಉಳಿಸುವ ಪ್ರತೀ ಹಣವೂ ಗಳಿಕೆಗೆ ಸಮ ಎನ್ನುತ್ತಾರೆ ಪರ್ಸನಲ್ ಫೈನಾನ್ಸ್ ತಜ್ಞರು. ಹೀಗಾಗಿ ನಿಮ್ಮ ವೆಚ್ಚವನ್ನು ತಗ್ಗಿಸುತ್ತಲೇ ಇರುವುದು ನಿಮ್ಮ ಗುರಿಯಾಗಿರಬೇಕು. ಕಾರ್ಪೊರೇಟ್ ವಲಯದಲ್ಲೂ ನೀವು ನೋಡಿರಬಹುದು, ಯಾವ ಕಂಪನಿ ತನ್ನ ಆಪರೇಶನಲ್ ಎಕ್ಸ್ಪೆನ್ಸ್, ಅಥವಾ ಕಾರ್ಯಾಚರಣೆ ವೆಚ್ಚ ಕಡಿಮೆ ಮಾಡಿಕೊಳ್ಳುತ್ತಾ ಹೋಗುತ್ತದೋ ಅದು ಪೈಪೋಟಿಯಲ್ಲಿ ಮುನ್ನಡೆಯುತ್ತದೆ. ವೈಯಕ್ತಿಕವಾಗಿಯೂ ನಮ್ಮ ಸ್ಥಿತಿ ಅದೇ ಆಗಿರುತ್ತದೆ. ಎಷ್ಟು ಸಾಧ್ಯವೋ ಅಷ್ಟು ವೆಚ್ಚಕಡಿತ ಮಾಡುವುದು ನಮ್ಮ ಗುರಿ ಆಗಿರಬೇಕು. ಈ ಭಾವನೆ ನಿಮ್ಮಲ್ಲಿ ಮೇಳೈಸಿಬಿಟ್ಟರೆ ಒಂದು ರುಪಾಯಿ ಖರ್ಚು ಮಾಡುವಾಗಲೂ ಲೆಕ್ಕಾಚಾರ ಹಾಕುವ ಹಂತಕ್ಕೆ ಹೋಗುತ್ತೀರಿ. ಅದು ಒಳ್ಳೆಯ ಗುಣ ಎನ್ನುತ್ತಾರೆ ತಜ್ಞರು.
50:30:20 ನಿಯಮವಾದರೂ ಪಾಲಿಸಿರಿ
ಹಣ ಉಳಿಸಲು ನಿರ್ದಿಷ್ಟ ಗುರಿ ಇರಬೇಕು. ಎಷ್ಟು ಹಣ ಉಳಿಸಬೇಕು? ಪರ್ಸನಲ್ ಫೈನಾನ್ಸ್ ತಜ್ಞರು ಈ ನಿಟ್ಟಿನಲ್ಲಿ 50:30:20 ಫಾರ್ಮುಲಾ ಮುಂದಿಡುತ್ತಾರೆ. ಮೂಲಭೂತ ಅವಶ್ಯಕತೆಗಳಿಗೆ ಶೇ. 50; ಮನರಂಜನೆ, ಕಾರು ಖರೀದಿ ಇತ್ಯಾದಿಗಳಿಗೆ ಶೇ. 30 ಮತ್ತು ಉಳಿತಾಯಕ್ಕೆ ಶೇ. 20ರಷ್ಟು ಸಂಪಾದನೆ ಮುಡಿಪಾಗಿರಲಿ ಎಂಬುದು ಈ ಸೂತ್ರದ ಸಾರಾಂಶ. ಮೊದಲೆರಡು ಅಂಶಗಳಲ್ಲಿ ನೀವು ಹಣ ಉಳಿಸಲು ಸಾಧ್ಯವಿದ್ದರೆ ಅಗತ್ಯವಾಗಿ ಮಾಡಬೇಕು. ನಿಮ್ಮ ಉಳಿತಾಯ ಪ್ರಮಾಣ ಶೇ. 50ಕ್ಕಿಂತಲೂ ಹೆಚ್ಚಿದ್ದರಂತೂ ಇನ್ನೂ ಉತ್ತಮ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ