Review: ಪ್ರಕರಣ ತನಿಖಾ ಹಂತದಲ್ಲಿದೆ; ಡ್ರಗ್ಸ್ ಮಾಫಿಯಾ ಕುರಿತು ಚಿಕ್ಕದಾದ, ಚೊಕ್ಕದಾದ ಸಿನಿಮಾ
‘ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಇದೆ. ಸರಣಿ ಕೊಲೆಗಳ ಕಥೆಯ ಜೊತೆ ಸಮಾಜಕ್ಕೆ ಬೇಕಾದ ಒಂದು ಸಂದೇಶವನ್ನು ಕೂಡ ಈ ಸಿನಿಮಾ ನೀಡುತ್ತದೆ. ಹೊಸಬರು ಮಾಡಿದ ಈ ಪ್ರಯತ್ನ ಚಿಕ್ಕದಾಗಿ, ಚೊಕ್ಕದಾಗಿದೆ. ಈ ಸಿನಿಮಾಗೆ ಸುಂದರ್ ಎಸ್. ಅವರು ನಿರ್ದೇಶನ ಮಾಡಿದ್ದಾರೆ. ಚಿಂತನ್ ಕಂಬಣ್ಣ ಅವರು ನಿರ್ಮಾಣ ಮಾಡಿದ್ದಾರೆ.
ಸಿನಿಮಾ: ಪ್ರಕರಣ ತನಿಖಾ ಹಂತದಲ್ಲಿದೆ. ನಿರ್ಮಾಣ: ಚಿಂತನ್ ಕಂಬಣ್ಣ. ನಿರ್ದೇಶನ: ಸುಂದರ್ ಎಸ್. ಪಾತ್ರವರ್ಗ: ಮಾಹಿನ್ ಕುಬೇರ್, ಮುತ್ತುರಾಜ್ ಟಿ, ಪ್ರದೀಪ್ ಕುಮಾರ್, ರಾಜ್ ಗಗನ್, ಶಿವು ಭೈರ, ಚಿಂತನ್ ಕಂಬಣ್ಣ, ಮಧು ಬಿಜೆ, ಗಣೇಶ್ ಆರ್. ಮುಂತಾದವರು. ಸ್ಟಾರ್ 3/5
ಕೊಲೆ ರಹಸ್ಯದ ಸಿನಿಮಾಗಳು ಎಂದರೆ ಒಂದು ವರ್ಗದ ಪ್ರೇಕ್ಷಕರಿಗೆ ಸಖತ್ ಇಷ್ಟ. ಕೊಲೆಗಾರ ಯಾರು ಎಂಬುದನ್ನು ಪತ್ತೆಹಚ್ಚುವ ಕಥೆಯನ್ನು ನೋಡುವಾಗ ಏನೋ ಒಂಥರಾ ಥ್ರಿಲ್. ಹಾಗಾಗಿ ಅಂತಹ ಸಿನಿಮಾಗಳು ಆಗಾಗ ನಿರ್ಮಾಣ ಆಗುತ್ತವೆ. ಈ ವಾರ (ಅ.18) ಕನ್ನಡದಲ್ಲಿ ‘ಪ್ರಕರಣ ತನಿಖಾ ಹಂತದಲ್ಲಿದೆ’ ಸಿನಿಮಾ ಬಿಡುಗಡೆ ಆಗಿದ್ದು, ಇದರಲ್ಲಿ ಕೂಡ ಮರ್ಡರ್ ಮಿಸ್ಟರಿ ಕಹಾನಿ ಇದೆ. ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳನ್ನು ಹೊಂದಿರುವ ಈ ಸಿನಿಮಾದಲ್ಲಿ ಹೊಸ ಕಲಾವಿದರು ನಟಿಸಿದ್ದಾರೆ. ಸಿನಿಮಾ ಹೇಗಿದೆ ಎಂಬುದರ ವಿಮರ್ಶೆ ಇಲ್ಲದೆ..
‘ಪ್ರಕರಣ ತನಿಖಾ ಹಂತದಲ್ಲಿದೆ’ ಸಿನಿಮಾದ ಕಥೆ ಆರಂಭ ಆಗುವುದು ಒಂದು ಡ್ರಗ್ಸ್ ಮಾಫಿಯಾದ ಮೂಲಕ. ಕೋಟ್ಯಂತರ ಬೆಲೆಯ ಮಾದಕ ವಸ್ತುವನ್ನು ಕಳ್ಳಸಾಗಣೆ ಮಾಡುವ ಜಾಲದಲ್ಲಿ ಖದೀಮರು ತೊಡಗಿರುತ್ತಾರೆ. ಇನ್ನೇನು ಅವರ ಪ್ಲ್ಯಾನ್ ಯಶಸ್ವಿ ಆಗಬೇಕು ಎಂಬಷ್ಟರಲ್ಲಿ ಒಂದು ಕೊಲೆ ನಡೆಯುತ್ತದೆ. ಸತ್ತವನು ಯಾರು ಎಂಬುದನ್ನು ತಿಳಿಯುತ್ತಿರುವಾಗಲೇ ಹೊಸ ಹೊಸ ಟ್ವಿಸ್ಟ್ಗಳು ಎದುರಾಗುತ್ತವೆ. ನಂತರ ಒಂದರ ಮೇಲೊಂದು ಕೊಲೆ ನಡೆಯುತ್ತದೆ. ಈ ಸಿನಿಮಾದಲ್ಲಿ ಇರುವುದು ಕೆಲವೇ ಪಾತ್ರಗಳಾದರೂ ಆ ಪೈಕಿ ಹಲವರ ಮೇಲೆ ಅನುಮಾನ ಮೂಡುತ್ತದೆ. ಅಂತಿಮವಾಗಿ ಕೊಲೆಗಳ ರೂವಾರಿ ಯಾರು? ಆತನ ಉದ್ದೇಶ ಏನು ಎಂಬುದು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.
ಈ ಸಿನಿಮಾದ ಪ್ಲಸ್ ಪಾಯಿಂಟ್ ಏನೆಂದರೆ, ಕಥೆಯನ್ನು ತುಂಬ ಚುರುಕಾಗಿ ಹೇಳಿ ಮುಗಿಸಲಾಗಿದೆ. ಇಡೀ ಸಿನಿಮಾದ ಅವಧಿ 95 ನಿಮಿಷಗಳು ಮಾತ್ರ. ಅಂದರೆ, 1 ಗಂಟೆ 35 ನಿಮಿಷದಲ್ಲಿ ಸಿನಿಮಾ ಪೂರ್ಣಗೊಳ್ಳುತ್ತದೆ. ಯಾವುದೇ ಅನಗತ್ಯ ದೃಶ್ಯಗಳನ್ನು ಸೇರಿಸದೇ, ಮುಖ್ಯವಾದ ವಿಷಯದ ಮೇಲೆಯೇ ಸಿನಿಮಾ ಸಾಗುವಂತೆ ನಿರ್ದೇಶಕರು ಗಮನ ಹರಿಸಿದ್ದಾರೆ. ಬಹುತೇಕ ಹೊಸ ಕಲಾವಿದರೇ ನಟಿಸಿರುವುದರಿಂದ ಯಾವ ಪಾತ್ರದ ಬಗ್ಗೆಯೂ ಪೂರ್ವಾಗ್ರಹ ಇಲ್ಲದೇ ನೋಡಿಸಿಕೊಂಡು ಹೋಗುವ ಗುಣ ಈ ಸಿನಿಮಾಗಿದೆ. ಒಂದು ಸಸ್ಪೆನ್ಸ್ ಕಥೆಗೆ ಇರಬೇಕಾದ ಮುಖ್ಯ ಆಧಾರವಿದು. ಆ ವಿಚಾರದಲ್ಲಿ ‘ಪ್ರಕರಣ ತನಿಖಾ ಹಂತದಲ್ಲಿದೆ’ ಸಿನಿಮಾ ಗಮನ ಸೆಳೆಯುತ್ತದೆ.
ಮಾಹಿನ್ ಕುಬೇರ್, ಚಿಂತನ್ ಕಂಬಣ್ಣ, ರಾಜ್ ಗಗನ್, ಮುತ್ತುರಾಜ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಖಡಕ್ ಪೊಲೀಸ್ ಅಧಿಕಾರಿಯಾಗಿ ಮಾಹಿನ್ ಕುಬೇರ್ ಅವರು ನಟಿಸಿದ್ದಾರೆ. ವೈದ್ಯನಾಗಿ ಎರಡು ಶೇಡ್ ಇರುವ ಪಾತ್ರದಲ್ಲಿ ಚಿಂತನ್ ಕಂಬಣ್ಣ ಅವರು ಕಾಣಿಸಿಕೊಂಡಿದ್ದಾರೆ. ಆಯಾ ಪಾತ್ರಗಳಿಗೆ ಸಮಾನವಾದ ಪ್ರಾಮುಖ್ಯತೆ ನೀಡಲಾಗಿದೆ. ಶಿವೋಂ ಪ್ರಸಾದ್ ಅವರ ಸಂಗೀತದಿಂದಾಗಿ ಸಿನಿಮಾದ ತೂಕ ಹೆಚ್ಚಿದೆ.
ಇದನ್ನೂ ಓದಿ: Martin Review: ಆರ್ಭಟಕ್ಕೆ, ಅದ್ದೂರಿತನಕ್ಕೆ, ಆ್ಯಕ್ಷನ್ಗೆ ಆದ್ಯತೆ ನೀಡಿದ ಮಾರ್ಟಿನ್
ಈ ಸಮಾಜದಲ್ಲಿ ಡ್ರಗ್ಸ್ ದೊಡ್ಡ ಪಿಡುಗಾಗಿದೆ. ಯುವ ಜನತೆಗೆ ಮಾರಕವಾಗಿರುವ ಮಾದಕ ದ್ರವ್ಯದ ಬಗ್ಗೆ ಎಚ್ಚರಿಕೆ ಸಂದೇಶ ನೀಡುವ ಪ್ರಯತ್ನವನ್ನು ‘ಪ್ರಕರಣ ತನಿಖಾ ಹಂತದಲ್ಲಿದೆ’ ಸಿನಿಮಾ ಮೂಲಕ ಮಾಡಲಾಗಿದೆ. ದುಷ್ಟ ಸಂಹಾರದ ಥೀಮ್ನಲ್ಲಿ ಸಿನಿಮಾ ಮೂಡಿಬಂದಿದೆ. ಆದರೆ ಕಥೆಯಲ್ಲಿ ಇನ್ನಷ್ಟು ಹೊಸತನ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎನಿಸುತ್ತದೆ. ಕೆಲವು ಟ್ವಿಸ್ಟ್ಗಳನ್ನು ಪ್ರೇಕ್ಷಕರು ಸುಲಭವಾಗಿ ಊಹಿಸಬಹುದು. ಇಂಥ ಸಣ್ಣ ಪುಟ್ಟ ಮೈನಸ್ ಪಾಯಿಂಟ್ಗಳ ನಡುವೆಯೂ ಚಿಕ್ಕ-ಚೊಕ್ಕ ಸಿನಿಮಾಗಾಗಿ ‘ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರ ನೋಡಿಸಿಕೊಂಡು ಸಾಗುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.