Firefly Movie Review: ಖಿನ್ನತೆಯಲ್ಲಿ ಕಳೆದುಹೋದ ಮನಸುಗಳಿಗೆ ಕೊನೆಯಲ್ಲೊಂದು ಸಾಂತ್ವನ
ವಂಶಿ ಕೃಷ್ಣ ಮುಖ್ಯ ಪಾತ್ರದಲ್ಲಿ ನಟಿಸಿ, ನಿರ್ದೇಶಿಸಿರುವ ‘ಫೈರ್ ಫ್ಲೈ’ ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾಗೆ ಶಿವರಾಜ್ಕುಮಾರ್ ಪುತ್ರಿ ನಿವೇದಿತಾ ಅವರು ಬಂಡವಾಳ ಹೂಡಿದ್ದಾರೆ. ಸುಧಾರಾಣಿ, ಅಚ್ಯುತ್ ಕುಮಾರ್ ಅವರಂತಹ ಅನುಭವಿ ಕಲಾವಿದರು ಕೂಡ ಈ ಚಿತ್ರದ ಪಾತ್ರವರ್ಗದಲ್ಲಿ ಇದ್ದಾರೆ. ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ...

ಸಿನಿಮಾ: ಫೈರ್ ಫ್ಲೈ. ನಿರ್ಮಾಣ: ನಿವೇದಿತಾ ಶಿವರಾಜ್ಕುಮಾರ್. ನಿರ್ದೇಶನ: ವಂಶಿ ಕೃಷ್ಣ. ಪಾತ್ರವರ್ಗ: ವಂಶಿ ಕೃಷ್ಣ, ಅಚ್ಯುತ್ ಕುಮಾರ್, ಸುಧಾರಾಣಿ, ರಚನಾ ಇಂದರ್, ಶೀಥಲ್ ಶೆಟ್ಟಿ, ಆನಂದ್ ನೀನಾಸಂ, ಮೂಗು ಸುರೇಶ್ ಮುಂತಾದವರು.
ಡಾ. ರಾಜ್ಕುಮಾರ್ ಫ್ಯಾಮಿಲಿಗೆ ಹಲವು ದಶಕಗಳ ಸಿನಿಮಾ ನಂಟು ಇದೆ. ಈಗ ಅವರ ಮೊಮ್ಮಕ್ಕಳು ಕೂಡ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಒಂದು ಕಾಲದಲ್ಲಿ ಪಾರ್ವತಮ್ಮ ರಾಜ್ಕುಮಾರ್ ಅವರು ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದರು. ಈಗ ಅವರ ಮೊಮ್ಮಗಳು ನಿವೇದಿತಾ ಶಿವರಾಜ್ಕುಮಾರ್ ಕೂಡ ನಿರ್ಮಾಪಕಿಯಾಗಿ ಸಕ್ರಿಯರಾಗಿದ್ದಾರೆ. ಅವರು ನಿರ್ಮಾಣ ಮಾಡಿರುವ ‘ಫೈರ್ ಫ್ಲೈ’ ಸಿನಿಮಾ ಏಪ್ರಿಲ್ 24ರಂದು ಡಾ. ರಾಜ್ಕುಮಾರ್ ಜನ್ಮದಿನದಂದೇ ಬಿಡುಗಡೆ ಆಗಿರುವುದು ವಿಶೇಷ.
ಹೊಸ ಕಲಾವಿದರಿಗೆ, ತಂತ್ರಜ್ಞರಿಗೆ ಅವಕಾಶ ಕೊಟ್ಟು ಬೆಳೆಸುವುದು ಡಾ. ರಾಜ್ಕುಮಾರ್ ಕುಟುಂಬದ ಸಂಪ್ರದಾಯ. ನಿವೇದಿತಾ ಶಿವರಾಜ್ಕುಮಾರ್ ಅವರು ಈಗ ಆ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಸಿನಿಮಾ ನಿರ್ಮಾಣದಲ್ಲಿ ಆಸಕ್ತಿ ಹೊಂದಿರುವ ನಿವೇದಿತಾ ಅವರು ಯುವ ನಟ/ನಿರ್ದೇಶಕ ವಂಶಿ ಕೃಷ್ಣ ಅವರ ಕನಸಿಗೆ ನೀರೆರೆದಿದ್ದಾರೆ. ಯಾವುದೇ ಸಿದ್ಧಸೂತ್ರಗಳು ಇಲ್ಲದಂತೆ ಬೇರೆಯದೇ ರೀತಿಯಲ್ಲಿ ಸಿನಿಮಾ ಮಾಡಲು ನಿರ್ದೇಶಕರಿಗೆ ಅನುವು ಮಾಡಿಕೊಟ್ಟಿದ್ದಾರೆ. ಹಾಗಾಗಿ ‘ಫೈರ್ ಫ್ಲೈ’ ಸಿನಿಮಾ ಭಿನ್ನವಾಗಿ ಮೂಡಿಬಂದಿದೆ.
ಖಿನ್ನತೆ ಎಂಬುದು ಹೊಸ ತಲೆಮಾರಿನ ಜನರ ಕಾಮನ್ ಸಮಸ್ಯೆ. ಎಲ್ಲ ಇದ್ದರೂ ಏನೂ ಇಲ್ಲದ ಪರಿಸ್ಥಿತಿ ಆವರಿಸಿಕೊಳ್ಳುತ್ತದೆ. ಅಂಥ ಡಿಪ್ರೆಷನ್ನಿಂದ ಬಳಲುತ್ತಿರುವುವವರು ಕೋಟ್ಯಂತರ ಜನರು ಇದ್ದಾರೆ. ಅವರ ಪ್ರತಿನಿಧಿ ರೀತಿಯಲ್ಲಿ ‘ಫೈರ್ ಫ್ಲೈ’ ಸಿನಿಮಾದ ಕಥಾನಾಯಕನ ಪಾತ್ರ ಮೂಡಿಬಂದಿದೆ. ಕಥೆ ಬಗ್ಗೆ ಹೇಳುವುದಾದರೆ, ವಿಕ್ಕಿ ಅಲಿಯಾಸ್ ವಿವೇಕಾನಂದ (ವಂಶಿ ಕೃಷ್ಣ) ಒಂದು ಅಪಘಾತದಲ್ಲಿ ತಂದೆ-ತಾಯಿಯನ್ನು ಕಳೆದುಕೊಳ್ಳುತ್ತಾನೆ. ಬಳಿಕ ಅವನಿಗೆ ಜೀವನದ ಮೇಲೆ ಆಸಕ್ತಿಯೇ ಹೊರಟುಹೋಗುತ್ತದೆ. ನಿದ್ರೆ ಬಾರದೇ ಖಿನ್ನತೆ ಹಾಗೂ ಒಂಟಿತನದಲ್ಲಿ ಬಳಲುವ ಅವನ ಸಂಕಟ ಹೇಗಿರುತ್ತದೆ ಎಂಬುದನ್ನು ಸಿನಿಮಾ ಪೂರ್ತಿ ತೋರಿಸಲಾಗಿದೆ.
ಡಿಪ್ರೆಷನ್ ಯಾರನ್ನೂ ಬಿಟ್ಟಿಲ್ಲ. ಆದರೆ ಅದರಿಂದ ಹೊರಗೆ ಬರುವುದು ಹೇಗೆ ಎಂಬುದು ಬಹಳ ಮುಖ್ಯ. ಹಾಗಂತ ಇದು ಬಾಯಿ ಮಾತಿನಲ್ಲಿ ಹೇಳಿದಷ್ಟು ಸುಲಭ ಅಲ್ಲ. ಆ ಪ್ರಕ್ರಿಯೆಯಲ್ಲಿ ‘ಫೈರ್ ಫ್ಲೈ’ ಸಿನಿಮಾದಲ್ಲಿ ಎಳೆಎಳೆಯಾಗಿ ವಿವರಿಸಲಾಗಿದೆ. ಕಥಾನಾಯಕ ವಿಕ್ಕಿ ಆರಂಭದಿಂದ ತನ್ನ ಕಥೆ ವಿವರಿಸುತ್ತಾ ಸಾಗುತ್ತಾನೆ. ಕೇಳಿಸಿಕೊಳ್ಳುವ ತಾಳ್ಮೆ ಇದ್ದರೆ ಓಕೆ. ಇಲ್ಲದಿದ್ದರೆ ಇದೆಲ್ಲ ಕೊಂಚ ದೀರ್ಘವಾಯಿತಲ್ಲ ಎಂಬ ಭಾವನೆ ಖಂಡಿತಾ ಮೂಡುತ್ತದೆ. ಕಡೆಗೆ ಆತ ಖಿನ್ನತೆಯಿಂದ ಹೇಗೆ ಹೊರಬರುತ್ತಾನೆ ಎಂಬುದು ತಿಳಿಯಲು ಕ್ಲೈಮ್ಯಾಕ್ಸ್ ತನಕ ಕಾಯಬೇಕು. ಖಿನ್ನತೆಯಲ್ಲಿ ಕಳೆದುಹೋದವರಿಗೆ ಕೊನೆಯಲ್ಲೊಂದು ಸಾಂತ್ವನ ಸಿಗುತ್ತದೆ.
ಇಡೀ ಸಿನಿಮಾವನ್ನು ವಂಶಿ ಕೃಷ್ಣ ಅವರು ಆವರಿಸಿಕೊಂಡಿದ್ದಾರೆ. ಖಿನ್ನತೆಯ ವಿವರಗಳೇ ಈ ಸಿನಿಮಾದಲ್ಲಿ ಹೆಚ್ಚಾಗಿವೆ. ಅದರ ಬದಲು ಸ್ಫೂರ್ತಿ ತುಂಬುವ ವಿಷಯಗಳ ಮೇಲೆ ನಿರ್ದೇಶಕರು ಹೆಚ್ಚು ಗಮನ ಹರಿಸಿದ್ದರೆ ಚೆನ್ನಾಗಿರುತ್ತಿತ್ತು ಎನಿಸುತ್ತದೆ. ಕಾಮಿಡಿ ದೃಶ್ಯಗಳನ್ನು ಇನ್ನಷ್ಟು ಉತ್ತಮ ಆಗಿಸಬಹುದಿತ್ತು. ಸೆಟ್ಗಳು ಬಹಳ ಕೃತಕ ಎನಿಸುವುದು ಕೂಡ ಉಂಟು. ಇಂಥ ಕೆಲವು ಕೊರತೆಗಳು ಸಹ ‘ಫೈರ್ ಫ್ಲೈ’ ಚಿತ್ರದಲ್ಲಿ ಕಾಣಿಸುತ್ತವೆ.
ಇದನ್ನೂ ಓದಿ: ಅಪ್ಪನಿಂದ ಬಹಳ ಕಲಿತಿದ್ದೇನೆ ಎನ್ನುತ್ತಾರೆ ‘ಫೈರ್ ಫ್ಲೈ’ ಚಿತ್ರದ ನಿರ್ಮಾಪಕಿ ನಿವೇದಿತಾ ಶಿವರಾಜ್ಕುಮಾರ್
ಸುಧಾರಾಣಿ ಮತ್ತು ಅಚ್ಯುತ್ ಕುಮಾರ್ ಅವರು ಇದ್ದಷ್ಟು ಹೊತ್ತು ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತಾರೆ. ನಟಿ ರಚನಾ ಇಂದರ್ ಅವರಿಗೆ ಹೆಚ್ಚು ಸ್ಕ್ರೀನ್ ಸ್ಪೇಸ್ ಸಿಕ್ಕಿಲ್ಲ. ಶಿವರಾಜ್ಕುಮಾರ್ ಅವರು ಒಂದು ವಿಶೇಷ ಪಾತ್ರದಲ್ಲಿ ಬಂದುಹೋಗುತ್ತಾರೆ. ಅದೇನು ಎಂಬುದನ್ನು ಚಿತ್ರಮಂದಿರದಲ್ಲೇ ನೋಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.