ನಿಖಿಲ್ಗೆ ಖುಲಾಯಿಸಿದ ಅದೃಷ್ಟ, ವರ್ಷಕ್ಕೊಂದು ಸಿನಿಮಾ ಆಗ, ಐದು ತಿಂಗಳಿಗೆ ನಾಲ್ಕು ಸಿನಿಮಾ ಈಗ
Nikhil: ನಟ ನಿಖಿಲ್ಗೆ ಅದೃಷ್ಟ ಖುಲಾಯಿಸಿದೆ. ಈ ಹಿಂದೆ ವರ್ಷಕ್ಕೆ ಒಂದು-ಎರಡು ಸಿನಿಮಾ ಮಾಡುತ್ತಿದ್ದ ನಟನಿಗೆ ಈ ವರ್ಷದ ಮೊದಲ ಐದು ತಿಂಗಳಲ್ಲಿ ನಾಲ್ಕು ಸಿನಿಮಾ ಅವಕಾಶ ಲಭಿಸಿದೆ.
ಸಿನಿಮಾ ರಂಗದಲ್ಲಿ (Movie Industry) ಯಾವುದೇ ನಟ-ನಟಿಯರ ಅದೃಷ್ಟ ಬದಲಾಗಲು ಒಂದೇ ಒಂದು ಸಿನಿಮಾ ಸಾಕು. ಹಲವು ವರ್ಷಗಳಿಂದ ಚಿತ್ರರಂಗದಲ್ಲಿದ್ದವರು ಸಹ ಒಂದು ಸಿನಿಮಾದ ಬಳಿಕ ದೊಡ್ಡ ಸ್ಟಾರ್ಗಳಾಗಿ ಬದಲಾದ ಉದಾಹರಣೆಗಳು ಇವೆ. ಇದೀಗ ಇದೇ ಮಾದರಿಯ ಅದೃಷ್ಟ ತೆಲುಗಿನ ನಟ ನಿಖಿಲ್ ಸಿದ್ಧಾರ್ಥ್ (Nikhil Siddharth) ಅವರದ್ದಾಗಿದೆ. ಈ ಮುಂಚೆ ವರ್ಷಕ್ಕೆ ಒಂದು ಅಥವಾ ಎರಡು ಸಿನಿಮಾ ಅವಕಾಶಗಳನ್ನಷ್ಟೆ ಪಡೆಯುತ್ತಿದ್ದ ನಿಖಿಲ್ ಸಿದ್ಧಾರ್ಥ್ಗೆ ಈಗ ಐದು ತಿಂಗಳಿಗೆ ನಾಲ್ಕು ಸಿನಿಮಾ ಅವಕಾಶ ಲಭಿಸಿವೆ. ಇನ್ನು ಕೆಲವು ಸಿನಿಮಾ ಅವಕಾಶಗಳು ಲಭಿಸಲಿವೆ.
ಕಳೆದ 20 ವರ್ಷಗಳಿಂದಲೂ ಚಿತ್ರರಂಗದಲ್ಲಿರುವ ನಟ ನಿಖಿಲ್ ಸಿದ್ಧಾರ್ಥ್ ಅವರ 21 ಸಿನಿಮಾಗಳಷ್ಟೆ ಈವರೆಗೆ ಬಿಡುಗಡೆ ಆಗಿವೆ. ಆದರೆ ಕಳೆದ ವರ್ಷ ಬಿಡುಗಡೆ ಆದ ಒಂದು ಸಿನಿಮಾದಿಂದ ಅವರ ಅದೃಷ್ಟವೇ ಬದಲಾಗಿದೆ. ಕಳೆದ ವರ್ಷ ಅವರ ನಟನೆಯ ಕಾರ್ತಿಕೇಯ 2 ಸಿನಿಮಾ ಬಿಡುಗಡೆ ಆಗಿ ಸೂಪರ್ ಡೂಪರ್ ಹಿಟ್ ಆಯಿತು. ಆ ಸಿನಿಮಾಕ್ಕೆ ಉತ್ತರ ಭಾರತದಲ್ಲಿ ಭಾರಿ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಯಿತು. ಅದಾದ ಬಳಿಕ ನಿಖಿಲ್ ಅದೃಷ್ಟ ಖುಲಾಯಿಸಿದ್ದು ಇದೇ ವರ್ಷದ ಮೊದಲ ಐದು ತಿಂಗಳಲ್ಲಿಯೇ ಅವರಿಗೆ ನಾಲ್ಕು ಸಿನಿಮಾಗಳ ಅವಕಾಶ ದೊರೆತಿದೆ. ಇನ್ನೂ ಕೆಲವು ಸಿನಿಮಾಗಳ ಬಗ್ಗೆ ಚರ್ಚೆ ಚಾಲ್ತಿಯಲ್ಲಿದೆ.
ಅದರಲ್ಲಿಯೂ ನಿಖಿಲ್ಗೆ ಲಭಿಸುತ್ತಿರುವ ಬಹುತೇಕ ಅವಕಾಶಗಳು ಒಂದೇ ಮಾದರಿಯ ಅಥವಾ ಒಂದೇ ಪಂಥದವರನ್ನು ಆಕರ್ಷಿಸುವ ಕತೆಯನ್ನು ಒಳಗೊಂಡಿದೆ ಎಂಬುದು ವಿಶೇಷ. ಏನೇ ಆಗಲಿ ಇದರಿಂದ ನಿಖಿಲ್ಗೆ ಒಳ್ಳೆಯದಾಗುತ್ತಿರುವುದು ನಿಜ. ಈಗಾಗಲೇ ಸ್ಪೈ ಹೆಸರಿನ ಸಿನಿಮಾದಲ್ಲಿ ನಿಖಿಲ್ ನಟಿಸಿದ್ದು ಸುಭಾಷ್ ಚಂದ್ರ ಭೋಸ್ ಸಾವಿನ ಸಾಕ್ಷ್ಯಗಳ ಬಗ್ಗೆ ಕತೆಯನ್ನು ಹೊಂದಿರುವ ಈ ಸಿನಿಮಾ ಇದೇ ತಿಂಗಳು 29ರಂದು ಬಿಡುಗಡೆ ಆಗಲಿದೆ.
ಅದರ ಬೆನ್ನಲ್ಲೆ ರಾಮ್ ಚರಣ್ ಸಹ ನಿರ್ಮಾಪಕರಾಗಿರುವ ದಿ ಇಂಡಿಯಾ ಹೌಸ್ ಸಿನಿಮಾದಲ್ಲಿಯೂ ನಾಯಕ ಪಾತ್ರ ನಿಖಿಲ್ಗೆ ದೊರೆತಿದೆ. ಸಾವರ್ಕರ್ ಜೀವನದ ಬಗ್ಗೆ ಕತೆಯನ್ನು ಈ ಸಿನಿಮಾ ಒಳಗೊಂಡಿದೆ ಎನ್ನಲಾಗುತ್ತಿದ್ದು ಈ ಸಿನಿಮಾಕ್ಕೆ ಮೊದಲ ಆಯ್ಕೆ ಅಖಿಲ್ ಅಕ್ಕಿನೇನಿ ಆಗಿದ್ದರಂತೆ. ಆದರೆ ಬಳಿಕ ನಿಖಿಲ್ ನಾಯಕರಾಗಿ ಆಯ್ಕೆ ಆಗಿದ್ದಾರೆ. ನಿಖಿಲ್ಗೆ ಅದೃಷ್ಟ ತಂದುಕೊಟ್ಟ ಕಾರ್ತಿಕೇಯ ಸಿನಿಮಾದ ಮತ್ತೊಂದು ಭಾಗ ನಿರ್ಮಾಣವಾಗುತ್ತಿದ್ದು, ಕಾರ್ತಿಕೇಯ 3 ಸಿನಿಮಾಕ್ಕೂ ನಿಖಿಲ್ ಅವರೇ ನಾಯಕ.
ಇದನ್ನೂ ಓದಿ:ಅಖಿಲ್ಗೆ ಕೈಕೊಟ್ಟು ನಿಖಿಲ್ ಕೈಹಿಡಿದ ರಾಮ್ ಚರಣ್, ಅಕ್ಕಿನೇನಿ ಅಭಿಮಾನಿಗಳ ವಿರೋಧ
ನಿಖಿಲ್ ನಾಯಕನಟನಾಗಿರುವ ಸ್ವಯಂಭು ಹೆಸರಿನ ಸಿನಿಮಾ ಘೋಷಣೆ ಸಹ ಇದೀಗ ಘೋಷಣೆ ಆಗಿದೆ. ಸಿದ್ಧಾರ್ಥ್ರ ಹುಟ್ಟುಹಬ್ಬದ ಸಂಭ್ರಮದ ಪ್ರಯುಕ್ತ ಈ ಸಿನಿಮಾ ಘೋಷಣೆ ಆಗಿ ಪೋಸ್ಟರ್ ಸಹ ಬಿಡುಗಡೆ ಆಗಿದೆ. ಭರತ್ ಕೃಷ್ಣಮಾಚಾರಿ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾಗೆ ಸ್ವಯಂಭೂ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಪಿಕ್ಸೆಲ್ ಸ್ಟುಡಿಯೋ ಮೂಲಕ ಭುವನ್ ಹಾಗೂ ಶ್ರೀಕರ್ ಚಿತ್ರ ನಿರ್ಮಾಣ ಮಾಡುತ್ತಿದ್ದು, ಟ್ಯಾಗೋರೆ ಮಧು ಪ್ರಸ್ತುತಪಡಿಸುತ್ತಿದ್ದಾರೆ. ಸ್ವಯಂಭೂ ಎಂದರೆ ಸ್ವಯಂ ಹುಟ್ಟು ಎಂದರ್ಥ. ಇನ್ನು, ಫಸ್ಟ್ ಲುಕ್ ಪೋಸ್ಟರ್ ನಲ್ಲಿ ನಿಖಿಲ್, ಉದ್ದವಾದ ಕೂದಲು ಬಿಟ್ಟು ಒಂದು ಕೈಯಲ್ಲಿ ಈಟಿ, ಮತ್ತೊಂದು ಕೈಯಲ್ಲಿ ಗುರಾಣಿ ಹಿಡಿದು ವೀರಯೋಧನಂತೆ ಕಾಣಿಸಿಕೊಂಡಿದ್ದಾರೆ. ಸಹಸ್ರಮಾನಗಳ ಹಿಂದಿನ ಕಥೆಯನ್ನೊಳಗೊಂಡಿರುವ ಸ್ವಯಂಭೂ ಸಿನಿಮಾ ನಿಖಿಲ್ ಸಿದ್ದಾರ್ಥ್ ವೃತ್ತಿಜೀವನದ ಬಿಗ್ ಬಜೆಟ್ ಚಿತ್ರವಾಗಿದೆ. ಮನೋಜ್ ಪರಮಹಂಸ ಛಾಯಾಗ್ರಹಣ, ರವಿ ಬಸ್ರೂರ್ ಸಂಗೀತ, ವಾಸುದೇವ್ ಮುನೆಪ್ಪಗರಿ ಚಿತ್ರಕ್ಕೆ ಸಂಭಾಷಣೆಯನ್ನು ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ