ಲಾಕ್​ಡೌನ್​ನಲ್ಲಿ ಮನೆಯಲ್ಲಿದ್ದು ಬೋರಾಗಿದೆಯಾ? ಬೆಂಗಳೂರಿಗೆ ಹತ್ತಿರವಿರುವ ಈ ಸ್ಥಳಗಳಿಗೆ ಭೇಟಿ ನೀಡಿ ಫ್ರೆಶ್ ಆಗಿ!

TV9 Digital Desk

| Edited By: Arun Kumar Belly

Updated on: Jul 15, 2021 | 8:49 PM

ಬೆಟ್ಟದ ಮೇಲೆ ಸುರಿವ ಮಂಜು ಮತ್ತು ಅದು ಸೃಷ್ಟಿಸುವ ಇಬ್ಬನಿ ಹಾಗೂ ಬೆಟ್ಟದ ಮೇಲಿಂದ ಕಾಣುವ ಸೂರ್ಯೋದಯದ ದೃಶ್ಯಗಳು ನಯನ ಮನೋಹರ. ಹಾಗಾಗೇ, ಜನ ಬೆಳಗಿನ ಜಾವವೇ ಅಲ್ಲಿಗೆ ತಲುಪಲು ತವಕಿಸುತ್ತಾರೆ.

ಲಾಕ್​ಡೌನ್​ನಲ್ಲಿ ಮನೆಯಲ್ಲಿದ್ದು ಬೋರಾಗಿದೆಯಾ? ಬೆಂಗಳೂರಿಗೆ ಹತ್ತಿರವಿರುವ ಈ ಸ್ಥಳಗಳಿಗೆ ಭೇಟಿ ನೀಡಿ ಫ್ರೆಶ್ ಆಗಿ!
ನಂದಿ ಬೆಟ್ಟದ ಮೇಲಿಂದ ಕಾಣುವ ವಿಹಂಗಮ ದೃಶ್ಯ

ಬೆಂಗಳೂರು: ನಗರವೂ ಸೇರಿದಂತೆ ರಾಜ್ಯದಾದ್ಯಂತ ಲಾಕ್​ಡೌನ್​ ತೆರವುಗೊಂಡಿರುವುದರಿಂದ ಸುಮಾರು ಎರಡೂವರೆ ತಿಂಗಳು ಕಾಲ ಮನೆಯಲ್ಲೇ ಇದ್ದು ಮೈಮನಸ್ಸು ಜಡಗಟ್ಟಿಸಿಕೊಂಡಿರುವ ಜನರಿಗೆ ಹೊರಗೆ ಸುತ್ತಾಡಿ ಮತ್ತೆ ಫ್ರೆಶ್ ಆಗಲು ಇದು ಸಕಾಲ. ನೀವು ಬೆಂಗಳೂರಿನ ನಿವಾಸಿಗಳಾಗಿದ್ದರೆ ಮತ್ತು ಅನೇಕ ಬಾರಿ ಲಾಲ್​ಬಾಗ್, ಕಬ್ಬನ್​ ಪಾರ್ಕ್ ಮತ್ತು ಮಾಲ್​ಗಳಿಗೆ ಭೇಟಿ ನೀಡಿ ಬೇಸತ್ತಿದ್ದರೆ, ನಿಮಗೆ ಹತ್ತಿರವಾಗುವ ಕೆಲ ಪ್ರವಾಸಿ ಸ್ಥಳಗಳನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ. ಇವು ನಿಮಗೂ ಗೊತ್ತಿರುವ ಸ್ಥಳಗಳು ಅಂತ ನಮಗೆ ಗೊತ್ತಿದೆ. ಮತ್ತೊಮ್ಮೆ ನಿಮ್ಮ ನೆನಪಿಗೆ ತರುವ ಪ್ರಯತ್ನ ನಮ್ಮದು, ಅಷ್ಟೇ. ವಾರಾಂತ್ಯದಲ್ಲಿ ಹೋಗಿಬರಲು ಮತ್ತು ಮೈಮನಸ್ಸು ಹಗುರ ಮಾಡಿಕೊಳ್ಳಲು ಇವುಗಳಿಗಿಂತ ಉತ್ತಮ ಸ್ಥಳಗಳು ಸಿಗಲಾರವು.

ಹುಲಿಯೂರುದುರ್ಗ ಕೋಟೆ

ಬೆಂಗಳೂರನ್ನು ಕಟ್ಟಿದ ಕಂಪೇ ಗೌಡರು ಹುಲಿಯೂರುದುರ್ಗ ಬೆಟ್ಟದಲ್ಲಿ ಒಂಭತ್ತು ಕೋಟೆಗಳನ್ನು ಕಟ್ಟಿಸಿದರೆಂದು ಹೇಳಲಾಗುತ್ತದೆ. ನಗರದಿಂದ ಸುಮಾರು ಮೂರು ತಾಸಿನ ಪ್ರಯಾಣಸದಷ್ಟು ದೂರವಿರುವ ಈ ಕೋಟೆಗಳ ಬೆಟ್ಟ ನಿಸರ್ಗ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ. ಬೋರಲು ಹಾಕಿದ ಮಡಕೆಯಂತೆ ಕಾಣುವುದರಿಂದಲೇ ಇದನ್ನು ಕುಂಬಿ ಬೆಟ್ಟ ಅಂತಲೂ ಕರೆಯುತ್ತಾರೆ. ಬೆಟ್ಟದ ಸುತ್ತಲಿನ ಹಚ್ಚಹಸಿರು ಸಸ್ಯರಾಶಿ ಮನಸ್ಸಿಗೆ ಮುದ ನೀಡುತ್ತದೆ.

ಟ್ರೆಕ್ಕಿಂಗ್ ಆಸಕ್ತಿಯುಳ್ಳವರಿಗೆ ಅದರ ದಾರಿ ಹುಲಿಯೂರದುರ್ಗ ಗ್ರಾಮದಿಂದಲೇ ಶುರುವಾಗುತ್ತದೆ. ಬಂಡೆಗಳಿಂದ ನಿರ್ಮಿತ ಮತ್ತು ಲಂಬಕ್ಕಿರುವ ಗೋಡೆಗಳನ್ನು ಹತ್ತಿ ಬೆಟ್ಟದ ತುದಿಯನ್ನು ತಲುಪಲು ಕನಿಷ್ಟ 45 ನಿಮಿಷಗಳು ಬೇಕು. ಬೆಟ್ಟದ ತುದಿ ಹೆಸರಾಂತ ಪುಣ್ಯಕ್ಷೇತ್ರವೂ ಆಗಿದೆ. ಫೆಬ್ರುವರಿಯಲ್ಲಿ ಇಲ್ಲಿರುವ ಮಲ್ಲೇಶ್ವರ ದೇವರಸ್ಥಾನಕ್ಕೆ ಸಾವಿರಾರು ಭಕ್ತಾದಿಗಳು ಬರುತ್ತಾರೆ. ಬೆಟ್ಟವು ಸಮುದ್ರ ಮಟ್ಟದಿಂದ 847 ಮೀಟರ್ ಎತ್ತರದಲ್ಲಿದ್ದರೂ ಸುತ್ತಮುತ್ತಲಿನ ಹಳ್ಳಿಗಳ ಮತ್ತು ಹಸಿರುಹೊದಿಕೆಯ ವಿಹಂಗಮ ದೃಶ್ಯವನ್ನು ನಿಮ್ಮ ಕಣ್ಣುಗಳಿಗೆ ಒದಗಿಸುತ್ತದೆ.

ಸಾವನದುರ್ಗ

ಬೆಂಗಳೂರಿನಿಂದ ಸುಮರು 50 ಕಿಮೀ ದೂರದಲ್ಲಿರುವ ಸಾವನದುರ್ಗ ಸಹ ಟ್ರೆಕ್ಕಿಂಗ್ ಪ್ರಿಯರ ಅಚ್ಚುಮೆಚ್ಚಿನ ಸ್ಥಳ. ಕರಿಗುಡ್ಡ ಮತ್ತು ಬಿಳಿಗುಡ್ಡ ಎರಡು ಸೇರಿ ಸಾವದಗುರ್ಗ ಬೆಟ್ಟವಾಗಿದೆ ಎಂಬ ಪ್ರತೀತಿ ಇದೆ. ಇದು ಏಷ್ಯಾದ ಅತಿದೊಡ್ಡ ಏಕಶಿಲೆ ಬೆಟ್ಟವೆನಿಸಿಕೊಂಡಿದ್ದು ಸಮುದ್ರಮಟ್ಟದಿಂದ 1226 ಮೀಟರ್ ಎತ್ತರದಲ್ಲಿದೆ. ಬೆಟ್ಟದ ಮೇಲೆ ನಿಂತು ಸೂರ್ಯೋದಯದ ಸೊಬಗನ್ನು ಕಣ್ತುಂಬಿಸಿಕೊಳ್ಳಲಯ ಟ್ರೆಕ್ಕರ್​ಗಳು ಬೆಟ್ಟ ಹತ್ತುವುದನ್ನು ಬೆಳಗ್ಗೆ 5 ಗಂಟೆಯಿಂದಲೇ ಆರಂಭಿಸುತ್ತಾರೆ.

ಸಾವನದುರ್ಗದ ಅಡಿಯಲ್ಲಿ ಎರಡು ದೇವಸ್ಥಾನಗಳಿವೆ-ಸಾವಂಡಿ ವೀರಭದ್ರಸ್ವಾಮಿ ಮತ್ತು ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನ. ಟ್ರೆಕ್ ದೇವಸ್ಥಾನಗಳಿಂದ ಶುರವಾಗಿ ಬೆಟ್ಟದ ತುದಿಯಲ್ಲಿ ಕೊನೆಗೊಳ್ಳುತ್ತದೆ. ಎರಡು ಕಿಮೀಗಳ ಟ್ರೆಕ್ಕಿಂಗ್ ನಂತರ ಬೆಟ್ಟದ ತುದಿಗೆ ತಲುಪುವ ನಿಮಗೆ ಮೇಲಿಂದ ಕಾಣುವ ದೃಶ್ಯವನ್ನು ನೋಡಲು ನಿಜಕ್ಕೂ ಎರಡು ಕಣ್ಣುಗಳು ಸಾಲವು. ಬೆಟ್ಟದ ಕೆಲ ಬಂಡೆಗಳು ಜಾರುವುದರಿಂದ ಬಹಳ ಜಾಗರೂಕರಾಗಿರಬೇಕು.

ನಂದಿ ಬೆಟ್ಟ:

ಇದು ನಿಸ್ಸಂದೇಹವಾಗಿ ಅತ್ಯಂತ ಜನಪ್ರಿಯ ತಾಣ. ಗಂಗೆಯರು ಕಟ್ಟಿದ ಒಂದು ಪ್ರಾಚೀನ ಕೋಟೆ ನಂದಿ ಬೆಟ್ಟದ ಮೇಲಿದೆ. ಈ ಸ್ಥಳವು ಬೆಂಗಳೂರರಿನಿಂದ ಸುಮಾರು 60 ಕಿಮೀ ದೂರದಲ್ಲಿದೆ. ಬೆಟ್ಟದ ಮೇಲೆ ಸುರಿವ ಮಂಜು ಮತ್ತು ಅದು ಸೃಷ್ಟಿಸುವ ಇಬ್ಬನಿ ಹಾಗೂ ಬೆಟ್ಟದ ಮೇಲಿಂದ ಕಾಣುವ ಸೂರ್ಯೋದಯದ ದೃಶ್ಯಗಳು ನಯನ ಮನೋಹರ. ಹಾಗಾಗೇ, ಜನ ಬೆಳಗಿನ ಜಾವವೇ ಅಲ್ಲಿಗೆ ತಲುಪಲು ತವಕಿಸುತ್ತಾರೆ.

ಬೆಟ್ಟದ ಮೇಲೆ ಹಲವು ಐತಿಹಾಸಿಕ ಸ್ಮಾರಕಗಳಿವೆ. ದೇವಸ್ಥಾನಗಳು, ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ ತಷ್ಕ್-ಎ-ಜನ್ನತ್ ಮೊದಲಾದವು ನೋಡಲೇಬೇಕಾದ ಸ್ಥಳಗಳು. ಕಮಾನುಗಳು ಮತ್ತು ಅವುಗಳ ಮೇಲಿನ ಕೆತ್ತನೆ ಕೆಲಸ ನಿಮ್ಮನ್ನು ಖಂಡಿತ ಸೆಳೆಯುತ್ತವೆ. ಬೆಟ್ಟದ ತುದಿಗೆ ವಾಹನಗಳಲ್ಲಿ ಹೋಗಬಹುದು ಇಲ್ಲವೇ ಮೆಟ್ಟಿಲುಗಳ ಮೂಲಕವೂ ನಡೆದು ತಲುಪಿಕೊಳ್ಳಬಹುದು. ಮೇಲೆ ಹತ್ತುವಾಗ ಶ್ರೀ ಗವಿ ವೀರಭದ್ರ ಸ್ವಾಮಿ ದೇವಸ್ಥಾನವು ಗುಹೆಯಾಕಾರದಲ್ಲಿ ಮುಚ್ಚಿಕೊಂಡಿರುವುದು ನಮ್ಮ ಕಣ್ಣಿಗೆ ಬೀಳುತ್ತದೆ. ನಂತರ 1928ರಲ್ಲಿ ಕಟ್ಟಿದ ಅಮೃತ ಸರೋವರವೂ ನಮಗೆ ಸಿಗುತ್ತದೆ. ಮೆಟ್ಟಿಲುಗಳಿರುವುದರಿಂದ ಟ್ರೆಕ್ಕಿಂಗ್ ಕಷ್ಟವೇನೂ ಅನಿಸದು.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ರಜಾ ಸಮಯದಲ್ಲಿ ಬೆಂಗಳೂರಿನ ನಿವಾಸಿಗಳಿಗೆ ಭೇಟಿ ನೀಡಿ ಆಯಾಸ ಪರಿಹರಸಿಕೊಳ್ಳಲು ಇರುವ ಅತ್ಯುತ್ತಮ ಸ್ಥಳವೆಂದರೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ. ನಗರ ಭಾಗದಿಂದ ದಕ್ಷಿಣದೆಡೆ 22 ಕಿಮೀ ಹೋದರೆ ಅದು ನಿಮಗೆ ಸಿಗುತ್ತದೆ. ರಸ್ತೆಯಲ್ಲಿ ಮದುರೈಯಲ್ಲಿರುವಂಥ ಮೀನಾಕ್ಷಿ ದೇವಸ್ಥಾನ ನಿಮಗೆ ಸಿಗುತ್ತದೆ. ಉದ್ಯಾನವನದಲ್ಲಿ ಸಫಾರಿಗೆ ಅವಕಾಶವಿದೆ- ನೀವಿಲ್ಲಿ ಸಿಂಹ, ಹುಲಿ, ಜಿಂಕೆ, ಕರಡಿ, ಜಿರಾಫೆ ಮುಂತಾದ ವನ್ಯ ಪ್ರಾಣಿಗಳನ್ನು ಬಹಳ ಹತ್ತಿರದಿಂದ ನೋಡಬಹುದು. ಹಾಗೆಯೇ ಮೃಗಾಲಯದಲ್ಲಿ ವಿವಿಧ ಪಕ್ಷಿಗಳು, ಪ್ರಾಣಿಗಳು, ಜಲಚರ ಜೀವಿಗಳನ್ನು ನೋಡಬಹುದು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಆನೆಗಳಿಗೆ ವನ್ಯಜೀವಿ ಕಾರಿಡಾರ್​ನ ಭಾಗವಾಗಿದ್ದು ಬಿ ಆರ್ ಹಿಲ್ಸ್ ಮತ್ತು ಸತ್ಯಮಂಗಲ ಕಾಡಿಗೆ ಸಂಪರ್ಕ ಹೊಂದಿರುತ್ತದೆ.

ಮಧುಗಿರಿ ಬೆಟ್ಟ

ನಾಶಹೊಂದಿರುವ ಅಥವಾ ಹೊಂದುತ್ತಿರುವ ಸ್ಥಳಗಳನ್ನು ನೋಡುವುದು ನಿಮ್ಮ ಹವ್ಯಾಸ ಅಂತಾದರೆ, ನಿಶ್ಚಿತವಾಗಿಯೂ ಮಧುಗಿರಿ ಬೆಟ್ಟಕ್ಕೆ ಭೇಟಿ ನೀಡಬಹುದು. ಇದು ಬೆಂಗಳೂರಿನಿಂದ 107 ಕಿಮೀ ದೂರ ಮಧುಗಿರಿಯಲ್ಲಿದೆ. ಬೆಟ್ಟದ ಮೇಲಿರುವ ಕೋಟೆಯನ್ನು ತಲುಪಬೇಕಾದರೆ ನೀವು ಸುಮಾರು ಒಂದೂವರೆ ಕಿಮೀ ಟ್ರೆಕ್ಕಿಂಗ್ ಮಾಡಬೇಕಾಗುತ್ತದೆ.

ಬೆಟ್ಟದ ಮೇಲಿಂದ ತಿಮ್ಮಲಾಪುರ ಕಾಡಿನ ದೃಶ್ಯ ಮತ್ತು ಬೆಟ್ಟದ ಸುತ್ತ ಇರುವ ಸರೋವರಗಳು ನಿಮ್ಮ ಕಣ್ಮನ ಸೆಳೆಯುತ್ತವೆ. ಸದರಿ ಬೆಟ್ಟವು ಸಮುದ್ರ ಮಟ್ಟದಿಂದ 1200 ಮೀ ಎತ್ತರದಲ್ಲಿದೆ. ಇಲ್ಲಿರುವ ಕೋಟೆಯನ್ನು 17 ನೇ ಶತಮಾನಲ್ಲಿ ರಾಜಾ ಹಿರೇ ಗೌಡ ಕಟ್ಟಿದನೆಂದು ಇತಿಹಾಸ ಹೇಳುತ್ತದೆ. ಸುಮಾರು ಎರಡೂವರೆ ತಾಸಿನ ಟ್ರೆಕ್ಕಿಂಗ್ ಸುಲಭವಲ್ಲ, ಅಪಾಯಕಾರಿಯಾಗಿದೆ. ಆದರೆ ಬೆಟ್ಟ ಮಾರ್ಗದ ಒಂದು ಕಡೆಯಲ್ಲಿ ಮೆಟ್ಟಿಲುಗಳಿವೆ. ಈ ಬೆಟ್ಟ ಪ್ರದೇಶದಲ್ಲಿ ಮೊದಲು ಹೇರಳವಾಗಿ ಜೇನು ಗೂಡುಗಳಿದ್ದರಿಂದ ಮಧು-ಗಿರಿ ಎಂದ ಹೆಸರು ಬಂದಿದೆ. ಬೆಟ್ಟದ ಮೇಲೆ ಇತಿಹಾಸ ಪ್ರಾಮುಖ್ಯವುಳ್ಳ ದೇವಸ್ಥಾನಗಳಿವೆ.

ಇದನ್ನೂ ಓದಿ: Nandi Hills: ವಿಶ್ವವಿಖ್ಯಾತ ನಂದಿಬೆಟ್ಟಕ್ಕೆ ತ್ವರಿತವಾಗಿ ರೋಪ್ ವೇ ನಿರ್ಮಿಸಲು ಸೂಚಿಸಿದ ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೇಶ್ವರ್

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada