ಬೆಳಗಾವಿ: ಒಂದೆಡೆ ಮಾಜಿ ಮುಖ್ಯಮಂತ್ರಿ, ಹಾಲಿ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯಗೆ ನಾಳಿದ್ದು ನಡೆಯುವ ಬೈ ಎಲೆಕ್ಷನ್​ ಅಳಿವು ಉಳಿವಿನ ರಣಾಂಗಣವಾಗಿದೆ. ಮತ್ತೊಂದೆಡೆ, ಶತಾಯಗತಾಯ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವುದು ಮತ್ತು ಅನರ್ಹ ಶಾಸಕರನ್ನು ಮಣ್ಣುಮುಕ್ಕಿಸುವುದು ಸಿದ್ದರಾಮಯ್ಯನವ್ರ ಹೆಗ್ಗುರಿಯಾಗಿದೆ. ಇದರ ಮಧ್ಯೆ, ಹಾಲಿ ಚುನಾವಣಾ ಪ್ರಚಾರದ ವೇಳೆ ಸಿದ್ದರಾಮಯ್ಯ ಏಕಾಂಗಿಯಾಗಿದ್ದಾರೆ ಎಂದು ಬಿಜೆಪಿ ಲೇವಡಿ ಮಾಡುತ್ತಾ ಬಂದಿದೆ.

ಇದಕ್ಕೆ ಇಂಬುಕೊಡುವಂತೆ ಬೆಳಗಾವಿ ಅಖಾಡದಲ್ಲಿ ಸಿದ್ದರಾಮಯ್ಯ ಒಂಟಿಯಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಹೇಳಿಕೇಳಿ ಇದು ಹೈವೋಲ್ಟೇಜ್​ ರಣಕಣ. ಮೈತ್ರಿ ಸರ್ಕಾರವನ್ನು ಬೀಳುಸುವುದಕ್ಕೆ ಪ್ರಮುಖ ಕಾರಣಕರ್ತರಾದ ರಮೇಶ್​ ಜಾರಕಿಹೊಳಿ ಅವರನ್ನ ಸೋಲಿಸಲೇಬೇಕು ಎಂಬುದು ಸಿದ್ದರಾಮಯ್ಯ ಸೇರಿದಂತೆ ಮೈತ್ರಿ ಸರ್ಕಾರದ ಪ್ರತಿಯೊಬ್ಬರ ಆಶಯವಾಗಿದೆ. ಆದ್ರೆ ಯಾರೊಬ್ಬರೂ ಸಿದ್ದರಾಮಯ್ಯ ಜೊತೆ ಹೆಜ್ಜೆ ಹಾಕುತ್ತಿಲ್ಲ.

ಕುತೂಹಲದ ಸಂಗತಿಯೆಂದ್ರೆ ಚುನಾವಣೆ ಪ್ರಚಾರ ಶುರುವಾದ ಸಂದರ್ಭದಲ್ಲಿಯೇ.. ಜೈಲಿನಲ್ಲಿದ್ದ ಮತ್ತೊಬ್ಬ ವರ್ಚಸ್ವೀ ನಾಯಕ ಡಿಕೆ ಶಿವಕುಮಾರ್ ಹೊರಬಂದಿದ್ದರು. ಅವರನ್ನ ಬೆಳಗಾವಿಗೆ ಕರೆತಂದು, ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಸುವುದಾಗಿ ಲಕ್ಷ್ಮೀ ಹೆಬ್ಬಾಳ್ಕರ್​ ವೀರಾವೇಶದ ಮಾತನ್ನಾಡಿದ್ದರು. ಆದ್ರೆ ಅತ್ತ ಗೋಕಾಕ್​ ಕ್ಷೇತ್ರದಲ್ಲಿ ಶಿವಕುಮಾರ್​ ಹಾಗಿರಲಿ, ಸ್ವತಃ ಹೆಬ್ಬಾಳ್ಕರ್​ ಅವರೇ ನಾಪತ್ತೆಯಾಗಿಬಿಟ್ಟರು.

ಪರಿಸ್ಥಿತಿ ಹೀಗಿರುವಾಗ ಕಾಂಗ್ರೆಸ್ಸಿನ ಹಿರಿಯ ನಾಯಕರು ಯಾರೂ, ಒಮ್ಮೆಯೂ ಕ್ಷೇತ್ರದತ್ತ ಮುಖ ಮಾಡಲೇ ಇಲ್ಲ. ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಪ್ರಚಾರಕ್ಕೆ ಬಂದೇ ಇಲ್ಲ. ಗೋಕಾಕ್, ಅಥಣಿ, ಕಾಗವಾಡದಲ್ಲಿ ಟಗರು ಮಾತ್ರ ಪ್ರಚಾರದಲ್ಲಿ ತೊಡಗಿದೆ. ಮೂರೂ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಆಪ್ತರಿಗೇ ಟಿಕೆಟ್ ನೀಡಲಾಗಿದೆ ಎಂದು ಬೆಳಗಾವಿ ಅಖಾಡಕ್ಕೆ ಕಾಂಗ್ರೆಸ್ ಹಿರಿಯ ನಾಯಕರು ಮುನಿದಿದ್ದು, ಪ್ರವಾರದಿಂದ ದೂರವುಳಿದಿದ್ದಾರೆ ಎನ್ನಲಾಗಿದೆ.