ಬಡ್ಡಿದರ ಫೆಬ್ರುವರಿಯಲ್ಲೂ ಕಡಿಮೆ ಮಾಡುವ ಸಾಧ್ಯತೆ ಇಲ್ಲ: ಎಸ್ಬಿಐ ರಿಸರ್ಚ್
SBI Research prediction on interest rate cut: ಡಿಸೆಂಬರ್ ಮತ್ತು ಫೆಬ್ರುವರಿಯಲ್ಲಿ ನಡೆಯಲಿರುವ ಆರ್ಬಿಐ ಎಂಪಿಸಿ ಸಭೆಯು ಬಡ್ಡಿದರ ಇಳಿಸುವ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ ಎಂದು ಎಸ್ಬಿಐ ರಿಸರ್ಚ್ ಅಭಿಪ್ರಾಯಪಟ್ಟಿದೆ. ಹಣದುಬ್ಬರವು ಹೆಚ್ಚಿನ ಮಟ್ಟದಲ್ಲಿ ಇರುವುದರಿಂದ ರಿಪೋ ದರ ಇಳಿಸದೇ ಹೋಗಬಹುದು ಎನ್ನಲಾಗಿದೆ.
ನವದೆಹಲಿ, ನವೆಂಬರ್ 13: ಹಣದುಬ್ಬರ ನಿರೀಕ್ಷೆಮೀರಿ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಆರ್ಬಿಐನಿಂದ ಸದ್ಯಕ್ಕೆ ರಿಪೋ ದರ ಇಳಿಕೆ ಆಗುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ಎಸ್ಬಿಐ ರಿಸರ್ಚ್ ಸಂಸ್ಥೆಯ ಪ್ರಕಾರ ಫೆಬ್ರುವರಿಯಲ್ಲಿ ಬಡ್ಡಿ ದರ ಇಳಿಸದೇ ಇರಬಹುದು. ಜನವರಿಯಿಂದ ಹಣದುಬ್ಬರ ಅಲ್ಪ ಇಳಿಕೆ ಆಗತೊಡಗಬಹುದು. ಅಲ್ಲಿಯವರೆಗೆ ಹಣದುಬ್ಬರವು ಆರ್ಬಿಐ ನಿಗದಿ ಮಾಡಿದ ತಾಳಿಕೆ ಮಿತಿಗಿಂತ ಹೊರಗೆಯೇ ಇರಬಹುದು.
ಎಸ್ಬಿಐ ರಿಸರ್ಚ್ ವರದಿ ಪ್ರಕಾರ 2024-25ರ ಹಣಕಾಸು ವರ್ಷದಲ್ಲಿ ಹಣದುಬ್ಬರ ದರವು ಶೇ 4.8ರಿಂದ ಶೇ 4.9ರ ಶ್ರೇಣಿಯಲ್ಲಿರಬಹುದು. ಇದು ಆರ್ಬಿಐ ಅಂದಾಜು ಮಾಡಿದ ಶೇ. 4.5ರ ದರಕ್ಕಿಂತ ಮೇಲೆಯೇ ಇದೆ. ಜನವರಿಯಿಂದ ಹಣದುಬ್ಬರ ದರ ಕಡಿಮೆ ಆಗುತ್ತದೆಯಾದರೂ ಅದು ಬೇಸ್ ಎಫೆಕ್ಟ್ನ (ಮೂಲ ವರ್ಷ) ಕಾರಣದಿಂದಲೇ ಹೊರತು, ನೈಜವಾದ ಬೆಲೆ ಇಳಿಕೆಯ ಪರಿಸ್ಥಿತಿ ಅಲ್ಲ. ಹೀಗಾಗಿ, ಫೆಬ್ರುವರಿ ತಿಂಗಳಲ್ಲೂ ಆರ್ಬಿಐ ರಿಪೋ ದರ ಇಳಿಸುವ ರಿಸ್ಕ್ ತೆಗೆದುಕೊಳ್ಳುವುದು ಅನುಮಾನ ಎಂದು ಎಸ್ಬಿಐ ರಿಸರ್ಚ್ ಹೇಳಿದೆ.
ಇದನ್ನೂ ಓದಿ: ಈ ವರ್ಷವೇ ರಚನೆಯಾಗುತ್ತಾ 8ನೇ ವೇತನ ಆಯೋಗ? ಕನಿಷ್ಠ ವೇತನ ಡಬಲ್ ಆಗುತ್ತಾ? ಇಲ್ಲಿದೆ ಮಾಹಿತಿ
ನಿನ್ನೆ ಮಂಗಳವಾರ ಸರ್ಕಾರದಿಂದ ಬಿಡುಗಡೆಯಾದ ದತ್ತಾಂಶದ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ರೀಟೇಲ್ ಹಣದುಬ್ಬರ ಶೇ. 6.21ಕ್ಕೆ ಏರಿದೆ. ಆಹಾರ ಹಣದುಬ್ಬರವೇ ಶೇ. 10.87ರಷ್ಟಾಗಿದೆ. ಅದರಲ್ಲೂ ತರಕಾರಿ ಬೆಲೆಗಳೇ ಶೇ. 42.18ರಷ್ಟು ಹೆಚ್ಚಾಗಿದೆ.
ಬಹುತೇಕ ಎಲ್ಲಾ ದೊಡ್ಡ ರಾಜ್ಯಗಳಲ್ಲೂ ಹಣದುಬ್ಬರ ಮಟ್ಟ ಹೆಚ್ಚಿದೆ. ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು ಹಣದುಬ್ಬರ ದರ ಈ ದೊಡ್ಡ ರಾಜ್ಯಗಳಲ್ಲಿ ಇರುವುದು ಗಮನಾರ್ಹ. ಛತ್ತೀಸ್ಗಡದಲ್ಲಿ ಹಣದುಬ್ಬರ ಶೇ. 8.8ರಷ್ಟಿದೆ. ಬಿಹಾರ, ಒಡಿಶಾ ಮೊದಲಾದ ಕೆಲ ರಾಜ್ಯಗಳಲ್ಲಿ ಶೇ. 7ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಹಣದುಬ್ಬರ ಇದೆ.
ಗ್ರಾಮೀಣ ಮತ್ತು ನಗರ ಭಾಗಗಳ ಮಧ್ಯೆ ಹಣದುಬ್ಬರದಲ್ಲಿ ಅಂತರ ಹೆಚ್ಚಾಗಿರುವುದೂ ಕೂಡ ಗಮನಿಸಬೇಕಾದ ಸಂಗತಿ. ಗ್ರಾಮೀಣ ಪ್ರದೇಶಗಳಲ್ಲಿ ಹಣದುಬ್ಬರ ಶೇ. 6.68ರಷ್ಟಿದ್ದರೆ, ನಗರ ಭಾಗಗಳಲ್ಲಿ ಇದು ಶೇ. 5.62 ಇದೆ. ಶೇ. 1.07ರಷ್ಟು ಅಂತರವನ್ನು ನಾವು ಕಾಣಬಹುದಾಗಿದೆ.
ಇದನ್ನೂ ಓದಿ: 5,000 ಸ್ವಿಗ್ಗಿ ಉದ್ಯೋಗಿಗಳಿಗೆ 9,0000 ಕೋಟಿ ರೂ ಮೊತ್ತದ ಷೇರುಗಳು; ಕೋಟ್ಯಧಿಪತಿಗಳಾದ 500 ಮಂದಿ
ತರಕಾರಿ ಬೆಲೆ ಇಳಿಮುಖ?
ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ತರಕಾರಿ ಬೆಲೆಗಳು ವಿಪರೀತ ಏರಿದ್ದರಿಂದ ಅಕ್ಟೋಬರ್ನಲ್ಲಿ ಹಣದುಬ್ಬರ ಉಚ್ಚ ಮಟ್ಟಕ್ಕೆ ಹೋಗಿದೆ. ಆದರೆ, ನವೆಂಬರ್ 11ರವರೆಗಿನ ರೀಟೇಲ್ ದರಗಳನ್ನು ಗಮನಿಸಿದರೆ ತರಕಾರಿ ಬೆಲೆ ಕಡಿಮೆಗೊಳ್ಳುತ್ತಿದೆ. ಹೀಗಾಗಿ, ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ರೀಟೇಲ್ ಹಣದುಬ್ಬರವು ಅಕ್ಟೋಬರ್ನಷ್ಟು ಹೆಚ್ಚಿರುವುದಿಲ್ಲ. ಆದರೆ, ಶೇ. 5ಕ್ಕಿಂತ ಕಡಿಮೆ ಹಣದುಬ್ಬರ ದರ ನಿರೀಕ್ಷಿಸಲು ಆಗುವುದಿಲ್ಲ ಎನ್ನುತ್ತಿದ್ದಾರೆ ತಜ್ಞರು.
ಆರ್ಬಿಐನ ಮುಂದಿನ ಎಂಪಿಸಿ ಸಭೆ ಡಿಸೆಂಬರ್ 4-6ರವರೆಗೆ ನಡೆಯುತ್ತದೆ. ಬಳಿಕ 2025ರ ಫೆಬ್ರುವರಿ 5-7ರಂದೂ ಸಭೆ ನಡೆಯಲಿದೆ. ಈ ವೇಳೆ ರಿಪೋದರ ಇತ್ಯಾದಿಯನ್ನು ಅವಲೋಕಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ