ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಒಂದೇ ಗ್ರಾಮದ ಏಳು ವಿದ್ಯಾರ್ಥಿಗಳಿಗೆ 1.5 ಕೋಟಿ ರೂ. ವಂಚನೆ!
ಬೆಂಗಳೂರು ಉತ್ತರ ತಾಲೂಕಿನ ತರಹುಣಸೆ ಗ್ರಾಮದಲ್ಲಿ ಏಳು ವಿದ್ಯಾರ್ಥಿಗಳಿಂದ ಬರೋಬ್ಬರಿ ಒಂದೂವರೆ ಕೋಟಿ ಹಣ ಪಡೆದು ಮಹಾಮೋಸ ಮಾಡಿದ್ದಾರೆಂದು ವಿದ್ಯಾರ್ಥಿಗಳು ದೂರು ದಾಖಲಿಸಿದ್ದಾರೆ.
ದೇವನಹಳ್ಳಿ: ಉದ್ಯೋಗ (Job) ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿವೆ. ಸದ್ಯ ಬಿಡಬ್ಲೂಎಸ್ಎಸ್ (BWSSB) ಮತ್ತು ಪಿಎಸ್ಐ (PSI) ಕೆಲಸ ಕೊಡಿಸುತ್ತೇವೆಂದು ಹೇಳಿ ಒಂದೇ ಗ್ರಾಮದ 7 ಜನ ವಿದ್ಯಾರ್ಥಿಗಳಿಗೆ ವಂಚಿಸಿರುವ ಆರೋಪ ಕೇಳಿಬಂದಿದೆ. ಆರೋಪಿಗಳು ಪದವೀಧರ ಯುವಕರನ್ನೆ ಟಾರ್ಗೆಟ್ ಮಾಡಿ ವಂಚಿಸುತ್ತಾರಂತೆ. ಹೀಗೆ ಬೆಂಗಳೂರು ಉತ್ತರ ತಾಲೂಕಿನ ತರಹುಣಸೆ ಗ್ರಾಮದಲ್ಲಿ ಏಳು ವಿದ್ಯಾರ್ಥಿಗಳಿಂದ ಬರೋಬ್ಬರಿ ಒಂದೂವರೆ ಕೋಟಿ ಹಣ ಪಡೆದು ಮಹಾಮೋಸ ಮಾಡಿದ್ದಾರೆಂದು ದೂರು ದಾಖಲಾಗಿದೆ.
BWSSB ಗುತ್ತಿಗೆದಾರ ಪ್ರಕಾಶ್ ಮತ್ತು ರಿಯಲ್ ಎಸ್ಟೇಟ್ ಬ್ರೋಕರ್ ನಾರಾಯಣಸ್ವಾಮಿ ವಿದ್ಯಾರ್ಥಿಗಳಿಗೆ ಮೋಸ ಮಾಡಿರುವ ಆರೋಪಿಗಳು. ಹಣ ಕೊಟ್ಟು 9 ತಿಂಗಳ ಬಳಿಕ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ತರಹುಣಸೆ ಗ್ರಾಮದ ಮುನಿರಾಜು ಎಂಬುವವರು ಚಿಕ್ಕಜಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನನ್ವಯ ಪೊಲೀಸರು ಇಬ್ಬರನ್ನ ಬಂಧಿಸಿದ್ದಾರೆ.
ಇದನ್ನೂ ಓದಿ: ಕೊಪ್ಪಳ ಜಿಲ್ಲೆಯಲ್ಲೊಬ್ಬ ಕಾಮುಕ ಶಿಕ್ಷಕ: ಮಕ್ಕಳ ಗುಪ್ತಾಂಗವನ್ನ ಅಳತೆ ಮಾಡೋ ಕಾಮುಕ ಶಿಕ್ಷಕನ ವಿಡಿಯೋ ವೈರಲ್
ದೂರುದಾರ ಮುನಿರಾಜು ಮತ್ತು ನಾರಾಯಣಸ್ವಾಮಿ ಮೊದಲಿಂದಲೂ ಸ್ನೇಹಿತರು. ಸ್ನೇಹಿತರಾಗಿದ್ದ ಹಿನ್ನೆಲೆ ತನ್ನ ಮಗಳಿಗೆ 30 ಲಕ್ಷ ರೂ. ಹಣ ಕೊಟ್ಟು ಸರ್ಕಾರಿ ಉದ್ಯೋಗ ಕೊಡಿಸಿರುವುದಾಗಿ ನಾರಾಯಣಸ್ವಾಮಿ ನಂಬಿಸಿದ್ದಾನೆ. ಅದೇ ರೀತಿ ಮುನಿರಾಜು ಮಗ ಮತ್ತು ಮಗಳಿಗೂ ಕೆಲಸ ಕೊಡಿಸುತ್ತೇನೆಂದು ಲಕ್ಷ ಲಕ್ಷ ಹಣ ಪಡೆದಿದ್ದ. ಕೆಲಸ ಸಿಗುತ್ತದೆ ಎಂಬ ಆಸೆಯಿಂದ ಅದೇ ಗ್ರಾಮದ ವಿದ್ಯಾರ್ಥಿಗಳು ಕೂಡಾ ಹಣ ನೀಡಿದ್ದಾರೆ.
ನಾರಾಯಣಸ್ವಾಮಿ ಒಬ್ಬೊಬ್ಬರ ಬಳಿ 20 ರಿಂದ 30 ಲಕ್ಷ ರೂ. ನಂತೆ ಒಟ್ಟು 1 ಕೋಟಿ 52 ಲಕ್ಷ ಹಣ ಪಡೆದಿದ್ದ. ಇನ್ನು ಪ್ರಕಾಶ್ ಕೆಲಸ ಸಿಗುವ ವಿಚಾರಕ್ಕೆ ಸಂಬಂಧಿಸಿ ತಾನೆ ಎಲ್ಲಾ ನೊಡಿಕೊಳ್ಳುತ್ತೇನೆಂದು ನಂಬಿಸಿ ವಂಚಿಸಿದ್ದಾನೆ. ಪ್ರಕಾಶ್ ತಂದೆ BWSSBಯಲ್ಲಿ ನಿವೃತ್ತರಾಗಿದ್ದಾರೆ. ಹೀಗಾಗಿ ಅಲ್ಲೆ ಗುತ್ತಿಗೆದಾರನಾಗಿದ್ದು ಅಧಿಕಾರಿಗಳ ಜೊತೆ ಸಂಪರ್ಕ ಹೊಂದಿದ್ದ. ಸದ್ಯ ಪ್ರಕರಣ ಸಂಬಂಧ ಆರೋಪಿಗಳಾದ ನಾರಾಯಣಸ್ವಾಮಿ ಮತ್ತು ಪ್ರಕಾಶ್ ಅರೆಸ್ಟ್ ಆಗಿದ್ದಾರೆ.
ಇದನ್ನೂ ಓದಿ: Rishabh Pant: ರಿಷಭ್ ಪಂತ್ ಶತಕ ಸಿಡಿಸಿದಾಗ ಡಗೌಟ್ನಲ್ಲಿ ಕೋಚ್ ರಾಹುಲ್ ದ್ರಾವಿಡ್ ಮಾಡಿದ್ದೇನು ನೋಡಿ
Published On - 8:06 am, Sat, 2 July 22