AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಪತ್ತು ಮರುಹಂಚಿಕೆ: ಸ್ವೀಡನ್ ಉದಾಹರಣೆ, ಚೀನಾ ಪಿತೂರಿಯತ್ತ ಬೊಟ್ಟುಮಾಡಿದ ಆರ್ಥಿಕ ತಜ್ಞ ಗೌತಮ್ ಸೇನ್

Economist Gautam Sen's Take on Wealth Redistribution: ಕಾಂಗ್ರೆಸ್ ಪಕ್ಷದ ಸಂಪತ್ತು ಮರುಹಂಚಿಕೆ ಪ್ರಸ್ತಾಪವನ್ನು ಆರ್ಥಿಕ ತಜ್ಞ ಗೌತಮ್ ಸೇನ್ ವಿರೋಧಿಸಿದ್ದಾರೆ. ಸಂಪತ್ತು ಮರುಹಂಚಿಕೆ ಪ್ರಾಯೋಗಿಕವಾಗಿ ಯಾಕೆ ಸಾಧ್ಯವಿಲ್ಲ ಎಂದು ವಿವರಿಸಿದ್ದಾರೆ. ಪಿತ್ರಾರ್ಜಿತ ಆಸ್ತಿ ತೆರಿಗೆ ಜಾರಿ ಮಾಡುವುರಿಂದ ಏನು ಅನಾಹುತ ಆಗಬಹುದು ಎಂಬುದನ್ನೂ ಅವರು ವಿವರಿಸಿದ್ದಾರೆ. ಮುಖ್ಯವಾದ ವಿಷಯ ಎಂದರೆ ಸಂಪತ್ತು ಮರುಹಂಚಿಕೆಯಿಂದ ಭಾರತ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಅರಾಜಕತೆ ಹೊಂದಲಿದೆ. ಚೀನಾಗೆ ಇದರಿಂದ ಲಾಭ ಎಂದು ಹೇಳಿರುವ ಅವರು ಚೀನೀ ಪಿತೂರಿ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

ಸಂಪತ್ತು ಮರುಹಂಚಿಕೆ: ಸ್ವೀಡನ್ ಉದಾಹರಣೆ, ಚೀನಾ ಪಿತೂರಿಯತ್ತ ಬೊಟ್ಟುಮಾಡಿದ ಆರ್ಥಿಕ ತಜ್ಞ ಗೌತಮ್ ಸೇನ್
ಕಾಂಗ್ರೆಸ್​ನ ಚುನಾವಣಾ ಪ್ರಣಾಳಿಕೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 08, 2024 | 3:33 PM

Share

ನವದೆಹಲಿ, ಮೇ 8: ಕಾಂಗ್ರೆಸ್​ನ ಚುನಾವಣಾ ಪ್ರಣಾಳಿಕೆಯಲ್ಲಿರುವ ಮುಖ್ಯ ಅಂಶಗಳಲ್ಲಿ ಸಂಪತ್ತು ಮರುಹಂಚಿಕೆ (Wealth Redistribution) ಒಂದು. ವಿವಿಧ ನೀತಿ ಮತ್ತು ಕಾನೂನುಗಳ ಮೂಲಕ ಸಂಪತ್ತಿನ ಮರು ಹಂಚಿಕೆ ಮಾಡಲಾಗುವುದು ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಕಾಂಗ್ರೆಸ್​ನ ಸಲಹೆಗಾರರಾಗಿರುವ ಆರ್ಥಿಕ ತಜ್ಞ ಸ್ಯಾಮ್ ಪಿತ್ರೋಡಾ ಅವರು ಅಮೆರಿಕದ ಎಸ್ಟೇಟ್ ಟ್ಯಾಕ್ಸ್ ಅಥವಾ ಪಿತ್ರಾರ್ಜಿತ ಆಸ್ತಿ (Inheritance tax) ತೆರಿಗೆ ವಿಧಾನವನ್ನು ಪ್ರಸ್ತಾಪಿಸಿದ್ದಾರೆ. ಈ ವಿಚಾರ ಈಗ ಬಿಜೆಪಿಗೆ ಚುನಾವಣಾ ಅಸ್ತ್ರವಾಗಿದೆ. ಇನ್​ಹೆರಿಟೆನ್ಸ್ ಟ್ಯಾಕ್ಸ್ ಬಗ್ಗೆ ಆರ್ಥಿಕ ವಲಯದಲ್ಲಿ ಪರ ವಿರೋಧ ಅಭಿಪ್ರಾಯಗಳಿವೆ. ಈ ತೆರಿಗೆಯನ್ನು ವಿರೋಧಿಸುವವರ ಸಾಲಿಗೆ ರಾಜಕೀಯ ಆರ್ಥಿಕ ತಜ್ಞರಾಗಿರುವ ಗೌತಮ್ ಸೇನ್ (Gautam Sen) ಸೇರ್ಪಡೆಯಾಗಿದ್ದಾರೆ. ಈ ತೆರಿಗೆಯನ್ನು ಜಾರಿಗೆ ತಂದರೆ ದೊಡ್ಡ ದೊಡ್ಡ ಉದ್ಯಮಿಗಳು ಬೇರೆಡೆ ನೆಲೆ ಸ್ಥಾಪಿಸಬಹುದು ಎಂದು ಅಪಾಯದ ಸಾಧ್ಯತೆಯನ್ನು ಬಿಚ್ಚಿಟ್ಟಿದ್ದು ಸ್ವೀಡನ್ ದೇಶದ ಉದಾಹರಣೆ ಕೊಟ್ಟಿದ್ದಅರೆ.

‘…ಸ್ವೀಡನ್ ದೇಶದಲ್ಲಿ ಒಂದು ಕಾಲದಲ್ಲಿ ಬಹಳ ಹೆಚ್ಚು ಇನ್​​ಹೆರಿಟೆನ್ಸ್ ಟ್ಯಾಕ್ಸ್ ಇತ್ತು. ವಿಶ್ವ ಇತಿಹಾಸದಲ್ಲೇ ಅತಿಹೆಚ್ಚು ತೆರಿಗೆ ವಿಧಿಸುವ ದೇಶಗಳಲ್ಲಿ ಸ್ವೀಡನ್ ಒಂದು. ಆದರೆ, ಬಹಳಷ್ಟು ಶ್ರೀಮಂತರು ದೇಶ ಬಿಟ್ಟು ಹೋಗತೊಡಗಿದ ಮೇಲೆ ಸ್ವೀಡನ್​ನಲ್ಲಿ ಪಿತ್ರಾರ್ಜಿತ ಆಸ್ತಿ ತೆರಿಗೆಯನ್ನೇ ತೆಗೆದುಹಾಕಲಾಯಿತು. ಐಕಿಯಾದ ಮಾಲೀಕರು ಸ್ವೀಡನ್ ತೊರೆದು ಹೋಗಿದ್ದು ಒಂದು ನಿದರ್ಶನ,’ ಎಂದು ಹೇಳಿದ್ದಾರೆ.

ಅಂಬಾನಿ, ಅದಾನಿಯಂತಹ ದೊಡ್ಡ ಶ್ರೀಮಂತರು ದುಬೈನಂತಹ ತೆರಿಗೆ ಮುಕ್ತ ನಾಡುಗಳತ್ತ ವಲಸೆ ಹೋಗಬಹುದು. ಇದರಿಂದ ಭಾರತಕ್ಕೆ ಅಪಾರವಾದ ಸಂಪತ್ತಿನ ನಷ್ಟ ಆಗಬಹುದು ಎಂದು ಗೌತಮ್ ಸೇನ್ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ನರೇಂದ್ರ ಮೋದಿ ಭಾರತ ಪುಟಿದೇಳುವಂತೆ ಮಾಡಿದ್ದಾರೆ: ಅಮೆರಿಕನ್ ಉದ್ಯಮಿ ಶ್ಲಾಘನೆ

‘ಅಂಬಾನಿ, ಅದಾನಿ, ಮಹೀಂದ್ರಾ, ಟಾಟಾ ಇತ್ಯಾದಿ ಬಿಲಿಯನೇರ್​ಗಳು ಭಾರತದಿಂದ ದುಬೈಗೆ ವಲಸೆ ಹೋಗುತ್ತಾರೆ. ಭಾರತವನ್ನು ತೊರೆಯುತ್ತಿರುವ ಹೆಚ್ಚಿನ ಮಿಲಿನೇರ್​ಗಳು ದುಬೈಗೆ ಹೋಗಿದ್ದಾರೆ. ಶೇ. 70ರಷ್ಟು ಮಿಲಿಯನೇರ್​ಗಳು ದುಬೈಗೆ ಹೋಗಿದ್ದಾರೆ. ಯಾಕೆಂದರೆ ದುಬೈನಲ್ಲಿ ಆದಾಯ ತೆರಿಗೆಯೇ ಇಲ್ಲ. ಅವರು ಯುಎಇಯಲ್ಲಿ ತಮ್ಮ ಬಿಸಿನೆಸ್ ಅನ್ನು ಮರುನೊಂದಣಿ ಮಾಡಿಸುತ್ತಾರೆ. ಭಾರತದಲ್ಲಿ ಅವರು ವ್ಯವಹಾರ ಮಾಡುವುದರಿಂದ ಭಾರತಕ್ಕೆ ಕಾರ್ಪೊರೇಟ್ ಟ್ಯಾಕ್ಸ್ ಮಾತ್ರವೇ ಸಿಗುತ್ತದೆ,’ ಎಂದು ಗೌತಮ್ ಸೇನ್ ವಿವರಿಸಿದ್ದಾರೆ.

ಸಂಪತ್ತು ಮರುಹಂಚಿಕೆ ಪ್ರಾಯೋಗಿಕವಾಗಿ ಯಾಕೆ ಸಾಧ್ಯವಿಲ್ಲ ನೋಡಿ…

ಭಾರತದಲ್ಲಿ ಶೇ. 2.4ಕ್ಕಿಂತ ಕಡಿಮೆ ಜನರು ವೈಯಕ್ತಿಕ ಆದಾಯ ತೆರಿಗೆ ಪಾವತಿಸುತ್ತಾರೆ. ಅವರ ಪೈಕಿ ಸುಮಾರು 12 ಲಕ್ಷ ಜನರ ವೈಯಕ್ತಿಕ ಆಸ್ತಿ ಅವರ ಮನೆಯೇ ಆಗಿದೆ. ಶೇ. 77 ಕುಟುಂಬಗಳ ಆಸ್ತಿ ಅವರ ಮನೆಯೇ ಆಗಿದೆ. ಶೇ. 7ರಷ್ಟು ಆಸ್ತಿಯು ಚಿನ್ನ, ವಾಹನ, ಫ್ಯಾನ್, ಆಲ್ಮಿರಾ ಇತ್ಯಾದಿ ಗೃಹೋಪಯೋಗಿ ವಸ್ತುಗಳಾಗಿವೆ. ನಿಮಗೆ ಸಮಾನತೆ ಬೇಕೆಂದರೆ ಈ ಜನರೆನ್ನಲಾ ಬೀದಿಗೆ ನಿಲ್ಲಿಸಬೇಕಾಗುತ್ತದೆ. ಹೀಗೆ ಮಾಡಿದರೂ ಕೂಡ ಸಿಗುವ ಹಣ ಬಹಳ ಕಡಿಮೆ ಎಂದು ಗೌತಮ್ ಸೇನ್ ವಿವರಿಸುತ್ತಾರೆ.

ಹಾಗೆಯೇ, ಭಾರತದಲ್ಲಿ 100 ಕೋಟಿ ರೂಗೂ ಹೆಚ್ಚು ಮೌಲ್ಯದ ಸಂಪತ್ತು ಹೊಂದಿರುವ ವ್ಯಕ್ತಿಗಳಲ್ಲಿ ಬಹುತೇಕರು ತಮ್ಮ ಬಿಸಿನೆಸ್​ಗಳ್ಲಿ ಹೂಡಿಕೆ ಮಾಡಿದ್ದಾರೆ. ಅವರ ಸಂಪತ್ತನ್ನು ಕಿತ್ತುಕೊಳ್ಳಬೇಕಾದರೆ ಬಿಸಿನೆಸ್ ಅನ್ನು ತಡೆಯಬೇಕು. ಆಗ ಆರ್ಥಿಕತೆ ಕುಸಿಯುತ್ತದೆ. ಒಂದೂವರೆ ಪ್ರತಿಶದಷ್ಟು ಜನರಿಂದ ಪಡೆದ ತೆರಿಗೆಯನ್ನು ಉಳಿದ ಶೇ. 98ರಷ್ಟು ಜನರಿಗೆ ಹಂಚುವುದರಿಂದ ಅವರ ಏಳ್ಗೆ ಆಗುವುದಿಲ್ಲ ಎಂದು ಎಚ್ಚರಿಸಿದ್ದಾರೆ ಗೌತಮ್ ಸೇನ್.

ಇದನ್ನೂ ಓದಿ: ದೇಶ ಬಿಟ್ಟು ಹೋಗುತ್ತೇವೆ ಹೊರತು ಗೌಪ್ಯತೆ ಮಾತ್ರ ಬಿಡಲ್ಲ: ವಾಟ್ಸಾಪ್ ಹಠಕ್ಕೇನು ಕಾರಣ?

ಕಾಂಗ್ರೆಸ್ ಪ್ರಣಾಳಿಕೆ ಹಿಂದೆ ಚೀನಾ ಪಿತೂರಿ?

ಸಂಪತ್ತು ಮರುಹಂಚಿಕೆಯ ಪ್ರಸ್ತಾಪದ ಹಿಂದೆ ಚೀನಾದ ಪಿತೂರಿ ಇರಬಹುದು ಎಂದು ಆರ್ಥಿಕ ತಜ್ಞ ಗೌತಮ್ ಸೇನ್ ಪರೋಕ್ಷವಾಗಿ ಬೊಟ್ಟು ಮಾಡಿದ್ದಾರೆ. ಪಿತ್ರಾರ್ಜಿತ ಆಸ್ತಿ ತೆರಿಗೆಯಿಂದ ಭಾರತದಲ್ಲಿ ಸಾಮಾಜಿಕ ಮತ್ತು ರಾಜಕೀಯ ಅರಾಜಕತೆ ಸೃಷ್ಟಿಯಾಗಬಹುದು. ಇದು ವಿದೇಶೀ ಮಧ್ಯಪ್ರವೇಶಕ್ಕೆ ಅವಕಾಶ ಕೊಡಬಹುದು ಎಂದು ಸೇನ್ ವಾದಿಸುತ್ತಾರೆ.

‘ಏಷ್ಯಾದಲ್ಲಿ ಚೀನಾದ ಪ್ರಾಬಲ್ಯಕ್ಕೆ ತಡೆಯಾಗಿರುವುದು ಜಪಾನ್ ಮತ್ತು ಭಾರತ ಮಾತ್ರವೇ. ಏಷ್ಯಾದಲ್ಲಿ ಚೀನಾ ಸಂಪೂರ್ಣ ಪ್ರಾಬಲ್ಯ ಹೊಂದಿರಲು ಬಯಸುತ್ತದೆ. ಇದನ್ನು ಪ್ರತಿರೋಧಿಸುವಷ್ಟು ದೊಡ್ಡದಿರುವ, ಶಕ್ತಿ ಇರುವ ಮತ್ತು ಸಂಪತ್ತಿರುವ ದೇಶವೆಂದರೆ ಅದು ಭಾರತ ಮಾತ್ರ. ಹೀಗಾಗಿ, ಚೀನೀಯರು ಏನಾದರೂ ಮಾಡುತ್ತಾರೆ. ಭಾರತ ಈಗ ಪರಿವರ್ತನೆಯ ಹಂತದಲ್ಲಿರುವುದರಿಂದ ಪೆಟ್ಟು ಕೊಡಲು ಈಗ ಸರಿಯಾದ ಸಮಯ…’ ಎಂದು ಬರಹಗಾರರೂ ಆದ ಗೌತಮ್ ಸೇನ್ ಹೇಳಿದ್ದಾರೆ.

ಭಾರತದ ಈಗಿನ ಆರ್ಥಿಕ ಬೆಳವಣಿಗೆ ಬಗ್ಗೆ ಆಶಾದಾಯಕರಾಗಿರುವ ಗೌತಮ್ ಸೇನ್, ಕಳೆದ 10 ವರ್ಷದಲ್ಲಿ ಆದ ಆರ್ಥಿಕ ಬೆಳವಣಿಗೆಯಲ್ಲಿ ನೈಜವಾಗಿ ಸಂಪತ್ತು ಮರುಹಂಚಿಕೆ ಆಗಿದೆ ಎಂಬ ಸಂಗತಿಯನ್ನು ಒತ್ತಿಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ