Kannada News Business Cabinet Clears Digital India Expansion With Outlay of Rs 14,903 Cr, Here Is Details How Money Is Spent
ಹೆಚ್ಚುವರಿ ಸೂಪರ್ ಕಂಪ್ಯೂಟರ್ಗಳ ಸ್ಥಾಪನೆಯಿಂದ ಹಿಡಿದು ಹಲವು ಮಹತ್ವದ ಸುಧಾರಣೆಗಳು; ಡಿಜಿಟಲ್ ಇಂಡಿಯಾ ಯೋಜನೆ ವಿಸ್ತರಣೆಗೆ ಸಂಪುಟ ಒಪ್ಪಿಗೆ
Digital India Extension: ವೃತ್ತಿಕೌಶಲ್ಯ ಅಭಿವೃದ್ಧಿ, ಹೊಸ ಸೂಪರ್ ಕಂಪ್ಯೂಟರುಗಳು, ನಾಲೆಡ್ಜ್ ನೆಟ್ವರ್ಕ್ ಆಧುನಿಕರಣ, ಎಲ್ಲಾ ಅಧಿಕೃತ ಭಾಷೆಗಳಿಗೂ ಎಐ ಶಕ್ತ ಭಾಷಿಣಿ ಟೂಲ್ ಸೇವೆ ಲಭ್ಯ, ಹೀಗೆ ವಿವಿಧ ಯೋಜನೆಗಳನ್ನು ಒಳಗೊಂಡ ಡಿಜಿಟಲ್ ಇಂಡಿಯಾ ವಿಸ್ತರಣೆಗೆ ಕೇಂದ್ರ ಸರ್ಕಾರ 14,903 ಕೋಟಿ ರೂ ವಿನಿಯೋಗಿಸುತ್ತಿದೆ.
ಡಿಜಿಟಲ್ ಇಂಡಿಯಾ
Follow us on
ನವದೆಹಲಿ, ಆಗಸ್ಟ್ 16: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಡಿಜಿಟಲ್ ಇಂಡಿಯಾ ಯೋಜನೆಯ ವಿಸ್ತರಣೆಗೆ (Digital India expansion) ಸಂಪುಟದಿಂದ ಹಸಿರುನಿಶಾನೆ ದೊರೆತಿದೆ. ಈ ವಿಸ್ತರಣೆಯಲ್ಲಿ ಕೇಂದ್ರ ಸರ್ಕಾರ ಡಿಜಿಟಲ್ ಇಂಡಿಯಾ ಯೋಜನೆಗೆ 14,903 ಕೋಟಿ ರೂ ವಿನಿಯೋಗಿಸಲಿದೆ. ಡಿಜಿಟಲ್ ಇಂಡಿಯಾದ ಹಿಂದಿನ ಯೋಜನೆಗಳಲ್ಲಿ ಮಾಡಲಾಗಿದ್ದ ಕೆಲಸಗಳಿಗೆ ಪೂರಕವಾಗಿ ಮತ್ತು ಹೆಚ್ಚುವರಿಯಾಗಿ ಹೊಸ ಕಾರ್ಯಗಳು ಇರಲಿವೆ. ಇಂದು ಆಗಸ್ಟ್ 16ರಂದು ಪ್ರಧಾನಿಗಳ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಡಿಜಿಟಲ್ ಇಂಡಿಯಾ ಯೋಜನೆಯ ವಿಸ್ತರಣೆಗೆ ಅನುಮೋದನೆ ಕೊಡಲಾಯಿತು ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಡಿಜಿಟಲ್ ಇಂಡಿಯಾ ವಿಸ್ತರಣೆಯಲ್ಲಿ ಏನೇನು ಇರಲಿದೆ?
ಫ್ಯೂಚರ್ಸ್ಕಿಲ್ಸ್ ಪ್ರೈಮ್ ಯೋಜನೆ ಅಡಿ 6.25 ಲಕ್ಷ ಐಟಿ ವೃತ್ತಿಪರರರಿಗೆ ವೃತ್ತಿಕೌಶಲ್ಯದ ಮರುಪೂರಣ ಮಾಡಲಾಗುವುದು
ಇನ್ಫಾರ್ಮೇಶನ್ ಸೆಕ್ಯೂರಿಟಿ ಅಂಡ್ ಎಜುಕೇಶನ್ ಅವೇರ್ನೆಸ್ ಫೇಸ್ (ಐಎಸ್ಇಎ) ಯೋಜನೆ ಅಡಿ 2.65 ಲಕ್ಷ ವ್ಯಕ್ತಿಗಳಿಗೆ ಮಾಹಿತಿ ಭದ್ರತೆ ಬಗ್ಗೆ ತರಬೇತಿ ಕೊಡಲಾಗುವುದು.
ಉಮಂಗ್ ಆ್ಯಪ್ನಲ್ಲಿ ಈಗಾಗಲೇ ಇರುವ 1,700 ಸೇವೆಗಳ ಜೊತೆಗೆ 540 ಹೆಚ್ಚುವರಿ ಸೇವೆಗಳನ್ನು ತರಲಾಗುವುದು.
ನ್ಯಾಷನಲ್ ಸೂಪರ್ ಕಂಪ್ಯೂಟರ್ ಮಿಷನ್ ಯೋಜನೆ ಅಡಿಯಲ್ಲಿ 9 ಸೂಪರ್ ಕಂಪ್ಯೂಟರ್ಗಳನ್ನು ಸ್ಥಾಪಿಸಲಾಗುವುದು. ಈಗಾಗಲೇ ನಿಯೋಜನೆಯಾಗಿರುವ 18 ಸೂಪರ್ ಕಂಪ್ಯೂಟರುಗಳ ಜೊತೆಗೆ 9 ಸೂಪರ್ ಕಂಪ್ಯೂಟರ್ಗಳು ಹೆಚ್ಚುವರಿ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನಿಂದ ಶಕ್ತವಾದ ಬಹುಭಾಷಾ ತರ್ಜುಮೆ ಸಾಧನವಾದ ಭಾಷಿಣಿಯ ಸೌಲಭ್ಯವನ್ನು 22 ಭಾಷೆಗಳಿಗೆ ವಿಸ್ತರಿಸಲಾಗುತ್ತದೆ. ಸದ್ಯ 10 ಭಾಷೆಗಳಲ್ಲಿ ಭಾಷಿಣಿ ಟೂಲ್ ಸೌಲಭ್ಯ ಇದೆ. ಸಂವಿಧಾನದ ಎಂಟನೇ ಶ್ಕೆಡ್ಯೂಲ್ನಲ್ಲಿ ನಮೂದಾಗಿರುವ ಎಲ್ಲಾ 22 ಅಧಿಕೃತ ಭಾಷೆಗಳಿಗೂ ಈ ಟೂಲ್ ಇರುತ್ತದೆ. ಇದರಲ್ಲಿ ಕನ್ನಡ, ಹಿಂದಿ, ತಮಿಳು ಇತ್ಯಾದಿ ಪ್ರಮುಖ ಭಾಷೆಗಳ ಜೊತೆಗೆ, ಸಿಂಧಿ, ಸಂತಾಲಿ, ಮೈಥಿಲಿ, ಡೋಗ್ರಿ ಮೊದಲಾದ ಭಾಷೆಗಳೂ ಸೇರಿವೆ.
1,787 ಶೈಕ್ಷಣಿಕ ಸಂಸ್ಥೆಗಳನ್ನು ಕನೆಕ್ಟ್ ಮಾಡುವ ನ್ಯಾಷನಲ್ ನಾಲೆಜ್ ನೆಟ್ವರ್ಕ್ ಅನ್ನು (ಎನ್ಕೆಎನ್) ಆಧುನೀಕರಣಗೊಳಿಸಲಾಗುತ್ತದೆ.
ಡಿಜಿಲಾಕರ್ ಮೂಲಕ ಡಿಜಿಟಲ್ ದಾಖಲೆ ವೆರಿಫಿಕೇಶನ್ ಸೌಲಭ್ಯವನ್ನು ಎಂಎಸ್ಎಂಇ ಮತ್ತಿತರ ಸಂಸ್ಥೆಗಳಿಗೆ ಲಭ್ಯ ಇರಲಿದೆ.