ಐಪಿಎಲ್ ಆಯ್ತು ಈಗ ಒಟಿಟಿಯಲ್ಲಿ ಧೂಳೆಬ್ಬಿಸಿದ ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ ಒಟಿಟಿ; ಮೂರು ಸಾವಿರ ಕೋಟಿ ನಿಮಿಷ ವೀಕ್ಷಣೆ

|

Updated on: Aug 17, 2023 | 12:52 PM

Bigg Boss OTT Record: ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ ಒಟಿಟಿ ಕಾರ್ಯಕ್ರಮ ಜಿಯೋಸಿನಿಮಾದಲ್ಲಿ ದಾಖಲೆ ಬರೆದಿದೆ. 10 ಕೋಟಿ ವೀಕ್ಷಕರು ಬಿಗ್ ಬಾಸ್ ಒಟಿಟಿ ವೀಕ್ಷಿಸಿರುವುದು ಹೊಸ ದಾಖಲೆಯಾಗಿದೆ. ಐಪಿಎಲ್ ಬಳಿಕ ಜಿಯೊಸಿನಿಮಾ ಆ್ಯಪ್​ಗೆ ಬಿಗ್​ಬಾಸ್ ಹೊಸ ಶಕ್ತಿ ಕೊಟ್ಟಿದೆ.

ಐಪಿಎಲ್ ಆಯ್ತು ಈಗ ಒಟಿಟಿಯಲ್ಲಿ ಧೂಳೆಬ್ಬಿಸಿದ ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ ಒಟಿಟಿ; ಮೂರು ಸಾವಿರ ಕೋಟಿ ನಿಮಿಷ ವೀಕ್ಷಣೆ
ಬಿಗ್ ಬಾಸ್ ಒಟಿಟಿ
Follow us on

ನವದೆಹಲಿ, ಆಗಸ್ಟ್ 17: ಐಪಿಎಲ್ ಮೂಲಕ ಭರ್ಜರಿ ಸಂಖ್ಯೆಯಲ್ಲಿ ವೀಕ್ಷಕರ ಬಳಗ ಪಡೆದಿದ್ದ ಜಿಯೋಸಿನಿಮಾಗೆ (JioCinema App) ಈಗ ಬಿಗ್ ಬಾಸ್ ಶಕ್ತಿ ತುಂಬಿದೆ. ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ ಒಟಿಟಿ (Bigg Boss OTT) ಜಿಯೋಸಿನಿಮಾದಲ್ಲಿ 10 ಕೋಟಿ ವೀಕ್ಷಕರನ್ನು ಪಡೆದಿದೆ. ಡಿಜಿಟಲ್ ಪ್ಲಾಟ್​ಫಾರ್ಮ್​ನಲ್ಲಿ ಇದು ಹೊಸ ದಾಖಲೆಯಾಗಿದೆ. ಬಿಗ್ ಬಾಸ್ ಕಾರ್ಯಕ್ರಮ ಜಿಯೋ ಸಿನಿಮಾದಲ್ಲಿ 3,000 ಕೋಟಿ ನಿಮಿಷಗಳ ಕಾಲ ವೀಕ್ಷಿಸಲ್ಪಟ್ಟಿದೆ. ಐಪಿಎಲ್ ಬಳಿಕ ಅತಿಹೆಚ್ಚು ಸ್ಟ್ರೀಮ್ ಆದ ಕಾರ್ಯಕ್ರಮ ಇದು. ಜಿಯೋ ಬಿಡುಗಡೆ ಮಾಡಿದ ವರದಿಯಲ್ಲಿ ಈ ಮಾಹಿತಿ ಇದೆ.

ಆಗಸ್ಟ್ 14ರಂದು ನಡೆದ ಬಿಗ್ ಬಾಸ್​ನ ಸೀಸನ್ ಫೈನಲ್ ಕೂಡ ಹೊಸ ದಾಖಲೆ ಬರೆದಿದೆ. ಭಾರತದಲ್ಲಿ ಈ ಲೈವ್ ಕಾರ್ಯಕ್ರಮವನ್ನು 2.5 ಕೋಟಿ ಮಂದಿ ವೀಕ್ಷಿಸಿದ್ದರು. ಕಾನ್​ಕರೆಂಟ್ ವೀಕ್ಷಕರು, ಅಂದರೆ ಏಕಕಾಲದಲ್ಲಿ ಕಾರ್ಯಕ್ರಮ ವೀಕ್ಷಿಸುತ್ತಿದ್ದವರ ಸಂಖ್ಯೆ ಗರಿಷ್ಠ 72 ಲಕ್ಷಕ್ಕೆ ಹೋಗಿತ್ತು. ಐಪಿಎಲ್ ಪಂದ್ಯ ಬಿಟ್ಟರೆ ಒಟಿಟಿಯಲ್ಲಿ ಇಷ್ಟು ಪ್ರಮಾಣದಲ್ಲಿ ಲೈವ್ ವೀಕ್ಷಕರು ಇದ್ದದ್ದು ಇದೇ ಮೊದಲು. ಇದು ಜಾಗತಿಕ ಟಾಪ್ 5 ಪಟ್ಟಿಗೆ ಸೇರಿದೆ.

ಇದನ್ನೂ ಓದಿ: ‘ಗದರ್ 2’ಗೆ ವಾರದ ದಿನವೂ 35 ಕೋಟಿ ರೂ. ಕಲೆಕ್ಷನ್; ‘ಕೆಜಿಎಫ್ 2’ ದಾಖಲೆ ಮೇಲೆ ಕಣ್ಣಿಟ್ಟ ಸನ್ನಿ ಡಿಯೋಲ್ ಸಿನಿಮಾ

ಏನಿದು ಬಿಗ್ ಬಾಸ್ ಒಟಿಟಿ?

ಒಟಿಟಿ ಪ್ಲಾಟ್​ಫಾರ್ಮ್​ಗೆಂದೇ ನಡೆಸಲಾದ ಬಿಗ್ ಬಾಸ್ ರಿಯಾಲಿಟಿ ಶೋ ಇದು. ಟೆಲಿವಿಶನ್​ನಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಸರಣಿ ಬೇರೆ. ಒಟಿಟಿಗೆಂದೇ ಪ್ರತ್ಯೇಕವಾಗಿ ಬಿಗ್ ಬಾಸ್ ಕಾರ್ಯಕ್ರಮವನ್ನು 2021ರಲ್ಲಿ ಶುರು ಮಾಡಲಾಯಿತು. ಆಗ ಕರಣ್ ಜೋಹರ್ ನಿರೂಪಕರಾಗಿದ್ದರು. ಈ ವರ್ಷದ್ದು ಎರಡನೇ ಸೀಸನ್. ಇದರಲ್ಲಿ ಸಲ್ಮಾನ್ ಖಾನ್ ನಿರೂಪಣೆ ಇತ್ತು.

ವೈಲ್ಡ್ ಕಾರ್ಡ್ ಪ್ರವೇಶ ಪಡೆದ ಎಲ್ವಿಶ್ ಯಾದವ್ ಎಂಬ ಯೂಟ್ಯೂಬ್ ಸೆನ್ಸೇಶನ್ ಅವರು ಎರಡನೇ ಸೀಸನ್​ನ ಬಿಗ್​ಬಾಸ್ ಒಟಿಟಿಯ ವಿನ್ನರ್ ಆಗಿದ್ದಾರೆ.

ಇದನ್ನೂ ಓದಿ: ವರ್ಷಕ್ಕೆ ಶೇ. 30ಕ್ಕಿಂತಲೂ ಹೆಚ್ಚು ಬೆಳವಣಿಗೆ ತೋರಿಸಿರುವ ಮ್ಯುಚುವಲ್ ಫಂಡ್​ಗಳು; ಇಷ್ಟು ವೇಗದಲ್ಲಿ ನಿಮ್ಮ ಸಂಪತ್ತು ಎಷ್ಟು ಹೆಚ್ಚುತ್ತೆ ಲೆಕ್ಕಹಾಕಿ

ಒಟಿಟಿ ಆವೃತ್ತಿಯ ಬಿಗ್ ಬಾಸ್ ಹಲವು ರೀತಿಯಲ್ಲಿ ವಿಶೇಷತೆ ಹೊಂದಿದೆ. ಬಿಗ್ ಬಾಸ್ ಮನೆಯಲ್ಲಿ ನಡೆಯುವ ವಿದ್ಯಮಾನಗಳನ್ನು ವೀಕ್ಷಕರು 24 ಗಂಟೆ ಲೈವ್ ಆಗಿ ನೋಡಬಹುದಾಗಿತ್ತು. ವಿವಿಧ ಕ್ಯಾಮರಾ ಫೀಡ್ ಇತ್ಯಾದಿ ಇಂಟರ್ಯಾಕ್ಟಿವ್ ಫೀಚರ್​ಗಳ ಮೂಲಕ 5.5 ಕೋಟಿ ವೀಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡಲಾಗಿತ್ತು. ಇಡೀ ಕಾರ್ಯಕ್ರಮದಲ್ಲಿ ಬಿದ್ದ ವೋಟುಗಳ ಸಂಖ್ಯೆ 540 ಕೋಟಿಯಷ್ಟಿತ್ತು. 8 ವಾರ ನಡೆದ ಈ ಸೀಸನ್​ ಒಟಿಟಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಒಟ್ಟು ವಿಡಿಯೋ ವೀಕ್ಷಣೆ 245 ಕೋಟಿ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:51 pm, Thu, 17 August 23